ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ –
ಮೇಜುವಾನಿಯ ಸಿಹಿ ಕಹಿಯಾಗಿ
ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು
ಯಾರಿಗೂ ಗೊತ್ತಿರಲಿಲ್ಲ.
ಮುಗುಳು ನಗುತ ನಿಸರ್ಗದಲಿ
ಅದ್ದಿ ಬಿಡುವ ನೇಪಾಳ
ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ
ದೊರೆ ಬೀರೇಂದ್ರ ರಾಣಿ ಐಶ್ವರ್ಯ
ಯುವರಾಜ ದೀಪೇಂದ್ರ
ಎಂತೆಂತಹ ರತ್ನಗಳು
ಕಾಠ್ಮಂಡು ಒಡ್ಡೋಲಗಕೆ
ರಾಜಗಾಂಭೀರ್ಯದ ಹುಡುಗಿ ತರುವ ಆಸೆ
ರಾಜಮಾತೆಗೆ,
ಪ್ರೀತಿಸಿದ ಹುಡುಗಿ ಬೇಕೇ ಬೇಕು
ಮೀಸೆ ಮೂಡಿದೆ ಮದೋನ್ಮತ್ತ
ಯುವರಾಜನಿಗೆ.
ಮಾತಿಗೆ ಮಾತು ವರಸೆ ಬೆಂಕಿ.
ವಿಧಿಯೋ ವಿಚಿತ್ರ,
ಪ್ರೇಮದೈಸಿರಿಗೆ ಕಳಚಿಕೊಳ್ಳದ ಸಂಕೋಲೆ,
ಮಾತು ಚರ್ಚೆಗಳಿಗೆಲ್ಲ ಆವೇಶ
ಗುಂಡಿಗೆಯ ರಕ್ತದ ದುಡುಕುತನಕೆ
ಕಿಚ್ಚುಹೊತ್ತಿ ಸುಡುವ ಕೆನ್ನಾಲಿಗೆ.
ಕಾಲನ ಅವೇಶದ ಮುಂದೆ
ಮತಿಹೀನ ಯುವಕ
ರಾಜಗಾಂಭೀರ್ಯ ಧಿಕ್ಕರಿಸಿದ್ದು
ಯಮನ ಅಟ್ಟಹಾಸಕೆ ಕುಮ್ಮಕ್ಕು
ಕಗ್ಗತ್ತಲೆಯ ಕೆಸರಲಿ ಸಿಕ್ಕ ಕಾಲಕ್ಕೆ
ಚಲಿಸದ ಜಡತ್ವ.
ದವಡೆಮೀರಿದ ಕೋಪಾಗ್ನಿಯಲಿ
ಯುವರಾಜ ಕೈಗೆತ್ತಿದ ಬಂದೂಕು
ನುಗ್ಗಿ ನುಗ್ಗಿ ಬಂದ ಗುಂಡಿನಮಳೆಗೆ
ಒಂದೊಂದೇ ಕಳಚಿದವು
ಕಿರೀಟ ರತ್ನಗಳು,
ನೆತ್ತರ ಮಡುವಿನಲಿ ಮುಳುಗಿ
ಕಗ್ಗತ್ತಲ ಕಣಿವೆಯಲಿ ಹೆಣವಾದವು
ನೇಪಾಳದ ಅಂಗಳದ ತುಂಬೆಲ್ಲ
ರಕ್ತದೋಕುಳಿ ಕಿರುಚಾಟ ಹಾಲಾಹಲ
ಅರಮನೆಯ ದೀಪಗಳೆಲ್ಲ ಒಡೆದು ನುಚ್ಚುನೂರು
ಸುತ್ತೆಲ್ಲ ಕಪ್ಪು ಕತ್ತಲೆ!
(ದೇವಯಾನಿ ರಾಣಾಳ ಪ್ರೇಮಪಾಶಕ್ಕೆ ಸಿಲುಕಿದ ನೇಪಾಳದ ಯುವರಾಜ ಅವಿವೇಕಿಯಾಗಿ ಗುಂಡು ಹಾರಿಸಿ ಎಲ್ಲರನ್ನೂ ಕೊಂದು ತಾನೂ ಸತ್ತುಹೋದ)
*****