ಇಲ್ಲಿಯವರೆಗೆ ನಿರೋಧ-ನಿಷೇಧಗಳ ಹಿಡಿತ-ಬಿಗಿತಗಳ
‘ಋಣ’ ಮಾರ್ಗದಲ್ಲಿ ನಡೆದದ್ದಾಯಿತು
ಹುಲಿಯ ಮೈ ಬೋಳಿಸಿ ಆಕಳ ಮಾಡುವ ಯತ್ನ ನಡೆಯಿತು
ಆಟಗುಳಿ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು ಸುರುವಿ
ಕಡಿವ ಕತ್ತಿಯ ಬಂಡೆಗೆ ಹೊಡೆದು ಮೊಂಡಾಗಿಸಿ ಮೆರೆದ
ಅಹಿಂಸೆಯ ಹಿಂಸೆಯ, ಬ್ರಹ್ಮಚರ್ಯದ ಭಾನಗಡಿಯ,
ಸಾತ್ವಿಕತನದ ಸೂಳೆಗಾರಿಕೆಯ, ಸ್ವರ್ಗದ ದುರ್ಮಾರ್ಗವ
ನೀತಿಯ ನೇಣನು, ಭಕ್ತಿಯ ಭೋಳೆತನವ,
ಯೋಗದ ಗಂಡುಜೋಗತಿತನವ
ಇನ್ನಾದರೂ ಸಾಕು ಮಾಡೋಣ,
ಚೈತನ್ಯವ ಉಸಿರು ಕಟ್ಟಿಸುವ, ಜೀವ ಶವವಾಗುವ ಪರಿಸಾಕು
ಆ ದೈವ ಚಿಂತನೆಯನ್ನು ಯುಗಗಳಿಗೊಮ್ಮೆ ಹುಟ್ಟುವ
ಆ ಮಹಾಪುರುಷರಿಗಷ್ಟೇ ಬಿಟ್ಟುಕೊಟ್ಟು
ನಾವು ‘ಧನ’ ಮಾರ್ಗದ ಇಹಚಿಂತನೆ ಮಾಡೋಣ,
ಚೆನ್ನಾಗಿ ಉಳುವ ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಕಣ್ದಣಿಯೆ ಸೊಗವಾಡಿ ನೋಡಿ ಹಿಗ್ಗುವ,
ಮನದಣಿಯೆ ನಕ್ಕು ಅತ್ತು, ಭಾವ ಪೂರ ಹರಿಸುವ,
ಬಾಯಿ ತುಂಬ ಮಕಾತಾಡುವ, ತೆಕ್ಕೆತುಂಬಾ ಸ್ನೇಹಿಸುವ
ಕೈಕಾಲು ತಲೆಗಳಿಗೆ ತೆರಪಿಲ್ಲದೆ ಕೆಲಸ ತುಂಬುವ,
ನೋವಿನ ನಂಜುಂಡು, ಎಂಥ ಹೊಡೆತಗಳಿಗೂ ಕಾಯವ ಕಲ್ಲಾಗಿಸುವ,
ನಮ್ಮ ಬೆನ್ನಂಟಿದ ಹೊಟ್ಟೆಗಳ ತುಂಬಿ ತೇಗಿಸುವ,
ರಾತ್ರಿ ತುಂಬಾ ನಿದ್ರಿಸಿ, ಪುನರ್ಜನ್ಮವನಣಕಿಸುವ,
ಹಗಲು ತುಂಬಾ ದಣಿದು ಭೂತಪಾಪಗಳ ಸುಡುವ
ಮಾರ್ಗವನು ಇನ್ನು ಹಿಡಿಯೋಣ.
*****