ಮಲೇರಿಯಾ ಮಾತ್ರೆ ಪರೀಕ್ಷೆ

ಭಾರತ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ಲಕ್ಷಗಟ್ಟಲೆ ಜನರನ್ನು ಮಲೇರಿಯಾ ಭಾಧಿಸುತ್ತಿದೆ. ಔಷಧಿ ಮಾರುಕಟ್ಟೆಗೆ ಹೊಸ ಹೊಸ ಮಲೇರಿಯಾ ನಿರೋಧಿ ಔಷಧಿಗಳು ತಯಾರಾಗಿ ಬರುತ್ತಿದ್ದರೂ ಮಲೇರಿಯಾ ಹಾವಳಿ ಹೆಚ್ಚುತ್ತಲೇ
ಇದೆ.

ಆದ್ದರಿಂದ ಆಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ ಸೊಸೈಟಿ ಮಲೇರಿಯಾ ನಿರೋಧಿ ಮಾತ್ರೆಗಳನ್ನು ಪರೀಕ್ಷಿಸಲು ನಿರ್ಧರಿಸಿತು. ವ್ಯಾಪಕ ಬಳಕೆಯ ಕ್ಲೋರೊಕ್ಟಿನ್ ಫಾಸ್ಫೇಟ್ ಮಾತ್ರೆಗಳ 17 ಬ್ರಾಂಡ್ ಗಳ ಗುಣಮಟ್ಟ ಪರೀಕ್ಷಿಸಿತು. ಅವುಗಳಲ್ಲಿ ಮಲೇರಿಯಾ ನಿರೋಧಿ ಮಾತ್ರೆಗಳ ಒಟ್ಟು ಮಾರಾಟದ ಶೇ. 60 ಪಾಲು ಹೊಂದಿರುವ 5 ರಾಷ್ಟ ವ್ಯಾಪಿ ಬ್ರಾಂಡ್‌ಗಳೂ ಸೇರಿದ್ದವು. (ಇವುಗಳ ಬೆಲೆ ಒಂದೇ ಆಗಿದ್ದರೂ ಗುಣಮಟ್ಟದಲ್ಲಿ  ವ್ಯತ್ಯಾಸವಿತ್ತು) ಪರೀಕ್ಷಿಸಲಾದ ಮೂರು -ಪ್ರಾದೇಶಿಕ ಬ್ರಾಂಡ್‌ಗಳ ಗುಣಮಟ್ಟವೂ ಭಿನ್ನವಾಗಿತ್ತು. ಆದರೆ ಉಳಿದ 9 ಜನೆರಿಕ್ ಬ್ರಾಂಡ್‌ಗಳ ಬೆಲೆಗಳಲ್ಲಿ ಮಾತ್ರವಲ್ಲ ಗುಣಮಟ್ಟದಲ್ಲೂ ವ್ಕತ್ಯಾಸವಿತ್ತು.

ಮಲೇರಿಯಾದ ಗುಟ್ಟು ರಟ್ಟಾದದ್ದು ನೂರೈದು ವರುಷಗಳ ಮುನ್ನ- ಹೈದರಾಬಾದಿನ ಪ್ರಯೋಗಾಲಯವೊಂದರಲ್ಲಿ ಅನಾಫಿಲಿಸ್ ಸೊಳ್ಳೆಯಲ್ಲಿ ಮಲೇರಿಯಾದ ರೋಗಾಣು (ಪ್ಯಾಪಲೈಟ್)ವನ್ನು ಸರ್ ರೊನಾಲ್ಡ್‌ರೋಸ್ ಪತ್ತೆ ಮಾಡಿದ್ದು ಆಗಸ್ಟ್ 20, 1897ರಂದು. ಈ ಚಾರಿತ್ರಿಕ ಸಂಶೋಧನೆಯಿಂದಾಗಿ ಮಿಲಿಯಗಟ್ಟಲೆ ಜನರು ಮಲೇರಿಯಾದ ಮರಣಪಾಶದಿಂದ ಪಾರಾಗಲು ಸಾಧ್ಯವಾಯಿತು.

