ಅವರಿವರಂತಲ್ಲಿವ…. ಕಾಲಪುರುಷ!
ಶಕ್ತಿಗೆ, ಯುಕ್ತಿಗೆ, ಮುಕ್ತಿಗೆ ಯುಗಪುರುಷ!
ಈ ಜಗಕೆ, ಈ ಸೃಷ್ಠಿಗೆ, ಮೂಲನಿವ!
ತ್ರಿಶೂಲನಿಗೇ, ತಾಳಿಬೊಟ್ಟು ಮಾಡಿಕೊಟ್ಟ, ಆದಿಬ್ರಹ್ಮ!
ಕಾಮಧೇನುವ ಈ ಭುವಿಗೆ, ಹೊತ್ತು ತಂದ, ಭೂಪನೀವ!
ರುದ್ರ-ಭದ್ರ-ಆರಿದ್ರನೆಂಬಾ ಮೂರು ಜಡೆ…!
ಶಂಕು, ಚಕ್ರ, ನಗಚಕ್ರ, ತ್ರಿನೇತ, ಮುನಿಪುಂಗವ!
‘ಮಾತಂಗವಾಡೆ’ಯ ಅಧಿಪತಿಯೆನಿಸಿ,
ಜಲದಲಿ, ಖಂಡುಗ ತಪಸ್ಸು ಮಾಡಿ,
ಜಲ, ಚರ, ಆಕಾಶ, ಜೀವಿಗಳಿಗೆಲ್ಲ
ಜನ್ಮದಾತ… ಬ್ರಹ್ಮನೀತ!
ಮುಕ್ಕೋಟಿ ದೇವತೆಗಳಿಗೆ ಅಪ್ಪ,
ನಾರಾದ ಮಹಾಮುನಿಗೆ ತಾತ!
ಆದಿಶಕ್ತಿಗೆ ತಾಳಿ ಬಿಗಿದ ತಂದೆ!
ಕ್ರಿಷ್ಣನೊಂದಿಗೆ ಹೋರಾಡಿದ್ದಕ್ಕೆ:
ಮಗಳಿನ್ನಿತ್ತು, ಶಮಂತಕ ಮಣಿಯನ್ನಿತ್ತ, ಜಾಂಬುವಂತ!!
ಜಂಬೂದ್ವೀಪಾಧೀಪತಿ!
ಏಕ ಚಕ್ರಾಧಿಪತಿ!
೨
ಇಂದು: ಅಕಾಶ, ಭೂಮಿ, ಊರು, ಕೇರಿಯನ್ನೊಮ್ಮೆ
ಪರಿವಾರದೆಡೆಗೊಮ್ಮೆ ಮುಖವಿಟ್ಟ…
ಮುಖವೋ… ಉರಿ… ಉರಿ… ಊರುಮಾರಿಯಮ್ಮಾ…
ನಗಚಕ್ರ, ಆಲೆಯ ಮನೆಯಂತೆ, ರಾವು… ರಾವು…
ಅದೇನು ಆವೇಶವೋ?! ಆತೂರವೋ?? ಕೋಪವೋ…
ಅಪ್ಪ, ಅಮ್ಮ, ತಾತ, ಮುತ್ತಾತರನ ಕಂಡಾ ಹಳೇ ಬೇರು!
ನೂರರ ಹರೆಯದ, ರಾಮಯ್ಯ… ಏಳು ಕೊಂಡಲವಾಡಯ್ಯ
೩
ಅವರಿವರಂತಿರುವಾ
ಎಲ್ಲರಂತಿರುವಾ ಮನುಶ್ಯಾ ಕೃತಿ!
ಇಂದಿಗೂ ಕೇರಿ ಹೊರಗೆ!!
ಬೆಳಿಗ್ಗೆ ಸಂಜೆ… ಕೇರಿ ಮುಂದೆ, ಕುಂತಪರಿಯೇ ‘ಸರಗು ಗುನಿಯು’
ನಿಗಿ ನಿಗಿ ಉರಿವಕಣ್ಣು, ಬಿಳಿಗಡ್ಡ, ಕೇಸರಿ ರುಮಾಲು!
ಹಗಲಹಣೆಗೆ-ಉದ್ದ ಮೂರು ನಾಮ! ಬಿಳಿ-ಕೆಂಪು-ಕೇಸರಿ!
ಕೊರಳಲ್ಲಿ-ರುದ್ರಾಕ್ಷಿ ಮಾಲೆ, ಎದೆಯ ಮೇಲೆ-ಬೆಳ್ಳಿ ಲಿಂಗ,
ಏನಾವನ ಲೀಲೆಯೋ? ಮಾಯೆಯೋ… ಖಾಯಾಲಿಯೋ…??
ಹೆಗಲಿಗೊಂದು: ಕರಿ ಕಂಬಳಿ, ಬಲಗೈಗೆ ಬೆಳ್ಳಿ ಕಡುಗ…
ಬಲಗಾಲಿಗೆ ಗಗ್ರಿಯು! ಬೀದರ ಕೋಲ ಎದುರಿಗೇ…
ಮೂರು ಬಾರಿನ, ಗಿರಿಕಿ ಕಾಲ್ಮಾರಿ ಕಾಲಿಗೆ!
