ಪ್ರೀತಿಯ ಟೇಚರ್‌ಗೆ ಅಂಬೇಡ್ಕರ್ ಮಾಡುವ ವಿನಂತಿ,
ಹೃದಯ ಭಾರದಿ೦ದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಏಕೆಂದರೆ ಜನ ಸಾಮಾನ್ಯರು ಮಾರ್ಗದರ್ಶನಕ್ಕಾಗಿ ಯಾವ ಬುದ್ಧಿವಂತ ವರ್ಗದ ಕಡೆ ಮೊಗ ಮಾಡಿದ್ದಾರೋ ಆ ಬುದ್ಧಿವಂತ ವರ್ಗ ಅವರಿಗೆ ಸರಿಯಾದ ಮಾರ್ಗದಲ್ಲಿ ತಿಳಿವಳಿಕೆ ನೀಡುವಲ್ಲಿ ಅಪ್ರಾಮಾಣಿಕರಾಗಿರುತ್ತಾರೆ. ಇಲ್ಲಾ ತೀರ ಅಸಡ್ದೆ ಉಳ್ಳವರಾಗಿರುತ್ತಾರೆ. ಆದ್ದರಿಂದ ನಾನು ಹಂಬಲಿಸಿದ ಬದಲಾವಣೆ ಸಾಕಾರಗೊಳ್ಳಲು ನಿಮ್ಮ ಮೂಲಕ ಸಾಧ್ಯವಾಗಬಹುದೆಂಬ ಕೊನೆಯ ಭರವಸೆಯಿಂದ ನಾನು ನನ್ನೆಲ್ಲವನ್ನೂ ನಿಮ್ಮ ಮುಂದೆ ತೋಡಿಕೊಳ್ಳುತ್ತಿದ್ದೇನೆ. ‘ಒಬ್ಬ ಉತ್ತಮ ಶಿಕ್ಷಕ ಸಾವಿರ ಪುರೋಹಿತರಿಗೆ ಸಮನಾಗಿದ್ದಾನೆ’ ಎನ್ನುವ ರಾಬರ್ಟ್ ಜಿ. ಇಂಗರ್ಸಾಲ್ ಅವರ ಮಾತಿನಲ್ಲಿ ನನಗೆ ಪೂರ್ಣ ನಂಬಿಕೆ ಇದೆ. ಸಾವಿರ ಸಾವಿರ ಪಾದ್ರಿ, ಪುರೋಹಿತ, ಮುಲ್ಲಾಗಳು ಸಾಧಿಸಲಾರದ್ದನ್ನು ಟೀಚರ್ ಆದ ನೀವು ಸಾಧಿಸಬಲ್ಲಿರಿ ಎನ್ನುವುದರಲ್ಲಿ ನನಗೆ ಪೂರ್ಣ ವಿಶ್ವಾಸವಿದೆ.
ನಿಮಗೆ ತಿಳಿದಿರುವಂತೆ ನಾನು ಹುಟ್ಟಿದ್ದು ಅತ್ಯಂತ ಕೀಳೆಂದು ಸಮಾಜ ಪರಿಗಣಿಸಿದ ಮೆಹರ್ ಜಾತಿಯಲ್ಲಿ. ನಡೆದು ಬಂದ ದಾರಿ ಕಲ್ಲುಮುಳ್ಳಿನದು. ಕೊಳದ ನೀರನ್ನು ಕುಡಿಯುವಂತಿಲ್ಲ, ಗಾಡಿ ಹತ್ತುವಂತಿಲ್ಲ, ಕೌರಿಕ ಕೂಡ ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಶಾಲೆಯಲ್ಲಿ ಒಟ್ಟಿಗೆ ಕೂರುವಂತಿಲ್ಲ, ಜಟಕಾಗಾಡಿಯಲ್ಲಿ ಕುಳಿತ ಕಾರಣಕ್ಕೆ ಮೈ ಬಾಸುಂಡೆ ಬರುವ ಹಾಗೆ ಚಾವಟಿ ಏಟು ತಿಂದಿದ್ದೇನೆ. ಮನುಕುಲಕ್ಕೆ ಕಳಂಕ ಪ್ರಾಯವಾದ ಅನಿಷ್ಟ ಅಸ್ಪೃಶ್ಯತೆಯ ಪಾಪಕೂಪದಲ್ಲಿ ಬೆಂದು ಬಸವಳಿದು ಬಂದಿದ್ದೇನೆ. ಬದುಕಿನುದ್ದಕ್ಕೂ ಎದುರಾದ ಅಮಾನವೀಯ ಕಾರ್ಕೋಟಕ ವಿಷವನ್ನು ವಿಷಕಂಠನಂತೆ ನುಂಗಿಕೊಂಡು ಬೆಳಕಿನ ದಾರಿಯನ್ನು ಕಂಡು ಅದನ್ನು ಮನುಕುಲಕ್ಕೆ ನೀಡಿದ ತೃಪ್ತಿ ನನಗಿದೆ.
ನನಗೆ ಬರೋಡದ ಮಹರಾಜರು ನೀಡಿದ ಸಹಾಯ ಸಹಕಾರವನ್ನು ನಾನು ಎಂದೂ ಮರೆಯಲಾರೆ.
ಭಾರತ ದೇಶದ ಮೂಲವಮ್ನ ತಿಳಿಯಬೇಕಾದರೆ ಸಂಸ್ಕೃತ ಕಲಿಕೆ ಅನಿವಾರ್ಯ ಎಂದರಿತ ನಾನು ಅದನ್ನು ಕಲಿಯಬೇಕೆಂದು ಹಂಬಲಿಸಿದಾಗ ಅಧ್ಯಾಪಕರು ನನಗೆ ಆಡಿದ ಮಾತುಗಳನ್ನು ನೆನೆದರೆ ಮೈ ಜುಂ ಎನ್ನುತ್ತದೆ. “ಶೂದ್ರರು, ಅಸ್ಪೃಶ್ಯರು ಸಂಸ್ಕೃತ ಕಲಿಯಬಾರಮ, ನಿಮ್ಮ ನಾಲಿಗೆ ಸೋಕಿದರೆ ಸಾಕು ಅದು ಅಪವಿತ್ರವಾಗುತ್ತದೆ, ಅದನ್ನು ಹೇಳಿಕೊಳ್ಳುವವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ.” ಎಂಥ ಅಂಧಾಭಿಮಾನ, ಮೂಢನಂಬಿಕೆ! ನಾನು ಸಂಸ್ಕೃತವನ್ನು ಕಲಿತು ಈ ದೇಶದ ಸಂಸ್ಕೃತಿಯ ನೆಲೆಯನ್ನು ಚೆನ್ನಾಗಿ ಆರಿತುಕೊಂಡಿದ್ದೇನೆ.
