ಮೂಲತಃ ಬಂಗಾಲಿಗಳಾದ ಜಾನಕಿನಾಥ ಬೋಸ್ ಮತ್ತು ಪ್ರತಿಭಾ ದೇವಿ ಅವರಿಗೆ ಒರಿಸ್ಸಾದ ಕಟಕ್‌ನಲ್ಲಿ ದಿನಾಂಕ ೨೩.೧.೧೮೯೩ರಂದು ಸುಭಾಷ್ ಜನಿಸಿದರು. ಒಟ್ಟು ಹದಿನಾಲ್ಕು ಜನ ಮಕ್ಕಳಲ್ಲಿ ಸುಭಾಷ್ ಆರನೆಯವರು. ಸುಭಾಷರ ಹೆಂಡತಿ ಎಮಿಲ್‌ಷೆಂಕಿಲ್ ವಿಯನ್ನಾದಲ್ಲಿ ವಾಸವಾಗಿದ್ದರು. ಅವರಿಗೆ ಅನಿತಾಬೋಸ್ ಎಂಬ ಒಬ್ಬಳೇ ಮಗಳು. ೧೯೬೧ ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಆಕೆ ವಿವಾಹವಾಗಿ ಅಮೇರಿಕಾದಲ್ಲಿ ಇದ್ದಾರೆ. ಸುಭಾಷ್ ದಿನಾಂಕ ೧೮.೮.೧೯೪೫ರಲ್ಲಿ ತೈವಾನಿನ ತೈಪೇ ವಿಮಾನ ಅಪಘಾತದಲ್ಲಿ ನಿಧನರಾವರು. ಈ ನಿಧನ ವಿವಾದದಲ್ಲಿದೆ.
ನೇತಾಜಿ ನಿಧನರಾಗಿಲ್ಲ ಎಂಬ ಅನುಮಾನ ಅನುಮಾನವಾಗಿಯೆ ಉಳಿದಿದೆ. ನೆಹರು ನೇಮಿಸಿದ ಸಮಿತಿಯ ಸದಸ್ಯರಾದ ಮೇಜರ್ ಜನರಲ್ ಶಾನ್ ನಾಜ್ ಖಾನ್, ನೇತಾಜಿಯ ಹಿರಿಯ ಅಣ್ಣ ಎಸ್. ಸಿ. ಬೋಸ್ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ಮುಖ್ಯ ಕಮೀಷನರ್ ಎಸ್. ಎನ್. ಮಿಶ್ರ ಇವರುಗಳು ಕಲ್ಕತ್ತ, ಬ್ಯಾಂಕಾಕ್, ಸೈಗಾನ್ ಮತ್ತು ಟೋಕಿಯೋಗಳಲ್ಲಿ ಸಾವಿರಾರು ಸಾಕ್ಷಿಗಳನ್ನು ವಿಚಾರಣೆ ಮಾಡಿ ನೇತಾಜಿ ಮೃತರಾಗಿರುವರು ಎಂಬ ವರದಿ ನೀಡಿದ್ದಾರೆ. ಜನರು ಮತ್ತೆ ಒತ್ತಾಯಿಸಿದ್ದರ ಮೇಲೆ ೧೯೭೦ ರಲ್ಲಿ ರಾಷ್ಟ್ರಪತಿಯವರು ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿ ನ್ಯಾಯಾಧೀಶರಾದ ಜೆ. ಡಿ. ಕೋಸ್ಲ ಅವರನ್ನು ನೇಮಿಸಿ ಆ ತನಿಖೆಯ ವರದಿಯೂ ಮೃತರಾಗಿರು- ವುದನ್ನು ಖಚಿತ ಪಡಿಸಿದೆ. ಶಹನಾಜ್ ಮತ್ತು ಮಿಶ್ರ ಆವರ ಆಭಿಪ್ರಾಯದಂತೆ ನೇತಾಜಿಯವರ ಚಿತಾಭಸ್ಮ ಟೋಕಿಯೋದ ರಂಕೋಜಿ ದೇವಾಲಯದಲ್ಲಿದೆ. ಆದರೂ ನೇತಾಜಿ ಸಾವಿನ ಊಹಾಫೋಹಗಳು ಕೊನೆಗೊಂಡಿಲ್ಲ.
ನೇತಾಜಿಯವರ ತಂದೆ ಸುಪ್ರಸಿದ್ಧ ವಕೀಲರು. ಪಬ್ಲಿಕ್ ಪ್ರಾಸಿಕ್ಯೂಟರ್ ಸಹ ಆಗಿದ್ದರು. ೧೯೧೨ ರಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಆಗಿದ್ದರು. ತತ್ವಜ್ಞಾನದಲ್ಲಿ ಆಳವಾದ ಪಾಂಡಿತ್ಯ ಪಡೆದಿದ್ದರು. ಗೌರವಾನ್ವಿತ ವ್ಯಕ್ತಿಯಾಗಿದ್ದ ಅವರ ಕುಟುಂಬದಲ್ಲಿ ಸಭ್ಯತೆಯ ವಾತಾವರಣವಿತ್ತು. ಅ ಪ್ರಭಾವ ನೇತಾಜಿಯವರ ಮೇಲಾಯ್ತು.
ನೇತಾಜಿಯವರ ಪ್ರಾರಂಭಿಕ ಶಿಕ್ಷಣ ಇಂಗ್ಲಿಷಿನಲ್ಲಿ ಆಯ್ತು. ಅವರಿಗೆ ಓದು ಹೆಚ್ಚು ಪ್ರಿಯ. ಕ್ರೀಡೆ ಅಷ್ಟಕ್ಕಷ್ಟೇ. ಪ್ರಕೃತಿ, ಪ್ರಾಣಿ ಪಕ್ಷಿಗಳು ಎಂದರೆ ಪಂಚಪ್ರಾಣ. ಮಿತಭಾಷಿ. ಚಿಂತನ ಮಂಥನ ಅವರ ಸ್ವಭಾವ. ಮಾತನಾಡಿದರೆ ಕೇಳುಗರು ಮಾರುಹೋಗುವಂಥ ವಿಚಾರ ಮಂಡನೆ. ಧಾರ್ಮಿಕ ಪ್ರವೃತ್ತಿ ಸಂಯಮದ ವರ್ತನೆ, ಸಾಧು ಸಂತರ ಬಗ್ಗೆ ಗೌರವ, ಯೋಗದಲ್ಲಿ ಆಸಕ್ತಿ, ಸಾಮಾನ್ಯ ಚಿಂತನೆಗಿಂತ ಮೀರಿದ ಅನುಭಾವದ ಹುಡುಕಾಟ.
ಬಾಲ್ಯದಲ್ಲಿ ಅವರಿಗೆ ವೀರ ಗೀತೆಗಳನ್ನು, ಯುದ್ಧ ಗೀತೆಗಳನ್ನು ಮೈಮರೆತು ಕೇಳುವ ಆಸಕ್ತಿ. ಜೊತೆಗೆ ರವೀಂದ್ರನಾಥ ಠಾಕೂರರ ಗೀತೆಗಳ ಪ್ರಭಾವ. ಒಳಹೊರಗನ್ನು ಒಂದಾಗಿ ಬೆಸೆದಿರುವ ಅವ್ಯಕ್ತ ಶಕ್ತಿಯೊಂದರ ಹೊಳಹು. ಅದನ್ನು ಹಿಡಿವ ತಾದಾತ್ಮ್ಯತೆ ಬಾಲಕನಲ್ಲಿ ಕಂಡು ಬರುತ್ತಿತ್ತು.
ಅವರ ಹದಿನೈದನೆಯ ವಯಸ್ಸಿನಲ್ಲಿ ಅಕಸ್ಮಿಕವಾಗಿ ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ ವಿಚಾರಗಳ ಪರಿಚಯ ಓದಿದಂತೆ ಬಿಡಿಸಿಕೊಳ್ಳಲಾಗದ ಸೆಳೆತ. ಶಾಲೆಯ ಉಪಾಧ್ಯಾಯರಿಂದ ಪ್ರೋತ್ಸಾಹ. ಸುಪ್ತವಾಗಿದ್ದ ಚೈತನ್ಯದ ಜಾಗೃತಿ. ಅಸ್ಪಷ್ಟವಾಗಿ ಕೈ ಬೀಸಿ ಕರೆಯುತ್ತಿದ್ದುದು ಈಗ ಸ್ಪಷ್ಟವಾಗಿ ಗೋಚರಿಸತೊಡಗಿತು “FREEDOM…..FREEDOM IS THE SONG OF THE SOUL”
“ಸ್ವಾತಂತ್ರ್ಯವೇ ಈ ವಿಶ್ವದ ಗುರಿ. ಪ್ರೀತಿಯೂ ಅಲ್ಲ, ದ್ವೇಷವು ಅಲ್ಲ; ಸುಖವೂ ಅಲ್ಲ ದುಃಖವೂ ಅಲ್ಲ; ಜನನವೂ ಅಲ್ಲ, ಮರಣವೂ ಅಲ್ಲ; ಧರ್ಮವೂ ಅಲ್ಲ, ಅಧರ್ಮವೂ ಅಲ್ಲ; ಇದಾವುದೂ ಅಲ್ಲ, ಇದಾವುದೂ ಅಲ್ಲ, ಸ್ವಾತಂತ್ರ್ಯವೇ ವಿಶ್ವದ ಗುರಿ”.
ವಿವೇಕಾನಂದರ ಈ ಮೇಲಿನ ವಿಚಾರಗಳು ನೇತಾಜಿ ಆವರ ಹೃನ್ಮನಗಳನ್ನು ಸೂರೆಗೊಂಡುವು ಮುಂದುವರೆದು ವಿವೇಕಾನಂದರು ಹೇಳಿದ “ಸತ್ಯ”-ನನ್ನ ದೇವರು; “ವಿಶ್ವ”-ನನ್ನ ರಾಷ್ಟ್ರ ಎಂಬ ಮಾತು ಅವರನ್ನು ಗಾಢಚಿಂತನೆಗೆ ತೊಡಗಿಸಿತು. ಸತ್ಯದ ಅನ್ವೇಷಕನಾಗಿ, ಸ್ವಾತಂತ್ರ್ಯದ ಹರಿಕಾರನಾಗಿ ವಿಶ್ವವೈಶಾಲ್ಯದ ಹಂದರದಲ್ಲಿ ನೇತಾಜಿ- ಯವರ ಪ್ರಾಣಪಕ್ಷಿ ಗರಿಗೆದರಿ ಹಾರಲಾರಂಭಿಸಿತು. ವಿವೇಕಾನಂದರ ಸನ್ಯಾಸಿಗೀತೆ ಅವರ ಮೇಲೆ ಪ್ರಬಲವಾದ ಪರಿಣಾಮ ಬೀರಿತು. ಆ ಗೀತೆಯ ಕೆಲವು ಸಾಲುಗಳು ಹೀಗಿವೆ. ಅದನ್ನು ಕುವೆಂಪು ಅನುವಾದಿಸಿದ್ದಾರೆ.
