ಪರಿವ್ರಾಜಕರಾಗಿ ವಿವೇಕಾನಂದರು ಅಖಂಡಾನಂದರೊಡನೆ ವಾರಣಾಸಿ, ಅಯೋಧ್ಯೆ, ಲಕ್ನೋ, ಆಗ್ರಾ, ಬೃಂದಾವನದ ಮೂಲಕ ಹಿಮಾಲಯಾ ತಪ್ಪಲಿನಲಿಗಿರುವ ಅಲ್ಮೋರಾಕ್ಕೆ ಬಂದರು. ಹಿಮಾಲಯ ಅವರ ಒಳಚೇತನದ ದ್ಯೋತಕವಾಗಿ ಮಹದ್ಗಾಂಬೀರ್ಯದಿಂದ ಎದ್ದು ನಿಂತಿರುವಂತೆ ಕಂಡು ಅಂತರ್ಮುಖಿಗಳಾದರು. ಶ್ವೇತವರ್ಣದಿಂದ ಹೊಳೆವ ಹಿಮಾಲಯದಂತೆ ಅವರ ಅಂತರಂಗವು ಬೆಳಗಿ ಅಡಿಯಿಂದ ಮುಡಿಯವರೆಗೆ ಸಂಚಾರವಾಯ್ತು.
ಅಲ್ಲಿಂದ ಗರ್ವಾಲ್ ಪ್ರವೇಶಿಸಿ ಕರ್ಣಪ್ರಯಾಗದ ಮಾಗಮಾಗಿ ರುದ್ರ ಪ್ರಯಾಗಕ್ಕೆ ಶ್ರೀನಗರ, ಬದರಿಕಾಶ್ರಮ, ಬೆಹರಿಸಂಸ್ಥಾನ, ಡೆಹರಾಡೊನ್, ಹೃಷಿಕೇಶಗಳಲ್ಲಿ ಸಂಚರಿಸಿ ಭತರ ವರ್ಷದ ಸನಾತನ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಪರಿಚಯಿಸಿಕೊಂಡರು. ವೇದಕಾಲದ, ಜ್ಞಾನದ ಬೆಳಕು ಕಣ್ಮಂದೆ ಕಟ್ಟಿತು. ಉಪನಿಷತ್ತುಗಳ, ಗೀತೆಯ ಸಾರಸರ್ವಸ್ವವೂ ಹೊನಲಾಗಿ ಹರಿಯಿತು. ಅಲ್ಲಿಂದ ಕನ್ಯಾಕುಮಾರಿಯವರೆಗೂ ಪಯಣಿಸಬೇಕೆಂಬ ಸಂಕಲ್ಪಮಾಡಿ “ನಾನು ಇಲ್ಲಿಂದ. ಒಂಟಿಯಾಗಿ ಸಂಚರಿಸಬೇಕೆಂದು ಇಚ್ಛಿಸಿದ್ದೇನೆ. ನೀವು ಯಾರೂ ನನ್ನೊಡನೆ ಬರಕೂಡದು’ ನಿಂದು ಶಿಷ್ಯರಿಗೆ ಹೇಳಿ ಏಕಾಂಗಿಯಾಗಿ ರಾಜಪುತ್ರಸ್ಥಾನವನ್ನು ಪ್ರವೇಶಿಸಿದರು. ಅಳ್ವಾರ್, ಜಯಫುರ, ಅಜ್ಮೀರ್, ಖೇತ್ರಿ, ಅಹಮದಾಬಾದ್, ಕಾತಿವಾರ್, ಜುನುಗಾರ್, ಗುಜರಾತ್, ಪೋರ್ ಬಂದರ್, ದ್ವಾರಕ, ಬರೋಡ, ಖಾಂಡದ, ಮುಂಬಯಿ, ಬೆಳಗಾಂ, ಬೆಂಗಳೂರು, ಮೈಸೂರು. ಕೊಚಿನ್, ಮಲಬಾರ್, ತಿರುವನಂತಪುರ, ಮಧುರ, ರಾಮೇಶ್ವರಗಳ ಮೂಲಕ ಕನ್ಯಾಕುಮಾರಿ ತಲುಪಿರು.
ವಿವೇಕಾನಂದರು ಮೈಸೂರಿನಲ್ಲಿ ಚಾಮರಾಜ ಒಡೆಯರ್ ಅವರ ಅತಿಥಿಯಾಗಿದ್ದಾಗ ಒಮ್ಮೆ ಒಡೆಯರ್ ಕೇಳಿದರು “ಸ್ಪಾಮೀಜಿ, ನನ್ನ ಆಸ್ಥಾನಿಕರ ವಿಷಯವಾಗಿ ತಮ್ಮ ಅಭಿಪ್ರಾಯವೇನು?”
