ಒಬ್ಬ ಹೆಣ್ಣು ಮಗಳು ನೀರು ಹಾಕಿಕೊಂಡಳು. ಆಕೆಗೆ ಬಯಕೆ ಕಾಡಹತ್ತಿದವು. ಆಕೆಯ ಜೀವ ನೀರಲ ಹಣ್ಣು ಬಯಸಿತು. ಗಂಡನು ನೀರಲ ಹಣ್ಣು ತರಲಿಕ್ಕೆ ಹೋದನು.
ನೀರಲಗಿಡವನ್ನೇರಿ ಆತನು ಗಿಡ ಕಡೆಯ ತೊಡಗಿದನು. ಎರಡು ಹಣ್ಣು ಕಡಿದನು. ಗಿಡದಲ್ಲಿ ನಾಗೇಂದ್ರನು ಕಾಣಿಸಿಕೊಂಡು ಈ ಗಿಡ ಕಡೆಯಬೇಡವೆಂದು ಹೇಳಿದನು.
“ನನ್ನ ಹೆಂಡತಿ ಬಯಸಿದ್ದಾಳೆ. ನಾನು ಒಯ್ಯುತ್ತೇನೆ.”
“ಒಂದು ಕರಾರಿನ ಮೇಲೆ ನೀರಲ ಹಣ್ಣು ಒಯ್ಯಬಹುದು ನೀನು” ಎಂದನು ನಾಗೇಂದ್ರ. ಆ ಕರಾರಿನಂತೆ ಹೆಣ್ಣು ಹುಟ್ಟಿದರೆ ನಾಗೇಂದ್ರನಿಗೆ ಕೊಡಬೇಕು. ಗಂಡು ಹುಟ್ಟಿದರೆ ಅವನ ಮಗಳನ್ನು ತೆಗೆದುಕೊಳ್ಳಬೇಕು. ಕರಾರಿಗೆ ಸಮ್ಮತಿಸಿ ಗಂಡನು ನೀರಲಹಣ್ಣು ತೆಗೆದುಕೊಂಡು ಒಯ್ದು ಹೆಂಡತಿಗೆ ತಿನ್ನಲು ಕೊಡುತ್ತಾನೆ. ಆಕೆ ನೀರಲಹಣ್ಣು ತಿನ್ನುತ್ತಾಳೆ.
ಒಂಬತ್ತು ತಿಂಗಳು ಒಂಬತ್ತು ದಿನಕ್ಕೆ ಹೆಣ್ಣು ಕೂಸನ್ನು ಹಡೆದಳು. ಈ ಮಗಳನ್ನು ನಾಗೇಂದ್ರನಿಗೆ ಕೊಡಬೇಕಲ್ಲ – ಎಂದು ಗಂಡನಿಗೆ ಮಹಾ ಚಿಂತೆಯಾಯಿತು. ಚಿಂತೆಯಲ್ಲಿ ತಾನೇ ಸಣ್ಣಗಾದನೇ ಹೊರತು ಹೆಂಡತಿಗೆ ಹೇಳಲೇ ಇಲ್ಲ.
ಅವೆಷ್ಟೇ ವರುಷಗಳು ಗತಿಸಿದವು. ಹೆಣ್ಣುಮಗಳು ಬೆಳೆದು ದೊಡ್ಡವಳಾದಳು. ನೆಂಟಸ್ತನದ ಮಾತುಕತೆಗಳು ನಡೆಯತೊಡಗಿದವು. ಕೊಡುವ ಹೆಣ್ಣುಮಗಳಿದ್ದಾಳೆ. ಕೊಡಲಿಕ್ಕೇಬೇಕು – ಎಂದು ಅಪ್ಪನು ಮನಸ್ಸನ್ನು ಕಲ್ಲು ಮಾಡಿಕೊಳ್ಳುತ್ತಾನೆ. ಅದರಂತೆ ಮಗಳನ್ನು ಬೇರೂಂದೂರಿಗೆ ಕೊಟ್ಟು ಲಗ್ನ ಮಾಡುತ್ತಾನೆ. ಲಗ್ನದ ನಿಬ್ಬಣ ಹೊರಡುತ್ತದೆ. ನಾಲ್ಕು ಅಗಸೆಯಿಂದ ನಿಬ್ಬಣ ಹೊರಬೀಳಬೇಕೆಂದರೂ ನಾಗೇಂದ್ರನು ಹೆಡೆತೆಗೆದು ನಿಂತಿರುವನು.