ಏಳು ಮೇಲೇಳೇಳು ಸಾಧುವೆ ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ, ಈ ತಾಯ್ನಾಡನು.
ಇರುವುದೊಂದೇ! ನಿತ್ಯ ಮುಕ್ತನು, ಸರ್ವಜ್ಞಾನಿಯು ಆತ್ಮನು!
ನಾಮ ರೂಪಾತೀತನಾತನು; ಪಾಪ ಪುಣ್ಯಾತೀತನು!
ವಿಶ್ವ ಮಾಯಾಧೀಶನಾತನು ಕನಸು ಕಾಣುವನಾತನು!
ಸಾಕ್ಷಿಯಾತನು; ಪ್ರಕೃತಿ ಜೀವರ ತೆರದಿ ತೋರುವನಾತನು!
ಎಲ್ಲಿ ಮುಕ್ತಿಯ ಹುಡುಕುವೆ?-ಏ
ಕಿಂತು ಸುಮ್ಮನೆ ದುಡುಕುವೆ?
ಇತ್ಯಾದಿ ಸಾಲುಗಳು ಆವರ ಅಂತಃಶ್ಚೇತನವನ್ನು ಪ್ರಜ್ವಲಗೊಳಿಸಿದುವು ವಿವೇಕಾನಂದರ ಜೀವನಸಾರ ‘ವ್ಯಕ್ತಿ ನಿರ್ಮಾಣ’ ಎಂಬ ಸತ್ಯದ ಅರಿವಾಯ್ತು. ವಿವೇಕಾನಂದರು ಹೇಳಿದ ” ‘ದೇವರು’ ಮತ್ತು ‘ಸತ್ಯ’ ಈ ಎರಡೇ ಪ್ರಪಂಚದಲ್ಲಿರುವುದು ಉಳಿದುದೆಲ್ಲ ಹೊಟ್ಟು” ಎಂಬ ವಿಚಾರಗಳಿಂದ ಒಳಗಣ್ಣು ತೆರೆಯಿತು. ಆ ಒಳಗಣ್ಣಿನಿಂದ ನೋಡಿದರು. ಅಗ ‘ಮಾತೃದೇವೋಭವ’ ಪಿತೃದೇವೋಭವ, ಗುರುದೇವೋಭವ ಅಲ್ಲ ಅಲ್ಲ ದರಿದ್ರ ದೇವೋಭವ, ಮೂರ್ಖದೇವೋಭವ” ಎಂದ ವಿವೇಕಾನಂದರ ಮಾತು ಅವರ ಧಮನಿ ಧಮನಿಗಳಲ್ಲಿ ಧುಮ್ಮಿಕ್ಕಿ ಹರಿಯಿತು. ಭಾರತವನ್ನೊಮ್ಮೆ ಕಣ್ತೆರೆದು ನೋಡಿದರು. ಹಗಲಿರುಳು ಧ್ಯಾನಗೈದು ಭಾರತದ ಅಂತರಂಗವನ್ನ ಅರಿತರು.
ತಾಯಿ ಭಾರತಾಂಬೆ ಸಖಲ ಸಂಪದ್ಭರಿತೆಯಾಗಿಯೂ, ಪ್ರಪಂಚಕ್ಕೆ ಮೊಟ್ಟ ಮೊದಲಿಗೆ ಅಧ್ಯಾತ್ಮದ ಬೆಳಕನ್ನು ನೀಡಿಯೂ ಗುಲಾಮಳಾಗಿರುವ ಆಕೆಯ ಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರು, ವೇದೋಪನಿತ್ತುಗಳನ್ನು ನೀಡಿದ ತಾಯಿ ಸಂಕೋಲೆಯಲ್ಲಿ ಸಿಕ್ಕಿ ನಲುಗುತ್ತಿರುವುದನ್ನು ಕಂಡು ಕುದಿದರು. ಆಕೆಯನ್ನು ಈ ಸ್ಥಿತಿಗೆ ತಂದ ಭಾರತ- ಮಾತೆಯ ಕುಲೀನ ಪುತ್ರರನ್ನು ಶಪಿಸಿದರು. ವರ್ಣ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿದ, ಜಾತಿಯನ್ನು ಘನಿಘಟ್ಟಿಸಿದ ತನ್ಮೂಲಕ ವಿದ್ಯೆಯಿಂದ ವಂಚಿತರಾಗಿ ಅನಕ್ಷರತೆ, ಅಜ್ಞಾನ ಮೂಢನಂಬಿಕೆಗಳಿಂದ ದಾಸಾನು ದಾಸರಾದ ಬಹುಸಂಖ್ಯಾತ ಶೂದ್ರರ, ಸ್ತ್ರೀಯರ ಸ್ಥಿತಿಯನ್ನು ಕಂಡು ಕಣ್ಣೀರುಗರೆದರು. “ಭಾರತೀಯರಿರಾ ಪಶುಸಮಾನಕ್ಕಿಳಿದ ಈ ನಿಮ್ಮ ಸಹೋದರ ಸಹೋದರಿಯರಿಗೆ ನೀವೇನು ಮಾಡುತ್ತಿರುವಿರಿ?” ಎಂಬ ವಿವೇಕಾನಂದರ ಪ್ರಶ್ನೆ ಯುವ ರಕ್ತದ ಬಾಲಕ ಸುಭಾಷ್ ಮುಂದೆ ಬೃಹದಾಕಾರವಾಗಿ ನಿಂತಿತು. ಈ ಸುಧಾರಣೆಯಾದಲ್ಲದೆ ಭರತಮಾತೆ ಎಂದೆಂದಿಗೂ ಸ್ವತಂತ್ರಳಾಗಲು ಸಾಧ್ಯವಿಲ್ಲ, ಬಿಡುಗಡೆ ಕನಸು ಎಂದು ತಪಿಸಿದರು. ಸುಧಾರಕನಾಗಬೇಕಾದರೆ ಏನು ಮಾಡಬೇಕು ಎಂಬ ವಿವೇಕಾನಂದರ ಮಾತುಗಳನ್ನ ಮತ್ತೆ ಮತ್ತೆ ಓದಿದರು.”ನೀವು ನಿಜವಾಗಿ ಸುಧಾರಕರಾಗ ಬೇಕಾದರೆ ಮೂರು ವಿಷಯಗಳು ಅವಶ್ಯಕ
೧. ಸಹಾನಭೂತಿ: ನೀವು ನಿಮ್ಮ ಸೋದರರಿಗಾಗಿ ನಿಜವಾಗಿಯೂ ಅನುತಾಪ ಪಡುವಿರೇನು? ಜಗತ್ತಿನಲ್ಲಿ ಇಷ್ಟೊಂದು ದುಃಖವಿದೆ, ಮೂಢನಂಬಿಕೆ ಇದೆ ಎಂದು ನಿಮಗೆ ಅನ್ನಿಸುವುದೇನು? ನಿಜವಾಗಿಯೂ ಮನುಷ್ಯರೆಲ್ಲಾ ನಿಮ್ಮ ಸಹೋದರರೆಂದು ತಿಳಿಯುವಿರಾ? ಈ ಭಾವನೆ ನಿಮ್ಮ ಮನಸ್ಸನ್ನೆಲ್ಲಾ ವ್ಯಾಪಿಸುವುದೇ? ಇದು ನಿಮ್ಮ ರಕ್ತದಲ್ಲಿ ಸಂಚರಿಸುತ್ತಿದೆಯೇ ಇದು ನಿಮ್ಮ ನಾಡಿಗಳಲ್ಲಿ ಮಿಡಿಯುತ್ತಿದೆಯೇ ಇದು ನಿಮ್ಮ ದೇಹದ ಅಂಗೋಪಾಂಗಗಳಲ್ಲಿ, ನರದ
ಪ್ರತಿಯೊಂದು ಶಾಖೆಯಲ್ಲಿಯೂ ಸಂಚರಿಸುತ್ತಿದೆಯೇ?’ ನೀವು ಸಹಾನುಭೂತಿಯಿಂದ ತುಂಬಿರುವಿರಾ? ಹೌದು ಎಂದಾದರೆ ಅದು ಮೊದಲಿನ ಮೆಟ್ಟಲು ಮಾತ್ರ.
೨. ಸತ್ಯಶೋಧ: ಪುರಾತನ ಭಾವನೆಗಳೆಲ್ಲಾ ಮೂಢನಂಬಿಕೆಯಾಗಿರಬಹುದು. ಆದರೆ ಈ ಮೂಢನಂಬಿಕೆಯ ರಾಶಿಯ ಒಳಗೆ ಮತ್ತು ಸುತ್ತಲೂ ಸತ್ಯದ ಸ್ವರ್ಣಘಟ್ಟಿ ಇರುವುದು. ಮಲಿನತೆಯನ್ನು ಕಳೆದು ಚಿನ್ನವನ್ನು ಮಾತ್ರ ಉಳಿಸಿಕೊಳ್ಳು- ವುದಕ್ಕೆ ಯಾವುದಾದರೂ ಮಾರ್ಗವನ್ನು ಕಂಡು ಹಿಡಿದಿರುವಿರಾ? ನೀವು ಇದನ್ನು ಮಾಡಿದ್ದರೆ ಇದೆ ಎರಡನೆಯ ಮೆಟ್ಟಲು.
೩ ಸಮರ್ಪಣ ಭಾವ: ನಿಮ್ಮ ಉದ್ದೇಶವೇನು? ಹಣ, ಕೀರ್ತಿ, ಅಧಿಕಾರಲಾಲಸೆ-ಇವು ನಿಮ್ಮನ್ನು ಪ್ರೇರೇಪಿಸಿಲ್ಲವೆಂದು ನಿಮಗೆ ಸತ್ಯವಾಗಿಯೂ ಗೊತ್ತೇ ಇಡೀ ಜಗತ್ತೇ ನಿಮ್ಮ ನಾಶಕ್ಕೆ ಸಿದ್ಧವಾಗಿದ್ದರೂ, ನಿಮ್ಮ ಆದರ್ಶಗಳನ್ನು ಬಿಡದೆ ಸಾಧಿಸುವುದಕ್ಕೆ ಸಿದ್ಧರಾಗಿರುವಿರಾ? ಏನು ಬೇಕೆಂಬುದು ನಿಮಗೆ ಚೆನ್ನಾಗಿ ಗೊತ್ತೇ? ನಿಮ್ಮ ಪ್ರಾಣಕ್ಕೆ ಅಪಾಯ ಬಂದರೂ ನಿಮ್ಮ ಕರ್ತವ್ಯವನ್ನಲ್ಲದೆ ಬೇರೆ ಯಾವುದನ್ನೂ ಮಾಡುವುದಿಲ್ಲವೇ? ಪ್ರಾಣವಿರುವವರಗೆ, ಹೃದಯದಲ್ಲಿ
ಚಲನ ಇರುವವರೆಗೆ ಹಿಡಿದ ಕೆಲಸವನ್ನು ಬಿಡದೆ ಹೋರಾಡಬಲ್ಲಿರಾ? ಆಗ ನೀವು ನಿಜವಾದ ಸುಧಾರಕರು, ನೂತನ ಮಾನವಕೋಟಿಗೆ ಮಂಗಳ ಪ್ರದಾಯಕರು.