ಕ್ವಾರೆ ಮೀಸೆ, ಆರಡಿ ಎತ್ತರದ, ಸರದಾರನ ಭಂಗಿ,
ತೀರಾ ಹಳೇ ಅಂಗಿ…
ಅದರ ಮೇಲೊಂದು: ಕರೀ ಕೋಟು! ಜೋಗೇರಾ ಹಾಗೇ…
ಅಕ್ಕಪಕ್ಕ… ಪಾತ್ರೆ, ಪಡುಗಾ, ಚಂಬು, ಗಂಗಾಳ, ಕ್ವಣೆಗೇ…!
ಕಂಚಿಶಾಸನಧೀಶನಾಗಿ, ಮಾದಿಗರ ‘ಆಳ್ಮಾಗ’ನಾಗಿ…
ಅದೇ ಗತ್ತು, ಗಮ್ಮತ್ತಿನಲ್ಲೇ…
ಕೂಗಿಕೂಗಿ… ಮಾದಿಗರ ಕರೆವ, ದಣಿವು ಈಗಲೂ…!
೪
ಈ ನೆಲಮುಗಿಲಿಗೆ ಕರ್ತಾರನಿವ!
ಅಂದು… ಸಲ್ಲಿದವ! ಪೊರೆದವ! ಒಡೆಯ!
ಇಂದೂ.. ಸಲ್ಲುವ ಪರಿಯೇ, ಬೆಕ್ಕಸ ಬರಗು!
ಶತಶತಮಾನದ ಈ ಮುದೀತೇರೂ…
ಹರಿದು ಬಂದಾ ಜೋರಿಗೆ, ಲೆಕ್ಕವಿಟ್ಟವರ್‍ಯಾರು?!
‘ಇವ ನಮ್ಮವ… ಇವನಮ್ಮವ…’
ಎಂದು… ಅಭಿಮಾನಪಡುವ, ಮಾದಿಗರೂ…
ಹೊರಗೆ… ಹೊರಗೆ… ಈಗಲೂ ಕೇರಿ ಹೊರಗಿಟ್ಟಿರುವಾ…
ಪರಿಪರಿಯೇ ನಿಬ್ಬೆರಗು! ಒಗಟು! ಕಗ್ಗಂಟು!
೫
ನಗುನಗುತ್ತಾ… ನಿತ್ಯ ಸತ್ಯ ಕತೆಯ, ಹಗಲಿರುಳು ಸಾರುತ್ತಾ…
ಮುದ್ದೆ, ಸಾರು, ಬಾನ, ನೀರೂ ಕೇಳುತ್ತಾ… ಕೇರಿ, ಕೇರಿ ಅಲೆವಾಽ…
ಬಟ್ಟೆ, ಬರೆ, ಕಾಳು ಕಡಿ, ರಕ್ಕ, ಕುರಿ, ಮೇಕೆ, ಪಡೆಯುತ್ತಾ… ನಲಿವಾಽಽ…
ಹರನ ಮೆಟ್ಟಿದವ, ನರನ ಮೆಟ್ಟಿಗೂ, ಕಡೆಯಾದ ಜೀವನವೀಗ!!
ತನ್ನದೇ ನೆರಳಿಗೆ ಬೆಚ್ಚಿಬಿದ್ದು… ಅಲೆ ಅಲೆವಾ…
‘ಗುದುಮುರಿಗೆ’ ಬಿಳುವಾ…
ಬೆರಗುಗಣ್ಣಿನ ಮುದುಕ… ದಕ್ಕಲು ರಾಮಯ್ಯ, ಒಂಟಿ… ಒಬ್ಬಂಟಿ!
ಹಸಿದ ಕರುಳಿಗೆ, ಬಸವಳಿದ ದೇಹಕ್ಕೆ, ಬರೀಗೈಗಳ ವೇದಾಂತ!!
ತಿರಿದುಣ್ಣುವ ಮಂದಿ… ಈ ಮಾದಿಗರಿಗೆ, ಕೂಗಿಣ್ಣುವ ಈ ದಕ್ಕಲ!
ಆಶ್ಚರ್ಯವಿದು… ಎಂಟನೇ ಅದ್ಭುತ!! ಸೋಜಿಗದ ಕಥೆಯಿದು…
ಬುದ್ಧ, ಬಸವ, ಗಾಂಧಿ, ನೆಹರು, ಅಂಬೇಡ್ಕರ್ ನಾಡಿನಲಿ…
ಹಸಿದವರ… ಹಸುಗೂಸಾದ, ಈ ದಕ್ಕಲ
ಇಂದಿಗೂ… ಯಾರಿಗೂ ದಕ್ಕದವಾಽಽ…
ಹರ್ಷದಲಿ, ವರ್ಷ ವರ್ಷ, ತನ್ನ ಕಟ್ಟಕಡೆಯ ಕತೆಯ ಸಾರುವ…
ಕಿವಿಯಿದ್ದರೆ ‘ಕೇಳಿ…’
ಕಣ್ಣಿದ್ದರೆ ‘ಕಾಣಿ…’ ಎನ್ನುವ!
*****