ಹೊತ್ತವರಾರೀ ಸೃಷ್ಟಿಯ ಭಾರ,
ಎಳೆಯುವರಾರೀ ವಿಶ್ವದ ತೇರ,
ಯಾವುದು ಕಾಣದೆ ಕುಣಿಸುವ ದಾರ?
ಯಾರದು ಈ ಹುನ್ನಾರ?
ಯಾರೋ ಜಗಕಾಧಾರ?
ತಣ್ಣಗೆ ಬೀಸುವ ಗಾಳಿಯ ಮೇಲೆ
ಬಣ್ಣದ ಹಗಲಿನ ಬೆಳಕಿನ ಮೇಲೆ
ಸುಮ್ಮನೆ ಓಡುವ ತೊರೆಗಳ ಮೇಲೆ
ಯಾರದು ಅಧಿಕಾರ?
ಯಾರದು ಅಧಿಕಾರ?
ಯಾರು ನೇಯ್ದರೋ ಹಸಿರಿನ ಶಾಲು?
ರೆಂಬೆ ರೆಂಬೆಯೂ ಬಣ್ಣದ ಕೋಲು;
ಇರುಳಿಗೆ ಹರಿಸಲು ಹುಣ್ಣಿಮೆ ಹಾಲು
ಯಾರಿಗೆ ಅಧಿಕಾರ?
ಅದಾರಿಗೆ ಅಧಿಕಾರ?
ಕಡಲು ಬರೆಯುತಿದೆ ಮುಗಿಲಿನ ಕವನ,
ತೇಲುವ ಮುಗಿಲೋ ಬಣ್ಣದ ಭವನ,
ಯಾರ ಆಜ್ಞೆ ಈ ಸೃಷ್ಟಿಯ ಚಲನ?
ಯಾರದು ಹುನ್ನಾರ? ಇದೆಲ್ಲ
ಯಾರ ಕಾರಭಾರ?
*****