ಪ್ರಿಯ ಸಖಿ,
ನೀನು ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯವನ್ನು ನೋಡಿರಬಹುದು. ಎಲ್ಲ ದೇವಾಲಯಗಳಂತೆ ಅದೊಂದು ದೇವಾಲಯ ಅದರಲ್ಲೇನು ವಿಶೇಷ ಎಂದು ಕೊಳ್ಳುತ್ತೀದ್ದೀಯಾ?
ಈ ದೇವಾಸ್ಥಾನದ ಅನಂತ ಪದ್ಮನಾಭಮೂರ್ತಿ ಶೇಷಶಯನವಾಗಿದ್ದು ಅದು ಹದಿನೆಂಟು ಅಡಿಗಳ ಉದ್ದವಿದೆ. ವಿಶೇಷವೆಂದರೆ ಈ ಮೂರ್ತಿ ಯನ್ನು ಪೂರ್ತಿಯಾಗಿ ನೋಡುವಂತಿಲ್ಲ. ದೂರದ ಅಂತರಗಳಲ್ಲಿ ಪಕ್ಕಪಕ್ಕದಲ್ಲೇ ಗರ್ಭಗುಡಿಗೆ ಮೂರು ಬಾಗಿಲುಗಳಿವೆ. ಒಂದೊಂದು ಬಾಗಿಲಿನಿಂದ ಮೂರ್ತಿಯ ಒಂದೊಂದು ಭಾಗವನ್ನಷ್ಟೇ ನೋಡಬಹುದಾಗಿದೆ. ಎಲ್ಲಾ ಬಾಗಿಲುಗಳಿಂದ ನೋಡಿದರೂ ಮೂರ್ತಿಯ ಪೂರ್ಣ ರೂಪವನ್ನು ಕಾಣಲಾಗುವುದಿಲ್ಲ. ಇದೇಕೆ ಹೀಗೆ ಮೂರು ಬಾಗಿಲುಗಳನ್ನು ಮಾಡಿದ್ದಾರೆ. ಒಂದು ಬಾಗಿಲು ಮಾಡಿ ಮೂರ್ತಿಯನ್ನು ಪೂರ್ಣವಾಗಿ ತೋರಿಸಿದ್ದರಾಗುತ್ತಿರಲಿಲ್ಲವೇ ಎಂದು ಹಲವರಾದರೂ ಯೋಚಿಸುತ್ತಾರೆ.
ಅದರೆ ಹೀಗೆ ಮೂರು ಬಾಗಿಲುಗಳಲ್ಲಿ ಅರ್ಥಪೂರ್ಣವಾಗಿ ಮೂರ್ತಿಯನ್ನು ತೋರಿಸುವುದರ ಹಿಂದೆ ಒಂದು ಸ್ವಾರಸ್ಯವಿದೆಯೆನಿಸುತ್ತದೆ. ಇಲ್ಲಿ ಮೂರ್ತಿಯನ್ನು ವಿಶಿಷ್ಟ ಅಥವಾ ಸತ್ಯವೆನ್ನುವುದಕ್ಕೆ, ಈ ಸೃಷ್ಟಿಗೆ ಹೋಲಿಸಿ ಪ್ರತಿಷ್ಟಾಪಿಸಿದ್ದಾರೆ. ಈ ಸೃಷ್ಟಿ, ವಿಶಿಷ್ಟ ಶಕ್ತಿ ಅಥವಾ ಸತ್ಯವೆನ್ನುವುದು ಅನಂತವಾದುದು ನಾವು ಅದನ್ನು ನಮ್ಮ ನಮ್ಮ ಮಿತಿಗಳಲ್ಲಿ, ನಮ್ಮ ಗ್ರಹಿಕೆಗೆ ಕಂಡಂತೆ ಅರ್ಧೈಸಿಕೊಳ್ಳುತ್ತೇವೆ. ಮೊದಲ ಬಾಗಿಲಲ್ಲಿ ಕಂಡ ಮೂರ್ತಿಯ ತಲೆ, ತೋಳು, ಹಾವಿನ ಹೆಡೆಯನ್ನು ನೋಡಿ ಇದೇ ಸತ್ಯ ಸೃಷ್ಟಿ ಎಂದುಕೊಳ್ಳುವಂತೆ ಎರಡನೆಯ ಬಾಗಿಲಲ್ಲಿ ಕೂಡ ಮೂರ್ತಿಯ ಎದೆ, ಹೊಟ್ಟೆ, ನಾಭಿಯನ್ನು ನೋಡಿ ಇದೇ ಸತ್ಯ ಸೃಷ್ಟಿ ಎಂದು ಕೊಳ್ಳುತ್ತೇವೆ. ಹಾಗೇ ಮೂರನೆಯ ಬಾಗಿಲಲ್ಲಿ ಕಂಡಾಗಲೂ ಕೂಡ.
