ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಮಕ್ಕಳಿದ್ದಿಲ್ಲ; ಮರಿಗಳಿದ್ದಿಲ್ಲ. ಅಂಬಾಣಾ ತೊರೆಯಂಥ ಜಾಗಾಕ ಹೋಗಿ ಎಲ್ಲ ಜನರಿಗೆ ಊಟ-ಉಪಶಾಂತಿ ಮಾಡಬೇಕೆಂದು ನಿಶ್ಚಯಿಸಿದರು. ನಾಲ್ಕು ಬಂಡಿ ಕಟ್ಟಿ ಸಾಹಿತ್ಯ ಸಲಕರಣೆ ಸಹಿತ ತಯಾರಾದರು. ಅಡಿಗೆ ಅಂಬಲಿ ಸಿದ್ಧವಾಯ್ತು. ನೈವೇದ್ಯ ತೋರಿಸತೀನಿ ಎಂದು ಹೆಂಡತಿ ನದಿಯ ಕಡೆಗೆ ಹೋದಳು. ನೈವೇದ್ಯ ತೋರಿಸಲು ನದಿಯೊಳಗಿನ ಮೀನೊಂದು ಛಟ್ಟೆಂದು ಅವಳ ಉಡಿಯಲ್ಲಿ ಬಿತ್ತು. “ನಿಂದು ನಿನಗ ಮುಟ್ಟಿತು. ನಂದು ನನಗ ಮುಟ್ಟಿತು. ನಡಿ ಮನೀಗಿ ಹೋಗೂಣು” ಎಂದು ಮೀನಕ್ಕ ಹೇಳಿದಳು. ಜಲ್ದಿ ಹೋಗಾರಿ ಎಂದು ಬಂಡಿಕಟ್ಟಿಕೊಂಡು ಹೊರಟರು. ಬಟ್ಟಲಲ್ಲಿ ನೀರು ಹಾಕಿ ಅದರೊಳಗೆ ಮೀನು ಇಟ್ಟರು. ಪಿಂಜರದಲ್ಲಿ ಬಟ್ಟಲ ಇಟ್ಟರು. ಮೀನು ಬೆಳೆಯಲಿಕ್ಕೆ ಹತ್ತಿತು.
ಮೀನು ಬೆಳೆದು ದೊಡ್ಡದಾಯ್ತು. ಆಮೇಲೆ ಹಾಲಿಕ್ಕಿದ್ದರೂ ಕುಡಿಯಲಿಲ್ಲ; ನೀರಿಕ್ಕಿದರೂ ಕುಡಿಯಲಿಲ್ಲ. “ಯಾಕ ಮೀನಪ್ಪ, ಹಾಲಯಾಕ ಕುಡೀಲೊಲ್ಲಿ ? ಲಗ್ನ ಮಾಡಂತೀಯೇನಪ್ಪ” ಎಂದಾಗ ಮೀನು ಸುಮ್ಮನೆ ಕುಳಿತಿತು. ಲಗ್ನ ಮಾಡಿಯೇ ಬಿಡಬೇಕೆಂದು ಯೋಚಿಸಿದರು. ಹಾಲು ಕುಡಿಯಲು ಕೊಟ್ಟರು.