ಮಲೇರಿಯಾ ಮನುಷ್ಯನಿಗೆ ಗಂಟು ಬಿದ್ದದ್ದು ಶತಮಾನಗಳ ಮುಂಚೆ. ಮಲೇರಿಯಾ ಮತ್ತು ನೀರು ನಿಲ್ಲುವ ಜಾಗಗಳಿಗೆ ನಂಟು ಎಂಬುದು ಹಿಪ್ಪೋಕ್ರೆಟಸ್ನ ಕಾಲದಲ್ಲೇ ತಿಳಿದಿತ್ತು. ಸಿಂಕೋನಾ ಮರದ ತೊಗಟೆಯ ಕ್ರಿಯಾಶೀಲ ರಾಸಾಯನಿಕ ಕ್ವಿನಿನ್ ಅನ್ನು ಮಲೇರಿಯಾ ಚಿಕಿತ್ಸೆಗಾಗಿ 1700ರಿಂದಲೇ ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಪರಾವಲಂಬಿ ಸೂಕ್ಷ್ಯಜೀವಿಗಳು ಮಲೇರಿಯಾಕ್ಕೆ ಹೇಗೆ ಕಾರಣವಾಗುತ್ತವೆಂದು ಸ್ಪಷ್ಟವಾಗಿ ತಿಳಿದು ಬಂತು. ಅನಂತರ 1934ರಲ್ಲಿ ಕ್ಲೋರೊಕ್ಟಿನ್ ಕೃತಕವಾಗಿ ತಯಾರಿಸಲ್ಪಟ್ಟತು. ಅಂದಿನಿಂದ ಮಲೇರಿಯಾ ಚಿಕಿತ್ಸೆಗೆ ಅದು ಪರಿಣಾಮಕಾರಿ ಹಾಗೂ ದುಬಾರಿಯಲ್ಲದ ಔಷಧವಾಗಿದೆ.

ತೂಕದಲ್ಲಿ ವ್ಯತ್ಯಾಸ
ಕ್ರಿಯಾಶೀಲ ರಾಸಾಯನಿಕವನ್ನು ಇತರ ರಾಸಾಯನಿಕಗಳೊಂದಿಗೆ ಬೆರೆಸಿ ಮಾತ್ರೆಗಳನ್ನು ತಯಾರಿಸಲಾಗುತ್ತದೆ. ಇಂಡಿಯನ್ ಫಾರ‍್ಮಕೋಪಿಯಾ (ಐಪಿ)ದ ನಿಬಂಧನೆ ಪ್ರಕಾರ ಒಂದೇ ಬ್ಯಾಚಿನ 20 ಮಾತ್ರೆಗಳನ್ನು ಒಂದೊಂದಾಗಿ
ತೂಕ ಮಾಡಿದಾಗ, ಅವುಗಳಲ್ಲಿ ಎರಡಕ್ಕಿಂತ ಅಧಿಕ ಮಾತ್ರೆಗಳ ತಲಾ ತೂಕ ಮತ್ತು ಮಾತ್ರೆಗಳ ಸರಾಸರಿ ತೂಕದ ವ್ಕತ್ಯಾಸ ಶೇ. 5ಕ್ಕಿಂತ ಜಾಸ್ತಿ ಇರಬಾರದು. ಸಿಇಆರ್ ಸೊಸೈಟಿ ನಡೆಸಿದ ಪರೀಕ್ಷೆಯಲ್ಲಿ ಪ್ರತಿಯೊಂದು ಬ್ರಾಂಡಿನ 20 ಮಾತ್ರೆಗಳ ಸರಾಸರಿ ತೂಕವು 0-3ರಿಂದ 0.4 ಗ್ರಾಂ ಆಗಿತ್ತು. ತೂಕದ ವ್ಕತ್ಯಾಸದ ಬಗ್ಗೆ -‘ತೂಕದ  ಏಕರೂಪತೆ’ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಒಂದು ಜನೆರಿಕ್ ಬ್ರಾಂಡಿನ ಹೊರತಾಗಿ ಉಳಿದ ಎಲ್ಲವೂ ತೇರ್ಗಡೆಯಾದವು.