ಅಮೇರಿಕಾದಲ್ಲಿ ನಾನು ಆಳವಾಗಿ ಅಧ್ಯಯನ ಮಾಡಿ ಜ್ಞಾನಗಳಿಸಿಕೊಂಡಿದ್ದೇನೆ. ನನ್ನ ವಿದ್ವತ್ತನ್ನು ಗುರುತಿಸಿ ಅಮೇರಿಕಾ ನನಗೆ ಡಾಕ್ಟರೇಟ್ ಪದವಿ ನೀಡಿದೆ. ಹೊರದೇಶದವರು ತೋರಿದ ಪ್ರೀತಿ ವಿಶ್ವಾಸಗಳನ್ನು ನಾನು ಹುಟ್ಟಿದ ನನ್ನ ದೇಶದ ಜನ ನನಗೆ ಏಕೆ ತೋರಲಿಲ್ಲ? ಅದಕ್ಕೆ ನಾನು ಅಸ್ಪೃಶ್ಯನಾಗಿ ಹುಟ್ಟಿದ ಕಾರಣ ಎನ್ನುವುದನ್ನು ಅರಿತಿದ್ದೇನೆ. ಮನುಸ್ಮೃತಿ ಭಾರತೀಯರ ಮೆದುಳನ್ನು ಕತ್ತಲೆಯ ಕೂಪವನ್ನಾಗಿಸಿದೆ. ಮನುಷ್ಯ ಮನುಷ್ಯರ ನಡುವೆ ದೊಡ್ಡ ಕಂದಕವನ್ನು ಅದು ನಿರ್ಮಿಸಿದೆ ಮನುಷ್ಯರನ್ನು ಅತ್ಯಂತ ನಿರ್ವೀರ್ಯರನ್ನಾಗಿಸುವ ಎಲ್ಲ ಹುನ್ನಾರಗಳನ್ನು ಅದು ತನ್ನ ಎದೆಯ ತುಂಬ ತುಂಬಿಕೊಂಡಿದೆ. ಆದ ಕಾರಣವೆ ನಮ್ಮ ಪುಣ್ಯ ಭರತ ಭೂಮಿಯಲ್ಲಿ ಜನರು ಷಂಡರಾದರು, ದೇಶ ಅನ್ಯರ ಆಳ್ವಿಕೆಗೆ ತುತ್ತಾಗಿ ಗುಲಾಮೀಯವಾಯ್ತು. ಈ ಹಿನ್ನೆಲೆಯಲ್ಲಿ ನಾನು ಭಾರತೀಯ ಸಂಸ್ಕೃತಿಯನ್ನು ಆಮೂಲಾಗ್ರವಾಗಿ ಹಗಲು ಇರುಳೆನ್ನದೆ ನಿದ್ದೆಗೆಟ್ಟು ಅಧ್ಯಯನ ಮಾಡಿದ್ದೇನೆ. ಅದರ ಅಂತಃಶಕ್ತಿಯನ್ನು ಅರಿತುಕೊಂಡಿದ್ದೇನೆ. ಋಗ್ವೇದಕ್ಕೆ ದಲಿತ ಮಹಿಳೆಯರೂ ಮಂತ್ರಗಳನ್ನು ನೀಡಿದ್ದಾರೆ. ಉಪನಿಷತ್ತುಗಳನ್ನು ರಚಿಸಿದವರು ಬ್ರಾಹ್ಮಣರಲ್ಲ ಕ್ಷತ್ರಿಯರು ಎಂಬುದು ಇನ್ನೂ ಜನರ ತಿಳಿವಳಿಕೆಗೆ ಬಂದೇ ಇಲ್ಲ. ಮಹತ್ತರವಾದುದನ್ನು ನೀಡಿದವರೆಲ್ಲ ಬ್ರಾಹ್ಮಣೇತರರು ಎಂಬುದನ್ನು ಜನ ಇನ್ನೂ ತಿಳಿಯಬೇಕಾಗಿದೆ. ಭಾರತದ ಈ ಅಂತಃಶಕ್ತಿಗೆ ಬಂದಳಿಕೆಗಳಂತೆ ಅಮರಿಕೊಂಡ ಪುರೋಹಿತಶಾಹಿ ತನ್ನ ಸ್ವಾರ್ಥಕ್ಕಾಗಿ ಎಲ್ಲ ಹುನ್ನಾರಗಳನ್ನು ಹೆಣೆದಿದೆ. ಬ್ರಾಹ್ಮಣ ಧರ್ಮ ಹಿಂದೂ ಧರ್ಮದ ವಿಷವಾಗಿ ಪರಿಣಮಿಸಿರುವುದನ್ನು ನನ್ನ ಆಳವಾದ ಅಧ್ಯಯನ ಮತ್ತು ಜೀವನಾನುಭವದಿಂದ ಅರಿತುಕೊಂಡಿದ್ದೇನೆ. ದೇಶ ಉಳಿಯಬೇಕಾದರೆ, ಮನುಕುಲ ಒಂದು ಎಂಬ ಭಾವನೆ ಬರಬೇಕಾದರೆ ಬ್ರಾಹ್ಮಣ ಧರ್ಮದ ಅನಿಷ್ಟ ಪದ್ಧತಿಗಳ, ವರ್ಗ, ವರ್ಣ, ಜಾತಿಗಳ ನಾಶ ಆಗಲೇಬೇಕು ಎಂಬುದನ್ನು ನನ್ನ ಬದುಕಿನ ಉದ್ದಕ್ಕೂ ತಿಳಿಯಪಡಿಸುತ್ತಾ ಬಂದಿದ್ದೇನೆ. ಆದ ಕಾರಣವೆ ಅಸಮಾನತೆಯ ಮನುಸ್ಮೃತಿಯನ್ನು ಸುಟ್ಟು ಸರ್ವಮಾನ್ಯವಾದ ಸಂವಿಧಾನವನ್ನು ರಚಿಸುವ ಶಕ್ತಿಯನ್ನು ಕಾಲ ನನಗೆ ಕೊಟ್ಟಿದೆ. ಆ ಕಾಲಕ್ಕೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಭಾರತದ ಸರ್ವಶ್ರೇಷ್ಠ ಧರ್ಮಗ್ರಂಥ ಎಂದರೆ ಸಂವಿಧಾನವೆ ಆಗಿದೆ ಎಂಬುದನ್ನು ತಿಳಿಯ ಹೇಳಿ.
ಈ ದೇಶದ ಜಾತಿಯ ಕ್ರೌರ್ಯ ಎಷ್ಟು ಎಂಬುದು ಅನುಭವಿಸಿದ ನನಗೆ ಚೆನ್ನಾಗಿ ಗೊತ್ತು. ಒಮ್ಮೆ ನನ್ನಲ್ಲಿಗೆ ಹೊರದೇಶದ ಜನ ಬಂದರು. ಈ ದೇಶದ ಜಾತಿ ವ್ಯವಸ್ಥೆಯನ್ನು ಅರಿಯಲು ಅವರು ನೆಹರೂ ಹತ್ತಿರ ಹೋಗಿದ್ದರಂತೆ. ನೆಹರೂ ಅದಕ್ಕೆ ಸಮರ್ಥವ್ಯಕ್ತಿ ನಾನು ಎಂದು ಅವರನ್ನು ನನ್ನಲ್ಲಿಗೆ ಕಳುಹಿಸಿದ್ದರು. ನಾನು ಅವರಿಗೆ ಹೇಳಿದೆ “ಅಧ್ಯಯನದಿಂದ ನೀವು ಈ ದೇಶದ ವ್ಯವಸ್ಥೆಯನ್ನು ಅರಿಯಲು ಸಾಧ್ಯವಿಲ್ಲ. ನೀವು ನೆಹರೂ ಅವರಲ್ಲಿಗೆ ಹೋಗಿ ನನ್ನನ್ನೂ ಸೇರಿದಂತೆ ಪುರಿಜಗನ್ನಾಥ ದೇವಸ್ಥಾನಕ್ಕೆ ಭೇಟಿಕೊಡಲು ಅನುಮತಿ ಪತ್ರವನ್ನು ಪಡೆದು ಬನ್ನಿ. ಒಟ್ಟಿಗೆ ಅಲ್ಲಿಗೆ ಹೋಗೋಣ” ಎಂದು ತಿಳಿಸಿದೆ. ಅದರಂತೆ ಅವರು ಪಡೆದುಕೊಂಡು ಬಂದರು. ದೇವಸ್ಥಾನಕ್ಕೆ ಹೋದೆವು. ಅಲ್ಲಿಯ ಪುರೋಹಿತರು ಹೊರದೇಶದವರನ್ನು ಒಳಗೆ ಬಿಟ್ಟರು. ಈ ದೇಶದವನೇ ಆದ ನನ್ನನ್ನು ತಡೆದರು. ಆಗ ‘ಅವರನ್ನು ಯಾಕೆ ತಡೆಯುತ್ತೀರಿ? ಅವರಿಗೂ ಪ್ರಧಾನಿ ನೆಹರು ಅನುಮತಿ ಪತ್ರ ಕೊಟ್ಟಿದ್ದಾರೆ’ ಎಂದು ಹೊರ ದೇಶದವರು ಹೇಳಿದಾಗ ಅವರು ಕೆಳಜಾತಿಯವರು, ಅಸ್ಪೃಶ್ಯರು, ನಾವು ಬಿಡುವುದಿಲ್ಲ ಎಂದಾಗ ನಾನು ಹೇಳಿದೆ ‘ಇದು ಈ ದೇಶದ ಜಾತಿ ವ್ಯವಸ್ಥೆ, ಅರಿವಾಯಿತೆ’ ಎಂದು. ಹೊರದೇಶದವರು ಅವಕ್ಕಾದರು. ನನ್ನನ್ನು ಕಾಡಿದ ಕೋಟಿ ಕೋಟಿ ನೋವುಗಳಲ್ಲಿ ಇದೂ ಒಂದು ಎಂದಷ್ಟೆ ನಾನು ನಿಮಗೆ ತಿಳಿಸಲು ಇಚ್ಚಿಸುತ್ತೇನೆ.
