ಅದಽ ಹೋದವರ್ಷ ಬಸವ ಜಯಂತಿಗೆ
ಹೋಗಿದ್ದೆ ನಮ್ಮಜ್ಜಜ್ಜರ (ಪಾಟೀಲರ) ವಾಡೆಗೆ
ಊರಿಗೆಽ ದೊಡ್ಡದು
ಅಗಲಕ್ಕೆ ನೂರು ಉದ್ದಕ್ಕೆ ಎರಡನೂರ ಫೂಟಽರ
ಇರಬೇಕ ಮನಿ
ಈ ಓಣಿಯಿಂದ ಆ ಓಣಿಗೆ ಅಂತ
ಒಂದಽ ಮಾತಿನ್ಯಾಗ ಹೇಳಿದ್ರೂನೂ ಸಾಽಕ
ನಸಿಕಿನ್ಯಾಗ ಒಮ್ಮೆ ಬಾಗಿಲಾ ತೆಗಿದ್ರ
ರಾತ್ರಿಽನ ಮುಚ್ಚಿ ಅಗಳಿ ಹಾಕಾವ್ರು
ಗೌಡರ ದರ್ಬಾರ ಮೊನ್ನ ಮೊನ್ನೆವರೆಗೂ
ಹೇಳಿ ನಮ್ಮ ಅಜ್ಜಿ ಕಣ್ಣಮುಚ್ಚಿಗೊಂತು
ಈಽಗ, ಮನಿ ಅನ್ನೋದು ಗೋಡೌನ ಆಗೈತಿ
ಕಾಕಾ ದೊಡ್ಡಪ್ಪಗೋಽಳ ದೊಡ್ಡ ಸಂಸಾರದಾಗ.
ನಾವಽ ಹೋದಾಗ ಬಂದಾಗರೇಽ
ಇರವಲ್ದ್ಯಾಕ ಅಂತ
ಹೊರಗಿನ ಎರಡು ಮೂರು ಕೋಲಿಗೆ
modern touch up ಮಾಡಿಸಿ
ಕರ್ಟನ್, ಸೋಫಾಸೆಟ್ಟು ಕಲರ್ ಟ.ವಿ.
ಟೆಲಿಫೋನ ಹಾಕಿಸಿ ಮತ್ತೆ
ಇಡ್ಲಿ ಊರಿಗೆ ಬಂದೆ.
ನಡುವ ದಸರಾ ದೀಪಾವಳಿ ಅಂತ
ಮತ್ತೊಮ್ಮೆ ಊರಿಗೆ ಹೋಗಿದ್ನಿ
ಸೋಫಾಮ್ಯಾಲ – ಅದಽ ಹೊಲದಿಂದ ತಂದ
ಕಾಯಿಪಲ್ಲೆ ಗಂಟು, T.V. ಮ್ಯಾಲ –
ಹೊಲದ ಮನಿ ಎಂಜಿನ್ ಮನಿ ಕೀಲಿಗೋಳು
Telephone billನ ಉದ್ದನ ಪಟ್ಟಿ
ಕರ್ಟನ್ ಗೊತ್ತಽ ಹತ್ತಲಿಲ್ಲ,
ಹುಡುಗ್ರು ಪೆನ್‌ಮಸಿ ಬರೆಸಿದ್ರು
ಆಳ ಬಸ್ಯಾ ಟ್ರಾಕ್ಟರ ರಿಪೇರಿ ಮಾಡಿ
ಗ್ರೀಸ ಕೈಯಿಂದ ಒರೆಸಿದ್ದು
ಆಳ ಹೆಂಗಸ್ರು ಬುಟ್ಟಿ ಮರಾ ಒರೆಸಿದ್ದು
ಮನಿ ಹೆಂಸ್ಸ್ರು ಎಣ್ಣಿ ಬೆಣ್ಣಿ ಕೈ ಒರೆಸಿದ್ದು
ಮತ್ತಽ ಮಕ್ಕಳ ಸಿಂಬಳಾ ಒರೆಸಿದ್ದು
ಎಲ್ಲಾ ಕಲಿಗೋಳು ಒಂದೊಂದಾಗಿ
ಕಾಣಾಕ ಸುರುವಾದ್ವು
ರಕ್ತ ನೆತ್ತಿಗೇರಾಕ ಸುರುವಾತು
ಹಂಗಽ ಹಂಗಽ ಹಬ್ಬಾಮುಗಿಸಿ
ಸ್ವಚ್ಛ ಶಿಸ್ತಿನ ಬಗ್ಗೆ ಭಾಷಣಾ ಮಾಡಿ,
ಮತ್ತ ದೋಸಾ ಊರಿಗೆ ಬಂದೆ,
ಈ ವರ್ಷ ಈ ಬಸವ ಜಯಂತಿಗೆ
ನಮ್ಮೂರಾಽಗ ಆದೇಽನ.