ನಮ್ಮ ತಿಳಿವಿನ, ದೃಷ್ಟಿಯ, ಬುದ್ಧಿಯ ಮಿತಿಯಲ್ಲಿ ಕಂಡದ್ದಷ್ಟನ್ನೇ ನಿಜವೆಂದು ನಾವು ನಂಬುತ್ತೇವೆ. ಆದರೆ ನಾವೆಷ್ಟೇ ವೈಜ್ಞಾನಿಕವಾಗಿ ಪ್ರಗತಿ ಸಾಧಿಸಿದರೂ ನಿಜವಾಗಿಯೂ ವಿಶಿಷ್ಟ ಶಕ್ತಿ, ಈ ಸೃಷ್ಟಿ ಅಥವಾ ಸತ್ಯವೆನ್ನುವುದು ಎಂದಿಗೂ ನಮಗೆ ಸಂಪೂರ್ಣವಾಗಿ ನಿಲುಕುವುದಿಲ್ಲ. ಅದು ನಾವು ಎಷ್ಟೇ ತಿಳಿದೆವೆಂದು ಕೊಂಡರೂ ನಿಗೂಢವಾಗಿಯೇ ಇರುತ್ತದೆ ಎಂಬ ಸತ್ಯವನ್ನು ಈ ದೇವಾಲಯದಲ್ಲಿ ಮೂಡಿಸಿದ್ದಾರೆ ಎನ್ನಿಸುತ್ತದೆ.
ಸಖಿ, ನಮ್ಮ ಸಂಸ್ಕೃತಿ, ಧರ್ಮ ಎಲ್ಲವೂ ಹೀಗೇ ಅರ್ಥಗರ್ಭಿತವಾಗಿಯೂ ಪ್ರಸ್ತುತ ಬದುಕಿಗೂ ಅವಶ್ಯವಾದುದೂ ಆಗಿದೆ. ಆದರೆ ನಾವದನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರಲ್ಲಿ ಸೋತಿದ್ದೇವೆ. ಅಥವಾ ಅರ್ಧೈಸಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇವುಗಳಲ್ಲೇನೂ ಹುರುಳಿಲ್ಲ, ಎಂದುಕೊಂಡಿದ್ದೇವೆ. ಒಳಗಣ್ಣು ತೆರೆದು ನೋಡಿದಾಗ ಇಂತಹ ಅನೇಕ ಬದುಕಿನ ತಾತ್ಪರ್ಯಗಳನ್ನು ನಮ್ಮ ಸುತ್ತಲೂ ಇಂಥಹ ಸಂಸ್ಕೃತಿಯ ಪ್ರತೀಕಗಳಲ್ಲಿ ಕಾಣುತ್ತಾ ಹೋಗಬಹುದು. ನಿಗೂಢತೆಯಲ್ಲಿಯೇ ಅನೇಕ ಹೊಸ ಅರ್ಥಗಳು ಗೋಚರಿಸಬಹುದು. ಕಣ್ಮುಚ್ಚಿ ಪುರಾತನವಾದುದೆಲ್ಲಾ ಕೆಲಸಕ್ಕೆ ಬಾರದ್ದೆಂದು ಹೇಳುವ ಮೊದಲು ಅದರೊಳಗಿನ ನಿಜವಾದ ಅರ್ಥವನ್ನು, ಮೌಲ್ಯವನ್ನು ಹುಡುಕುವ ಪ್ರಯತ್ನವನ್ನು, ಅದನ್ನು ನಮ್ಮ ಆಧುನಿಕ ಬದುಕಿಗೆ ಹೊಂದಿಸಿಕೊಳ್ಳುವ ಮಾರ್ಗವನ್ನು ನಾವು ಹುಡುಕಬೇಕು. ಈ ಕುರಿತು ನಿನ್ನ ನಿಲುವೇನು?
*****