ಇದರಲ್ಲೇನೋ ದೋಷವಿದೆಯೆಂದು ಬೀಗರು ಮಾತಾಡಿಕೊಂಡರು. ದೇವ ದೇವಸ್ಥರಿಗೆ ಸುಳ್ಳು, ಹೇಳುವುದು ಬೇಡ ಎಂದು ನೆರೆದ ಜನ ಬುದ್ದಿ ಹೇಳಿತು. ಅದನ್ನು ಕೇಳಿ, ನಡೆದಂಥ ಲಗ್ನಬಿಡಿಸಿ ನಾಗೇಂದ್ರನಿಗೆ ಮಗಳನ್ನು ಕೊಡಬೇಕು ಎಂದು ಜನರು ಅಭಿಪ್ರಾಯ ಪಟ್ಟರು. ಅದರಂತೆ ಆ ಹೆಣ್ಣುಮಗಳನ್ನು ನಾಗೇಂದ್ರನ ಬೆನ್ನುಹಚ್ಚಿ ಬಿಟ್ಟರು.
ಭಾರಂಗ ಭಾವಿಯಲ್ಲಿ ಒಂದು ವಿಶಾಲವಾದ ಮನೆಯಿತ್ತು. ನಾಗೇಂದ್ರನು ಅವಳಿಗೆ ಯಾವರೀತಿಯಿಂದಲೂ ಕೊರತೆ ಮಾಡಲಿಲ್ಲ. ವರುಷ ತುಂಬುವಷ್ಟರಲ್ಲಿ ಅವಳಿಗೊಂದು ಗಂಡುಮಗು ಹುಟ್ಟಿತು. ನಾಗೇಂದ್ರ ಅವಳಿಗೆ ಹೇಳಿದನು – “ಹಾಲನ್ನು ಸಳಮಳನೆ ಕುದಿಸಿ ಕಬ್ಬಿಣ ಬುಟ್ಟಿಗೆ ಹೊಯ್ಯು. ನಾನು ಮೇಯಲಿಕ್ಕೆ
ಹೋಗುತ್ತೇನೆ. ಹೊರಗಿನಿಂದ ನಾನು ಬಂದ ಕೂಡಲೇ ಬಾವಿಯ ಹತ್ತಿರ ಗಂಟೆ ಘಣ್ ಅನ್ನುತ್ತದೆ. ಆಗ ಹಾಲು ತಂದು ಹೊರಗಿಟ್ಟು ತಟ್ಟೆ ಮುಚ್ಚಿಬಿಡು.”
ಈ ರೀತಿಯಾಗಿ ಆಕೆ ನಾಗೇಂದ್ರನ ಸೇವೆ ಮಾಡುತ್ತ ಇದ್ದಳು. ಆಕೆಯ ತಮ್ಮನೊಬ್ಬನು ಚಂಡು ತಕ್ಕೊಂಡು ಹೊರಗೆ ಆಡಲಿಕ್ಕೆ ಹೋದಾಗ ಆ ಚೆಂಡು ಹಿರಿಯ ಹೆಣ್ಣುಮಗಳ ಕೊಡಕ್ಕೆ ಬಡಿದು ಕೊಡ ಒಡೆದು ಹೋಯಿತು. ಹೀಗೆ ಮಾಡುವೆಯೆಂದೇ ನಿಮ್ಮಕ್ಕನನ್ನು ನಾಗೇಂದ್ರನು ಒಯ್ದಿದ್ದಾನೆ – ಎಂದು ಆಕೆ
ಹಂಗಿಸಿದಳು. ಹುಡುಗನು ಮನೆಗೆ ಬಂದು –
“ಅವ್ವಾ, ಅವ್ವಾ ನಮ್ಮಕ್ಕನನ್ನು ನಾಗೇಂದ್ರ ಒಯ್ದಿದ್ದಾನಂತೆ. ನಮ್ಮಕ್ಕನನ್ನು ನೋಡಲಿಕ್ಕೆ ನಾನು ಹೋಗಲೇಬೇಕು” ಎಂದನು ತಾಯಿಗೆ.
“ನೀನೊಬ್ಬನೇ ಮಗ ನಮಗೆ. ನೀನೂ ಒಬ್ಬ ಹೋಗಿಬಿಟ್ಟರೆ ಹೇಗಪ್ಪ” ಎಂದು ತಾಯಿ ಪರಿಪರಿಯಿಂದ ಬೇಡಿಕೊಂಡರೂ ಅವನು ಹೋಗಿಯೇಬಿಟ್ಟನು.