ಎಷ್ಟು ಪರಿಣಾಮಕಾರಿ?
‘ಮಾತ್ರೆ ಕರಗುವ ಪರೀಕ್ಷೆ’ಯು ಮಾತ್ರೆಗಳ ಕಾರ್ಯಕ್ಷಮತೆ ನಿರ್ಧರಿಸಿ, ಗುಣಮಟ್ಟ ವ್ಯಾಖ್ಯಾನಿಸಲು ಅತ್ಯಗತ್ಯವಾದ ಪರೀಕ್ಷೆ. ಸಣ್ಪ ಕರುಳಿನ ಜೀವರಸಕ್ಕೆ ಬಿಡುಗಡೆಯಾಗಿ ಆ ಮೂಲಕ ದೇಹಕ್ಕೆ ದೊರಕಿದ ಔಷಧಿಯ ನಿಜವಾದ ಪರಿಮಾಣವೆಷ್ಟು ಎಂಬುದನ್ನು ಈ ಪರೀಕ್ಷೆ ತಿಳಿಸುತ್ತದೆ. ಆದ್ದರಿಂದ ಸಿಇಆರ್ ಸೋಸೈಟಿಯ ಪರೀಕ್ಷೆಯಲ್ಲಿ ಕರಗುವಿಕೆಗೆ ಪ್ರಾಮುಖ್ಯ ನೀಡಲಾಯಿತು. ಡಿಸೆಂಬರ್ 1996ರಿಂದ ಐಪಿ ಕೂಡ ಮಾತ್ರ ಕರಗುವ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಈ ಪರೀಕ್ಷೆಗೆ ಗುರಿಪಡಿಸಲಾದ 10 ಬೇರೆ ಬೇರೆ ಬ್ರಾಂಡ್‌ಗಳ ಮಾತ್ರಗಳಲ್ಲಿ ಜನೆರಿಕ್ ಗುಂಪಿನ ಒಂದು ಬ್ರಾಂಡಿನ ಮಾತ್ರೆಗಳು ಮಾತ್ರ ತಿರಸ್ಕರಿಸಲ್ಪಟ್ಟವು. (ಉಳಿದ ಒಂದು ಬ್ರಾಂಡಿನ ಮಾತ್ರೆಗಳಿಗೆ ಈ ಪರೀಕ್ಷೆ ಅಗತ್ಯವಿಲ್ಲ.) ‘ಮಾತ್ರ ಕರಗುವ ಪರೀಕ್ಷೆಯಲ್ಲಿ’ ಮಾತ್ರೆಗಳು ತೇರ್ಗಡೆಯಾಗಲು ಐಪಿಯ ನಿಬಂಧನೆ ಏನು? ‘ಕನಿಷ್ಟ ಪಕ್ಷ 45 ನಿಮಿಷಗಳಲ್ಲಿ ಶೇ. 70 ಔಷಧಿ ಕರಗಬೇಕು’. ಹದಿನೈದು ಬ್ರಾಂಡಿನ ಮಾತ್ರೆಗಳು ಈ ಪರೀಕ್ಷೆಯಲ್ಲಿ ಪಾಸಾಗಿರುವುದು ಏನನ್ನು ಸೂಚಿಸುತ್ತದೆ? ಉತ್ಪಾದಕರು ಉತ್ತಮ ಉತ್ಪಾದನಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು. ಇನ್ನೊಂದು ಕಾರಣಕ್ಕಾಗಿಯೂ ಇದು ಪ್ರಮುಖ ಪರೀಕ್ಷೆ. ಕಳಪೆ ಗುಣಮಟ್ಟದ ಮಾತ್ರ ನುಂಗಿದರೆ, ಆ ಮಾತ್ರೆಯ ದೊಸೇಜಿಗೆ ಮಲೇರಿಯಾದ ರೋಗಾಣು ನಿರೋಧಕ ಶಕ್ತಿ ಬೆಳೆಸಿಕೊಂಡೀತು. ಇದು ತೀರಾ ಅಪಾಯಕಾರಿ ಬೆಳವಣಿಗೆ. (ಬಾಕ್ಸ್ ಓದಿರಿ.)