“ಮಹಾರಾಜ, ನನಗನ್ನಿಸುತ್ತದೆ, ನಿನ್ನ ಹೃದಯವೇನೋ ಒಳ್ಳೆಯದು, ಆದರೆ ನಿನ್ನ ಸುತ್ತ ಹೊಗಳುಭಟ್ಟರು ಸುತ್ತುವರಿದಿದ್ದಾರೆ. ಹೊಗಳುಭಟ್ಟರು ಎಷ್ಟಾದರು ಹೊಗಳು ಭಟ್ಟರೇ. “ “ಇಲ್ಲ ಸ್ವಾಮೀಜಿ ……. .. ಕಡೇಪಕ್ಷ ನಮ್ಮ ದಿವಾನರಂತೂ ಅಂಥವರಲ್ಲ. (ಆಗ ದಿವಾನರಾಗಿದ್ದವರು ಕೆ. ಶೇಷಾದ್ರಿ ಅಯ್ಯರ್) ಅವರು ತುಂಬ ನಂಬಿಕಸ್ಥರು, ಬುದ್ಧಿವಂತರು.” “ಆದರೆ ಮಹಾರಾಜ ದಿವಾನರೆಂದರೆ ರಾಜನನ್ನು ಲೂಟಿಮಾಡಿ ಬ್ರಿಟಿಷ್ ಏಜೆಂಟನ ಕೈಗೆ
ದಾಟಿಸುವವರು. “
“ಸ್ವಾಮೀಜಿ, ಹೀಗೆ ಮುಚ್ಚುಮರೆ ಇಲ್ಲದೆ ಮಾತನಾಡುವುದು ಯಾವಾಗಲೂ ಕ್ಷೇಮವಲ್ಲ. ಇಂದು ನೀವು ನನ್ನ ಆಸ್ಥಾನಿಕರೆದುರು ಮಾತನಾಡಿದಂತೆಯೇ ಮಾತಾಡುತ್ತಿದ್ದರೆ, ನನಗನ್ನಸುತ್ತದೆ ನಿಮಗೆ ಯಾರಾದರೂ ವಿಷ ಹಾಕಿದರೂ ಆಶ್ಚರ್ಯವಿಲ್ಲ. ಅದ್ದರಿಂದ ದಯವಿಟ್ಟು ನೀವು ಈ ಬಗ್ಗೆ ಎಚ್ಚರವಹಿಸಬೇಕು”
“ಏನು! ಒಬ್ಬ ಪ್ರಾಮಾಣಿಕ ಸನ್ಯಾಸಿ ತನ್ನ ಪ್ರಾಣವೇ ಹೋಗುವಂಥ ಸಂದರ್ಭವೊದಗಿದರೂ ಸತ್ಯವನ್ನು ಹೇಳಲು ಹೆದರುತ್ತಾನೆಂದು ಭಾವಿಸಿದೆಯಾ? ನಾಳೆ ನಿನ್ನೆ ಮಗನೇ ಬಂದು, “ಸ್ವಾಮೀಜಿ ನನ್ನ ತಂದೆಯವರ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಬಂದು ಕೇಳಿದರೆ ಆಗ ನಾನು ನಿನ್ನಲ್ಲಿ ಇಲ್ಲದಿರುವ ಸದ್ಗುಣಳೆಲ್ಲ ಇವೆ ಎಂದು ಹೇಳಬೇಕೇನು? ನಾನು ಸುಳ್ಳು ಹೇಳಲೆ! ಎಂದಿಗೂ ಇಲ್ಲ”
ಈ ಸಂಭಾಷಣೆಯಿಂದ ನಮಗೆ ಸ್ವಾಮೀಜಿಯ ತೆರೆದ ಹೃದಯ ಮನಸ್ಸುಗಳ ಸತ್ಯವನ್ನು ಎಂಥ ಸಂದರ್ಭದಲ್ಲೂ ಮರೆಮಾಚಬಾರದೆಂಬ ಅವರ ನೇರ ದೃಷ್ಟಿಗಳ ಪರಿಚಯವಾಗುತ್ತದೆ. ಕಪಟ ಬರದ ಇಂಥ ಅಪ್ಪಟ ಸನ್ಯಾಸಿಗೆ ಸಹಾಯ ಮಾಡಿದರೆ ಅದು ಸಾರ್ಥಕವಾಗುತ್ತದೆ ಎಂದರಿತ ಮಹಾರಾಜರು-
“ಸ್ವಾಮೀಜಿ, ನಾನು ನಿಮಗೆ ಯಾವ ಸಹಾಯ ಮಾಡಲೇ” ಎಂದು ಕೇಳಿದರು.
“ಮಹಾರಾಜ, ನಮ್ಮ ಭರತ ಭೂಮಿಯು ಅನಾದಿಯಿಂದ ಪಡೆದುಕೊಂಡು ಬಂದ ಆಸ್ತಿಯಾವುದೆಂದರೆ ಉನ್ನತ ತಾತ್ವಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳು. ಈಗ ಅದಕ್ಕೆ ಬೇಕಾಗಿರುವುದು ಆಧುನಿಕ ಜೋಡಣೆ. ಭಾರತದಲ್ಲಿ ಅಡಿಯಿಂದ ಮುಡಿವರೆಗೆ ರಚನಾತ್ಮಕ ಸುಧಾರಣೆಗಳನ್ನು ತರಬೇಕಾಗಿದೆ. ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಪಾಶ್ಚಾತ್ಯ ಜಗತ್ತಿಗೆ ಕೊಡುವ ಹೊಣೆ ಭಾರತಕ್ಕೆ ಸೇರಿದ್ದು ……. .. ನಾನು ವೇದಾಂತ ಪ್ರಚಾರಕ್ಕಾಗಿ ಅಮೆರಿಕಾಗೆ ಹೋಗಬೇಕೆಂದುಕೊಂಡಿದ್ದೇನೆ. ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯರಿಗೆ ಆಧುನಿಕ ಕೃಷಿ ವಿಜ್ಞಾನ, ಕೈಗಾರಿಕೆ ಹಾಗೂ ಇತರ ವಿಷಯಗಳಲ್ಲಿ ಶಿಕ್ಷಣ ನೀಡಿ ನಮ್ಮ ಆರ್ಥಿಕ ಪರಿಸ್ಲಿತಿಯನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗಬೇಕೆಂದು ನಾನು ನಿರೀಕ್ಷಿಸುತ್ತೇನೆ. ”
ಸ್ವಾಮೀಜೀಯ ಮಾತುಗಳನ್ನು ಕೇಳಿ ಮಹಾರಾಜರು ಮಂತ್ರ ಮುಗ್ಧರಾದರು. ಒಬ್ಬ ಸನ್ಯಾಸಿ ತನ್ನ ಮಾತೃಭೂಮಿಗಾಗಿ ಪರಿತಪಿಸುವುದನ್ನು ಕಂಡು ಅವರ ಹೃದಯ ತುಂಬಿಬಂತು. ಅವರ ಪಾದ ಪೂಜೆ ಮಾಡಲು ಇಷ್ಟಪಟ್ಟರು. ಅದರೆ ಸ್ವಾಮೀಜಿ ಅದಕ್ಕೆ ಅನುಮತಿಕೊಡಲಿಲ್ಲ.