ಹೆಣ್ಣು ಬೇಡಲು ಒಂದೂರಿಗೆ ಹೋದರು. ಅಲ್ಲಿ ಒಬ್ಬಾಕೆಗೆ ಮಲಮಗಳೊಬ್ಬಳಿದ್ದಳು; ರೂಪಿಸ್ಥ ಇದ್ದಳು; ಮಹಾ ಗುಣವಾನ್ ಇದ್ದಳು ಆಕೆ. ಪೀಡೆ ಹೋಗಲೆಂದು ಮಲಮಗಳನ್ನು ಕೊಟ್ಟುಬಿಟ್ಟಳು. ಆಕೆಯನ್ನು ತಲವಾರದೊಡನೆ ಲಗ್ನಮಾಡಿ ಮುಗಿಸಿದರು. ಆ ಕೊಡುಗೂಸು ನಾಲ್ಕು ವರ್ಷಗಳಾದ ಮೇಲೆ ಮೈನರೆದಳು. ಶೋಭಾನಮಾಡಲು ಯೋಚಿಸಿದರು. ಮೀನಪ್ಪ ಮತ್ತೆ ಹಾಲು ಕುಡಿಯದಾದನು; ನೀರು ಕುಡಿಯದಾದನು. ಶೋಭಾನ ಮಾಡೋಣೇನಪ್ಪ ಎಂದರೆ, ಮೀನಪ್ಪ ತಲೆ ಹಾಕಿದನು. ಹತ್ತು ಹನ್ನೆರಡು ದಿನ ಹಾಲು ಕುಡಿಯದೆ ಕುಳಿತು ಈ ಹೊತ್ತು ಶೋಭಾನ ಮಾಡುತ್ತೇವೆ ಹಾಲು ಕುಡಿಯಪ್ಪ ಅಂದಾಗ, ಮೀನಪ್ಪ ಹಾಲು ಜಡಿದನು.
ಶೋಭನದ ದಿನ ಹೆಣ್ಣುಮಗಳು ಹಳ್ಳಕ್ಕೆ ನೀರು ತರಲು ಹೋಗಿದ್ದಳು. ತನ್ನ ಹಣೆಬರಹಕ್ಕೆ ತಾ ಅಳುತ್ತ ನಿಂತಿದ್ದಳು. ಅಲ್ಲೊಬ್ಬ ಗೋಸಾವಿ ಗಂಟುಬಿದ್ದನು. ಅವನು ಪರಮಾತ್ಮ ಬಂದಂತೆ ಬಂದನು. “ಮೀನು ನಿನ್ನ ಹಾಸಿಗೆಯಲ್ಲಿ ಬಂದ ಕೂಡಲೇ ಈ ಎರಡು ಹರಳುಗಳಿಂದ ಹೊಡೆ. ನಿನಗೆ ಮೀನು ಏನೂ ಮಾಡುವುದಿಲ್ಲ” ಎಂದು ಹೇಳಿದನು.
ಪಿಂಜರದೊಳಗಿನ ಮೀನಪ್ಪನನ್ನು ತೆಗೆದರು. ಹೆಣ್ಣುಮಗಳು ಗೋಸಾವಿ ಕೊಟ್ಟಂಥ ಹರಳು ಒಗೆದಳು. ಮೀನಿನ ವೇಷ ತೆಗೆದೊಗೆದು ಒಬ್ಬ ಪುರುಷ
ಆಗಿ ನಿಂತನು. ಅಲ್ಲಿಯೇ ಇದ್ದ ಅಗ್ಗಿಷ್ಟಿಕೆಯಲ್ಲಿ ಪೋಷಾಕ ಒಗೆದರು. ಗಂಡ ಹೆಂಡಿರು ಮಲಗಿದರು. ಸರಿಯಾಗಿ ಹೊತ್ತು ಹೊರಡುವದಕ್ಕೆ ಬಾಗಿಲು ತೆರೆದರು. ಹೆಣ್ಣು ಮಗಳು ಬಂದು ಅತ್ತೆಯ ಕಾಲು ಬಿದ್ದಳು. ಅಗ್ಗಿಷ್ಟಿಕೆಯಲ್ಲಿ ಪೋಷಾಕ ಒಗೆದ ಸುದ್ದಿ ಹೇಳಿದಳು. ಮೀನಪ್ಪ ಪುರುಷಾಕಾರ ತೊಟ್ಟಿದ್ದು ನೋಡಿ, ತಾಯಿತಂದೆಗಳಿಗೆ ಬಹಳೆಂದರೆ ಬಹಳ ಹಿಗ್ಗು ಆಯ್ತು.
