ಸಹಾರಾ ಎಂದರೆ ಅರೆಬಿಕ್ ಭಾಷೆಯೊಳಗೆ
ಶೂನ್ಯವೆಂದು ಅರ್ಥ
ಮೈಲುಗಟ್ಟಲೆ ಮರುಭೂಮಿಯ ಮೇಲೆ
ಹೊಗೆಯಿಲ್ಲದೆ
ಹಬೆಯಿಲ್ಲದೆ
ಕಾದ ಮರುಳು ಮುಕ್ಕಳಿಸುವ ಬಯಲು
ಚಿಗುರದೆ
ಹೂ ಬಿಡದೆ
ಬಿಸಿಲ ಝಳಕ್ಕೆ ಅಪರೂಪ ತೇಲುವ ಓಯಸಿಸ್
ಎಟುಕದ ಆಕಾಶಕ್ಕೆ ತಲೆಯೆತ್ತುವ ತಾಳೆಗಳು
ಮತ್ತು ಚರಿತ್ರೆಯ ಮೊದಲೆ ಹೊರನುಗ್ಗಿದ ಲಾವ
ಹೆಪ್ಪುಗಟ್ಟಿದ ವಿಕೃತಿಗಳು
ತರಿದ ತಲೆಗಳೇ
ಮೊಲೆಗಳೇ
ಬೆರಳುಗಳೇ
ಬಿದ್ದರೆ ಹೆಣ ದಿನಗಟ್ಟಲೆ
ಕೊಳೆಯುವುದಿಲ್ಲ
ಹದ್ದುಗಳೂ ಹಾರುವುದಿಲ್ಲ
ಇಂಡಿಯಾದೊಳಗೆ ಸಹಾರಾ ಇಲ್ಲ
ದೇವರ ದಯದಿಂದ
ಇಂಡಿಯಾದೊಳಗೆ ಸಹಾರಾ ಇಲ್ಲ.
ಆದರೇನು? ಥಾರ್ ಇದೆ
ಥಾರಿಗೆ ನಾವಿದ್ದೇವೆ.
*****