ಭಾರಂಗ ಬಾವಿಗೆ ಹೋದನು. ಗಂಟೆ ಗಣ್ ಅಂದಿತು. ಹಾಲನ್ನು ಕಬ್ಬಿಣ ಬುಟ್ಟಿಯಲ್ಲಿಟ್ಟು ಓಡಿಹೋಗಿ ತಟ್ಟೆಮುಚ್ಚಿಕೊಂಡಳು. “ಅಕ್ಕಾ ! ಅಕ್ಕಾ !” ಎಂದು ಹುಡುಗನು ಕೂಗಹತ್ತಿದನು. ಹೆಣ್ಣುಮಗಳು ಬಂದು ತಟ್ಟೆತೆರೆದು ಕೇಳಿದಳು –
“ತಮ್ಮಾ ನೀನೇಕೆ ಬಂದಿ ? ಇಷ್ಟರಲ್ಲಿ ನಾಗೇಂದ್ರ ಬಂದರೆ ನಿನ್ನನ್ನು ಕೊಂದು ಹಾಕುತ್ತಾನೆ” ಎಂದಳು ಅಕ್ಕ.
“ನಿನ್ನ ಭೆಟ್ಟಿಯಾಗುವದಕ್ಕೆ ನಾನು ಬಂದಿದ್ದೇನೆ” ತಮ್ಮನ ಹೇಳಿಕೆ.
“ಬಂದರೆ ಒಳ್ಳೆಯದಾಯಿತು. ಈಗ ಲಗೂನೇ ಇಲ್ಲಿಂದ ಹೋಗು” ಎಂದು ಅಕ್ಕ ದುಂಬಾಲ ಬಿದ್ದಳು.
ಅಷ್ಟರಲ್ಲಿ ನಾಗೇಂದ್ರ ಅಲ್ಲಿಗೆ ಬಂದನು. ಗಂಟೆ ಗಣ್ ಅಂದಿತು. ಹಾಲನ್ನು ಕಬ್ಬಿಣ ಬುಟ್ಟಿಯಲ್ಲಿ ಹಾಕಿ ತಟ್ಟಿ ಮುಚ್ಚಿಕೊಳ್ಳುವಷ್ಟರಲ್ಲಿ ನಾಗೇಂದ್ರ ಕೇಳುತ್ತಾನೆ.
– “ಯಾರೋ ಬಂದಂತೆ “ನನ್ನ ತಮ್ಮ” ಎಂದು ಹೆಣ್ಣುಮಗಳು ಗಾಬರಿಗೊಂಡು ಹೇಳಿದಳು. ಹಾವು ಸಿಟ್ಟಿನಿಂದ ಕಾವರ್ ಬಾವರ್ ಎಂದು ಮೈಯೆಲ್ಲ ಪರಚಿಕೊಂಡಿತು.
“ನಿನ್ನ ತಮ್ಮನನ್ನು ನಾನು ಕೊಲ್ಲುತ್ತೇನೆ’ ಎಂದು ಚೀರಾಡಿತು.
“ನನ್ನ ತಮ್ಮನನ್ನು ನಾನೇ ಕೊಂದುಬಿಡುತ್ತೇನೆ. ನೀನೇನೂ ಕಾಳಜಿ, ಮಾಡುವುದು ಬೇಡ” ಎಂದು ಸಮಾಧಾನ ಮಾಡಿ ನಾಗೇಂದ್ರನನ್ನು ಹೊರಗೆ ಕಳಿಸುತ್ತಾಳೆ.
ಆಕೆ ಒಂದು ಹಲ್ಲಿಯನ್ನು ಕೊಂದು ಅದರ ರಕ್ತವನ್ನು ಗೋಡೆಗೆ ಸವರಿದಳು ಹಾಗೂ ತಮ್ಮನನ್ನು ಮುಚ್ಚಿಟ್ಟಳು. ನಾಗೇಂದ್ರನು ಮೇದು ತಿರುಗಿ ಬಂದಾಗ, ಗೋಡೆಯ ಮೇಲಿನ ರಕ್ತ ತೋರಿಸಿ ಸಮಾಧಾನ ಮಾಡಿದಳು.
ಅಕ್ಕನಿಗೆ ಕೇಳುತ್ತಾನೆ ತಮ್ಮ – “ನಾಗೇಂದ್ರನ ಜೀವ ಏತರಲ್ಲಿದೆ ತಿಳಿಸು ಕೊಲ್ಲುತ್ತೇನೆ.”
“ಆಗಲಿ” ಅನ್ನುತ್ತಾಳೆ ಅಕ್ಕ.