ನನಗೆ ಗೊತ್ತು. ಹಿಂದೆಂದಿಗಿಂತಲೂ ಇಂದು ಭಾರತದಲ್ಲಿ ಜಾತಿಯ ಕ್ರೌರ್ಯ ತನ್ನ ಹೆಡೆಯನ್ನು ಪ್ರಭಲವಾಗಿ ಎತ್ತಿದೆ ಎಂದು. ಅದು ಇಡೀ ಭಾರತೀಯರನ್ನು ನಿರ್ವೀರ್ಯರನ್ನಾಗಿಸುತ್ತಿದೆ. ಅದು ಸ್ವಾರ್ಥಮೂಲವಾದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದೆ. ಮನುಷ್ಯ ಮನುಷ್ಯರ ನಡುವೆ ಬೆಸೆಯಲಾರದಷ್ಟು ಬಿರುಕನ್ನು ಉಂಟು ಮಾಡಿದೆ. ಇದನ್ನು ತೊಡೆದಲ್ಲದೆ ಬದುಕಿಗೆ ಯಾವ ಭರವಸೆಯೂ ಇಲ್ಲ. ಇದನ್ನು ತಡೆಯಬಲ್ಲ ಶಕ್ತಿ ಇರುವುದು ಟೀಚರ್ ಆದ ನಿಮಗೆ ಮಾತ್ರ ಎನ್ನುವುದಮ್ನ ನೀವು ಮರೆಯದಿರಿ.
ಮುಖ್ಯವಾಗಿ ಎಲ್ಲರಂತೆ ಕೆಳವರ್ಗದವರಿಗೂ ಬದುಕುವ ಹಕ್ಕಿದೆ ಎಂಬುದನ್ನು ನೀವು ಮನವರಿಕೆ ಮಾಡಬೇಕು. ಈ ನೆಲ, ಜಲ, ಗಾಳಿ, ಬೆಂಕಿ, ಬೆಳಕು ಯಾರ ಸೊತ್ತೂ ಅಲ್ಲ, ಅವು ಎಲ್ಲರ ಸೊತ್ತು. ಕೆಳವರ್ಗದವರಿಗೆ ಬೇಕಾಗಿರುವುದು ಅನುಗ್ರಹವಲ್ಲ, ಆತ್ಮಗೌರವ; ದಾನವಲ್ಲ-ಸಮಾನತೆ. ಸ್ವಸಹಾಯ, ಆತ್ಮೋನ್ನತಿ, ಆತ್ಮಗೌರವಗಳನ್ನು ಎಲ್ಲರೂ ರೂಢಿಸಿಕೊಳೃಬೇಕು. ಹಂಗಿನ ಅಮೃತಕ್ಕಿಂತ ಸ್ವಂತದ ವಿಷಲೇಸು ಎಂಬುದನ್ನು ಅರಿತು ಕೊಳ್ಳಬೇಕು. ಈಮಾತು ದೇಶಕ್ಕೂ ಅನ್ವಯಿಸುವಂಥದು. ಹೊರದೇಶದ ಸಾಲ ಅಂತಿಮವಾಗಿ ಶೂಲವಾಗಿ ಪರಿಣಮಿಸುತ್ತದೆ, ಎಂಬ ಎಚ್ಚರ ಇರುವುದೊಳಿತು. ಮಕ್ಕಳಲ್ಲಿ ಜೀವನ ವಿಧಾನವನ್ನು ಸುಧಾರಿಸಿಕೊಳ್ಳುವುದನ್ನು ಕಲಿಸಿ. ಅನುಕರಣೆಯಿಂದ ಬದುಕು ಹಸನಾಗದು ಎಂಬ ಅರಿವನ್ನು ಮೂಡಿಸಿ. ಸ್ವಂತಿಕೆ, ಸ್ವಾಭಿಮಾನಗಳು ಸಂಸ್ಕೃತಿಯ ತಾಯಿಬೇರುಗಳು. ಅವನ್ನು ರೂಢಿಸಿ. ಕೇವಲ ದೈಹಿಕ ಹಸಿವನ್ನು ನೀಗಿಸಿಕೊಳ್ಳುವುದೆ ಜೀವನದ ಪರಮ ಗುರಿ ಎಂಬ ಭ್ರಮೆಯನ್ನು ಕಳಚಿ ಹಾಕಿ. ಸಾಂಸ್ಕೃತಿಕ ಜೀವನವೇ ಸರ್ವೊ೬ತೃಷ್ಟವಾದುದು ಎಂಬುದನ್ನು ಮನವರಿಕೆ ಮಾಡಿಕೊಡಿ.