ಪ್ರತಿಯೊಂದು ವ್ಯಕ್ತಿಯನ್ನ, ಜನಾಂಗವನ್ನು ಮತ್ತು ರಾಷ್ಟ್ರವನ್ನು ಏಳಿಗೆಗೆ ತರುವುದಕ್ಕೆ ಮುಖ್ಯವಾದವುಗಳೆಂದರೆ:
೧. ಸತ್ಯದ ಶಕ್ತಿಯಲ್ಲಿ ದೃಢವಾದ ನಂಬಿಕೆ
೨. ಅಸೂಯೆ ಅನುಮಾನಗಳು ಇಲ್ಲದೆ ಇರುವುದು
೩. ಯಾರು ಒಳ್ಳೆಯರಾಗುವುದಕ್ಕೆ ಮತ್ತು ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನ ಪಡುವರೋ ಅವರಿಗೆಲ್ಲಾ ಸಹಾಯ ಮಾಡುವುದು. ”
ಸುಭಾಷ್ ಇವುಗಳನ್ನು ಕುರಿತು ನಿದ್ದೆಗೆಟ್ಟು ಮನನ ಮಾಡಿದರು. ಅದರ ಅಂತರಂಗದ ಆಕರ್ಷಣೆಗೆ ಹೃದಯ ಮನಸ್ಸು- ಗಳನ್ನು ಅರ್ಪಿಸಿದರು. ಚಿಂತಿಸಿ ಚಿಂತಿಸಿ ಅವುಗಳ ಪ್ರತಿರೂಪವೆ ಆದರು. ವಿಶ್ವದ ಮಹಾನ್ ವ್ಯಕ್ತಿಯಾಗಿ ಬೆಳೆದಮೇಲೆ ವಿವೇಕಾನಂದರನ್ನು ಕುರಿತು ನೇತಾಜಿ “ನಾನು ವಿವೇಕಾನಂದರನ್ನು ನನ್ನ ಗುರುವಾಗಿ ಸ್ವೀಕರಿಸುತ್ತಿದ್ದೆ. ಅವರು ಜೀವಂತ ಇದ್ದಿದ್ದರೆ ಅವರ ಪಾದದಡಿ ಆಜ್ಞಾರಾಧಕನಾಗಿರುತ್ತಿದ್ದೆ” ಎಂದಿದ್ದಾರೆ.
ಕಾಲೇಜಿನಲ್ಲಿ ಓದುವಾಗಲೆ ರಾಜಕೀಯದಲ್ಲಿ ಅಸಕ್ತಿ. ಕಾಲೇಜಿನಲ್ಲಿ ನಾಯಕತ್ವ ವಹಿಸಿದರು. ಇಂಗ್ಲೀಷ್ ಪ್ರಾಧ್ಯಾಪಕ- ರಾಗಿದ್ದ ಓಟನ್ ಒಂದು ಉಪನ್ಯಾಸದಲ್ಲಿ ಭಾರತ ಮತ್ತು ಭಾರತೀಯರನ್ನು ಕುರಿತು ಅವಹೇಳನಕಾರಿ- ಯಾಗಿ ಮಾತನಾಡಿ “ಭಾರತೀಯರು ಅನಾಗರೀಕರು ” ಎಂದು ನಿಂದಿಸಿದಾಗ ಹುಡುಗರು ಅವರನ್ನು ಹಿಡಿದು ಥಳಿಸಿದರು. ಆ ಘಟನೆಗೆ ಪ್ರೇರಣೆ ಸುಭಾಷ್ ಎಂದು ಆತನನ್ನು ವಿಶ್ವವಿದ್ಯಾಲಯದಿಂದ ಹೊರಹಾಕಿದರು. ನಂತರ ಸರ್ ಅಶುತೋಷ್ ಮುಖರ್ಜಿ ಆವರ ಆಸಕ್ತಿಯಿಂದ ೧೯೧೭ ರಲ್ಲಿ ಸ್ಕಾಟಿಷ್ ಚರ್ಚಸ್ ಕಾಲೇಜು ಸೇರಿದರು. ತತ್ವ ಶಾಸ್ತ್ರದಲ್ಲಿ ಬಿ. ಎ. ಪದವಿಯನ್ನು ಮೊದಲ ದರ್ಜೆಯಲ್ಲಿ ಪಡೆದರು.
ಕಾಲೇಜಿನಲ್ಲಿದ್ದಾಗಲೇ ಸುಭಾಷ್ ಚಂದ್ರಬೋಸ್‌ಗೆ ಬಿಳಿಯರನ್ನು ಕಂಡರೆ ಆಗುತ್ತಿರಲಿಲ್ಲ. ಅವರಿಗೆ ಬಿಳಿ ಚರ್ಮ- ದವರಿಗಿಂತ ನಾವು ಶ್ರೇಷ್ಠ ಎಂಬುದನ್ನು ತೋರಿಸಿಕೊಡಬೇಕೆಂಬ ಛಲ. “ಬಿಳಿ ಜನರು ನನಗೆ ಸೇವೆಮಾಡುತ್ತ ನನ್ನ ಬೂಡ್ಸುಗಳನ್ನು ಪಾಲಿಶ್ ಮಾಡುವುದನ್ನು ನೋಡುವುದು ನನಗೆ ಅತ್ಯಂತ ಆನಂದವನ್ನು ಕೊಡುತ್ತದೆ” ಎನ್ನುತ್ತಿದ್ದರು. ಭಾರತೀಯರನ್ನು ಗುಲಾಮರನ್ನಾಗಿಸಿದ ಕುತಂತ್ರದ ಬ್ರಿಟೀಷರನ್ನು ಗುಲಾಮರನ್ನಾಗಿಸಿಕೊಳ್ಳಬೇಕೆಂಬ ಆವರ ನಿಲುವು ಈ ಮಾತುಗಳಲ್ಲಿ ಪ್ರಕಟವಾಗಿದೆ. ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೊಂದು ಗುರುತು ಬಿಟ್ಟು ಹೋಗ- ಬೇಕೆಂಬ ಅದಮ್ಯ ಆಸೆ ಅವರನ್ನು ಆವರಿಸಿತ್ತು.
ತಂದೆ ತಾಯಿಯರ ಇಚ್ಛೆಯಂತೆ ಇಂಡಿಯನ್ ಸಿವಿಲ್ ಸರ್ವೀಸ್ (ICS) ಪರೀಕ್ಷೆ ತೆಗೆದುಕೊಂಡು ೧೯೨೦ ರಲ್ಲಿ ಇಂಗ್ಲೆಂಡಿಗೆ ಹೋದ ಸುಭಾಷ್ ಅಲ್ಲಿ ಇದ್ದದ್ದು ಕೇವಲ ಎಂಟು ತಿಂಗಳು ಮಾತ್ರ. ಪರೀಕ್ಷೆಯಲ್ಲಿ ನಾಲ್ಕನೆ ಸ್ಥಾನ ಪಡೆದು ಉತ್ತೀರ್ಣರಾಗಿ ಭಾರತಕ್ಕೆ ಬರುತ್ತಾರೆ. ಸಂತೋಷದ ತಂದೆ ತಾಯಿಯರಿಗೆ ತಣ್ಣೀರೆರಚಿದಂತೆ ಐಸಿಎಸ್ ಸೇವೆಗೆ ಸೇರುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ತಿಳಿಸುತ್ತಾರೆ. ಅದಕ್ಕೆ ಅವರು ನೀಡಿದ ಕಾರಣ ಸೇವೆಗೆ ಸೇರಿದರೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗುತ್ತದೆ. ಬ್ರಿಟಿಷರ ಸರ್ಕಾರದಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವುದೆಂದರೆ ಭಾರತದ ಗುಲಾಮಗಿರಿಯನ್ನು ಗಟ್ಟಿಗೊಳಿಸುವುದು ಎಂದರ್ಥ. ಅದು ನನ್ನಿಂದ ಸಾಧ್ಯವಾಗುವುದಿಲ್ಲ. ನಾನು ಸ್ವತಂತ್ರವಾಗಿ ಭಾರತಾಂಬೆಯನ್ನ ಬಂಧನದಿಂದ ಬಿಡುಗಡೆಗೊಳಿಸಲು ಹೋರಾಡುತ್ತಾನೆ ಎಂಬುದು ಅವರ ಗುರಿ ಮತ್ತು ನಿರ್ಧಾರವಾಗಿತ್ತು.
ಈ ನಿರ್ಧಾರಕ್ಕೆ ಬರಲು ಮತ್ತೊಂದು ಪ್ರಮುಖ ೧೯೧೯ ರಲ್ಲಿ ಸ೦ಭವಿಸಿತ್ತು. ಅದೇ ಪ೦ಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಜನರಲ್ ಡಯರನ ಹುಚ್ಚು ಆಜ್ಞೆಯಿ೦ವ ಆಗಿಹೋದ ನರಮೇಧ. ಏಪ್ರಿಲ್ ೧೩, ೧೯೧೯ ರಂದು ನಡೆದ ಆ ಮಾರಣ ಹೋಮದಲ್ಲಿ ೩೭೯ ಜನ ಅಸುನೀಗಿದ್ದರು. ಸ್ತ್ರೀ, ಪುರುಷ ಮಕ್ಕಳಾದಿಯಾಗಿ ಸುಮಾರು ೧೨೦೦ ಜನ ಗಾಯಗೊ೦ಡರು. ಈ ಘಟನೆ ಅನೇಕ ಭಾರತೀಯರ೧ತೆ ಯುವ ನೇತಾರ ಸುಭಾಷ್‌ರನ್ನು ಕಲಕಿತು.
ಈ ಫಟನೆ ಸುಭಾಷ್‌ಗೆ ಐಸಿಎಸ್ ಸೇವೆಗೆ ಸೇರದೆ ಬ್ರಿಟಿಷರನ್ನು ಈ ನೆಲದಿಂದ ಒದ್ದೋಡಿಸಬೇಕೆಂಬ ಕಿಚ್ಚನ್ನು ಹಚ್ಚಿತು.