ಮಗ ಸೊಸಿ ಆನಂದದಿಂದ ಸಂಸಾರಮಾಡಿದರು, ಸೊಸೆಗೆ ದಿನತುಂಬಿದವು. ತವರುಮನೆಗೆ ಸಮಾಚಾರ ಹೇಳಿ ಕಳಿಸಿದರು. ಬೀಗತಿ ಐದರಲ್ಲಿ ಊಟಕ್ಕೆ
ಮಾಡಿ ಕೊಂಡು ಬಂದಳು. ಅವಳು ಹೊಟ್ಟೆಯ ಮಗಳನ್ನು ಬಡವರಿಗೆ ಕೊಟ್ಟಿದ್ದಳು. “ಈಕೆಯದೆಷ್ಟು ಸೊಗಸಾಯಿತು” ಎಂದು ಮಲತಾಯಿಯ ಮನದಲ್ಲಿ ನುಚ್ಚು ಕುದಿಯುವಂತೆ ಕುದಿಯಹತ್ತಿತು. ಊಟಕ್ಕೆ ಮಾಡಿದಳು. ಮಗಳಿಗೆ ಪ್ರೀತಿಸಿದಂತೆ ಮಾಡಿ ಆಕೆಯನ್ನು ತವರುಮನೆಗೆ ಕರಕೊಂಡು ಹೋದಳು. ಹೊಟ್ಟೆಯ ಮಗಳು ಸಹ ಗರ್ಭಿಣಿಯಾಗಿ ತವರುಮನೆಗೆ ಬಂದಿದ್ದಳು. ಹೊಟ್ಟೆಯ ಮಗಳದೊಂದು ಕಣ್ಣು ಕುರುಡು. “ಹಡೆದರೆ ಕುಳ್ಳು ಕಟ್ಟಿಗೆ ಬೇಕಾಗುತ್ತವೆ” ಎಂದು ಹೇಳಿ ಇಬ್ಬರೂ ಹೆಣ್ಣುಮಕ್ಕಳನ್ನು ಕುಳ್ಳು ಆಯಲು ಕಳಿಸಿದಳು. “ನಿನ್ನ ವಸ್ತಾ ನಾ ಇಟಗೋತೀನಿ; ನನ್ನ ವಸ್ತಾ ನೀ ಇಟ್ಟುಕೋ. ನನ್ನ ಸೀರೆ ನೀನು ಉಟ್ಟುಕೋ; ನಿನ್ನ ಸೀರೆ ನಾ ಉಟ್ಟುಗೋತೀನಿ” ಎಂದು ಜುಲುಮೆ ಮಾಡಿ, ತನ್ನ ಸೀರೆಯನ್ನು ಅಕ್ಕನಿಗೆ ಉಡಿಸುತ್ತಾಳೆ; ಆಕೆಯದನ್ನು ತಾನು ಉಟ್ಟುಕೊಳ್ಳುತ್ತಾಳೆ.
ಅಲ್ಲೊಂದು ಭಾರಂಗಭಾವಿಯಿತ್ತು. ನೀರು ಎಷ್ಟಿವೆ ನೋಡಬೇಕೆಂದು ಇಬ್ಬರೂ ಬಾಗಿದಾಗ ಕುರುಡಿಮಗಳು ತನ್ನಕ್ಕನನ್ನು ಬಾವಿಯಲ್ಲಿ ಕೆಡಹಿದಳು. ಗರ್ಭಿಣಿ ಹೆಣ್ಣುಮಗಳು ಜೋರಾಗಿ ಬಾವಿಯಲ್ಲಿ ಬಿದ್ದಾಗ ಅಲ್ಲೊಂದು ಚಮತ್ಕಾರವಾಯಿತು. ನಾಗೇಂದ್ರನ ಹೆಡೆಯಮೇಲೆ ರಸದ ಹುಣ್ಣು ಆಗಿತ್ತು. ಇವಳು ಅದರ ಮೇಲೆ ರಪ್ಪನೆ ಬಿದ್ದಾಗ ಹುಣ್ಣು ಒಡೆದು ತಣ್ಣಗಾಯಿತು.