ಎಷ್ಟುವಿಧ ?
ಕ್ಲೋರೋಕ್ಟಿನ್ ಫಾಸ್ಫೇಟ್ ಮಾತ್ರೆಗಳಲ್ಲಿ 4ವಿಧಗಳಿವೆ.
1 . ಸಕ್ಕರೆ ಲೇಪಿತ ಮಾತ್ರೆಗಳು : ಈ ಮಾತ್ರೆಗಳಿಗೆ ಲೇಪನ ನೀಡಲು ಸುಕ್ರೋಸ್ ಬಳಸುತ್ತಾರೆ. ಇದು ಹಲವು ಹಂತಗಳಿರುವ ಅತ್ಯಂತ ಹಳೆಯ ಉತ್ಪಾದನಾ ವಿಧಾನ. ಮಾತ್ರೆಗಳ ಕಹಿ ತಿಳಿಯದಂತೆ ಮಾಡಲು ಈ ವಿಧಾನ ಸಹಕಾರಿ. ಈ ಮಾತ್ರೆಗಳು ಇಂದಿಗೂ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಭ್ಯ.
2 . ಫಿಲ್ಮ್ ಲೇಪಿತ ಮಾತ್ರೆಗಳು : ಇವಕ್ಕೆ ಸಕ್ಕರೆ ಲೇಪನದ ಬದಲಾಗಿ ಮೇಲ್ಮೈಗೆ ತೆಳುವಾದ ಪಾಲಿಮೆರಿಕ್ ಫಿಲ್ಮಿನ ಲೇಪನ ನೀಡುತ್ತಾರೆ. ಮಾತ್ರೆಗಳನ್ನು ಹರಡಿ ಅವುಗಳ ಮೇಲೆ ದ್ರಾವಣ ಸಿಂಪಡಿಸಿದಾಗ ಫಿಲ್ಮಿನ ಲೇಪನ ಮೂಡುತ್ತದೆ. ಇದರಿಂದಾಗುವ ತೂಕದ ಹೆಚ್ಚಳ ಕನಿಷ್ಠ. ಮಾತ್ರೆಗಳು ಚೂರುಚೂರಾಗದಂತೆ ಲೇಪನ ರಕ್ಷಿಸುತ್ತದೆ.
3 . ಎಂಟೆರಿಕ್ ಲೇಪಿತ ಮಾತ್ರೆಗಳು : ಔಷಧ ಬಿಡುಗಡೆಯಾಗುವುದನ್ನು ನಿಯಂತ್ರಿಸಲಿಕ್ಕಾಗಿ ಮಾತ್ರೆಗಳಿಗೆ ವಿಶಿಷ್ಟ ಫಿಲ್ಮ್ ಲೇಪನ ನೀಡಬಹುದು. ಅಂತಹ ಒಂದು ವಿಧಾನ ಎಂಟೆರಿಕ್ ಲೇಪನ. ಇದರಿಂದಾಗಿ ಮಾತ್ರೆಯಲ್ಲಿರುವ ಔಷಧಿಯ ಬಿಡುಗಡೆ ನಿಧಾನವಾಗುತ್ತದೆ. ಎಂಟೆರಿಕ್ ಲೇಪಿತ ಮಾತ್ರೆಗಳು ಹೊಟ್ಟೆಯಲ್ಲಿ ಭಿದ್ರವಾಗುವುದಿಲ್ಲ. ಆದರೆ ಸಣ್ಣಕರುಳು ತಲುಪಿದೊಡನೆ ಕರಗಿ, ಔಷಧಿಯನ್ನು ಬಿಡುಗಡೆ ಮಾಡುತ್ತವೆ. ಈ ಮೂಲಕ ಔಷಧಿಯು ಹೊಟ್ಟೆಯಲ್ಲಿ ಉಂಟುಮಾಡಬಹುದಾದ ಕಿರಿಕಿರಿ ಹೋಗಲಾಡಿಸಲು ಸಾಧ್ಯ.
4. ಲೇಪನವಿಲ್ಲದ ಮಾತ್ತೆಗಳು : ಇವು ಒಂದು ಅಥವಾ ಹಲವು ಪದರಗಳ ಮಾತ್ರೆಗಳು. ಒಂದು ಅಥವಾ ಹಲವು ಒತ್ತುವಿಕೆಗಳ (ಕಂಪ್ರೆಷನ್ ಗಳ) ಮೂಲಕ ಈ ಮಾತ್ರೆಗಳನ್ನು ಉತ್ಪಾದಿಸುತ್ತಾರೆ. ಕಂಪ್ರೆಷನ್‌ಗಳು ಮುಗಿದ ಬಳಿಕ ಮಾತ್ರೆಗಳನ್ನು ಬೇರೆ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ.

ಬೆಲೆಗಳ ವ್ಕತ್ಯಾಸ
ಬ್ರಾಂಡ್ ‌(ಮಾರಾಟಕ್ಕಾಗಿ ಪ್ರತ್ಯೇಕ ಹೆಸರು ಇರುವ) ಮಾತ್ರೆಗಳು ಜನೆರಿಕ್ ಮಾತ್ರೆಗಳಿಗಿಂತ ದುಬಾರಿ ಎಂದು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಕ್ಲೋರೊಕ್ಟಿನ್ ಫಾಸ್ಫೇಟಿನ ಎರಡು ಜನೆರಿಕ್ ಮಾತ್ರೆಗಳು ಬ್ರಾಂಡ್ ಮಾತ್ರೆಗಳಿಗಿಂತ ದುಬಾರಿ ಆಗಿದ್ದವು! ಎಲ್ಲ ರಾಷ್ಟ್ರವ್ಯಾಪಿ ಬ್ರಾಂಡ್ ಮಾತ್ರೆಗಳ ಬೆಲೆ (10 ಮಾತ್ರೆಗಳಿಗೆ) ರೂ. 9-31ಆಗಿತ್ತು. ಪ್ರಾದೇಶಿಕ ಬ್ರಾಂಡ್‌ಗಳ ಬೆಲೆ ರೂ. 9ರಿಂದ 9.31 ತನಕ ಇತ್ತು. ಜನೆರಿಕ್ ಮಾತ್ರೆಗಳ ಬೆಲೆಯಲ್ಲೂ ಸಾಕಷ್ಟು ಅಂತರ, ರೂ. 6.50ರಿಂದ ರೂ. 13 (10 ಮಾತ್ರೆಗಳಿಗೆ).