ಸುಭಾಷ್ ಸ್ವಾತ೦ತ್ರ್ಯ ಹೋರಾಟ ಸ೦ಗ್ರಾಮಕ್ಕೆ ಧುಮುಕಿದರು. ಅಸಹಕಾರಕ್ಕೆ, ಬ್ರಿಟಿಷರು ಕೊಟ್ಟದ್ದ ಬಿರುದು ಬಾವಲಿಗಳನ್ನು ತ್ಯಜಿಸುವಂತೆ ಹಾಗೂ ಅವರ ಕೈಕೆಳಗೆ ಯಾರೂ ಕೆಲಸ ಕೇಳಬಾರದೆ೦ಬ ಕರೆಕೊಟ್ಟರು.
ಮಹಾತ್ಮಗಾ೦ಧಿಯವರನ್ನು ಮೊದಲು ಭೇಟಿ ಮಾಡಿದ್ದು ೧೯೨೧ ರಲ್ಲಿ. ಆ ಭೇಟಿಯಲ್ಲಿ ತಮಗಾದ ಅನುಭವವನ್ನ ಈ ಕೆಳಗಿನ ಮಾತುಗಳಲ್ಲಿ ಬರೆದಿದ್ದಾರೆ.
“ಆ ಮಧ್ಯಾಹ್ನದ ಚಿತ್ರ ನನ್ನ ಕಣ್ಣ ಮುಂದಿದೆ. ಚಾಪೆ ಹಾಸಿದ ಕೊಠಡಿಗೆ ಪ್ರವೇಶಿಸಿದೆ. ಬಾಗಿಲಿಗೆ ಎದುರಾಗಿ ಮಹಾತ್ಮ ಅವರ ಅನುಯಾಯಿಗಳೊಂದಿಗೆ ಮಧ್ಯದಲ್ಲಿ ಕುಳಿತಿದ್ದರು. ಅಲ್ಲಿದ್ದವರೆಲ್ಲಾ ಖಾದಿ ವಸ್ತ್ರಧರಿಸಿದ್ದರು. ಆಂಗ್ಲ ವಸ್ತ್ರ ಧರಿಸಿದ್ದ ನಾನು ಅಲ್ಲಿ ಅನ್ಯನಾಗಿ ಕಾಣಿಸಿಕೊಂಡೆ, ಅದಕ್ಕಾಗಿ ಕ್ಷಮೆಯನ್ನೂ ಯಾಚಿಸಿದೆ. ಅವರ ಸ್ವಭಾವದಂತೆ ಮಹಾತ್ಮ ತುಂಬು ಹೃದಯದ ನಗುವಿನೊಂದಿಗೆ ಸ್ವಾಗತಿಸಿದರು. ನನಗೆ ಸಮಾಧಾನವಾಯ್ತು. ಮಾತುಕತೆ
ಪ್ರಾರಂಭವಾಯ್ತು. ನಾನು ಅವರೊ೦ದಿಗೆ ಹೋರಾಟದ ಯೋಜನೆಯೆ ಯಶಸ್ಸಿನ ವಿವರಗಳನ್ನು, ಬ್ರಿಟಿಷ್ ಅಧಿಕಾರವನ್ನು ಹೇಗೆ ಹಂತ ಹಂತವಾಗಿ ವಶಪಡಿಸಿಕೊಳ್ಳಬೇಕೆಂಬುದನ್ನು ಸ್ಪಷ್ಟವಾಗಿ ಚರ್ಚಿಸಿದೆ. ಆ ನಿಟ್ಟಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆಗರೆದೆ. ಮಹಾತ್ಮ ಬಹು ತಾಳ್ಮೆಯಿಂದ ಉತ್ತರಿಸಿದರು.”
ಗಾಂಧೀಜಿಯ ಉತ್ತರಗಳಿಂದ ಸುಭಾಷ್‌ಗೆ ತೃಪ್ತಿಯಾಗಲಿಲ್ಲ. ಅವರು ಕ್ರಾಂತಿಗಿಂತ ಅಹಿಂಸೆಗೆ ಒತ್ತುಕೊಟ್ಟಿದ್ದರು. ಮಿಗಿಲಾಗಿ ಬ್ರಿಟಿಷರ ಮನವನ್ನು ಪರಿವರ್ತಿಸಬೇಕೆಂಬ ಗುರಿ ಹೊಂದಿದ್ದರು. ಇದರಿಂದ ಬೊಸ್‌ಗೆ ನಿರಾಶೆಯಾಯ್ತು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ಯಶಸ್ವಿ ಯೋಜನೆಗಳು ಅವರಲ್ಲಿ ಕಂಡುಬರದ ಕಾರಣ ಬೋಸ್ ಕಲ್ಕತ್ತೆಗೆ ಹೋಗಿ ಕ್ರಾಂತಿಕಾರಿ ಚಿತ್ತರಂಜನ ದಾಸ್ ಅವರ ಮಾರ್ಗದರ್ಶನ ಕೋರಿದರು. ಅವರ ನೇತೃತ್ವದಲ್ಲಿ ಕಾರ್ಮಿಕ ಸಂಫಟನೆ ಕಟ್ಟಿದರು. ಕಲ್ಕತ್ತದ ಮೇಯರ್ ಆದರು. ೧೯೨೩ ರಲ್ಲಿ ಬಂಗಾಳದಲ್ಲಿ ಸ್ವರಾಜ್ಯ ಚಳವಳಿ ಉಗ್ರವಾಯ್ತು.
ಎಲ್ಲೆಲ್ಲೂ ಭಯದ ವಾತಾವರಣ. ಅಂಗಡಿ ಮುಗ್ಗಟ್ಟುಗಳು ಉದ್ರಿಕ್ತ ವಾತಾವರಣದಲ್ಲಿ ಭಯ, ಆತಂಕಗಳಿಂದ ನಡೆಯುವಂತಾಯ್ತು. ಚಳುವಳಿ ಉಗ್ರವಾದಾಗ ಮಾರ್ಚಿ ೧೯೨೪ ರಲ್ಲಿ ಗೋಪಿನಾಥಸಹನನ್ನು ಗಲ್ಲಿಗೇರಿಸಲಾಯ್ತು. ಇದನ್ನ ಪ್ರತಿಭಟಿಸಿ ಗಾಂಧೀಜಿ ಒಂದು ಮಾತನ್ನೂ ಆಡಲಿಲ್ಲ. ೧೯೨೮ ರಲ್ಲಿ ಶಿಕ್ಷಗೆ ಗುರಿಯಾದ ರಾಷ್ಟಪ್ರೇಮಿ, ತ್ಯಾಗವೀರ ಭಗತ್ ಸಿಂಗನ ಬಗ್ಗೆಯೂ ಗಾಂಧೀಜಿ ಮಾತನಾಡಲಿಲ್ಲ ಎಂಬುದು ಇಂದು ಇತಿಹಾಸವಾಗಿದೆ. ಮಾತೃಭೂಮಿಗಾಗಿ ನಗುನಗುತ ನೇಣುಗಂಬವನ್ನೇರಿದ ಭಗತ್‌ಸಿಂಗನಂತೆ ಗೋಪಿನಾಥ್‌ಸಹ ಕೂಡ ಸಾಯುವ ಮುನ್ನ:-
“ಭಾರತದ ತಾಯಂದಿರು ನನ್ನಂಥ ಮಗನಿಗೆ ಜನ್ಮ ಕೊಡಲಿ. ನನ್ನ ತಾಯಿಯಂಥ ತಾಯಂದಿರಿಂದ ಮನೆಗಳು ತುಂಬಿರಲಿ. ನನ್ನ ರಕ್ತದ ಹನಿಹನಿಯೂ ಭಾರತದ ಮನೆ ಮನೆಯಲ್ಲಿ ಸ್ವಾತಂತ್ರ್ಯದ ಬೀಜ ಬಿತ್ತಲಿ” ಎಂದು ನಗುನಗುತ್ತಾ ಸಾವನ್ನಪ್ಪಿದ. ನೇತಾಜಿ ನೇತ್ರಗಳಲ್ಲಿ ನೀರು ಹರಿಯಿತು. ನೇತಾಜಿಯನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಯ್ತು. ನೇತಾಜಿ ಜೈಲಿನಲ್ಲಿದ್ದ ಸಂದರ್ಭಗಳನ್ನು ಕುರಿತು “ನಾನು ಜೈಲಿನಲ್ಲಿದ್ದ ದಿನವೂ ಆಧ್ಯಾತ್ಮಿಕವಾಗಿ ಗಟ್ಟಿಗೊಳ್ಳಲು ಅವಕಾಶವಾಗಿದೆ” ಎಂದಿದ್ದಾರೆ.
೧೯೩೪ ರಲ್ಲಿ ನೇತಾಜಿ ತಂದೆ ಜಾನಕೀನಾಥಬೋಸ್‌ರು ತೀರಿಕೊಂಡರು. ಅವರು ನೇತಾಜಿಯವರಲ್ಲಿದ್ದ ಪ್ರತಿಭೆಯನ್ನು ಅವರ ಪ್ರತಿಭಟನಾ ಸಾಮರ್ಥ್ಯವನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ತಮ್ಮ ಮಗನ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದರು. ಕುವೆಂಪು ಆವರು ರಾಮಾಯಣ ದರ್ಶನದಲ್ಲಿ ವನವಾಸಕ್ಕೆ ಹೋದ ರಾಮನನ್ನು ಕುರಿತು ದಶರಥ “ನೀನೆನಗೆ ಮಗನಾದುದಕೆ ನಿನಗಿದೋ ನಮಸ್ಕಾರ ಎಂದಂತೆ ಜಾನಕೀನಾಥ ಬೋಸರು ಮಗನ ಸ್ವಾತಂತ್ರ್ಯ ಪ್ರೇಮವನ್ನ
ಅರಿತು ಅವನ ಹೋರಾಟಕ್ಕೆ ಬೆಂಬಲ ಎನ್ನುವಂತೆ ಅವನ ಗುರಿಯನ್ನು ಬ್ರಿಟಿಷ್ ಸರ್ಕಾರ ಅವರಿಗೆ ನೀಡಿದ್ದ “ರಾವ್ ಬಹದೂರ್” ಪದವಿಯನ್ನು ೧೯೩೦ ರಲ್ಲಿಯೆ ಹಿಂದಿರುಗಿಸಿದ್ದರು. ಈ ಘಟನೆ ಮಾತೃಭೂಮಿಗಾಗಿ ನೇತಾಜಿಯವರು ನಡೆಸಿದ ಹೋರಾಟದ ಪವಿತ್ರತೆ ಮತ್ತು ಪ್ರಭಾವದ ಪ್ರತೀಕವಾಗಿದೆ.