ಪಾದಪೂಜೆ, ಕನಕಾಭಿಷೇಕಗಳ ಅಮಲಿನಲ್ಲಿ ಮುಳುಗಿರುವ ಮಠಾಧೀಶರಿಗೆ, ಮಠಮಾನ್ಯಗಳಿಗೆ ಇದು ಕಣ್ಣು ತೆರೆಸುವ ಘಟನೆಯಾಗಿದೆ. ವಿವೇಕಾನಂದರಂಥ ಮಹಾನುಭಾವರು ಆಗಿಹೋದ ಈ ಭಾರತದಲ್ಲಿ ಮಠಮಾನ್ಯಗಳು ವಿಷದ ಹೊಂಡಗಳಾಗುತ್ತಿರುವುದಕ್ಕೆ ಕಾರಣ ಸರ್ವಸಂಘಪರಿತ್ಯಾಗ ಆಚರಣೆಗೆ ಬಾರದೆ ಬರಿಯ ಮೊಗವಾಡವಾಗಿ ಮೆರೆಯುತ್ತಿರುವುದರಿಂದ. ವಿವೇಕಾನಂದರು ಸಂನ್ಯಾಸಕ್ಕೆ ತಂದುಕೊಟ್ಟ ಗೌರವದ ಇದಿರು ಮತ್ತೊಂದು ಉದಾಹರಣೆ ಇಲ್ಲ. ಅವರೇ ಮೊದಲು, ಬಹುಶಃ0 ಕೊನೆಯು ಅವರೇ ಎಂದು ಕಾಣುತ್ತದೆ.
ವಿವೇಕಾನಂದರು ಬೆಂಗಳೂರಿನಲ್ಲಿದ್ದಾಗ ಡಾ|| ಪಲ್ಪು ಅವರ ಅತಿಥಿಯಾಗಿದ್ದರು. ಡಾ|| ಪಲ್ಪು ಕೇರಳದ ಈಡಿಗ ಕೋಮಿಗೆ ಸೇರಿದವರು. ಕೇರಳದಲ್ಲಿ ಭಾರತದ ಇತರೆ ಭಾಗಗಳಲ್ಲಿಗಿಂತ ಹೆಚ್ಚಾಗಿ ಕೆಳಜಾತಿಯ ಜನರು ಮೇಲ್ಜಾತಿಯವರ ತುಳಿತಕ್ಕೆ ಸಿಕ್ಕಿ ನರಳುತ್ತಿದ್ದರು. ಒಬ್ಬ ಶೂದ್ರನು ಹತ್ತಿರ ಬಂದರೆ ಅವನನ್ನು ಒಂದು ಸಾಂಕ್ರಾಮಿಕ ರೋಗದಂತೆ ದೂರವಿಡುತ್ತಿದ್ದ ಮೇಲ್ಜಾತಿಯ ಹಿಂದೂಗಳು ಕ್ರೂರ ಆಚರಣೆಗಳಲ್ಲಿ ತೊಡಗಿದ್ದರು. ಈ ವಿಷಯಗಳನ್ನು ಪಲ್ಪು ಅವರು ಸ್ವಾಮೀಜಿ ಅವರೊಂದಿಗೆ ಚರ್ಚಿಸಿದಾಗ ಸ್ವಾಮೀಜಿ ಈ ಸಮಸ್ಯೆಗೆ ತಮ್ಮದೇ ಅದ ಒಂದು ಪರಿಹಾರವನ್ನು ಸೂಚಿಸಿದರು.
“ನೀವೆಲ್ಲಾ ಬ್ರಾಹ್ಮಣರ ಹಿಂದೆ ಅಂಗಲಾಚಿಕೊಂಡು ಹೋಗುವುದೇಕೆ? ನಿಮ್ಮಲ್ಲೆ ಉನ್ನತಮಟ್ಟದ ಯೊಗ್ಯ ವ್ಯಕ್ತಿಯೊಬ್ಬನನ್ನು ನಾಯಕನನ್ನಾಗಿ ಮಾಡಿಕೊಂಡು ಎಲ್ಲರೂ ಅವನನ್ನು ಅನುಸರಿಸಿ. ಆಗ ನಿಮ್ಮ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ” ಎಂದರು. ಬಹುಶಃ ಡಾ||ಪಲ್ಪು ಅಂಥಹವರಿಗೆ ಕೇರಳದ ಶ್ರೀ ನಾರಾಯಣಗುರು ಅವರ ಸಾಮಾಜಿಕ ಸುಧಾರಣೆಯ ಅರಿವುಂಟಾಗಿರಬಹುದು, ಸ್ವಾಮೀಜಿಯ ಮಾತುಗಳಿಂದ.
ಈ ರೀತಿ ಪರಿವ್ರಾಜಕರಾಗಿ ವಿವೇಕಾನಂದರು ಅಲೆಯುವಾಗಿನ ಘಟನೆಗಳಿಂದ ಅವರ ತೆರೆದ ಮನಸ್ಸು, ನಿರ್ವಂಚನೆಯ ಹೃದಯ ಪರಿಚಯವಾಗುತ್ತದೆ.
ಚಾಮರಾಜೇಂದ್ರ ಒಡೆಯರ್ (೧೮೬೩; ೨೮-೧೧-೧೮೯೪) ಮೈಸೂರನ್ನು ಅಳಿದ ರಾಜರುಗಳಲ್ಲಿ ಮಹತ್ವದ ಸ್ಥಾನಪಡೆದವರು. ಅವರ ಕಾಲದಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಸ್ಥಾಪಿತವಾಯ್ತು. ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆ ಆರಂಭವಾದದ್ದು ಇವರ ಕಾಲದಲ್ಲೆ. ಇವರ ಮತ್ತು ಪ್ರಜೆಗಳ ನಡುವೆ ಇದ್ದ ಮಧುರ ಬಾಂಧವ್ಯವನ್ನು ಕುರಿತು “ಪ್ರಜಾಕ್ಷೇಮವೇ ಸರ್ಕಾರದ ಪರಮಾದರ್ಶ ಎಂಬ ಘನತತ್ವ ಯಶಸ್ವಿಯಾಗಿ ಕಾರ್ಯಗತವಾಗಿರುವುದು ಮೈಸೂರಿನಲ್ಲಿ ಮಾತ್ರ” ಒಂದು ಅಂದಿನ ವೈಸ್‌ರಾಯ್ ಆಗಿದ್ದ ಲಾರ್ಡ್ ಲ್ಯಾನ್ಸ್ ಡೌನ್ ಮುಕ್ತ ಮನಸ್ಸಿನಿಂದ
ಕೊಂಡಾಡಿದ್ದಾನೆ.
