ನಡುರಾತ್ರಿ ಜೋರಾಗಿ
ಮಳೆ ಬೀಳಾಕ ಸುರುವಾಗಿತ್ತು
ಹಾಲಿವುಡ್ ಪಿಕ್ಚರ್ ಅರ್ಧನೋಡಿ
ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು.
ಅದರ ಕನಸು ಬಿದ್ದದ್ದು
ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ
ದಿಲ್ಲಿದರ್ಬಾರ್ ಕುತುಬ್‌ಮಿನಾರ್
ತಾಜಮಹಲ್ ಬಾಂಬೆ ಬಜಾರ್
ಸುರಯ್ಯಾ ನರ್ಗಿಸ್ ರಾಜಕಪೂರರ
ಪ್ರೇಮಾಲಾಪ ನೋಡಿದ್ಹಂಗ-
ನಮ್ಮೂರ ಜಾತ್ರಿಯೊಳಗ ಅಡ್ಡಾಡಿ
ಬೆಂಡು ಬೆತ್ತಾಸ ತಿಂದು ಮಿಂಚೋಬಳಿ
ಕೈ ತುಂಬಾ ಏರಿಸಿಕೊಂಡು
ಮುತ್ತಿನ ಸರಾ ಹಾಕ್ಕೊಂಡು
ಅದರೊಳಗಿನ ಪದಕಾ ಮುಟಗಿಯೊಳಗ
ಹಿಡಕೊಂಡು ಓಡೋಡಿ ಓಡೋಡಿ ಮನಿಗೆ ಬದ್ಹಂಗ-
ಚಕಡಿ ಹತ್ತಿ ಹೊಲಕ ಹೋಗಿ
ಮಾವಿನಕಾಯಿ ಪೇರಲಕಾಯಿ ತಿಂದ
ಬುತ್ತಿ ಉಂಡ ಮ್ಯಾಲ ಮಜ್ಜಿಗಿ ಕುಡದ
ಹೊಲತುಂಬ ಓಡ್ಯಾಡಿ ಕುಣಿದಾಡಿ ಕುಪ್ಪಳಿಸಿದ್ಹಂಗ-
ಜೊಕಾಲಿಯಿಂದ ಬಿದ್ದು ಕಾಲಮುರಕೊಂಡು
ಚಿಗಳಿ ತಿನ್ನೋ ಆಸೇಕ
ಕಂಚಿಗಿಡದ ಮುಳ್ಳ ಚುಚ್ಚಿಸಿಕೊಂಡು
ಬಿಕ್ಕಿಬಿಕ್ಕಿ ಬಿಕ್ಕಿಬಿಕ್ಕಿ ಅತ್ಹಂಗ –
ಮತ್ತ ನಮ್ಮ ಅಜ್ಜಿ ತನ್ನ ಎದ್ಯಾಗೆ
ನನ್ನ ಎಳಕೊಂಡು ರಮಿಸಿ
ಬಣ್ಣದ ನೀರ ಹಾಕಿದ ಬರ್ಫ
ನೀರಲಹಣ್ಣ ಬಾರಿಹಣ್ಣ ಕೊಡಿಸಿ
ಮಾರಾಂವಗ ಗುಳಬುಟ್ಟಿ ತುಂಬ
ಭತ್ತ ಕೊಟ್ಹಂಗ-
ಹಿಂಗ ಇನ್ನೂ ಕನಸಽ ಕನಸ.
ಹಾಲಿವುಡ್ ಪಿಕ್ಚರ್
ಇನ್ನೂ ಅರ್ಧ ನೋಡಬೇಕಾಗಿತ್ತು
ಬೆಳಿಗ್ಗೆ ಊರಿಂದ phoneಬಂತು
ಬಹಳ ವರ್ಷದ ಮ್ಯಾಲ ದೇವಿ ಜಾತ್ರಿ
ಊರಿಗೆ ಎಲ್ಲಾರೂ ಬರ್ರಿ.
ಹಂಗಾದ್ರ ನಾ ರಾತ್ರಿ ಕಂಡದ್ದೆಲ್ಲಾ
ಚೆಂದಾದ ಕನಸು ನನಸಾಗೋದಾದ್ರ
ಮತ್ತೊಮ್ಮೆ ನಾ ಸಣ್ಣ ಹುಡುಗಿಯಾಗಿ
ಗರ್ದಿಗಮ್ಮತ್ತ ನೋಡತೇನಿ ಅಂದ್ರ
ಜೋಕಾಲಿ, ಜಾತ್ರಿ, ಹೊಲ, ಚಕಡಿ
ಅಂತ ಓಡಾಡತೇನಿ ಅಂದ್ರ,
ಈ ಕನಸು ವಿಚಿತ್ರ ಅಲ್ಲದಽ ಮತ್ತಿನ್ನೇನು!!
*****