ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ,
ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ
ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು
ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ)
ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು
ನೋವು ರಕ್ತದೊತ್ತಡದ ಅವರೆದೆಗೆ
ಮತ್ತೆ ಮತ್ತೆ ಶೂಲ ತ್ರಿಶೂಲ!
ಗ್ರಹಣ ವೇದೋಪನಿಷತ್ ಪಠಣದೊಳಗೆ
ಜನಿವಾರ ಬದಲಾಯಿಸಿ ಮಡಿಯಾಗುತ್ತಿದ್ದರೆ
ಕ್ಲಬ್ಬಿನ ತುಂಬೆಲ್ಲ ಹುಳಿವಾಸನೆಗೆ
ಕರಿದ ಮಾಂಸಕ್ಕೆ ಡಿಸ್ಕೋ ತಾಳ
ಮಕ್ಕಳು ಮೊಮ್ಮಕ್ಕಳು ಅವರ ಹೆಂಡತಿಯರು
ಸರ ಬಳೆ ಮೂಗುತಿ ಸೀರೆಗಳ ಮಾತು
ಆಚೆ ಕುಡುಕರಿಗೆ ಬಾಯ್ತುಂಬ ನಗು.
ತುಕ್ಕು ಹಿಡಿದ ಲಾಂದ್ರ ಫಿಲಿಪ್ಸ ಬಲ್ಬುಗಳ
ವಿಚಾರಧಾರೆಗಳ ತಿಕ್ಕಾಟ ಹೊಕ್ಕಾಟಕೆ
ಒಳಗೊಳಗೆ ಅಳು ನಗುವುಗಳ ಬಿಸಿಲುಮಳೆ
ವಿದೇಶಿ ಐಶಾರಾಮಿ ಸವಲತ್ತು
ಬೇಕಾದಾಗೆಲ್ಲ ಸಾಧಿಸಿಕೊಳ್ಳುವ ಡೊಳ್ಳುಗಳು
ಸಂಜೆ ಭಾಷಣ ಬಹಿರಂಗ ಸಭೆಗಳಲಿ
ತೋರಿಕೆಗೆ ಟೆಬಲ್‌ಕುಟ್ಟಿ
ನೀತಿಗಳ ಬಗೆಗೆ ಮಾತನಾಡುವ ಅಡ್ಡಗೋಡೆಗಳು.
ಹಸಿವು ನೀರು ಬರಗಾಲಕೆ ಹಣಮಾಡುವ
ಯೋಜನಾ ಶಿಬಿರಗಳ ಉದ್ದನೆಯಪಟ್ಟಿ-
ಇವುಗಳಿಗೆ ಮನೆಗೆ ಬಣ್ಣ ಸುಣ್ಣ
ಸೋಫಾ ಬದಲಿಸಿಕೊಳ್ಳುವ ಸಂಭ್ರಮದ ಸಮಯ
ಇಪ್ಪತ್ತೆಂಟು ಇಂಚಿನ ಟಿ. ವಿ. ಹಾಕಿ
ಜಗತ್ತನ್ನೇ ನೋಡುವ ಇವುಗಳೆಲ್ಲಿ
ಗುಡಿಸಲಲ್ಲೇ ಕೊಳೆತು
ಸಾಯುತ್ತೇವೆನ್ನುವ ಅವುಗಳೆಲ್ಲ
ಜಾಗತೀಕರಣ ಉದಾರೀಕರಣದ ಬಗೆಗೆ
ಉದ್ದುದ್ದ ಅಡ್ಡಡ್ಡ ಮಾತನಾಡುವ
ಅಡ್ಡಗೋಡೆ ದೀಪಗಳು.
*****