ಚಾಮರಾಜ ಒಡೆಯರ್‌ಯಿಂದ ಸಹಾಯವನ್ನು ಪಡೆದುಕೊಂಡ ವಿವೇಕಾನಂದರು ಅಮೆರಿಕಾಗೆ ಹೋದ ಮೇಲೆ ದಿನಾಂಕ: ೨೦-೬-೧೮೯೪ ರಂದು ಬರೆದ ಪತ್ರ ಮಹತ್ವದಿಂದ ಕೂಡಿದೆ. ಅ ಪತ್ರವನ್ನು ಇಲ್ಲಿ ಯಥಾವತ್ತಾಗಿ ಕೊಡುತ್ತಿದ್ದೇನೆ.
ಮಹಾರಾಜರೆ,
ಶ್ರೀಮನ್ನಾರಾಯಣನು ತಮಗೂ ತಮ್ಮ ಕುಟುಂಬಕ್ಕೂ ಕಲ್ಯಾಣವನ್ನುಂಟುಮಾಡಲಿ. ನೀವು ಪ್ರೀತಿಯಿಂದ ಮಾಡಿದ ಸಹಾಯದಿಂದ ಈ ದೂರ ದೇಶಕ್ಕೆ ಬರಲು ಸಾಧ್ಯವಾಯಿತು ಅಂದಿನಿಂದ ಇಲ್ಲಿ ಪ್ರಖ್ಯಾತನಾಗಿರುವೆನು. ಅತಿಥಿಸತ್ಕಾರಪರರು ಇಲ್ಲಿಯ ಜನರು. ಕೊರತೆಗಳೆಲ್ಲವನ್ನೂ ಬಗೆಹರಿಸಿರುವರು. ಇದು ಹಲವು ವಿಧದಲ್ಲಿ ಒಂದು ಆಶ್ಚರ್ಯಕರವಾದ ದೇಶ. ಇಲ್ಲಿಯ ಜನರೊಂದು ಅದ್ಭುತ ಜನಾಂಗ. ಇಲ್ಲಿಯ ಜನರು ನಿತ್ಯಜೀವನದಲ್ಲಿ ಉಪಯೋಗಿಸುವಷ್ಟು ಯಂತ್ರವನ್ನು ಜಗತ್ತಿನಲ್ಲಿ ಇನ್ನಾವ ಜನಾಂಗವೂ ಉಪಯೋಗಿಸುವುದಿಲ್ಲ. ಎಲ್ಲಾ ಯಂತ್ರವೆ. ಇವರು ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಇಪ್ಪತ್ತನೇ ಒಂದು ಪಾಲು. ಅದರೆ ಪ್ರಪಂಚದ ಐಶ್ವರ್ಯದಲ್ಲಿ ಆರನೇ ಒಂದು ಭಾಗ ಇವರಲ್ಲಿದೆ. ಇಲ್ಲಿ ಐಶ್ವರ್ಯಕ್ಕೆ ಭೋಗ ವಿಲಾಸಗಳಿಗೆ ಒಂದು ಮೇರೆಯೆ ಇಲ್ಲ. ಆದರೂ ಇಲ್ಲಿ ಎಲ್ಲ ಬಹಳ ಬೆಲೆ. ಇಲ್ಲಿ ಕೂಲಿಗಳ ದರ ಜಗತ್ತಿನ ಎಲ್ಲಾ ಕಡೆಗಿಂತಲೂ ಅಧಿಕ. ಆದರೂ ಬಂಡವಾಳಗಾರರಿಗೂ ಕೂಲಿಗಳಿಗೂ ನಿತ್ಯವ್ಯಾಜ್ಯ ತಪ್ಪದು.
ಅಮೇರಿಕಾದ ಸ್ತ್ರೀಯರಿಗಿರುವಷ್ಟು ಅಧಿಕಾರ ಜಗತ್ತಿನ ಮತ್ತಾವ ಸ್ತ್ರೀಯರಿಗೂ ಇಲ್ಲ. ಅವರು ಪ್ರತಿಯೊಂದನ್ನೂ ಮೆಲ್ಲಗೆ ತಮ್ಮ ವಶಮಾಡಿಕೊಳ್ಳುವರು ಸುಸಂಸ್ಕೃತರಾದ ಹೆಂಗಸರು ಗಂಡಸರಿಗಿಂತ ಹೆಚ್ಚು ಒಂದು ಹೇಳಲು ಆಶ್ಚರ್ಯವಾಗುತ್ತದೆ. ಆದರೆ ಉಚ್ಚ ಪ್ರಭಾವಶಾಲಿಗಳು ಬಹುಮಟ್ಟಿಗೆ ಪುರುಷರೆಂಬುದೇನೋ ನಿಜ. ಪಾಶ್ಚಾತ್ಯರು ನಮ್ಮನ್ನು ಜಾತಿಯ ವಿಷಯವಾಗಿ ಎಷ್ಟು ದೂರಿದರೂ, ಅವರಲ್ಲಿ ಇದಕ್ಕಿಂತ ನೀಚವಾದ ಜಾತಿ ಭೇದವಿದೆ. ಅದೇ ಹಣದ ಜಾತಿ. ಅಮೇರಿಕಾದವರು ಹೇಳುವಂತೆ ಸರ್ವಶಕ್ತಿ ಸ್ವರೂಪನಾದ ಡಾಲರ್ ಮಾಡದ ಕಾರ್ಯವಿಲ್ಲ.
