ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ
ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು
ಕಾಯಿ ಹಣ್ಣು-ಹುಣ್ಣು ಹುಳು
ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ
ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ
ಕೂಗು ಕತ್ತಲು, ಕೊರಗು ಕತ್ತಲು
ಈ ಮೂಲಕ ಹಾಯ್ದು ಬಂದಾಗಲೆಲ್ಲಾ
ಮೈಗೊಂದು ಹೊಸ ಲೇಪ
ಕಣ್ಣಿಗೂಂದು ಹೊಸ ಚಾಳೀಸು
ಸೃಷ್ಟಿಗೆಲ್ಲ ಒಂದು ಹೊಸ ರೂಪ
ಬಂಡೆ ಕೆಳಗೆ ಜಜ್ಜಿ ಹೋಗಿದ್ದ ಸಸಿ
ಬಂಡೆ ಸರಿಸಿದಾಗ ಮರಳಿ ಉಸಿರಾಡಿ ನಗುವುದು
ಹತ್ತಿರ ಬಂದ ಕೂಡಲೇ ಈ ಬಾಗಿಲು
ಕುಗ್ಗುತ್ತದೆ-ಹಿಚುಕುತ್ತದೆ-ಮುಚ್ಚಿಹಾಕಿಕೊಳ್ಳುತ್ತದೆ
ಕರ್ರಗಾಗುತ್ತದೆ, ಕಣ್ಣು ಕಟ್ಟುತ್ತದೆ
ಸಂದಿನೂಳಗೆ ತೂರಿ ಹಿಗ್ಗಾಮುಗ್ಗಾ ಎಳೆದಾಡಿ
ಕೊನೆಗೆ ಉಸಿರುಸಹಿತ ಹೊರಬಂದರೊಂದು ನವಜೀವನ
ಇದ್ದಕ್ಕಿದ್ದಂತೆ ಫಡಾರೆಂದು ತೆರೆದುಕೊಂಡು
ಹರಿದು ಬರುವುದೊಳಗೆ ಬೆಳಕು
ಹೊರಗೂ ಬೆಳಕು ಹರಿಯುತ್ತದೆ
ಅಲ್ಲಿಗಿಲ್ಲಿಗೆ ಓಡಾಡಲು
ಇದೊಂದೇ ದಾರಿಯಲ್ಲಾ ಎಂಬ ಚಿಂತೆ
ಆದರೂ ಪ್ರತಿ ಬಾರಿಯೂ ಪೂರೆ ಕಳಚಿ
ಹೊಸ ಮೈಪಡೆದು ಹೊರಬರುವ ಹಿಗ್ಗು.
(೨೩-೩-೭೮)
*****