ಸೋಫಾ, ಟಿ.ವಿ. ಎಲ್ಲಾ ಮೂಲ್ಯಾಗ ಸರಿಸಿ
ಕಾಳ ಕಡಿ ಸ್ವಚ್ಛ ಮಾಡಾಕ್ಹತ್ತಾರ
ಹಿಂದಿನ ಓಣಿಗೆ ಹತ್ತಿದ ಅಡಗಿ ಮನ್ಯಾಗ
ಹಬ್ಬದ ತಿಂಡಿ ಮಾಡಾಕ್ಹತ್ತಾರ
ನಡುಮನ್ಯಾಗ ಅವರವರ ಮಕ್ಕಳು
ಊರಿಂದ ಕೇರಿಂದ ಬಂದಾವ್ರು
ಸೂಟಿ ಅಂತ ಕುಣಿದಾಡಕ್ಹತ್ತಾರ,
ಹಾಂಽಗ ಅಡುಗೆ ಮನಿಗೆ ಹೋದೆ
ಕರ್ಟನ್ ತುಣುಕುಗೋಳು
ಮಸಿ ಅರುವಿ ಆಗ್ಯಾವ
ಡಬ್ಬಿ ಕಟ್ಟಾಽಕ, ಕಾಲ ಒರಸಾಕ
ಹರಿದಾಡಿ ಒಗದ್ದಾರ,
ಆಗಿಂದ ನೋಡಿ ನೋಡಿ
ಪಿತ್ತನೆತ್ತಿಗೇರಿ ಒದರ್‍ಯಾಡಾಕ
ಸುರು ಮಾಡ್ನಿ –
ಪಾಟಿಲ್ರ ವಾಡೆ ಅಂದ್ರಽ ಹಿಂಗಽ ಇರಬೇಕು
ಮಗಳ
ಪ್ಯಾಟ್ಯಾಗಿನ ಬಂಗ್ಲಽ ಹಂಗ ಮಾಡಬ್ಯಾಡ್ರಿ
ಮುಚ್ಚಿ ಬಾಗಿಲಾ ಹಿತ್ತಲ ಬಾಗಿಲಾ
ಯಾವತ್ತೂಽ ತೆಗೆದಿರಲಿ
ಆಳ ಕಾಳ, ಮಕ್ಳ ಮರಿ
ನೆರಿ ಹೊರಿ, ದನಾ ಕರಾ ಎಲ್ಲಾ ಬರ್‍ಲಿ ಹೋಗ್ಲಿ
ತಿಣ್ಣಿ ಉಣ್ಣಿ ಉಡಲಿ
ಅಂದ, ನಮ್ಮಜ್ಜನ ಎರಡನೇ ಹೆಂಡತಿ
ನಮ್ಮಜ್ಜಿ ಪಾರ್ವತವ್ವನ ಮಾತ ಕೇಳಿ
ಗೊದಮೊಟ್ಟೆ ಹಂಗಾಽತ ನನ ಮನಸ
*****