೧೯೩೮ರಲ್ಲಿ ನೇತಾಜಿ ಇಂಗ್ಲೇಂಡಿಗೆ ಹೋದಾಗ ಅವರನ್ನು ಅಟ್ಲಿ, ಅರ್ನ್ವೆಸ್ಟ್ ಬೆವಿನ್, ಎಸ್. ಕ್ರಿಪ್ಸ್ , ಅವರುಗಳು ಸ್ವಾಗತಿಸಿ ಮಾತುಕತೆಯಾಡಿದಾಗ ನೇತಾಜಿಯವರ ಆಕರ್ಷಕ ವ್ಯಕ್ತಿತ್ವ, ನಡೆ, ನುಡಿ ಹಾಗೂ ಅವರಲ್ಲಿದ್ದ ನಿರ್ಣಯ ತೆಗೆದುಕೊಳ್ಳುವ ಗುಣಗಳನ್ನು ಕಂಡು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಗಾಂಧೀಜಿಯವರ ಗುರಿ ಕೇವಲ ಸ್ವಾತಂತ್ರ್ಯ ಪಡೆಯುವುದಾಗಿತ್ತು. ಸ್ವತಂತ್ರ ಭಾರತ ಯಾವ ದಿಕ್ಕಿನಲ್ಲಿ ಕ್ರಮಿಸಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆ ಇರಲಿಲ್ಲ. ಕಾಂಗ್ರೆಸ್ ಗುರಿ ಸ್ವಾತಂತ್ರ್ಯ ಗಳಿಸುವುದು, ಸ್ವತಂತ್ರ ಭಾರತವನ್ನು ಅನಂತರ ಯಾರಾದರೂ ನಡೆಸುವುದು ಎಂಬುದಾಗಿತ್ತು. ಆ ಕಾರಣಕ್ಕಾಗಿಯೆ ಸ್ವಾತಂತ್ರ್ಯ ಬಂದಮೇಲೆ ‘ಕಾಂಗ್ರೆಸ್’ ಹೆಸರನ್ನು ಬಳಸಬಾರದು ಎಂದು ಹೇಳಿದರು.
ನೇತಾಜಿಯವರ ದೃಷ್ಟಿ ಇದಕ್ಕೆ ಪುರ್ಣ ಭಿನ್ನವಾಗಿತ್ತು. ರಾಷ್ಟ್ರೀಯ ಪುನರ್ ನಿರ್ಮಾಣದ ಹೊರೆಯನ್ನು INA ಪೂರ್ಣವಾಗಿ ಹೊರಬೇಕೆನ್ನುವುದು ಅವರ ದೃಷ್ಟಿಯಾಗಿತ್ತು. ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಿ ಭಾರತವನ್ನು ಒಂದು ಬಲಿಷ್ಠ ರಾಷ್ಟ್ರವಾಗಿಸಬೇಕಾದರೆ ‘ದಯಾಳುವಾದ ಸರ್ವಾಧಿಕಾರಿಯೊಬ್ಬ ಕನಿಷ್ಪ ಇಪ್ಪತ್ತು ವರ್ಷಗಳ ಕಾಲ ಭಾರತವನ್ನು ನಡೆಸಬೇಕು’, ಭಾರತವನ್ನು ಕೋಮುವಾದ ಒಂದರಿಂದಲೆ ಅಲ್ಲ ಅದನ್ನು ಕಿತ್ತು ತಿನ್ನುತ್ತಿರುವ ಇನ್ನಿತರ ಪಾಪಗಳಿಂದ ಮುಕ್ತಗೊಳಿಸಲು ಅದು ಅನಿವಾರ್ಯ ಎಂಬುದು ಅವರ ನಿಲುವಾಗಿತ್ತು.
ಗಾಂಧೀಜಿಯವರ ಸೋಲಿಗೆ ನೇತಾಜಿ ಐದು ಮುಖ್ಯಕಾರಣಗಳನ್ನು ಗುರುತಿಸಿಕೊಂಡಿದ್ದರು. ಅವುಗಳೆಂದರೆ:-
೧. ತನ್ನ ಶತ್ರಗಳು ಯಾರು ಎಂದು ಗಾಂಧೀಗೆ ಗೊತ್ತಿರಲಿಲ್ಲ.
೨. ಯೋಜನೆಗಳನ್ನು ರೂಪಿಸಿಕೊಳ್ಳದಿರುವುದು.
೩. ಅಂತರ ರಾಷ್ಟ್ರೀಯ ಸಹಕಾರ ಕೇಳದಿದ್ದುದು
೪. ಬ್ರಿಟಿಷರನ್ನು ನಂಬುವ ಪ್ರವೃತ್ತಿ ಹಾಗೂ
೫. ರಾಜಕೀಯ ವ್ಯಕ್ತಿಯಾಗಿದ್ದುಕೊಂಡು ಅದೇ ಸಮಯದಲ್ಲಿ ಪ್ರಪಂಚದ ದಾರ್ಶನಿಕನಾಗಿ ನಿಂತದ್ದು.
ಬಹುಶಃ ಈ ಅಂಶಗಳನ್ನು ಕುರಿತು ಆಳವಾಗಿ ಚಿಂತಿಸಿದರೆ ಆದರ ಸತ್ಯ ಮನವರಿಕೆಯಾಗುತ್ತದೆ. ಅಲ್ಲದೆ ಐದು ದಶಕಗಳನ್ನು ಇಂದಿನ ಸ್ವತಂತ್ರ ಭಾರತವೆ ಅದಕ್ಕೆ ಸಾಕ್ಷಿಯಾಗಿದೆ. ಬ್ರಿಟಿಷರು ಹೋದರೂ ಅವರ ಭಾರದಿಂದ ಹಾಗೂ ಅವರ ವ್ಯಕ್ತಿನಾಶ ಸಂಸ್ಕೃತಿಯಿಂದ ಬಿಡಿಸಿಕೊಳ್ಳಲಾಗದ ಭಾರತ ಇಂದಿಗೂ ನಲುಗುತ್ತಿದೆ.
ನೇತಾಜಿ ಆವರಿಗೆ ಭಾಷೆಯ ಬಗ್ಗೆ ಕೂಡ ಸ್ಪಷ್ಟ ನಿಲುವಿತ್ತು. ಅವರು ಹಿಂದೂಸ್ತಾನಿಯನ್ನು ರಾಷ್ಟ್ರೀಯ ಭಾಷೆಯಾಗಿಸಬೇಕೆಂದಿದ್ದರು. ಉರ್ಧು ಮತ್ತು ಹಿಂದಿಯನ್ನು ಪ್ರತ್ಯೇಕಿಸುವುದು ಕೃತಕವಾಗುತ್ತದೆ ಎಂದಿದ್ದರು. ರೋಮನ್ ಲಿಪಿಯನ್ನು ನಮ್ಮ ಐಕ್ಶತೆಯ ಹಾಗೂ ಅಂತರ ರಾಷ್ಟ್ರೀಯ ಸಂಪರ್ಕ ಭಾಷೆಯಾಗಿಸಬೇಕೆಂದಿದ್ದರು. ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದೆಂದರೆ ಮತ್ತೆ ಗುಲಾಮೀಯತೆಯ ಜೊತೆ ಹೊಂದಾಣಿಕೆ ಮಾಡಿಕೊಂಡಂತೆ. ಆದ್ದರಿಂದ ಎಂದೂ ಗುಲಾಮೀಯತೆಯೊಂದಿಗೆ ರಾಜಿಯಾಗಬೇಡಿ ಎಂದು ಸ್ಪಪ್ಪಪಡಿಸಿದ್ದರು.
“ಬ್ರಿಟಿಷ್ ಸಾಮ್ರಾಜ್ಯಶಾಹಿಯ ಜೊತೆ ಎಂದೂ ಹೊಂದಾಣಿಕೆ ಮಾಡಿಕೊಳ್ಳದ ಹೋರಾಟ” ಎಂದು ಗುಡುಗುತ್ತಿದ್ದರು. ‘ಸ್ವಾತಂತ್ರ್ಯ’ ಎನ್ನುವುದನ್ನು ಪಡೆದುಕೊಂಡದ್ದೆ ಹೊರತು ಅದನ್ನು ಎಂದೂ ಕೊಟ್ಟಿದ್ದಲ್ಲ ” ಎನ್ನುವ ಐತಿಹಾಸಿಕ ಸತ್ಯವನ್ನು ಅವರು ಅಭಿವ್ಯಕ್ತಿಸಿದ್ದರು.
ನೇತಾಜಿಯವರು ಗುರುತಿಸಿದಂತೆ ಗಾಂಧೀಜಿ ರಾಜಕೀಯ ವ್ಯಕ್ತಿಯಾಗಿ ಅದೇ ಸಮಯದಲ್ಲಿ ಪ್ರಪಂಚದ ದಾರ್ಶನಿಕ- ನಾಗುವ ದೃಷ್ಟಿ ಅತ್ಯಂತ ಅಪಾಯಕಾರಿಯಾದದ್ದು. ಆ ಕಾರಣ ಗಾಂಧಿ ತಮ್ಮ ಇಳಿವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ಬೆತ್ತಲೆ ಮಲಗಿ ತಮ್ಮ ಬ್ರಹ್ಮಚರ್ಯ (ಮನೋನಿಗ್ರಹ) ಶಕ್ತಿಯ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರೆ. ಆದರೆ ಗಾಂಧಿಯ ಈ ಬಾಲಿಶ ಪ್ರಯೋಜನಕ್ಕಿಂತ ಸಾಮ್ರಾಜ್ಯವನ್ನ, ಸುಂದರ ಹೆಂಡತಿ ಯಶೋಧರೆಯನ್ನ, ಮಗ ರಾಹುಲನನ್ನ ತೊರೆದು ತಪಸ್ಸುಗೈದು ಎತ್ತರಕ್ಕೆ ಏರಿದ ಬುದ್ಧನ ದಾರ್ಶನಿಕತೆ ಇತಿಹಾಸದಲ್ಲಿ ಹೆಚ್ಚು ಆಪ್ಯಾಯಮಾನವಾಗಿದೆ. ಆದಕಾರಣವೆ ಬುದ್ಧ ಬೆಳಗುತ್ತಿದ್ದರೆ ಗಾಂಧಿವಾದ ಕತ್ತಲೆ ಬೆಳಕಿನಾಟವಾಡುತ್ತಿದೆ.
