ನನ್ನ ಶ್ಯಾಮನ ಮಂದಹಾಸ ಮಿಂಚುವ ಮುಖ
ಕಾಡುವುದೆ ಸಖಿ ನನ್ನ ಇರುಳಿನಲ್ಲಿ,
ಕುಡಿನೋಟ ಚಿಮ್ಮುವಾ ಬಾಣಗಳು ಎದೆ ತಾಗಿ
ಹೊರಳುವೆನು ನಾ ಮಧುರ ನೋವಿನಲ್ಲಿ.
ಕರಯುವಳು ನನ್ನ ಸಖಿ “ಬಾರೆ ಮಿರಾ ಬಾರೆ
ಕಟ್ಟಲೇನೇ ಕೈಗೆ ತಾಯಿತವನು?
ಬೇರು ಮೂಲಿಕೆ ತಂದು ಔಷಧವ ಅರೆಯಲೇ
ವಾಸಿಮಾಡಲೆ ನಿನ್ನ ಬಾಧೆಯನ್ನು?”
ಮದ್ದು ತಾಯಿತಗಳಿಗೆ ಮಣಿವ ರೋಗವಿದಲ್ಲ,
ಮನವ ಹೊಕ್ಕಿದ ಹರಿಯ ಮಧುರ ರೂಪ;
ನನ್ನ ಉಳಿಸುವುದಿಗ ಒಂದೇ ಔಷಧ ಸಖೀ
ಹರಿಯ ಕಾಣದೆ ಮಾಯದನ್ನ ತಾಪ.
ಬಾ ಸಖೀ ಬಾ ನನ್ನ ಎದೆಯಿಣುಕಿ ನೋಡು,
ಕಂಡೀತು ನೂರುಚೂರಾದ ಹೃದಯ;
ಮನ್ಮಥನ ನಾಚಿಸುವ ಚೆಲುವನೇ ಗಿರಿಧರ,
ಹೇಗಿರಲೆ ದೂರವಿರೆ ಅಂಥ ಇನಿಯ?
*****