ಚಂದಕ್ಕಿ ಮಾಮಾ
ಚಕ್ಕುಲಿ ಮಾಮಾ
ಮುತ್ತಿನ ಕುಡಿಕೆ
ಕೊಡು ಮಾಮಾ ಕೊಡು ಮಾಮಾ
ತೆಳ್ಳಗೆ ಹಪ್ಪಳದಂತಿರುವೆ
ಬೆಳ್ಳಗೆ ದೋಸೆಯ ಹಾಗಿರುವೆ
ಮೆಲ್ಲ ಮೆಲ್ಲಗೆ ಮುಂದಕೆ ಹೋದರು
ಕಡೆಗೆ ಇದ್ದಲ್ಲೇ ಇರುವೆ
ಕಿತ್ತಳೆ ಕೊಡುವೆ ಬಾ ಕೆಳಗೆ
ಮುತ್ತನು ಕೊಡುವೆ ಬಾ ಬಳಿಗೆ
ಕಿಟ್ಟೂ, ಪುಟ್ಟೂ ಆಡಲು ಬರುವರು
ನಾನೂ ಇರುವೆ ನಿನ್ ಜೊತೆಗೆ
ಚಂದಕ್ಕಿ ಮಾಮಾ
ಚಕ್ಕುಲಿ ಮಾಮಾ
ಮುತ್ತಿನ ಕುಡಿಕೆ
ತಾ ಮಾಮಾ ತಾ ಮಾಮಾ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.