ರೋಗಾಣುವಿನ ಔಷಧಿ ನಿರೋಧಕ ಶಕ್ತಿ
ಮಲೇರಿಯಾ ಚಿಕಿತ್ಸೆಗೆ ಕ್ಲೋರೊಕ್ಟಿನ್ ಅತ್ಯಂತ ಉಪಯುಕ್ತ ಔಷಧಿಯಾದರೂ ಜಗತ್ತಿನ ಬಹುಪಾಲು ಪ್ರದೇಶಗಳಲ್ಲಿ ಇದರ ಉಪಯುಕ್ತತೆ ಕಡಿಮೆಯಾಗುತ್ತಿದೆ. ಯಾಕೆಂದರೆ ಅಲ್ಲೆಲ್ಲ ಈ ಔಷಧಿಯ ಕ್ರಿಯೆಗೆ ನಿರೋಧಕ ಶಕ್ತಿ ಹೊಂದಿರುವ ಮಲೇರಿಯಾ ರೋಗಾಣು ಪ್ಲಾಸ್ಮೋಡಿಯಂ ಫಾಲ್ಸಿಪರಂನ ತಳಿಗಳು ಹುಟ್ಟಿಕೂಂಡಿವೆ. ಮಲೇರಿಯಾ ಶೇ. 85 ಪ್ರಕರಣಗಳಿಗೆ ಈ ರೋಗಾಣು ಕಾರಣ ಮತ್ತು ಬಹುಪಾಲು ಸಾವುಗಳಿಗೂ ಇದುವೇ ಕಾರಣ. ಯಾವುದೇ ರೊಗಾಣುವನ್ನು ಕೊಲ್ಲುವ ಅಥವಾ ಸಂತಾನಾಭಿವೃದ್ಧಿಯನ್ನು ತಡೆಯುವ ಪ್ರಮಾಣದ ಔಷಧಿ ಇರುವಲ್ಲಿ, ಅದೇ ರೋಗಾಣು ಬದುಕಿ ಉಳಿಯುವ ಅಥವಾ ಸಂತಾನಾಭಿವದ್ದಿ ಮಾಡಿಕೊಳ್ಳುವ ಶಕ್ತಿ ಪಡೆದರೆ ಅದನ್ನು ಆ ರೋಗಾಣುವಿನ ಔಷಧಿ ನಿರೋಧಕ ಶಕ್ತಿ ಎಂದು ಹೇಳಲಾಗುತ್ತದೆ.

ಮಲೇರಿಯಾ ಔಷಧಿಯನ್ನು ಸಾಕಷ್ಟು ಪರಿಮಾಣದಲ್ಲಿ ಹಾಗೂ ಅಗತ್ಯವಿರುವಷ್ಟು ಕಾಲ ಸೇವಿಸಿದರೆ ಮಾತ್ರ ರೋಗಾಣುಗಳು ನಾಶವಾಗುತ್ತವೆ. ಮನುಷ್ಯನ ಶರೀರದಲ್ಲಿ ಕೊನೆಯ ಮಲೇರಿಯಾ ರೋಗಾಣು ಇರುವ ತನಕವೂ ಔಷಧಿಯು ಸಾಕಷ್ಟು ಪ್ರಮಾಣದಲ್ಲಿ ಆತನ ರಕ್ತದಲ್ಲಿರುವುದು ಅಗತ್ಯ. ಒಂದು ವೇಳೆ ವೈದ್ಕರು ಆದೇಶಿಸಿದಷ್ಟು ಅವಧಿ ಔಷಧಿ ಸೇವನೆ ಮಾಡದೆ, ಮಧ್ಯದಲ್ಲೇ ಚಿಕಿತ್ಸೆ ನಿಲ್ಲಿಸಿದರೆ, ರೋಗಿಯ ಶರೀರದಲ್ಲಿ ಬದುಕಿ ಉಳಿದಿರುವ ಮಲೇರಿಯಾ ರೋಗಾಣುಗಳು ಆ ಔಷಧಿಗೆ ಖಂಡಿತವಾಗಿ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತವೆ. ಈ ರೀತಿಯಲ್ಲಿ ಮಲೇರಿಯ ಔಷಧಿಗಳಿಗೆ ನಿರೋಧಕ ಶಕ್ತಿ ಬೆಳೆಸಿಕೂಂಡ ರೋಗಾಣುಗಳು 1973ರಲ್ಲಿ ಮೊದಲ ಬಾರಿ ಅಸ್ಸಾಂನಲ್ಲಿ ಷತ್ತೆಯಾದವು. ಅನಂತರ ಭಾರತದಾದ್ಕಂತ ಈ ಹೊಸ ತಳಿಯ ಮಲೇರಿಯಾ ರೋಗಾಣುಗಳು ಹಬ್ಬಿಕೊಂಡು
ಗಂಡಾಂತರ ತಂದೊಡ್ಡಿವೆ.

