ಇವರು ನಮ್ಮವರೇ ನೋಡ್ರಿ
ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ
ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ
ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು
ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು
ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ
ಉಬ್ಸಿ ನಮ್ಹವಾ ಟಿಸ್ಸೆನಿಸಿಕೊಂತ
ನಮ್ಮ ನಿಮ್ಮ ಮನಿ, ಮನಿಯಾಗಿನೋರು, ಗೆಳ್ಯಾರೂ ಒಂದೇ ಅಂತ
ನಮ್ಮ ಲೈಕಿಂಗೂ ನಿಂಬದರಂಗೆ
ನಿಮಗೆ ಸೇರದ್ದು ನಮಗೂ ಸೇರುದುಲ್ಲ ನೋಡ್ರಿ
….ಇತ್ಯಾದಿಯಾಗಿ ನಮ್ಮೆಲ್ಲಾ ಸಂದುಗೊಂದುಗಳಲ್ಲಿ
ತಮ್ಮ ಅಕ್ಟೋಪಸ್ ಹಸ್ತಗಳ ತೂರಿಸಿ ಜಾಲಾಡಿ
ಬಿಗಿಯಾಗಿ ಹಿಡಕೊಂಡು ಅಲ್ಲಾಡಿಸಿಕೊಂತ
ಕೊನೆಗೆ ತಮ್ಮ ಬಾಯಿಕಡೆ ನಮ್ಮನ್ನೂ ಸೆಳಕೊಂತಾರೆ
ಆಮ್ಯಾಲೆ ಇಂಥಾ ಕಡಿ ಒಯ್ದು ಕುತ್ಗೆ ಕೊಯ್ತಾರೆ
ಅಲ್ಲಿ ಒಂದ್ಹನಿ ನೀರಿರಲ್ಲ
ಇಂಥಾ ಶಿಖರಕ್ಕೊಯ್ದು ನೂಕ್ತಾರೆ
ಕೆಳಗೆ ಬಿದ್ದಮ್ಯಾಲೆ ಚೇತರಿಸಿಕೊಳ್ಳೋದೇ ಸಾದ್ದಿಲ್ಲ
ಆಗ ಮೈಮುಟ್ಟಿಮುಟ್ಟಿ ನೋಡಿಕೊಂತ
ಚಂದ್ರ ಸುಡುವಂಗೆ, ಕಾಗೆ ಬೆಳ್ಳಗಾದಂಗೆ
ಕೊಕ್ರೆ ಕರ್ರಗಾದಂಗೆ, ಹಿಂಗೆಲ್ಲಾ ಷಾಕಾಗಿ ಭ್ರಮಿಸಿದಾಗ
ಅವರು ನಮ್ಮವರು ಕಿಸಕ್ಕೆನುತ್ತಿರ್ತಾರೆ
ಆಗ ಜಗತ್ತಿಗೇ ಸಾರಿ ಹೇಳ್ಬೇಕನಸ್ತಾದೆ
‘ಅಪ್ಪಗೊಳಾ, ಅಣ್ಣುಗೊಳಾ, ಈ ಆಕಳದ ಮಕದ ಹುಲೀನಾ
ಈ ಜಿಂಕೇ ಮಕದ ನರೀನಾ, ಕುದುರೀ ಮಕದ ಕತ್ತೀನ
ಗುಬ್ಬೀಮಕದ ಹದ್ದನ್ನ, ಹೂವಿನ ಮಕದ ಹಾವನ್ನ
ಗೆಳೆಯನ ಮಕದ ಮನಿಹಾಳನ್ನ
ಹಿತೈಷಿ ಮಕದ ಕುತ್ತಿಗ್ಗೊಯ್ಕನ್ನ
ನಂಬನ್ಯಾಡ್ರಪೋ ಅಂತ
*****