“ನಮ್ಮಲ್ಲಿ ಬಂಗಾರದ ತೂಗುಮಂಚ ಅದೆ. ನಮ್ಮ ಮನೆಯಲ್ಲಿ ಇರಬಾ” ಎಂದು ಹೇಳಿ, ಆ ಹೆಣ್ಣುಮಗಳನ್ನು ಬಾವಿಯೊಳಗಿರುವ ತನ್ನ ಮನೆಗೆ
ಕರೆದೊಯ್ದಿತು ನಾಗೇಂದ್ರ.
ಇತ್ತ ಕಡೆಗೆ ಐದು ತಿಂಗಳು ಹೋಗಿ ಒಂಬತ್ತು ತಿಂಗಳಿಗೆ ಮೀನಪ್ಪನಿಗೆ ಸಮಾಚಾರ ಹೋಯಿತು. ಐದು ಕೈ ಮುಷ್ಟಿಯಿಂದ ಐದು ಹಿಡಿ ಅಕ್ಕಿ ಒಂದು
ಲಿಂಗ ಕೊಟ್ಟರು. ತೊಟ್ಟಿಲಿಗೆಂದು ಉಂಗುರ, ಬಿಂದುಲಿ ತೆಗೆದುಕೊಂಡು ಬಂದರು. “ಕೂಸು ಚೆನ್ನಾಗಿದೆ. ಆದರೆ ಹೆಣ್ಣುಮಗಳ ಕಣ್ಣು ಹೋಗಿವೆ” ಎಂದು ಮೀನಪ್ಪನ ಮನೆಯವರಿಗೆ ಸುಳ್ಳು ಹೇಳಿದರು.
ಕುರುಡಿಮಗಳು ಮೊದಲಿನ ಗಂಡನನ್ನು ಮಡಿಚಿಹಾಕಿದಳು. ಮನಸ್ಸಿಲ್ಲದ ಮನಸ್ಸಿನಿಂದ ಕೂಸಿಗೆ ತೊಟ್ಟಲಲ್ಲಿ ಹಾಕಿ, ಮೀನಪ್ಪ ಮತ್ತು ಅವನ ತಾಯಿ ತಂದೆ ತಿರುಗಿ ಬಂದರು. ಮುಂದೆ ಐದರಲ್ಲಿ ಕರಕೊಂಡು ಬಂದಾಗ ಏನೆಂಬೂದು ತಿಳಿಯುತ್ತದೆ – ಅಂದುಕೊಂಡರು. ಅದರಂತೆ ಕರಕೊಂಡೂ ಬಂದರು. ಒಬ್ಬರೂ ಅವಳ ಕೂಡ ಮಾತಾಡಲಿಲ್ಲ.
ಮೀನಪ್ಪನ ನಿಜವಾದ ಹೆಂಡತಿ ಬಾವಿಯಲ್ಲಿ ಹಡೆದಳು. ಬಾಣಂತನ ನಡೆಯಿತು. ಕೂಸಿಗೆ ತೊಟ್ಟಿಲಲ್ಲಿ ಹಾಕಿದರು. ನಾಗೇಂದ್ರ ತೊಟ್ಟಿಲು ಬಟ್ಟಲು
ಕೊಟ್ಟನು. ಮಿಡಿ ನಾಗೇಂದ್ರ ಬಾವಿಯ ಕಟ್ಟೆಯ ಮೇಲಿಂದ ಇಳಿದು ಕೆಳಗೆ ಮೇಯುತ್ತಿದ್ದ. ಅಲ್ಲೊಬ್ಬ ಬಳೆಗಾರ ಹೊರಟಿದ್ದನು. ಮಿಡಿನಾಗೇಂದ್ರ ಅವನನ್ನು ಕರೆದು ಹೇಳಿದನು – “ನಮ್ಮಕ್ಕನಿಗೆ ಬಳೆ ಇಡಿಸುವದದೆ. ನೀ ಬರಬೇಕು” ಬಳೆಗಾರನು ಒಪ್ಪಿಕೊಂಡನು.
