Home / ಕವನ / ಕವಿತೆ / ಎಲ್ಲರಂಥವನಲ್ಲ ನನ ಗಂಡ

ಎಲ್ಲರಂಥವನಲ್ಲ ನನ ಗಂಡ

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ         || ಪ ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ           || ಅ.ಪ ||

ಮಾತಾಪಿತರು ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳಿರುತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲ್ಲಿ ಕೂಡಿ               || ೧ ||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ            || ೨ ||

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೇ ಸಿಕ್ಕಾ           || ೩ ||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನ್ನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲ್ಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ           || ೪ ||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ            || ೫ ||
***

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...