ಈ ದೇಶದಲ್ಲಿರುವಷ್ಟು ಕಾನೂನುಗಳು ಮತ್ತೆಲ್ಲೂ ಇಲ್ಲ. ಅದರೆ ಅದಕ್ಕೆ ಇಲ್ಲಿರುವಷ್ಟು ಅಸಡ್ಡೆ ಮತ್ತೆಲ್ಲಿಯೂ ಇಲ್ಲ. ಒಟ್ಟಿನಲ್ಲಿ ನಮ್ಮ ದೀನ ಹಿಂದೂಗಳು ಪಾಶ್ಚಾತ್ಯರಿಗಿಂತ ಎಷ್ಟೋ0 0ಪಾಲು ಹೆಚ್ಚು ನೀತಿವಂತರು. ಧರ್ಮದಲ್ಲಿ ಮಿಥ್ಯಾಚಾರ ಇಲ್ಲವೆ ಅಂಧ ಅಭಿಮಾನ ಇವೆರಡನ್ನೇ ಅವರು ಅಭ್ಯಾಸ ಮಾಡುವುದು. ಇಲ್ಲಿನ ಆಲೋಚನಾ ಪರರಿಗೆ ಮೂಢನಂಬಿಕೆಗಳಿಂದ ಕೂಡಿದ ಅವರ ಧರ್ಮದಲ್ಲಿ ಬೇಜಾರು ಹುಟ್ಟಿ ಹೊಸ ಬೆಳಕು ಭಾರತದಿಂದ ಬರುವುದೆಂದು ಕಾಯುತ್ತಿರುವರು. ಆಧುನಿಕ ವೈಜ್ಞಾನಿಕ ಶಾಸ್ತ್ರಗಳನ್ನು ಮತ್ತು ಸಿದ್ಧಾಂತಗಳನ್ನು ಪವಿತ್ರ ವೇದದಲ್ಲಿರುವ ಮಹದಾಲೋಚನೆಗಳು ಎದುರಿಸುತ್ತಿವೆ. ಅವುಗಳ ಆಘಾತದಿಂದ ನಾಶವಾಗದೆ ಇವೆ. ಇಂತಹ ಎಷ್ಟು ವಿಷಯಗಳನ್ನಾದರು ಕೂಡ ಅಮೇರಿಕಾ ದೇಶ ಉತ್ಸಾಹದಿಂದ ಸ್ವೀಕರಿಸುವುದು. ನೀವು ಇದನ್ನು ನೋಡಿದಲ್ಲದೆ ನಂಬಲಾಗುವುದಿಲ್ಲ. ಶೂನ್ಯದಿಂದ ಸೃಷ್ಟಿ, ಹೊಸದಾಗಿ ಸೃಷ್ಟಿಸಿದ ಜೀವ, ಸ್ವರ್ಗವೆನ್ನುವಲ್ಲಿ ಸಿಂಹಾಸನದ ಮೇಲೆ ಕುಳಿತು ಆಳುತ್ತಿರುವ ಕ್ರೂರನೂ ಅತ್ಯಾಚಾರಿಯೂ ಆದ ಈಶ್ವರ, ಕೆಳಗೆ ನಿತ್ಯ ನರಕ ಯಾತನೆ, ಇವು ವಿದ್ಯಾವಂತರನ್ನೆಲ್ಲ ಬೇಸರಿಸಿವೆ. ಸೃಷ್ಟಿಯ ಅನಾದಿತ್ವ ಅದರಂತೆ ಆತ್ಮದ ನಿತ್ಯತ್ವ, ಮತ್ತು ನಮ್ಮ ಆತ್ಮದಲ್ಲೇ ಅವಸ್ಥಿತಪಾದ ಪರಮಾತ್ಮ ಇವುಗಳನ್ನು ಒಂದಲ್ಲ ಒಂದು ವಿಧದಲ್ಲಿ ಕಲಿತಿರುವರು. ಇನ್ನು ಐವತ್ತು ವರುಷಗಳಲ್ಲಿ ಪ್ರಪಂಚದ ವಿದ್ಯಾವಂತರುಗಳೆಲ್ಲರೂ ವೇದದಲ್ಲಿ ಹೇಳಿರುವ ಸೃಷ್ಟಿ ಮತ್ತು ಆತ್ಮದ ಅನಾದಿತ್ವದಲ್ಲಿ ಮತ್ತು ದೇವತ್ವವೇ ಮಾನವನ ಚರಮಗುರಿ ಮತ್ತು ಪೂರ್ಣಾವಸ್ಥೆ ಎಂಬ ವಿಷಯದಲ್ಲಿ ನಂಬುವರು. ಈಗಲೂ ಕೂಡ ವಿದ್ಯಾವಂತರಾದ ಪಾದ್ರಿಗಳು ಬೈಬಲನ್ನು ಆ ದೃಷ್ಟಿಯಿಂದ ವಿವರಿಸುತ್ತಿರುವರು. ಅವರಿಗೆ ಹೆಚ್ಚು ಆಧ್ಯಾತ್ಮವಿದ್ಯೆ ಬೇಕು. ನಮಗೆ ಹೆಚ್ಚು ಐಚ್ಛಿಕ ಉನ್ನತಿಯ ಶಿಕ್ಷಣಬೇಕು ಎಂಬುದು ನನ್ನ ನಿರ್ಧಾರ.