ಬಳೆಗಾರನು ಬಾವಿಯಲ್ಲಿ ಇಳಿಯುತ್ತ ಹೊರಟಂತೆ, ನೀರು ಮೆಟ್ಟು ಮೆಟ್ಟಿಲಂತೆ ಕೆಳಗಿಳಿಯುತ್ತ ಹೋಯಿತು. ಬಳೆಗಾರನು ನಾಗೇಂದ್ರನ ಮನೆ
ತಲುಪಿದಾಗ – ಹೆಣ್ಣು ಮಗಳು ಮಗನಿಗೆ ಆಡಿಸುತ್ತಿದ್ದಳು – “ಮೀನಪ್ಪನ ಮಗ ಮೀನಾಕುಮಾರ, ಸುಮ್ಮನೆ ಕೂಡಪ್ಪ. ಬಾ ನನ್ನ ಕಂದಾ ಬಗಲಾಗ.”
ಮೀನಪ್ಪನ ಊರಿಗೆ ಬಳೆಗಾರ ಬಂದನು. ಕುರುಡಿ ತನಗೆ ಬಳೆಯಿಡಿಸಲು ಹೇಳಿದಳು. ಆಕೆಯ ಕೂಸು ಅಳಹತ್ತಿತು – “ಏನು ಅಳತಽದ ಈ ಕೂಸು.
ಬಾಡಕೋ. ಕಾಗಿ ಆಗ್ಯಾದ” ಇಂಥ ಶಬ್ಬ ಉಪಯೋಗಿಸಬೇಡ ಎಂದನು ಬಳೆಗಾರ. ಭಾರಂಗ ಬಾವಿಯೊಳಗೆ ಒಬ್ಬ ಹೆಣ್ಣು ಮಗಳು ಕೂಸಿಗೆ ಆಡಿಸಿದ
ಕಥೆ ಹೇಳಿದನು – “ಮೀನಪ್ಪನ ಮಗ ಮೀನಾಕುಮಾರ, ಸುಮ್ಮನೆ ಕೂಡಪ್ಪ” ಎಂದು ಆ ಹೆಣ್ಣು ಮಗಳು ಅದೆಷ್ಟು ಚಲೋ ಆಡಿಸುತ್ತಿದ್ದಳು ನೋಡಬಾರದೇ?” ಆ ಮಾತು ಕೇಳಿ ಮೀನಪ್ಪ ಬಳೆಗಾರನಿಗೆ ಕೇಳಿದನು – “ನನಗೆ ಭಾರಂಗ ಭಾವಿ ತೋರಿಸು.”
ಮೀನಪ್ಪ ಬಳೆಗಾರನ ಬೆನ್ನು ಹತ್ತಿ ಬಾವಿಯಲ್ಲಿ ಇಳಿದನು. ಒಳಗೆ ಹೋದಂತೆ ನೀರು ಮೆಟ್ಟಲು ಮೆಟ್ಟಿಲು ಇಳಿಯುತ್ತ ಹೋಯಿತು. ಏಳು ಹೆಡೆಯ ನಾಗೇಂದ್ರ ಮೀನಪ್ಪನಿಗೆ ಎಲ್ಲ ಸತ್ಕಾರ ಮಾಡಿ ತನ್ನಲಿಲ್ದ ಸಂಪತ್ತು ಕೊಟ್ಟನು. ಹೆಣ್ಣು ಮಗಳೂ ಬೆಳ್ಳಿ ಬಂಗಾರ ತುಂಬಿಕೊಂಡು ನಾಗೇಂದ್ರನ ಅಪ್ಪಣೆ ಪಡೆದು ತನ್ನ ಗಂಡನ ಮನೆಗೆ ತಿರುಗಿ ಬಂದಳು.
ಆ ಸಂದರ್ಭದಲ್ಲಿ ತಿರುಗಾಡಲಿಕ್ಕೆ ಹೋದ ಮಿಡಿನಾಗೇಂದ್ರ, ತಿರುಗಿ ಬಂತು. “ನಾನು ಮನೆಯಲ್ಲಿ ಇಲ್ಲದಾಗ ಅಕ್ಕ ಹೇಗೆ ಹೋದಳು. ನಾ ಹೋಗಿ
ಅವಳ ಮಗನಿಗೆ ಕಚ್ಚತೀನಿ. ಬಚ್ಚಲ ಮನೀಲಿಂದ ಹೋಗಿ ಆ ಕೂಸಿಗೆ ಕಚ್ಚಿ ಬರ್ತೀನಿ” ಎಂದು ಹೊರಟಿತು.
ರಾತ್ರಿ ಆಗಿತ್ತು. ಕೂಸು ಅಳುತ್ತಿತ್ತು. ಸೀರೆಯ ಸೆರಗಿನಿಂದ ದೀಪ ತೆಗೆಯಲು ಹೋದಳು. ಮೀನಪ್ಪ ಹೆಂಡತಿಗೆ ಕೇಳುತ್ತಾನೆ – “ಹೀಂಗ ದೀಪ ಆರಿಸಿದರೆ
ಸೀರೆ ಸುಟ್ಟು ಹೋಗುತ್ತವಲ್ಲ ?” ಆ ಮಾತಿಗೆ ಹೆಣ್ಣು ಮಗಳು ಅನ್ನುತ್ತಾಳೆ – “ನನ್ನ ತಮ್ಮ ಮಿಡಿನಾಗೇಂದ್ರ ಮನಸ್ಸು ಮಾಡಿದರೆ ನನಗೆ ಬೇಕಾದಷ್ಟು ಸೀರೆ ಸಿಗುತಾವ.”
ಮಿಡಿನಾಗೇಂದ್ರ ಅಕ್ಕನಾಡಿದ ಮಾತು ಕೇಳಿತು. ಕೂಸಿಗೆ ಕಚ್ಚಲಾರದೆ ಮೂಕಾಟದಲ್ಲಿ ತಿರುಗಿ ಹೋಗಿಬಿಟ್ಟಿತು.
ಮರುದಿನವೇ ಆ ಕುರುಡಿಯನ್ನು ಅಗಸೆಯ ಬಂಡೆಗಲ್ಲಿನಲ್ಲಿ ಹೂಳಿಬಿಟ್ಟರು. ಅವಳ ತಲಿ ಮಾತ್ರ ಕಾಣುವಂತೆ. ಎಲ್ಲರೂ ಹೋಗುತ್ತಾ ಒಮ್ಮೆ ಬರುತ್ತಾ ಒಮ್ಮೆ ತಂಬಿಗೆ ಒರೆಸಹತ್ತಿದರು. ಒಂದು ದಿನ ಕುರುಡಿಯ ತಾಯಿಯೇ ತನ್ನ ತಂಬಿಗೆ ಒರೆಸಹೋದಳು. “ಎಲ್ಲರೂ ಒರೆಸುತ್ತಾರೆಂದು ನೀನೂ ಒರೆಸುತ್ತೀಯಾ ಅವ್ವ?” ಎಂದು ಕುರುಡಿ ಚೀರಿದಳು. ತನ್ನ ಮಗಳಿಗೆ ಇದೆಂತ ಗತಿ ಬಂತಲ್ಲ ಎಂದು ತಿಳಿದು, ಅವ್ವನು ಮಗಳನ್ನು ಹೆಗಲಮೇಲೆ ಹೊತ್ತುಕೊಂಡು ಹೋಗುವಾಗ ಕುರುಡಿಯ ತಲೆ ಬಂಡೆಗಲ್ಲಿಗೆ ಬಡಿದು, ಅಲ್ಲಿಯೇ ಸತ್ತುಬಿದ್ದಳು.
*****