೧೯೩೯ ರಲ್ಲಿ ನಡೆದ ಒಂದು ಘಟನೆ ಗಾಂಧಿ ವ್ಯಕ್ತಿಗತ ನಿಷ್ಠರೇ ಹೊರತು ಪ್ರಜಾಭಿಪ್ರಾಯವನ್ನು ಮನ್ನಣೆ ಮಾಡಿದವರಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡುತ್ತದೆ. ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಭಾಷ್ ೧೯೩೯ ರಲ್ಲಿ ನಡೆದ ಕಾಂಗ್ರೆಸ್ನ ಅಧ್ಯಕ್ಷ ಚುನಾವಣೆಗೆ ಪುನಃ ಅಭ್ಯರ್ಥಿಯಾಗಿ ನಿಲ್ಲಿಸುತ್ತಾರೆ. ಆ ವೇಳೆಗೆ ಗಾಂಧಿ ಹಾಗೂ ನೇತಾಜಿ-ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದುವು. ಗಾಂಧಿ ತಮ್ಮ ಪರವಾಗಿ ಪಟ್ಟಾಭಿ- ಸೀತಾರಾಮಯ್ಯ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸುತ್ತಾರೆ. ಸಹಜವಾಗಿ ರಾಷ್ಟ್ರದ ಉಳಿದ ನಾಯಕರು ಗಾಂಧಿ
ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ. ಒಂದು ಕಡೆ ಇಡೀ ರಾಷ್ಟ್ರದ ನಾಯಕರು, ಮತ್ತೊಂದು ಕಡೆ ಏಕಾಂಗಿಯಾಗಿ ನೇತಾಜಿ. ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ನೇತಾಜಿ ತೀವ್ರ ಅಸ್ಪಸ್ಥತೆಯಿಂದ ಆಸ್ಪತ್ರೆ ಸೇರುತ್ತಾರೆ. ಅಲ್ಲಿಂದಲೆ ಕರೆ ಕೊಡುತ್ತಾರೆ. ಅವರ ಕರೆಗೆ ಒಲಿದ ಜನ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸುತ್ತಾರೆ. ಮತದಾರರ ಅಭಿಪ್ರಾಯಕ್ಕೆ ಮನ್ನಣೆಕೊಡದೆ ಗಾಂಧಿ “ಪಟ್ಟಾಭಿಸೀತಾರಾಮಯ್ಯ ಅವರ ಸೋಲು ನನ್ನ ಸೋಲು. ನಾನು ಸದಸ್ಯತ್ವದಿಂದ ಹೊರ ಹೋಗಲು ಹಿಂಜರಿಯುವುದಿಲ್ಲ ಎಂಬ ಬೆದರಿಕೆ ಒಡ್ಡುತ್ತಾರೆ”.
ಆಗಿನ ಸಂದರ್ಭವನ್ನು ಗಮನಿಸಿದರೆ ಅದು ಎರಡನೆ ಮಹಾಯುದ್ಧದ ಆರಂಭದ ಕಾಲ. ಈಗ ನಾವು ನಮ್ಮೊಳಗೆ ಒಡೆದು ಹೋಳಾಗಿ ಹೋದರೆ ದೇಶದಲ್ಲಿ ಅಂತರ್ಯುದ್ಧ ಆರಂಭವಾಗುತ್ತದೆ. ಅದು ಆದಲ್ಲಿ ಅದರಿಂದ ಹೆಚ್ಚು ಅನುಕೂಲ ನಮ್ಮ ಶತ್ರುವಾದ ಬ್ರಿಟಿಷರಿಗೆ ಹೊರತು ಭಾರತಕ್ಕಲ್ಲ ಎಂದರಿತ ನೇತಾಜಿ ಸ್ವಯಂ ಇಚ್ಛೆಯಿಂದ ಅಧ್ಯಕ್ಷರ ಪದವಿಗೆ ರಾಜೀನಾಮೆ ನೀಡಿ ತಮ್ಮದೇ ಆದ ಹೋರಾಟ ಮಾರ್ಗ ಹಿಡಿಯುತ್ತಾರೆ.
ಅಂದು ಬ್ರಿಟಿಷರಿಂದ ಅನ್ಯಾಯಕ್ಕೊಳಗಾಗಿದ್ದರೆ ಇಂದು ಮಹಾಭಾರತದ ಕರ್ಣನಂತೆ ನೇತಾಜಿ ಸ್ವಜನರಿಂದಲೇ ಅನ್ಯಾಯಕ್ಕೊಳಗಾದರು. ಕರ್ಣನ ಕಠೋರ ನಿಷ್ಠೆಯಂತೆ ಅವರ ರಾಷ್ಟ್ರಪ್ರೇಮ, ಸ್ವಾತಂತ್ರ್ಯ ಹೋರಾಟದ ನಿಷ್ಠೆ ಮಹೋಜ್ವಲವಾಗಿತ್ತು.
ನೇತಾಜಿ ಅವರಿಗೆ ಗಾಂಧೀಜಿ ಅವರ ಬಗ್ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಗಾಂಧೀಜಿಯವರ ವ್ಯಕ್ತಿತ್ವವನ್ನು ಗೌರವಿಸುತ್ತಿದ್ದರು. ಹಾಗೆ ಬ್ರಿಟಿಷರನ್ನು ಸಹ. ಆದರೆ ಗಾಂಧೀಜಿಯವರ ಸ್ವಾತಂತ್ರ್ಯಗಳಿಕೆಯ ಮಾರ್ಗವನ್ನು ಹಾಗೂ ಬ್ರಿಟಿಷರ ಸಾಮ್ರಾಜ್ಯಶಾಹಿ ಮನೋಭಾವವನ್ನು ಕಂಡು ಕುದಿಯುತ್ತಿದ್ದರು. ನೇತಾಜಿ ವಿಶ್ವಪ್ರೇಮಿ ಅದೇ ಸಮಯದಲ್ಲಿ
ಸ್ವಾತಂತ್ರ್ಯ ಪ್ರೇಮಿ ಕೂಡ ಎಂಬುದನ್ನು ಮರೆಯಲಾಗುವುದಿಲ್ಲ.
ಅಧ್ಯಕ್ಷ ಪದವಿಯನ್ನು ತೊರೆದ ನೇತಾಜಿ “ಫಾರ್ವರ್ಡ್, ಬ್ಲಾಕ್’ (Forward Block) ಎಂಬ ಉಗ್ರಗಾಮಿ ಸಂಘವನ್ನು ಕಾಂಗ್ರೆಸ್ಸಿನೊಳಗೆ ಕಟ್ಟಿ ಕ್ರಿಯಾಶೀಲರಾದಾಗ ಸಹಿಸದ ಗಾಂಧಿ ಹಾಗೂ ಆ ಮನೋಧರ್ಮದ ಸೋಗಿನ ಹಿಂಬಾಲಕರು ಸೇರಿ ನೇತಾಜಿ ಅವರನ್ನು ಆಗಸ್ಟ್ ೧೯೩೯ ರಲ್ಲಿ ಮೂರು ವರ್ಷಗಳ ಕಾಲ ಕಾಂಗ್ರೆಸ್ಸಿನಿಂದ ಉಚ್ಛಾಟಿಸುತ್ತಾರೆ. ಆಗ ರಾಷ್ಟ್ರಕ್ಕೆ ಕರೆ ಕೊಡುತ್ತಾ ನೇತಾಜಿ ಹೇಳುತ್ತಾರೆ: – “ಅತ್ಯಂತ ಪಾಪಕೃತ್ಯ ಯಾವುದೆಂದರೆ ಗುಲಾಮರಾಗಿ ಇರುವುದು. ಕೊಲೆಪಾತಕ ಕೃತ್ಯ ಎಂದರೆ ತಪ್ಪು ಮತ್ತು ಅನ್ಯಾಯಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು.
ಪ್ರಕೃತಿಯ ಅದರ ಅಂತರಂಗದ ಧರ್ಮವನ್ನ ಗೌರವಿಸಿ ಅದಕ್ಕೆ ಶಕ್ತಿ ತುಂಬಬೇಕು. ಏನೇ ಆದರೂ ಎಂಥ ಸಂದರ್ಭ ಬಂದರೂ ಜ್ಞಾಪಕದಲ್ಲಿಟ್ಟುಕೊಳ್ಳಿ ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದೇ ಸರ್ವೋತೃಷ್ಟವಾದುದು ಎಂದು. ಮುಂದುವರೆದು “ಭಾರತ ಆದಷ್ಟು ಬೇಗ ಸ್ವತಂತ್ರವಾಗುತ್ತದೆ. ಸ್ವತಂತ್ರವಾದ ಕೂಡಲೆ ಆದು ಸೆರೆಮನೆಯ ಬಾಗಿಲುಗಳನ್ನು ತೆರೆಯುತ್ತದೆ. ಆಗ ಅಲ್ಲಿ ಬಂಧಿಯಾಗಿರುವ ಭಾರತದ ಹೆಮ್ಮೆಯ ಪುತ್ರರು ಹೊರ ಬಂದು ಸ್ವಾತಂತ್ರ್ಯದ ಸಂತೋಷದಿಂದ ರಾಷ್ಟ್ರ ನಿರ್ಮಾಣಕ್ಕಾಗಿ ಅರ್ಪಿಸಿಕೊಳ್ಳುತ್ತದೆ.’ ಎನ್ನುವ ಅವರ ದೃಷ್ಟಿ ಆಪ್ಯಾಯಮಾನವಾದುದು.
