ಸತ್ತು ಬಿದ್ದಿದ್ದಾನೆ ಒಬ್ಬ VIP
ಬೆಳ್ಳಂ ಬೆಳಗಾಗುವುದರಲ್ಲಿ
ಆತ ಯಾರೇ ಇರಲಿ
ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್
ರಾಜಕಾರಣಿ ಸಾಹಿತಿಯೂ ಇರಬಹುದು
ನೀವು ತಿಳಿದುಕೊಂಡಂತೆ.
ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು
ಅದು ಅವನಿಗೆ ಕೆಟ್ಟ ಚಟ ಇತ್ತಂತೆ
ಹೆಂಡತಿ ಒಣ ಕಣ್ಣು ಒತ್ತಿ ಒತ್ತಿ ಹೇಳಿ
ಏನೇನೊ? ತೋಡಿಕೊಳ್ಳುತ್ತಾಳೆ.
ಅವನು ಒಂದು ರಾತ್ರಿ ಕುಡಿಯುವ
ಜಾನಿವಾಕರ್ ವೊಡ್ಕಾದ ಹಣದಲ್ಲಿ
ಅವನ ಹಳ್ಳಿಯ ಹತ್ತು ಜನರ ಮದುವೆಮಾಡಿ
ಪುಣ್ಯಕಟ್ಟಿಕೊಳ್ಳಬಹುದಿತ್ತಂತೆ.
ಅವನು ಮಾಡುವ ಭರ್ಜರಿ ಪಾರ್ಟಿಖರ್ಚಿನಲಿ
ಅವನೂರಿನ ದೇವರ ಜಾತ್ರೆ
ಅದ್ದೂರಿಯಾಗಿ ಮಾಡಿ ಸಾವಿರ ಜನರಿಗೆ
ಉಣಬಡಿಸಬಹುದಿತ್ತಂತೆ.
ಅವನು ಬೆನ್ನುಹತ್ತುವ ಹೆಣ್ಣುಗಳನೆಲ್ಲ
ಸೋದರಿಯಂತೆ ನೋಡಿಕೊಂಡಿದ್ದರೆ
ಅವರವರು ಮರ್ಯಾದೆಯಾಗಿದ್ದು
ಸಂಸಾರಸ್ಥೆಯರಾಗಿರುತ್ತಿದ್ದರಂತೆ.
ಏರಿಳಿಕೆಯ ಧ್ವನಿಯಲ್ಲೂ
ಸರಳವಾಗಿ ಉದುರುವ ಮಾತುಗಳು.
ಮೌನ ಬಂಗಾರ ಎಂದು ಗೊತ್ತಿದ್ದರೂ
ಹಿತ್ತಾಳೆ ಮಾಡಿ ಕಿಲುಬಲು ಬಿಟ್ಟ
ಗೋಳಾಡಿದಳು.
ಕಾಡು ಬೆಕ್ಕು ಎನ್ನಲೇ
ತೊಂಡರಗೂಳಿ ಎನ್ನಲೇ
ಕಿಡಿಕಿಡಿಯಾಗುತ್ತಿದ್ದಳು.
ಮಧ್ಯರಾತ್ರಿಯ ಮದಿರಾಣಿಯರು
ಗುಂಡು ಇಳಿಸುವ ಗಂಡಬೇರುಂಡರ
ತೆಕ್ಕೆಗಳ ಸುಖ ಹರಡುತ್ತಲೇ ಇದ್ದಷ್ಟು
ಹೀಗೆಽ ಅಗಾಗ
ಸತ್ತು ಬೀಳುತ್ತಾರೆ ಬಿಡಿ…
——–
‘ಮನುಷ್ಯನ ಗುಣ ಮನಸ್ಸು ಹಿನ್ನೆಲೆಗಳನ್ನು ಅವನ ನಡೆ ನುಡಿಗಳೇ ವಿಶದವಾಗಿ ತಿಳಿಸುತ್ತವೆ’ – ರಾಮಾಯಣ
*****