ವಾಡಿಕೆಯಂತೆ ನಾಗೇಂದ್ರ ಮನೆಗೆ ಬರಲು ಗಂಟಿ ಗಣ್ ಅಂದಿತು. ಮೆಟ್ಟು ಗಟ್ಟಿಯಿಂದ ನೀರು ಕೆಳಗಿಳಿಯಿತು. ಅವನು ಒಳಗೆ ಹೋದನು. ಸುಮಯವರಿತು ಆ ಹೆಣ್ಣುಮಗಳು ಕೇಳಿದಳು –
“ನಾಗೇಂದ್ರ, ನಾಗೇಂದ್ರ ನಿನ್ನ ಜೀವ ಯಾತರಲ್ಲಿದೆ ಹೇಳು.”
“ನನಗಾರು ಹೊಡೆಯುತ್ತಾರೆ ? ಆದರೂ ಹೇಳುತ್ತೇನೆ ಕೇಳು. ಬಿಸಿ ಬಿಸಿ ಹಾಲು ಗಟಗಟ ಕುಡಿಯುವುದರಲ್ಲಿ ನನ್ನ ಜೀವವಿದೆ” ಎಂದನು ನಾಗೇಂದ್ರ.
ಮರುದಿನ ಹಾಲನ್ನು ಸಳಮಳನೆ ಕುದಿಸಿದಳು. ಆರಿಸಲಾರದೆ ಇದ್ದಕ್ಕಿದ್ದ ಹಾಗೆಯೇ ಕಬ್ಬಿಣ ಬುಟ್ಟಿಯಲ್ಲಿ ಸುರುವಿದಳು. ನಾಗೇಂದ್ರನು ಸಳಮಳಿಸುವ ಹಾಲು ಕುಡಿಯುತ್ತಲೇ ಸತ್ತುಬಿದ್ದನು. ಆದರೆ ಅವನ ಹೊಟ್ಟೆಯಲ್ಲಿ ಸಾವಿರಾರು ತತ್ತಿಗಳಿದ್ದವು. ತಗ್ಗಿನಲ್ಲಿ ಒಯ್ದು ಸುಟ್ಟರೂ ಅವು ಬೆನ್ನು ಹತ್ತುವುದು ನಿಶ್ಚಯ.
ದುಗ್ಗ ಕೂಡಿಹಾಕಿ ಉರಿ ಹಚ್ಚಿದರು. ತತ್ತಿಗಳೆಲ್ಲ ಸುಟ್ಟು ಭಸ್ಮವಾದವು. ಆದರೆ ಒಂದೇ ಒಂದು ತತ್ತಿ ಹೊಲದ ಎರೆಬೀಡಿನಲ್ಲಿ ಬಿತ್ತು.
ಒಂದಾದರೂ ತತ್ತಿ ಉಳಿಯಿತಲ್ಲ ಎಂಬ ಚಿಂತೆಯಾಯಿತು.
ಅದೆಷ್ಟು ನೆಲ ಅಗಿದರೂ ತತ್ತಿ ಸಿಗಲಿಲ್ಲ.
ಕೊನೆಗೂ ಸಿಗದಂತಾಗಲು ನಿರಾಶರಾಗಿ ಕುಳಿತರು.
“ಮನೆಗೆ ಹೋಗೋಣ” ಎಂದು ತಮ್ಮನು ಹೇಳಿದರೂ, ಆಗಲಿ ಎನ್ನುತ್ತ ಅಕ್ಕನು ನೆಲ ಕೆದರುತ್ತಲೇ ಕುಳಿತಳು.
ಮನೆಯ ಮುಂದೆ ಒಬ್ಬ ಸಾಧು ಹೊರಟಿದ್ದನು. ಅವನನ್ನು ಕೇಳಿದಳು ಅಕ್ಕ –
“ನನ್ನ ತಮ್ಮ ನನ್ನನ್ನು ಕರೆಯ ಬಂದಿದ್ದಾನೆ. ನಾನು ಹೇಗೆ ಹೋಗಲಿ ? ತತ್ತಿ ನನ್ನ ಬೆನ್ನು ಹತ್ತುತ್ತದೆ.”
ಸಾಧು ಏಳು ಹರಳುಗಳನ್ನು ಮಂತ್ರಿಸಿಕೊಟ್ಟನು. ಅವುಗಳನ್ನು ಉಪಯೋಗಿಸುವ ವಿಧಾನವನ್ನು ಹೇಳಿದನು –
“ಈ ಏಳು ಹರಳು ಒಗೆಯಿರಿ. ಏಳುಹರಿ ನೆಲ ದಾಟಿ ಹೋಗುವಿರಿ.”
ಅದೇ ರೀತಿಯಲ್ಲಿ ಅಕ್ಕ ತಮ್ಮ ನಿಶ್ಚಿಂತೆಯಿಂದ ತಮ್ಮೂರು ತಲುಪಿದರು.
*****