ಮಲೇರಿಯಾ ಹಾವಳಿ
ಕರ್ನಾಟಕದಲ್ಲಿ ಮಲೇರಿಯಾ ಪ್ರಕರಣಗಳು ಈ ವರುಷ ಶೇಕಡಾ 21 ಕಡಿಮೆಯಾಗಿವೆ ಎಂಬುದು ಆರೋಗ್ಯ ಸಚಿವರ ಹೇಳಿಕೆ. ಆದರೆ ಅಂಕೆಸಂಖ್ಯೆಗಳು ತಿಳಿಸುವ ವಾಸ್ತವ ಹಾಗಿಲ್ಲ. ಕಳೆದ ಇಡೀ ವರುಷದಲ್ಲಿ ವರದಿಯಾದ
45,096 ಮಲೇರಿಯಾ ಪ್ರಕರಣಗಳಿಗೆ ಹೋಲಿಸಿದರೆ, ಈ ವರುಷ ಜನವರಿಯಿಂದ ಜೂನ್‌ವರೆಗಿನ ಆರು ತಿಂಗಳುಗಳಲ್ಲೇ 35,454 ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಎಲ್ಲ ಜಿಲ್ಲೆಗಳಲ್ಲೂ ಮಲೇರಿಯಾ ಹಾವಳಿ ಹಬ್ಬುತ್ತಿದೆ. ಮಂಡ್ಯ, ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇದರ ಹಾವಳಿ ಆತಂಕಕಾರಿಯಾಗಿದೆ. ಆದರೆ ರಾಜ್ಕ ಸರಕಾರ ಏನು ಮಾಡುತ್ತಿದೆ? ಕರ್ನಾಟಕದಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮಕ್ಕೆ ಪ್ರತಿ ವರುಷ ಕನಿಷ್ಠ ಐದು ಕೋಟಿ ರೂಪಾಯಿ ಅವಶ್ಯ ಎಂಬುದು ಅಧಿಕಾರಿಗಳ ಅಂಬೋಣ. ಆದರೆ 1999 – 2000ದಲ್ಲಿ ಕೇವಲ ಒಂದು ಕೋಟಿ ರೂಪಾಯಿ ಮತ್ತು 2000-2001ರಲ್ಲಿ 2.6 ಕೋಟಿ ರೂಪಾಯಿ ಮಾತ್ರ ಒದಗಿಸಲಾಗಿತ್ತು. ಕಡಿಮೆ ಹಣ ನೀಡಿದ್ದು ಮಾತ್ರವಲ್ಲದೆ, ಅದನ್ನು ತೀರಾ ತಡವಾಗಿ ಒದಗಿಸಲಾಗಿತ್ತು. 2001 – 2002ನೇ ಸಾಲಿಗೆ ರೂ. 1 ಕೋಟಿ ಬಿಡುಗಡೆ ಮಾಡಿದ್ದು ಆರ್ಥಿಕ ವರುಷದ ಕೊನೆಯಲ್ಲಿ! ಸೊಳ್ಳಗಳೆಲ್ಲ ಆ ತನಕ ತಮ್ಮ ನಿಯಂತ್ರಣಕ್ಕಾಗಿ ಕಾದು ಕೂತಿರದಿದ್ದರೆ ಅದು ಸೊಳ್ಳೆಗಳದೇ ತಪ್ಪು!

ಕೇಂದ್ರ ಸರಕಾರ ಏನು ಮಾಡುತ್ತಿದೆ? ಈ ಕಾರ್ಯಕ್ರಮಕ್ಕೆ ಶೇಕಡಾ 50 ಸಹಾಯ ಕೇಂದ್ರ
ಸರಕಾರದಿಂದ ಕೀಟನಾಶಕಗಳು ಮತ್ತು ಔಷಧಿಗಳ ರೂಪದಲ್ಲಿ ಬರಬೇಕು. ಅದು ಸಮಯಕ್ಕೆ
ಸರಿಯಾಗಿ ಬರುವುದೇ ಇಲ್ಲ ಎಂಬುದು ಅಧಿಕಾರಿಗಳ ದೂರು.

