ಹರಕುಬಟ್ಟೆ ತಲೆತುಂಬ ಹೇನುಗಳು
ಮಕ್ಕಳಿಗೆ ಅಪ್ಪ ಯಾರೋ
ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ
ಅವುಗಳ ಹೊಟ್ಟೆಗೆ ಗಂಜಿಹಾಕಲು
ದೈನ್ಯವಾಗಿ ಬೇಡಿಕೊಳ್ಳುವ ಭಿಕ್ಷುಕಿಯರಿಗೋ!
ಭಕ್ತಿಯ ಮುಖವಾಡ ಎದೆಗೆ ಅಡ್ಡದಾರ
ಮೈ ಮೇಲೆ ವಿಭೂತಿ
ನಾಲಿಗೆಯ ಮೇಲೆ ಮಂತ್ರ
ದೀಪ ಆರತಿ ಹಿಡಿದು ಗುಣಗುಣಿಸುತ್ತ
ಕೊಡಿ ಕೊಡಿ ಎಂಬಂತೆ
ಭಿಕ್ಷೆ ಕೇಳುವ ಪೂಜಾರಿಗಳಿಗೋ!
ಅಶ್ರಯವಿಲ್ಲದ ಅನಾಥಮಕ್ಕಳು
ಹಂದಿನಾಯಿಗಳ ಜೊತೆ ಜೊತೆಯೆ
ಕಸದ ತೊಟ್ಟಿಯಲಿ ತಿಂದು ಬೆಳೆದು
ಅನಕ್ಷರಿಗಳಾಗಿಯೇ ಬಿದ್ದು
ಮಹಡಿ ಮನೆಗಳ ಕಾರುಗಳ ಮುಂದೆ
ದೈನ್ಯದೀ ಬೇಡಿಕೊಳ್ಳುವ ಕಂದಮ್ಮಗಳಿಗೋ!
ಎದೆಯುಮ್ಮಳದ ದೀನಕೂಗಿಗೆ
ಕಾಸು ಹಾಕಿದರೂ
ಬೀಡಿ ಸೇದಿ ಕುಡಿದು
ಮತ್ತೆಲ್ಲರ ದೈನ್ಯತೆಗೆ ಪಾತ್ರವಾಗುತ
ಗುಡಿ ಗುಂಡಾರಗಳ ಮುಂದೆ ತಟ್ಟೆ ಹಿಡಿದ
ಕುಷ್ಠ ಕುರುಡ ಅಂಗವಿಕಲರಿಗೋ!
ಊರು ಸುಡಲಿ ಕೇರಿ ಮುಳುಗಲಿ
ತನ್ನ ಮನೆ ಮಕ್ಕಳು ಮಾತ್ರ
ಸಂಪನ್ನರಾಗಿರಲು
ಬಡಪಾಯಿಗಳಿಗೆ ಸೂಟ್‌ಕೇಸ್ ತುಂಬ
ಹಣಬೇಕೆಂದು ಹಲ್ಲು ಕಿರಿಯುವ
ಭಿಕ್ಷುಕ ಲಂಚಾಧಿಕಾರಿಗಳ ಹೊಟ್ಟೆಗೊ ತಟ್ಟೆಗೋ?
*****