ಕೊನೆಗೂ ಮರುಭೂಮಿ ದಾಟಿ ಬ೦ದದ್ದಾಯಿತು-
ಎಂದುಕೊಂಡದ್ದು ಎಷ್ಟರಮಟ್ಟಿಗೆ ನೆಮ್ಮದಿ.
ಮಳೆಯೊಳಗೆ ತೇಲಿಬಿಡುವ ಕನಸುಕಂಡು
ಹಸಿರುನಾಡಿನಲ್ಲಿದ್ದದ್ದೇನೋ ನಿಜ.
ರಸ್ತೆ ತುಂಬ ಹೊಗೆ ಗಂಟುಮುಖ
ಗಬ್ಬುವಿಚಾರಗಳ ಮೂಟೆ ಎಲ್ಲೆಲ್ಲೂ
ದೊಡ್ಡವರ ದಡ್ಡತನ ಸಣ್ಣತನಗಳ ಕೂಪ
ವಿಶಾಲತೆ ಕಾಣದ ಪೊಳ್ಳಗಳ ದಿಮಾಕು-
ಪ್ರೀತಿ ವಿಶ್ವಾಸಕೆ ಕೃತಕ ಕಟುಕನಾಟಕ.
ನಿಗಿ ನಿಗಿ ಸೂರ್ಯ ಲಂಚಪಡೆದು
ತೆಪ್ಪಗೆ ಬಿದ್ದುಕೊಂಡಿರಬೇಕಿಲ್ಲಿ,
ಎಷ್ಟೊಂದು ಕ್ರಿಮಿಕೀಟಕಗಳ ಉದ್ಭವ
ಎಷ್ಟೊಂದು ಗೊಜಲು ಕನಸುಗಳಿಗೆ
ಹೊಡೆದಾಟ ರಾಜಕೀಯದ ಹೇಸಿಗೆ.
ಹೊರಬಿದ್ದು ಹೆಜ್ಜೆ ಊರಲೂ ಹೆದರಬೇಕಾದ
ನಮ್ಮ ಸ್ವತಂತ್ರ ದೇಶ.
*****