ಮಾರ್ಚ್ ೧೯೪೦ ರಲ್ಲಿ ಬಿಹಾರದ ರಾಮಗಢದಲ್ಲಿ ಫಾರ್ವರ್ಡ್ ಬ್ಲಾಕ್ ಮತ್ತು ಕಿಸಾನ್ ಸಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜವಿರೋಧಿ ಸಮ್ಮೇಳನವನ್ನು ಏರ್ಪಡಿಸಿದರು. ರಾಷ್ಟ್ರದ ಸಂಪತ್ತನ್ನು ಬ್ರಿಟಿಷ್‌ಸರ್ಕಾರ ಬಳಸಿಕೊಳ್ಳುವುದನ್ನು ಪ್ರತಿಭಟಿಸಬೇಕೆಂದು ಕರೆಕೊಟ್ಟರು. ದೇಶಾದ್ಯಂತ ಚಳುವಳಿ ಪ್ರಾರಂಭವಾಯ್ತು. ೧೯೪೦ ರಲ್ಲಿ ನಾಗಪುರವಲ್ಲಿ ನಡೆದ ಭಾರತ ಫಾರ್ವರ್ಡ್ ಬ್ಲಾಕ್‌ನ ಅಧಿವೇಶನದಲ್ಲಿ ಭಾರತದಲ್ಲಿ ತಾತ್ಕಾಲಿಕ ರಾಷ್ಟ್ರೀಯ ಸರ್ಕಾರವನ್ನು ನೇಮಿಸುವಂತೆ ಒತ್ತಾಯಿಸಲಾಯ್ತು. ಅದೇ ವರ್ಷ ಜುಲೈ ೨ ರಂದು ಬಂಗಾಲ ಸರ್ಕಾರ ನೇತಾಜಿಯವರನ್ನು ಬಂಧಿಸಿತು. ಜೈಲಿನ ವ್ಯವಸ್ಥೆಯ ವಿರುದ್ಧ ನೇತಾಜಿ ಜೈಲಿನಲ್ಲಿಯೇ ಆಮರಣ ಉಪವಾಸ
ಪ್ರಾರಂಭಿಸಿದರು. ರಾಷ್ಟ್ರದಲ್ಲಿ ಉಗ್ರ ಪ್ರತಿಭಟನೆ ಪ್ರಾರಂಭವಾಯ್ತು. ಸರ್ಕಾರ ಅವರನ್ನು ಬಿಡುಗಡೆ ಮಾಡಿತು. ಅನಂತರ ನೇತಾಜಿ ಕಣ್ಮರೆಯಾದರು. ಜರ್ಮನಿಗೆ ಹೋಗಿ ಅಲ್ಲಿ ಸಂಘಟಕ ಶಕ್ತಿಯನ್ನು ಪ್ರದರ್ಶಿಸಿ ಬ್ರಿಟನ್ನಿನ ರೇಡಿಯೋದಿಂದ ನಿಯತ ಪ್ರಸಾರ ಪ್ರಾರಂಭಿಸಿದರು. ೧೯೪೨ ರ ಅಂತ್ಯದ ವೇಳೆಗೆ ಪೂರ್ವ ಏಷ್ಯಾದಲ್ಲಿ ಡಚ್, ಫ್ರೆಂಚ್ ಹಾಗೂ ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ವಸಾಹತುಗಳು ಜಪಾನೀಯರ ಧಾಳಿಗೆ ತುತ್ತಾದಾಗ ಜರ್ಮನ್ ಮತ್ತು
ಜಪಾನ್ ಸರ್ಕಾರಗಳ ಸಹಾಯದಿಂದ ಜಲಂತರ್ಗಾಮಿ ನೌಕೆಯಲ್ಲಿ ೧೯೪೩, ಜುಲೈ ೨ ರಂದು ಸಿಂಗಪುರ ತಲಪಿದರು. ಜುಲೈ ನಾಲ್ಕರಂದು ರಾಷ್‌ಬಿಹಾರಿ ಬೋಸರಿಂದ ಪೂರ್ವ ಏಷ್ಯಾದಲ್ಲಿ ಭಾರತೀಯ ಚಳವಳಿಯ ಮುಖಂಡತ್ವವಹಿಸಿಕೊಂಡರು. ಅಜಾದ್ ಹಿಂದ್ ಫೌಜನ್ನು (INA) ಸಂಘಟಿಸಿ ಅದರ ದಂಡನಾಯಕರಾದರು. “ರಂಗೂನಿನ ಸರ್ಕಾರದಮೇಲೆ ನವಿಲಿನ ಲಾಂಚನ ಹಾರಾಡುತ್ತಿರುವಂತ ಸಧ್ಯದಲ್ಲೆ ದೆಹಲಿಯ ಕೆಂಪುಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರುತ್ತದೆ’ ಎಂದು ಘೋಷಿಸಿದರು.
ಪ್ರಧಾನ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರು ತೆಗೆದುಕೊಂಡ ಪ್ರತಿಜ್ಞೆ ಪ್ರತಿಯೊಬ್ಬ ಪ್ರಜೆಯಲ್ಲೂ ಸ್ವಾಭಿಮಾನ, ಆತ್ಮಾಭಿಮಾನ ಹಾಗೂ ಆತ್ಮಾರ್ಪಣೆಯ ನಂಬುಗೆಯನ್ನು ಹುಟ್ಟು ಹಾಕಿತು.
“ಭಾರತ ಹಾಗೂ ಅದರ ೩೮ ಕೋಟಿ ಜನರ ಬಿಡುಗಡೆಗಾಗಿ ಸುಭಾಷ್ ಚಂವ್ರ ಬೋಸ್ ಆದ ನಾನು ಪರಮ ಪವಿತ್ರವಾದ ಸ್ವಾತಂತ್ರ್ಯ ಸಮರವನ್ನ ನನ್ನ ಕಡೆಯ ಉಸಿರಿರುವವರೆಗೆ ಮುಂದುವರೆಸುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.
ನಾನು ಸದಾ ಭಾರತದ ಸೇವಕನಾಗಿ ಉಳಿಯುತ್ತೇನೆ. ನನ್ನ ಪರಮ ಪವಿತ್ರವಾದ ಕೆಲಸವೆಂದರೆ ನನ್ನ ೩೮ ಕೋಟಿ ಸಹೋದರ ಸೋದರಿಯರ ಸೌಖ್ಯ ಕಾಪಾಡುಪುದು.
ಸ್ವಾತಂತ್ರ್ಯ ಪಡೆದ ಮೇಲೂ ಭಾರತದ ಸ್ವಾತಂತ್ರ್ಯವನ್ನುಳಿಸಲು ನನ್ನ ರಕ್ತದ ಕೊನೆಯ ಹನಿಯನ್ನು ಅರ್ಪಿಸಲು ನಾನು ಸಿದ್ಧನಿರುತ್ತೇನೆ.”
INAಯಲ್ಲಿ ವಿವಿಧ ಧರ್ಮದ, ಜಾತಿ ಮತ ಪಂಥಗಳ, ಸ್ತ್ರೀ-ಪುರುಷರೆಂಬ ಭೇದ ಭಾವವಿರದ ರಾಷ್ಟ್ರೀಯ ಮನೋಧರ್ಮದ ಎಲ್ಲರೂ ಸೇರಿದ್ಗರು. ’ಝಾನ್ಸಿರಾಣಿಲಕ್ಷ್ಮೀ ಭಾಯಿ’ ರೆಜಿಮೆಂಟಿನಲ್ಲಿ ಸಾವಿರಾರು ಮಹಿಳೆಯರು ಸೈನಿಕರಾಗಿಸೇರಿ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಸಮರ್ಪಿಸಿಕೊಂಡಿದ್ದರು.
೧೯೪೪ ರಲ್ಲಿ ನೇತಾಜಿ ತಾತ್ಕಾಲಿಕ ಸರ್ಕಾರವನ್ನು ಘೋಷಿಸಿದರು. ಅದನ್ನು ಬಲಿಷ್ಠಗೊಳಿಸಲು ಹಣಕಾಸು, ಪ್ರಚಾರ ಮತ್ತು ಪ್ರಕಟಣೆ, ಆರೋಗ್ಯ, ತರಬೇತಿ, ನೇಮಕಾತಿ, ಪುನರ್ನಿರ್ಮಾಣ, ವಿದ್ಯೆ, ಮಹಿಳಾ ಕಲ್ಯಾಣ ಎಂಬ ಎಂಟು ಇಲಾಖೆಗಳನ್ನು ತೆರೆದು ಮಂತ್ರಿಗಳನ್ನು ನೇಮಿಸಿದರು.
ರಾಷ್ಟ್ರದಲ್ಲಿ ಕೋಮು ಭಾವನೆಯನ್ನು ಹತ್ತಿಕ್ಕಲು ಉಪಸಮಿತಿಗಳನ್ನು ರಚಿಸಿದರು. ತಾತ್ಕಾಲಿಕ ಸರ್ಕಾರದ ನೋಟುಗಳನ್ನು ಮತ್ತು ಪದಕಗಳನ್ನು ನಿರ್ಣಯಿಸಿವರು. ಅದನ್ನು ತಯಾರಿಸಲು ಟೋಕಿಯೋದಲ್ಲಿ ಆದೇಶಗಳನ್ನು ನೀಡಿದರು. ಅಂತಿಮವಾಗಿ ಭಾರತದ ಎಲ್ಲರ ಭಾಷೆ ‘ಹಿಂದೂಸ್ತಾನಿ’ಯಾಗಿರ ಬೇಕು; ‘ಜೈ ಹಿಂದ್’ ಜಯಕಾರವಾಗಿರಬೇಕು, ಕಾಂಗ್ರಸ್‌ನ ‘ತ್ರಿವರ್ಣ ಧ್ವಜ’ ರಾಷ್ಟ್ರ ಧ್ವಜವಾಗಿರಬೇಕು. ರವೀಂದ್ರನಾಥ ಠಾಕೂರ್ ಅವರ ಪದ್ಯ ‘ರಾಷ್ಟ್ರ ಗೀತೆ’ ಯಾಗಿರಬೇಕೆಂದು ಒಪ್ಪಲಾಯ್ತು.
ತಾತ್ಮಾಲಿಕ ಸರ್ಕಾರ ನಡೆಸಲು ಹಣದ ಕೊರತೆಯಾಯ್ತು. ಕೊಡುಗೆ ಕೊಡಲು ಕರೆಕೂಟ್ಟರು. ರಾಷ್ಟ್ರದಾಧ್ಯಂತ ಮಹಿಳೆಯರು ಮುಂದೆ ಬಂದು ಒಡವೆಗಳನ್ನು ಇತ್ತರು. ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯಾನುಸಾರ ಕೊಡುಗೆಗಳನ್ನು ಕೊಟ್ಟರು. ಆದರೆ ಮಲಯದ ಉದ್ಯಮಿಗಳು ನಿರಾಕಸಿರಿವರು. ಆಗ ನೇತಾಜಿ “ಕಾನೂನಿನ ರೀತ್ಯಾ ಮಾತನಾಡುವುದಾದರೆ ರಾಷ್ಟ್ರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಖಾಸಗಿ ಆಸ್ತಿ ಎನ್ನುವುದು ಇರುವುದಿಲ್ಲ. ಹಾಗೆ ಭಾವಿಸಿದರೆ ನೀವು ಅಜ್ಞಾನದಲ್ಲಿ ಇದ್ದೀರಿ. ನಿಮ್ಮ ಜೀವ ಮತ್ತು ಆಸ್ತಿಗಳು ಈಗ ನಿಮಗೆ ಸೇರಿದವುಗಳಲ್ಲ. ಅವು
ಭಾರತಕ್ಕೆ ಸೇರಿದವು, ಭಾರತಕ್ಕೆ ಈ ಸತ್ಯವನ್ನು ನೀವು ಬೇಗ ಅರಿಯಬೇಕು. ಹಾಗೆ ಅರಿಯದೆ ಹೋದರೆ ನಿಮಗೆ ಉಳಿದಿರುವ ಒಂದೇ ಮಾರ್ಗ ಎಂದರೆ ಬ್ರಿಟಿಷರ ದಾರಿ. ನಾವು ಸ್ವಾತಂತ್ರ್ಯ ಪಡೆದೇ ಪಡೆಯುತ್ತೇವೆ. ಆಗ ನೀವು ಇಂಗ್ಲೀಷ್‌ರೊಂದಿಗೆ ಸೆರೆ ಮನೆಯಲ್ಲಿರ ಬೇಕಾಗುತ್ತದೆ. ಸ್ವಾತಂತ್ರ್ಯ ಬಂದಾಗ ನಿಮಗೆ ಸ್ವತಂತ್ರ ಭಾರತದಲ್ಲಿ ಸ್ಥಳವಿರುವುದಿಲ್ಲ. ನೀವು ನಮ್ಮ ಶತ್ರುಗಳಾಗಿರುತ್ತೀರಿ.” ಸಮಗ್ರ ರಾಷ್ಟ್ರ ದೃಷ್ಟಿಯನ್ನ ರಾಷ್ಟ್ರ ಪ್ರೇಮವನ್ನು ಹೊಂದಿದ್ದ
ನೇತಾಜಿಯವರ ಮನಸ್ಸಿನಲ್ಲಿ ಯಾವ ಗೊಂದಲವೂ ಇರದ ಇಂತಹ ಸ್ಪಷ್ಟತೆ ಇತ್ತು.