ಭಾರತ ವರ್ಷದಲ್ಲಿರುವ ದೌರ್ಭಾಗ್ಯಕ್ಕೆಲ್ಲ ಮೂಲ ಅಲ್ಲಿರುವ ಬಡಜನರ ಸ್ಥಿತಿ. ಪಾಶ್ಚಾತ್ಯ ದೇಶಗಳಲ್ಲಿ ಬಡವರು ಪಿಶಾಚಿಗಳಂತೆ. ಅವರೊಂದಿಗೆ ಹೋಲಿಸಿದರೆ ನಮ್ಮ ಬಡವರು ದೇವತೆಗಳು. ಆದುದದಿಂದಲೇ ಅವರನ್ನು ಉದ್ಧಾರಮಾಡುವುದು ಸುಲಭ. ಹೀನಸ್ಥಿತಿಯಲ್ಲಿರುವ ನಮ್ಮ ಬಡವರಿಗೆ ನಾವು ಮಾಡಬೇಕಾದ ಮುಖ್ಯ ಕರ್ತವ್ಯವೆ, ಅವರಿಗೆ ವಿದ್ಯೆಯನ್ನು ಕೊಟ್ಟು ಅವರನ್ನು ಪುನಃ ಮಾನವರನ್ನಾಗಿ ಮಾಡುವುದು. ನಮ್ಮ ಹಿಂದೂ ರಾಜರಿಗೂ, ಅವರ ಪ್ರಜೆಗಳಿಗೂ ಇರುವ ಪರಸ್ಪರ ಕೆಲಸವೇ ಇದು. ಆದರೆ ಇದುವರೆವಿಗೂ ಆ ದಾರಿಯಲ್ಲಿ ಯಾವ ಪ್ರಯತ್ನವೂ ನಡೆದಿಲ್ಲ. ಪುರೋಹಿತರ ದರ್ಪ ಮತ್ತು ಪರದೇಶದ ಜನರ ಕೈಯ್ಯಲ್ಲಿ ಪಡೆದ ಸೋಲು ಅನೇಕ ಶತಮಾನದಿಂದ ಅವರನ್ನು ನೆಲಕ್ಕೆ ತುಳಿದಿದೆ. ಕೊನೆಗೆ ಭರತಖಂಡದ ಬಡವರು ತಾವು ಮಾನವರೆಂಬುದನ್ನು ಮರೆತಿರುವರು. ಆಲೋಚನಾಪರರನ್ನಾಗಿ ಮಾಡಬೇಕು. ಪ್ರಪಂಚದಲ್ಲಿ ಅವರ ಸುತ್ತಲೂ ಏನು ಆಗುತ್ತಿದೆ ಎಂಬುದನ್ನು ನೋಡಲು ಕಣ್ಣು ತೆರಯುವಂತೆ ಮಾಡಬೇಕು. ಆನಂತರ ಅವರ ಉದ್ಧಾರವನ್ನು ಅವರೇ ಮಾಡಿಕೊಳ್ಳುವರು. ಜನಾಂಗವೂ ಪ್ರತಿಯೊಬ್ಬ ಪುರುಷನೂ ಪ್ರತಿಯೊಬ್ಬ ಸ್ತ್ರೀಯೂ ತಮ್ಮ ವಿಮೋಚನೆಗೆ ತಾವೇ ಪ್ರಯತ್ನಪಡಬೇಕು. ಆಲೋಚನಾ ಶಕ್ತಿಯನ್ನು ಅವರಿಗೆ ಕೊಡಿ. ಅವರಿಗೆ ಬೇಕಾಗಿರುವ ಸಹಾಯ ಅದೊಂದೆ. ಅನಂತರ ಇವುಗಳ ಪರಿಣಾಮವಾಗಿ ಉಳಿದುದೆಲ್ಲ ಬಂದೇ ಬರುವುದು. ಸಾಮಗ್ರಿಗಳನ್ನು ಒದಗಿಸಿಕೊಡುವುದು ನಮ್ಮ ಕೆಲಸ. ಉಳಿದುದು ಪ್ರಕೃತಿನಿಯಮದ ಕೆಲಸ. ಮಿಕ್ಕ ಕೆಲಸವನ್ನು ಅವರೇ ಮಾಡುವರು. ಭರತಖಂಡದಲ್ಲಿ ಮಾಡಬೇಕಾದ ಕೆಲಸವಿದು. ಈ ಒಂದು ಆಲೋಚನೆಯೇ ನನ್ನ ಮನಸ್ಸಿನಲ್ಲಿ ಅನೇಕ ಕಾಲದಿಂದ ಇರುವುದು. ಭರತಖಂಡದಲ್ಲಿ ನಾನು ಇದನ್ನು ನೆರವೇರಿಸಲು ಆಗಲಿಲ್ಲ. ಅದಕ್ಕೋಸ್ಕರವೇ ನಾನು ಇಲ್ಲಿಗೆ ಬಂದುದು. ಬಡವರಿಗೆ ಕಲಿಸುವ ವಿದ್ಯೆಯಲ್ಲಿ ಒಂದು ತೊಂದರೆ ಇದೆ. ನೀವು ಪ್ರತಿಯೊಂದು ಹಳ್ಳಿಯಲ್ಲಿಯೂ ಒಂದು ಪಾಠಶಾಲೆಯನ್ನು ತೆರೆಯಬಹುದು. ಆದರೂ ಇದರಿಂದ ಅಷ್ಟು ಅನುಕೂಲವಾಗುವುದಿಲ್ಲ. ಇಂಡಿಯಾದಲ್ಲಿ ಬಡತನ ಬಹಳ ಹೆಚ್ಚು. ಬಡ ಹುಡುಗರು ತಮ್ಮ ತಂದೆಯ ಸಹಾಯಕ್ಕಾಗಿ ಹೊಲಕ್ಕೆ ಹೋಗುವರು. ಅಥವಾ ಜೀವನೋಪಾಯಕ್ಕೆ ಮತ್ತಾವುದಾದರೂ ಕಸುಬನ್ನು ಕಲಿಯುವರೇ ಹೊರತು ಶಾಲೆಗೆ ಬರುವುದಕ್ಕೆ ಆಗುವುದಿಲ್ಲ. ಬೆಟ್ಟ ಮಹಮದ್ದನ ಸಮೀಪಕ್ಕೆ ಬರಬೇಕು. ಬಡಹುಡುಗನು ವಿದ್ಯಾವ್ಯಾಸಂಗಕ್ಕೆ ಬರದೆ ಇದ್ದರೆ ವಿದ್ಯೆ ಅವನ ಬಳಿಗೆ ಬರಬೇಕು. ನಮ್ಮ ದೇಶದಲ್ಲಿ ಸ್ವಾರ್ಥತ್ಯಾಗಮಾಡುವ ಹಲವು ಸನ್ಯಾಸಿಗಳು ಹಳ್ಳಿಯಿಂದ ಹಳ್ಳಿಗೆ ಧರ್ಮವನ್ನು ಭೋಧನೆಮಾಡುತ್ತ ಹೋಗುತ್ತಿರುವರು. ಅವರಲ್ಲಿ ಕೆಲವರನ್ನು ಸೇರಿಸಿ ಧರ್ಮಭೋಧನೆಯೊಡನೆ ಲೌಕಿಕ ವಿಚಾರಗಳನ್ನು ಜನಗಳಿಗೆ ತಿಳಿಸುವಂತೆ ಮಾಡಿದರೆ, ಆ ಸನ್ಯಾಸಿಗಳು ಪ್ರತಿಯೊಂದು ಮನೆಗೂ ಹೋಗಿ ವಿದ್ಯೆಯನ್ನು ಕಲಿಸಬಹುದು. ಇದರಲ್ಲಿ ಒಬ್ಬರು ಸಂಜೆ ಒಂದು ಹಳ್ಳಿಗೆ ಮಾಯಾದೀಪ, ಭೂಪಟ, ಕೃತಕಗೋಳ ಇವುಗಳೊಂದಿಗೆ ಹೋದರೆ, ಗ್ರಾಮಸ್ಥರಿಗೆ ಖಗೋಳ ಶಾಸ್ತ್ರ ಭೂಗೋಳಶಾಸ್ತ್ರಗಳನ್ನು ಬೇರೆ ಬೇರೆ ದೇಶಗಳ ಕಥೆಯನ್ನು ಅವರಿಗೆ ಕಲಿಸುವುದರಿಂದ ಬಡವರಿಗೆ ತಮ್ಮ ಜೀವಮಾನವೆಲ್ಲ ಓದಿ ಕಲಿಯುವುದಕ್ಕಿಂತ ನೂರು ಪಾಲು ಹೆಚ್ಚು ಸುದ್ದಿಗಳನ್ನು ಕೇಳುವುದರಿಂದ ಒದಗಿಸಬಹುದು. ಇದಕ್ಕೆ ಒಂದು ಸಂಸ್ಥೆ ಬೇಕು. ದುಡ್ಡಿಲ್ಲದೆ ಒಂದು ಸಂಸ್ಥೆಯಾಗದು. ಒಂದು ಗಾಲಿಯನ್ನು ಚಲಿಸುವಂತೆ ಮಾಡುವುದು ಬಹಳ ಕಷ್ಟ. ಅದರೆ ಎಂದು ಅದನ್ನು ಎಂದು ಚಲಿಸುವಂತೆ ಮಾಡುವೆವೋ ಅಂದಿನಿಂದ ಬರುಬರುತ್ತ ಹೆಚ್ಚು ವೇಗದಲ್ಲಿ ಚಲಿಸುವುದು. ನಮ್ಮ ದೇಶದಲ್ಲಿ ಇದಕ್ಕೆ ಸಹಾಯವನ್ನು ಹುಡುಕಿ ಬೇಸತ್ತು ಅಲ್ಲಿಯ ಯಾವ ಶ್ರೀಮಂತರಿಂದಲೂ ಸಹಾನುಭೂತಿ ಸಿಕ್ಕದೆ, ಮಹಾರಾಜರ ಸಹಾಯದಿಂದ ಈ ದೇಶಕ್ಕೆ ಬಂದನು. ಅಮೇರಿಕಾ ದೇಶಿಯರಿಗೆ ಇಂಡಿಯಾ ದೇಶದ ಬಡಜನರು ಸತ್ತರೇನು, ಬದುಕಿದರೇನು? ನಮ್ಮ ಜನರೇ ತಮ್ಮ ಸ್ವಾರ್ಥವನ್ನಲ್ಲದೆ ಬೇರೆ ಏನನ್ನೂ ಆಲೋಚಿಸದೆ ಇರುವಾಗ ಅನ್ಯರಿಗೆ ಇದರ ಪಾಡೇಕೆ?
ಎಲೈ, ಮಹಾನುಭಾವನಾದ ದೊರೆಯ, ಕೆಲವು ದಿನ ಬಾಳುವೆಯದು ಈ ಜನ್ಮ. ಜಗತ್ತಿನ ಸುಖಭೋಗಗಳೆಲ್ಲ ಕ್ಷಣಿಕ. ಯಾರು ಪರರ ಹಿತಕ್ಕಾಗಿ ಬದುಕುವರೋ ಅವರೇ ಜೀವಂತರು. ಉಳಿದವರು ಜೀವಚ್ಛವಗಳು. ತಮ್ಮಂತಹ ಉದಾರ ಮನಸ್ಸಿನ ಭರತಖಂಡದ ರಾಜರೊಬ್ಬರು, ಅಧೋಗತಿಗಿಳಿದ ಭರತಖಂಡವನ್ನು ಪುನಃ ಮೇಲೆತ್ತುವುದಕ್ಕೆ ಎಷ್ಟೋ ಸಹಾಯಮಾಡಬಹುದು. ಮುಂದಿನ ಜನಾಂಗ ದೀರ್ಘಕಾಲ ತಮ್ಮನ್ನು ಸ್ಮರಿಸಿ ಕೊಂಡಾಡುವಂತಹ ಕೀರ್ತಿಯನ್ನು ಗಳಿಸಿಬಹುದು. ಅಜ್ಞಾನಾಂಧಕಾರದಲ್ಲಿ ಮುಳುಗಿ ನರಳುತ್ತಿರುವ ಕೊಟ್ಯಾನುಕೋಟಿ ಭಾರತೀಯರಿಗಾಗಿ ಭಗವಂತನು ತಮ್ಮ ಹೃದಯ ಮರುಗುವಂತೆ ಮಾಡಲಿ ಎಂಬುದೇ ನನ್ನ ಪ್ರಾರ್ಥನೆ.
ನಿಮ್ಮ ವಿವೇಕಾನಂದ.