‘ಮೂಕನಾಯಕ’ ಪತ್ರಿಕೆಯ ಮೂಲಕ, ಬಹಿಷ್ಕೃತ ಹಿತಕಾರಿಣಿ ಸಭಾದಮೂಲಕ, ಸರಸ್ವತಿ ವಿಲಾಸ ಮಾಸಿಕದ ಮೂಲಕ, ಬಹಿಷ್ಕೃತ ಭಾರತ ಪಾಕ್ಷಿಕದ ಮೂಲಕ ಹೀಗೆ ಅನೇಕ ಮಾರ್ಗಗಳಲ್ಲಿ ನನ್ನ ವಿಚಾರಗಳನ್ನು ಜನತೆಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದೇನೆ. ಅವುಗಳನ್ನು ಅಧ್ಯಯನ ಮಾಡಿ.
ನಾನು ಕೇಂದ್ರದ ಕಾನೂನು ಮಂತ್ರಿಯಾಗಿ ಒಂದು ಬಿಲ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದೆ. ಅದು “ಹಿಂದೂ ಕೋಡ್ “ಬಿಲ್. ದತ್ತು ತೆಗೆದುಕೊಳ್ಳುವ, ಹಿಂದೂ ಸ್ತ್ರೀ ವಿವಾಹ ವಿಚ್ಛೇದನ ಪಡೆಯುವ, ಸ್ತ್ರೀ ಆಸ್ತಿ ಹೊಂದುವ ಹಕ್ಕನ್ನು ನೀಡುವ, ಏಕ ಪತ್ನಿತ್ವವನ್ನು ಕಡ್ಡಾಯಗೊಳಿಸುವ ಮುಂತಾದುವುಗಳ ಜೊತೆಯಲ್ಲಿ ಬಹು ಮುಖ್ಯವಾದ, ಪ್ರತಿಯೊಂದು ಧರ್ಮಕ್ಕೂ ಸಕ್ರಮವಾದ ತರಬೇತಿ ಪಡೆದ ಪುರೋಹಿತರು ಇರಬೇಕು, ಅವರು ಯಾವುದೇ ಜಾತಿಗೆ ಸೇರಿದವ- ರಾಗಿರಬಹುದು ಎಂಬ ಅಂಶಗಳನ್ನು ಆ ಬಿಲ್ ಒಳಗೊಂಡಿತ್ತು. ಜಾತಿಯ ಆಧಾರದ ಮೇಲೆ ಪುರೋಹಿತ- ರಾಗುವದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಅರಿವಿನಿಂದ ಆ ಬಿಲ್ ಅನ್ನು ಮಂಡಿಸಲಾಗಿತ್ತು. ಆದರೆ ಆ ಬಿಲ್‌ಅನ್ನು ಅತ್ಯಂತ ನಾಜೂಕಿನಿಂದ ಬೀಳಿಸಲಾಯ್ತು. ಭಾರತದ ಸಾಂಪ್ರದಾಯಿಕ ಮನಸ್ಸು ಪರಿವರ್ತನೆಗೊಳ್ಳಲು ಇನ್ನೂ ಅದೆಷ್ಟು ಶತಮಾನಗಳು ಬೇಕೋ ತಿಳಿಯದು.