ಸೊಳ್ಳೆಗಳ ವಂಶಾಭಿವೃದ್ದಿ ತಡೆಯುವ ಪರಿಸರ ಸುಂಬಂಧಿ ಕ್ರಮಗಳು ಬಳಕೆಯಲ್ಲಿವೆ. ಆದರೆ ಅವು ಕಷ್ಟ ಹಾಗೂ ದುಬಾರಿ ಕ್ರಮಗಳಾಗುತ್ತಿವೆ ಎನ್ನುತ್ತಾರೆ ಅಧಿಕಾರಿಗಳು. ನೀರಾವರಿ ಕೆರೆಗಳೂ, ಬಾವಿಗಳೂ ಇರುವ ಜಿಲ್ಲೆಗಳಲ್ಲಿ ಬಾವಿಗಳಿಗೆ ಗಪ್ಪಿಮೀನು ಮತ್ತು ಕೆರೆಗಳಿಗೆ ಗಂಬೂಸಿಯಾ ಮೀನುಗಳನ್ನು ಬಿಡುವುದು ಸೊಳ್ಳೆಗಳ ಹತೋಟಿಗೆ ಪರಿಣಾಮಕಾರಿ ಜೈವಿಕ ಕ್ರಮ. ಅವು ಸೊಳ್ಳೆಗಳ ಲಾರ್ವಾ ತಿಂದು ಸೊಳ್ಳೆಗಳ ಸಂತಾನಾಭಿವೃದ್ಧಿ ನಿಯಂತ್ತಿಸುತ್ತವೆ. ಆದರೆ ಇಂಥ ಜೈವಿಕ ನಿಯಂತ್ರಣ ಕ್ರಮಗಳಿಗೆ ದೊಡ್ಡ ಮೊತ್ತದ ಹಣ ಅಗತ್ಕ.

ಆರೋಗ್ಕ ಇಲಾಖೆಯಲ್ಲಿ 2,200 ಆರೋಗ್ಕ ಸಹಾಯಕರ ಹುದ್ದೆಗಳಿಗೆ ಇನ್ನೂ ನೇಮಕ ಆಗಿಲ್ಲ. ಆ ಇಲಾಖೆಯಲ್ಲಿ ಇರುವ ಕೆಲವೇ ಸಿಬ್ಬಂದಿಯನ್ನು ಮಳೆಗಾಲದಲ್ಲಿ ಮಲೇರಿಯಾ ಹಾವಳಿ ವಿಪರೀತವಾದಾಗ, ಅದರ ನಿಯಂತ್ರಣ ಕಾರ್ಯಕ್ರಮಕ್ಕೆ ಒದಗಿಸಲಾಗುತ್ತದೆ ಮಳೆಗಾಲ ಮುಗಿದೊಡನೆ ಕಾರ್ಯಕ್ರಮದ ಬಿರುಸೆಲ್ಲ ತಣ್ಣಗಾಗುತ್ತದೆ. ಮಲೇರಿಯಾ ನಿಯಂತ್ರಣಕ್ಕಾಗಿ ಸಮಗ್ರ ಕಾರ್ಯಕ್ರಮ ರೂಪಿಸಿ, ಆರೋಗ್ಕ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸಹಯೋಗದಲ್ಲಿ ಕಾರ್ಯಗತಗೊಳಿಸುವುದು ತುರ್ತಾಗಿ ಆಗಬೇಕಾಗಿರುವ ಕೆಲಸ. ಆದರೆ ಸರಕಾರ ಹಾಗೂ ಇಲಾಖೆಯನ್ನು ನಂಬಿ ಕುಳಿತರೆ ಏನಾಗುತ್ತದೆಂಬುದು ನಮಗೆಲ್ಲರಿಗೂ ಗೊತ್ತು. ನಮ್ಮ ವಠಾರದಲ್ಲಿ ಸ್ವಚ್ಚತೆಗೆ ನಾವೇ ಜವಾದ್ದಾರಿ ವಹಿಸಿಕೂಂಡು ಮಲೇರಿಯಾದಿಂದ ಪಾರಾಗಲು ಚಾಗೃತರಾಗಬೇಕಾಗಿದೆ.

ಸುಲಭದ ಕ್ರಮ
ದಕ್ಷಿಣ ಕನ್ನಡದಲ್ಲಿಯೂ ಮಲೇರಿಯಾ ಹಾವಳಿ ಹೆಚ್ಚುತ್ತಿದೆ. ಕಳೆದ ವರುಷ ಇಲ್ಲಿ ದಾಖಲಾದ ಮಲೇರಿಯಾ ಪ್ರಕರಣಗಳು 4,441. ಇದರಲ್ಲಿ ಮಂಗಳೂರಿನವು 2965. ಅಪಾಯಕಾರಿ ಮಲೇರಿಯಾದ ಸೊಂಕು ತಗಲಿದ ಬಳಿಕ ಚಿಕಿತ್ಸೆಗೆ ಮಾತ್ರೆಗಳು ಬೇಕೇ ಬೇಕು. ಆದರೆ ಸೋಂಕು ತಗಲುವ ಮುನ್ನ ನಾವು ಸುಲಭದ  ಮುಂಜಾಗರೂಕತಾ ಕ್ತಮ ಕ್ಕೆಗೂಳ್ಳಬಹುದು. ನಮ್ಮ ಮನೆಯ ಸುತ್ತಮುತ್ತಲನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಮತ್ತು
ಸೋಳ್ಳೆಪರದೆಯೊಳಗೆ ಮಲಗುವುದು.