ವಿವೇಕಾನಂದರು ಕೈಗಾರಿಕೆ, ವಿಜ್ಞಾನಗಳಿಗೆ ಹೆಚ್ಚು ಗಮನ ಹರಿಸುತ್ತಿದ್ದುದನ್ನು ಅವರ ಆ ಆಶಯವನ್ನು ಮೈಸೂರಿನ ಮಹಾರಾಜ ಚಾಮರಾಜ ವಡೆಯರ್ ಅವರಲ್ಲಿ ತೋಡಿಕೊಂಡದ್ದನ್ನು ಮೇಲೆ ಗಮನಿಸಿದ್ದೀರಿ. ಅವರು ೩೧ ಮೇ, ೧೮೯೩ ರಲ್ಲಿ ಹಡಗಿನಲ್ಲಿ ಅಮೆರಿಕೆಗೆ ಪ್ರಯಾಣ ಮಾಡಿದಾಗ ಭಾರತದ ಕೈಗಾರಿಕೋದ್ಯಮಿ ಜೆಮ್ ಶೆಡ್ಜಿ ಟಾಟಾ ಅವರು ಅದೇ ಹಡಗಿನಲ್ಲಿದ್ದು ವಿವೇಕಾನಂದರನ್ನು ಭೇಟಿಯಾದಾಗ ವಿವೇಕಾನಂದರು ಟಾಟಾ ಅವರನ್ನುದ್ದೇಶಿಸಿ “ನೀವು ನಮ್ಮ ದೇಶದಲ್ಲಿ ಜಪಾನಿನಲ್ಲಿ ತಯಾರಾದ ಬೆಂಕಿಪೊಟ್ಟಣವನ್ನೇಕೆ ಮಾರುತ್ತೀರಿ? ನೀವೇ ಏಕೆ ಒಂದು ಬೆಂಕಿಪಟ್ಟಣ ತಯಾರಿಸುವ ಕಾರ್ಖಾನೆ ತೆರೆಯಬಾರದು? ನೀವು ಕಾರ್ಖಾನೆ ತೆರೆದರೆ ದೇಶಕ್ಕೆ ಒಳ್ಳೆಯದಾಗುವುದು” ಬಂದು ಹೇಳಿದಾಗ ಯಾವ ಮಾತನ್ನು ಆಡದೆ ಜೆಮ್ ಶೆಡ್ಜಿ ಟಾಟಾ ಅವರು – ಐದು ವರ್ಷಗಳ ನಂತರ ೨೩ ನವೆಂಬರ್, ೧೮೯೯ ರಲ್ಲಿ ವಿವೇಕಾನಂದರಿಗೆ ಒಂದು ಪತ್ರ ಬರೆದು ‘ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನಾ ಕೇಂದ್ರವನ್ನು ತೆರೆಯಬೇಕೆಂದು ಇಚ್ಛಿಸಿದ್ದೇನೆ. ಅದಕ್ಕೆ ಮೂವತ್ತು ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ಕೊಡುತ್ತೀದ್ದೇನೆ. ನೀವು ಇದಕ್ಕೆ ಬೆಂಬಲ ಸೂಚಿಸಬೇಕು’ ಎಂದು ಬರೆದಾಗ ವಿವೇಕಾನಂದರು ಶಂಕರಿಪ್ರಸಾದ್ ಬಸು ಮೂಲಕ ಪ್ರಬುದ್ಧ ಭಾರತದ ಸಂಪಾದಕೀಯದಲ್ಲಿ ಹೀಗೆ ಬರೆಸುತ್ತಾರೆ. “ಭಾರತ ಉಳಿಯಬೇಕಾದರೆ, ಮುಂದುವರೆದು ಹೋಗಬೇಕಾದರೆ, ವಿಶ್ವದ ರಾಷ್ಟ್ರಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳಬೇಕಾದರೆ ಮೊದಲು ಆಹಾರ ಸಮಸ್ಯೆಯನ್ನು ಗೆಲ್ಲಬೇಕು. ಅದಕ್ಕೆ ಎರಡು ಮಾರ್ಗಗಳಿವೆ. ವ್ಯವಸಾಯ ಅಭಿವೃದ್ಧಿ ಮತ್ತು ಕೈಗಾರಿಕೆ. ಈ ಎರಡೇ ಮಾನವ ಜನಾಂಗ ಮುಂದುವರೆಯಲು ಬೇಕಾಗುವ ಅತ್ಯಂತ ಅವಶ್ಯಕ ಅಂಗಗಳು” ಎಂದು. ಇದನ್ನು ಗಮನಿಸಿದ ಸರ್ಕಾರ ಸಮ್ಮತಿಸಿ ಅದನ್ನು ‘ಭಾರತೀಯ ವಿಜ್ಞಾನ ಸಂಸ್ಥೆ’ ಎಂದು ಹೆಸರಿಸಿ (Indian Institute of Science) ಬೆಂಗಳೂರಿನಲ್ಲಿ ಸ್ಥಾಪಿಸಿತು. ಅಂದು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರೂ ಸಹ ಸಹಾಯ ಸಹಕಾರವನ್ನು ನೀಡಿ ಪ್ರೋತ್ಸಾಹಿಸಿದರು. ಅದು ಇಂದು ಬೆಂಗಳೂರಿನಲ್ಲಿ ಟಾಟಾ ಇನ್‌ಸ್ಟಿಟೂಟ್ ಎಂದೇ ಜನಪ್ರಿಯವಾಗಿದೆ, ವಿಜ್ಞಾನ ಕ್ಷೇತ್ರದಲ್ಲಿ ದಾಪುಗಾಲು ಹಾಕಿ ಮುಂದೆ ಮುಂದೆ ನಡೆಯತ್ತಿದೆ.
ಹೀಗೆ ಕನ್ನಡದ ನೆಲಕ್ಕೂ, ಸ್ವಾಮಿ ವಿವೇಕಾನಂದರಿಗೂ ಅಳಿಸಲಾಗದ ಸಂಬಂಧವಿದೆ. ಸಂಶೋಧಿಸಿದರೆ ಮತ್ತೆಷ್ಟು ಸಂಗತಿ ಸಿಗುತ್ತವೋ ಬಲ್ಲವರಾರು!
೨೦೦೧