ಕೊನೆಯದಾಗಿ ನಾನು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮಕ್ಕೆ ಸೇರಿದ್ದು. ನನ್ನ ಜೀವಿತದ ಬಹುಕಾಲವನ್ನ ಹಿಂದೂವಾಗಿಯೆ ಇದ್ದು ಅದರ ಕಳಂಕವನ್ಪು ತೊಡೆಯಲು ಯತ್ನಿಸಿ ಹೋರಾಡಿದೆ. ಬ್ರಾಹ್ಮಣಶಾಹಿ ಅದಕ್ಕೆ ಅವಕಾಶ ಕೂಡಲಿಲ್ಲ. ಹಿಂದೂ ಧರ್ಮದ ಈ ಕೆಸರುಸುಬಿನಿಂದ ಬಿಡಿಸಿಕೊಂಡು ಗೌತಮ ಬುದ್ಧನ ನಿರ್ಮಲ ಆಕಾಶಸದೃಶ ಧರ್ಮಕ್ಕೆ ಜಿಗಿದೆ. ಮುಕ್ತವಾದ ವಾತಾವರಣದಲ್ಲಿ ನಿರಾತಂಕವಾಗಿ ಉಸಿರಾಡುವ ಅವಕಾಶ ನನ್ನದಾಯ್ತು.
ನನ್ನ ಪ್ರೀತಿಯ ಟೀಚರ್, ಈ ದೇಶದ ಕಳಂಕವಾದ ವರ್ಗ, ವರ್ಣ, ಜಾತಿ, ಅಸ್ಪೃಶ್ಯತೆ, ಮೂಢನಂಬಿಕೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮುಂತಾದಪುಗಳನ್ನ ತೊಡೆಯಲು ನೀವು ಕಂಕಣ ಬದ್ಧರಾಗಬೇಕೆಂದು ನಾನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಅದಕ್ಕೆ ಮೊದಲು ಬೇಕಾದುದು ಶಿಕ್ಷಣ, ನಂತರ ಸಂಘಟನೆ, ಅಂತಿಮವಾಗಿ ಹೋರಾಟ. ಈ ಮಾರ್ಗದಿಂದ ಘನಿಘಟ್ಟಿರುವ ಕ್ರೌರ್ಯ ಅಳಿಯಲಿ, ಮನುಕುಲದ ಕಣ್ಣು ತೆರೆಯಲಿ ಎಂದು ಹಾರೈಸಿತ್ತೇನೆ.
ವಂದನೆಗಳು
ಇಂತು
ಡಾ|| ಅಂಬೇಡ್ಕರ್
” ೨೦೦೨
* ಡಾ. ಅಂಬೇಡ್ಕರ್ ರವರು ಇಂದು ಬದುಕಿದ್ದರೆ ಶಿಕ್ಷಕರಿಗೆ ಬರೆಯಬಹುಧಾಗಿದ್ದ ಪತ್ರವೊ೦ದನ್ನು ಇಲ್ಲಿ
ಬರೆಯಲಾಗಿದೆ -ಲೇಖಕ.