***************************************************************************
ಮಲೇರಿಯಾ ರೋಗಾಣುಗಳ ಜೀವನಚಕ್ರ
ಮಲೇರಿಯಾ ರೋಗಾಣುಗಳು ಪ್ಲಾಸ್ಮೋಡಿಯಂ ಜಾತಿಗೆ ಸೇರಿವೆ. ಇವುಗಳಲ್ಲಿ ಫಾಲ್ಸಿಪರಮ್,ವೈವಾಕ್ಸ್ , ಒವಾಲೆ ಮತ್ತು ಮಲೇರಿಯಾ ಎಂಬ 4 ಪ್ರಭೇದಗಳನ್ನು ಗುರುತಿಸಲಾಗಿದೆ ಇವುಗಳಲ್ಲಿ ಫಾಲ್ಸಿಪರಮ್ ರೋಗಾಣುಗಳಿಂದ ಬರುವ ಮಲೇರಿಯಾ ಮಾರಣಾಂತಿಕ.

ಮಲೇರಿಯಾ ರೋಗಾಣುಗಳು ಹೆಣ್ಣು ಸೋಳ್ಳೆಯ ಕರುಳಿನಲ್ಲಿ ಸಂತಾನಾಭಿವೃದ್ಧಿ ಮಾಡಿಕೊಳ್ಳುತ್ತವೆ. ಅಲ್ಲಿ ಎರಡು ವಾರಗಳ ಕಾಲ ಬೆಳೆದ ಬಳಿಕ ಹೊರಬರುತ್ತವೆ. ಈ ಹಂತದಲ್ಲಿ ಸ್ಪೋರೋಜೊಯಿಟ್ಸ್ ಎಂದು ಕರೆಯಲ್ಪಡುವ ಇವು ಸೊಳ್ಳೆಯ ಜೊಲ್ಲುರಸದಲ್ಲಿ ಸೇರಿಕೊಳ್ಳುತ್ತವೆ.

ಮನುಷ್ಯನನ್ನು ಸೊಳ್ಳೆ ಕಚ್ಚಿದಾಗ ಅದರೆ ಕೊಂಡಿಯ ಮೂಲಕ ಮಲೇರಿಯಾ ರೋಗಾಣುಗಳು ಮನುಷ್ಯ ರಕ್ತ ಸೇರುತ್ತವೆ. ಅನಂತರ ಒಂದೇ ಗಂಟೆಯೊಳಗೆ ಅವು ಯಕೃತ್ತನ್ನು ಸೇರುತ್ತವೆ. ಅಲ್ಲಿ ಒಂದೆರಡು ವಾರದೊಳಗೆ ಬೆಳವಣಿಗೆ ಹೊಂದಿ ಅಪಾರ ಸಂಖ್ಯೆಯಲ್ಲಿ ಹೊರಬರುತ್ತವೆ. ಟ್ರೋಪೋಜೊಯಿಟ್ಸ್ ಎಂದು ಕರೆಯಲ್ಪಡುವ ಇವು ಕೆಂಪು ರಕ್ತಕಣಗಳ ಮೇಲೆ ಧಾಳಿ ನಡೆಸಿ ಅವನ್ನು ನಾಶ ಮಾಡುತ್ತವೆ. ಈ ಹಂತದಲ್ಲಿ ವ್ಯಕ್ತಿಯಲ್ಲಿ ಜ್ವರ, ಚಳಿ, ನಡುಕ,
ರಕ್ತಹೀನತೆ ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ರೋಗಾಣುಗಳ ಸಂಖ್ಯೆ ಶರೀರದೊಳಗೆ ಹೆಚ್ಚಿದಂತೆ ಮಿದುಳಿನ ಸೂಕ್ಷ್ಮ ರಕ್ತನಾಳ ಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಪರಿಸ್ಥಿತಿಯೇ ಸೆರೆಬ್ರಲ್ ಮಲೇರಿಯಾ. ಇದರಿಂದಾಗಿ ರೋಗಿ ಪ್ರಜ್ಞಾಹೀನ ಸ್ಥಿತಿಗೆ ತಲಪಿದರೆ ಮೂರೇ ದಿನಗಳಲ್ಲಿ ಸಾವು ಖಚಿತ.
***************************************************************************
ಉದಯವಾಣಿ 11-7-2002

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆಕ್ಕ ಸಿಗುವುದಿಲ್ಲ
Next post ನಗೆಡಂಗುರ-೧೨೫

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…