೧
ಇರುಳ ಆಕಾಶದ ತುಂಬಾ
ಕಪ್ಪನೆಯ ಮೋಡಗಳು
ಮಳೆ ಸುರಿದಿದೆ ಧಾರಾಕಾರ
ಮೈ ಕೊರೆವ ಚಳಿಯಲ್ಲಿ?!
೨
ಒಂದು ಕಾಲವಿತ್ತು
ಈ ನೆಲದ ಮೂಲೆ ಮೂಲೆಯ
ಮೇಲೆ ಆ ದೇವನ ಪ್ರೀತಿ
ಜಿನುಗಿತ್ತು ಹನಿ ಹನಿ
ಅಮೃತವಾಗಿ
ಆಗಿನ್ನು ಅವನಿಗೆ ಹಸರಿರಲಿಲ್ಲ
ಮಾತು ಬದುಕಾಗಿತ್ತು
ಮೌನ ಬಲವಾಗಿತ್ತು
ಮನಸು ಸ್ಫಟಿಕ ಕನ್ನಡಿಯಾಗಿತ್ತು
ಕಣ್ಮುಚ್ಚಿದರೂ ಚಿತ್ರ ಸ್ಪಷ್ಟವಿತ್ತು
ಒಲವ ಬೆಸುಗೆ ಬಲವಾಗಿತ್ತು
೩
ನಿನ್ನೆ ರಾತ್ರಿ ಕತ್ತಲಾಗಿತ್ತು
ಗುಮ್ಮಟದ ಗರ್ಭಗುಡಿಯೊಳಗೆ
ತಲೆಯೊಡೆದ ‘ರಾಮಾಽಽಽ’
ರಕ್ತ ಕೆಂಪೋ ಕೆಂಪು
ಹೆಜ್ಜೆ ಇಟ್ಟಲ್ಲೆಲ್ಲಾ ಕಾಡುವ
ಕಪ್ಪು ಗುರುತು
ಬೆಳ್ಳಿ ಚುಕ್ಕಿಯ ಬೆಳಕಿಗೂ
ಮುಂಚೆ ಸಿಡಿದ ಸೂರ್ಯ
ಬಿಕ್ಕಿ ಬಿಕ್ಕಿ ಅತ್ತದ್ದು
ಯಾರ ಮಡಿಲಿನಲಿ?
೪
ತಬ್ಬಲಿ ಕಂದನೋರ್ವನ
ಅಳುವ ಕಣ್ಣಹನಿ ಕೇಳಿತು
‘ಇಲ್ಲಿ’ ಹುಟ್ಟದ ನಾನು
ಹುಟ್ಟಿದ್ದರೆ ‘ಅಲ್ಲಿ’…?
ಆದರೇನಂತೆ ಹೆಸರು
‘ಹಿಂದು-ಮುಂದು’
ಅರಿಯದಿದ್ದರೆ ಮನಸು
ಒಂದನೊಂದು?
*****