ನೇತಾಜಿ ಜಪಾನಿನ ಟೋಜೊ ಅವರನ್ನು ಭೇಟಿಯಾದರು. ಅವರು ಸಹಕಾರ ನೀಡಿದರು. ಅವರ ವಶದಲ್ಲಿದ್ದ ಅಂಡಮಾನ್ ನಿಕೊಬಾರ್ ದ್ವೀಪಗಳನ್ನುINA ಸರ್ಕಾರಕ್ಕೆ ವಹಿಸಿಕೊಟ್ಟರು. ಅವುಗಳಿಗೆ ಕ್ರಮವಾಗಿ ಶಾಹಿದ್ ಮತ್ತು ಸ್ವರಾಜ್ ದ್ವೀಪಗಳೆಂದು ಪುನರ್ ನಾಮಕರಣವಾಯ್ತು.
ತಮ್ಮ ಸರ್ಕಾರಕ್ಕೆ ಬೆಂಬಲಿಸಿದ್ದ ಹಾಗೂ ಸೈನ್ಯದಲ್ಲಿ ತೊಡಗಿಸಿಕೊಂಡಿದ್ದ ಜನರಿಗೆ ನೇತಾಜಿ ‘ನಾನು ಈಗ ನಿಮಗೆ ಹಸಿವು, ಬಾಯಾರಿಕೆ, ಒಂಟಿತನ, ಬಲವಂತದ ಶಿಸ್ತುನಡೆಗೆ ಹಾಗೂ ಸಾವುಗಳನ್ನ ಮಾತ್ರ ಕೊಡಬಲ್ಲೆ. ನೀವು ಈ ಜೀವನ್ಮರಣದಲ್ಲಿ ನನ್ನೊಂದಿಗಿದ್ದರೆ ನಾನು ನಿಮ್ಮನ್ನು ಸ್ವಾತಂತ್ರ್ಯದ ವಿಜಯಕ್ಕೆ ಕರೆದೊಯ್ಯುವೆ.’ ಎಂಬ ಕೆಚ್ಚಿನ ಮಾತುಗಳಿಂದ ಹುರಿದುಂಬಿಸುತ್ತಿದ್ದರು.
ಅವರ INA ಹೋರಾಟವೆ ಒಂದು ಇತಿಹಾಸ ನಿರ್ಮಿಸಿದ ಸಮಗ್ರ ಕಥೆಯಾಗುತ್ತದೆ. ಅವರು ಅವರ ಸೈನಿಕರಿಗೆ ಹೇಳುತ್ತಿದ್ದರು. “ಸೈನಿಕರೆ, ಈ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ರಾಷ್ಟ್ರದ ೩೮ ಕೋಟಿ ಸಹಜೀವಿಗಳು ನಮ್ಮ ಕಡೆ ನೋಡುತ್ತಿದ್ದಾರೆ …. .. ಆದ್ದರಿಂದ ನೀವು ಭಾರತಕ್ಕೆ ಪ್ರಾಮಾಣಿಕರಾಗಿರಿ. ಒಂದು ಕ್ಷಣವೂ ಅಚಲರಾಗದಿರಿ, ಭಾರತದ ಭವಿಷ್ಯ ನಿಮ್ಮ ಕೈಲಿದೆ. ನೀವು ಅಮರರಾಗಿ, ಜಯಸಿಕ್ಕೇ ಸಿಗುತ್ತದೆ. ಭಾರತವನ್ನು ಅಸ್ವತಂತ್ತವಾಗಿಸುವ ಶಕ್ತಿ ಪ್ರಪಂಚದಲ್ಲಿ ಯಾವುದೂ ಇಲ್ಲ.’
ನಿಜ, ಭಾರತ ಸ್ವಾತಂತ್ರ್ಯ ಪಡೆಯಿತು. ನೇತಾಜಿ ಅವರ ಕ್ರಾಂತಿಮಾರ್ಗದಲ್ಲಿ ಅಲ್ಲ, ಗಾಂಧೀಜಿಯ ಸೌಮ್ಯ ಮಾರ್ಗದಲ್ಲಿ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ ಅವರ ಭಾಷೆ, ಸಂಸ್ಕೃತಿ ಬೇರು ಬಿಟ್ಟವು. ಅವರ ಒಡೆದಾಳುವ ನೀತಿಗಳು ನೆಲೆಗೊಂಡುವು. ಅಸ್ವತಂತ್ರ ಭಾರತದಲ್ಲಿದ್ದ ಗುಲಾಮೀಯತೆ ಸ್ವಾತಂತ್ರ್ಯ ಭಾರತದಲ್ಲೂ ಹಾಸು ಹೊಕ್ಕಾಯ್ತು. ಈ ಕಾರಣದಿಂದಲೆ ಭಾರತ ಸ್ವಾತಂತ್ರ್ಯ ಪಡೆದು ೫೦ ವರ್ಷಗಳಾದರೂ ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳ, ಜಾತಿ ಮತ ಧರ್ಮಗಳ ಸಂಘರ್ಷ ತಾಂಡವವಾಡುತ್ತಿದೆ. ಬಾನಗಲವನ್ನು ಮೀರಿ ಭ್ರಷ್ಟಾಚಾರ
ಬೆಳೆಯುತ್ತಿದೆ. ಹಗರಣಗಳ ಮೇಲೆ ಹಗರಣಗಳು ಹಾಸುಹೊಕ್ಕಾಗಿವೆ. ಅಕ್ರಮಗಳು ಸಕ್ರಮಗಳಾಗುತ್ತಿವೆ. ಹೊರದೇಶಗಳ ಸಾಲ ಹೆಗಲ ಮೇಲೆ ಹೆಣವಾಗಿ ಹೇರಿಕೊಳ್ಳುತ್ತಿದೆ. ’ಹಿಂದು ನಾವೆಲ್ಲ ಒಂದು’ ಎಂಡು ನಾಚಿಕೆ ಇಲ್ಲದೆ ಬೀದಿಯಲ್ಲಿ ಭಿತ್ತಿ ಪತ್ರ ಹಿಡಿದು ಪ್ರದರ್ಶಿಸಿಕೊಳ್ಳುವ ನಿರ್ವೀಯತೆ, ಅಂತರಿಕಠೊಳ್ಳು, ನಮ್ಮದಾಗಿದೆ. ಮಂತ್ರ ಹೇಳಿದರೆ ಸ್ತ್ರೀಯರಿಗೆ ಗರ್ಭಪಾತವಾಗುತ್ತದೆನ್ನುವ ಮಠಾಧೀಶರ ಮೌಢ್ಯ ಭಾರತವನ್ನು ಹಾದಿತಪ್ಪಿಸುವ ತಂತ್ರವಾಗಿದೆ.
ಅಂದು ಬ್ರಿಟಿಷರು ಮಾತ್ರ ಇದ್ದರೆ ಇಂದು ಅವರಿಗಿಂತ ಕ್ರೂರಿಗಳಾದ ಇಂಥ ಬ್ರಿಟಿಷ್ ಮರಿಗಳಿದ್ದಾರೆ.
ಗಾಂಧಿಯ ಹಿಂದೆ ಆತ್ಮವಂಚಕರ ಹಿಂಡೇ ಇತ್ತು. ಚರಕವನ್ನು ಬೆಂಬಲಿಸುತ್ತಿದ್ದ ಬಂಡವಾಳಶಾಹಿಗಳ ಹೃದಯದಲ್ಲಿದ್ದುದು ಗುಡಿ ಕೈಗಾರಿಕೆಗಳಲ್ಲ, ಬೃಹತ್ ಗಿರಣಿಗಳು. ಗಾಂಧಿಯನ್ನು ಕೊಂದು ಉದ್ದಿಮೆಗಳನ್ನು ಹೂಡಿ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನೂ ಖಾಸಗಿ ಆಸ್ತಿಗಳನ್ನಾಗಿಸಿಕೊಳ್ಳುತ್ತಿರುವ ಇವರು ರಷ್ಯದ ಜಾರ್ ದೊರೆಗಳಿಗಿಂತ ಕ್ರೂರವಾದ ಬಂಡವಾಳಶಾಹಿಗಳಾಗಿ ಭಾರತವನ್ನು ಕಬಳಿಸುತ್ತಿದ್ದಾರೆ. ೧೯೧೭ ರಲ್ಲಿ ರಷ್ಯಾದಲ್ಲಿ ಆದ ಕ್ರಾಂತಿಗಿಂತ ಉಗ್ರವಾದ ಕ್ರಾಂತಿ ಭಾರತದಲ್ಲಿ ಆಗಬೇಕಾಗುತ್ತದೆ. ಅಂದು ಒಂದು ಈಸ್ಟ್ ಇಂಡಿಯಾ ಕಂಪೆನಿ
ಇದ್ದರೆ ಇಂದು ನೂರಾರು ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೆಂಪು ಕಾರ್ಪೆಟ್ ಹಾಸುವ ಗುಲಾಮರು ರಾಷ್ಟ್ರನಾಯಕ- ರಾಗಿ ಮೆರೆಯುತ್ತಿದ್ದಾರೆ.
ಅಂದು ಬ್ರಿಟಿಷರನ್ನು ಒದ್ದೋಡಿಸಲು ಒಬ್ಬ ನೇತಾಜಿ ಸಾಕಾಗಿದ್ದರು. ಆದರೆ ಇಂದು ಈ ಕ್ರೂರಿಗಳನ್ನು ಕಿತ್ತೂಗೆಯಲು ನೂರು ಜನ ನೇತಾಜಿಯಂಥ ನೇತಾರರು ಬೇಕಾಗಿದ್ದಾರೆ. ಇಂದಿನ ಯುವಜನತೆ ಬೋಸರ ಜೀವನದ ಆದರ್ಶವನ್ನ ಬೆನ್ನೆಲುಬಾಗಿಸಿಕೊಳ್ಳದಿದ್ದರೆ ಎಂದೆಂದಿಗೂ ನಾವು ಸ್ವತಂತ್ರ ಭಾರತದಲ್ಲಿ ಅಸ್ವತಂತ್ರರಾಗಿ ಉಳಿಯುವುದು ಅನಿವಾರ್ಯವಾಗುತ್ತದೆ.
-೧೯೯೭