ದಿನಪತ್ರಿಕೆಯ ಪುಟವ ತಿರುಗಿಸಲು
ಕಾಣುತಿಹವು ಸಾವು
ರೈತರ ಆತ್ಮಹತ್ಯೆ ಸಾವು
ಅಲ್ಲಿ ಸಾಯುವನು ಇಲ್ಲಿ ಸಾಯುವನು
ದಿನವು ಸಾಯುವರು ಮಣ್ಣಿನ ಮಕ್ಕಳು
ದಿನವು ಸಾಯುತಿದೆ ದೇಶದೊಕ್ಕಲು
ಬೆನ್ನೆಲುಬು ಬಾನು ಬಿಕ್ಕಲು
ಬೀಜ ಬಂಜೆಯಾಯಿತೋ ರೋಗ ಮುತ್ತಿತೋ
ಮಳೆಯು ಬಾರದೆ ಒಣಗಿ ಹೋಯಿತೋ
ಅಂತೂ ಇಂತೂ ನೆಲದ ಕಂದರಿಗೆ ಉಳಿವಿಲ್ಲವಾಯಿತೋ
ಸಣ್ಣ ಮಕ್ಕಳಿಗೆ ಕೂಳು ಇಲ್ಲವೋ
ಮನೆಯಲೆಲ್ಲರಿಗೆ ಕಾಳು ಇಲ್ಲವೋ
ಹರಕು ಬಟ್ಟೆಗಳೊ ಮುರುಕು ಜೋಪಡಿಯೋ
ಹೇಗೋ ಏನೊ ರೂಢಿಯಾಯಿತೊ
ಸಾಲ ಶೂಲವದು ಬಂದು ಇರಿವಾಗ
ಹೇಗಿದ್ದರೇನು ಸತ್ತರೇನು
ಸರಿ ಮರಣಂ ಶರಣಂ ಗಚ್ಛಾಮಿ
ಕೇಳದಾಗಿದೆ ಕಿವುಡು ಸರಕಾರ
ಕಾಣದಾಗಿದೆ ಕುರುಡು ದರಬಾರ
ಕೋಟಿಗಟ್ಟಲೆ ಬರ ಪರಿಹಾರ
ಹರಿದು ಬರುತಿದೆ ಯಾರ ಬಾಯಿಗೊ ಯಾರ ಜೇಬಿಗೊ
ಎಲ್ಲಿ ಹೋಗುವುದೊ ಯಾರು ಬಲ್ಲರು?
ಬೆವರ ಹನಿ ಹನಿ ಆವಿಯಾಯಿತು
ಸಾಯುವ ಜೀವಕೆ ಬಾಯಿಯೆ ಇಲ್ಲ
ಅಳುವ ಬಾಯಿಗೆ ದನಿಯೆ ಇಲ್ಲ
ರಾಜಧಾನಿಯಲ್ಲಿ ಹವಾನಿಯಂತ್ರದಿ
ನಿದ್ದೆ ಹೋಗಿಹರು ಮಂತ್ರಿ ದಾನವರು
ದಿನವೂ ಸಾರುತಿದೆ ಪತ್ರಿಕೆ
ರೈತನ ಸಾವು, ಸಾಯುವರು ಸಾಯುವರು
ನೆಲದ ನಿಟ್ಟುಸಿರು ಭೋರೆಂಬ ಗಾಳಿ
ಬರಿದೆ ಬೀಸೇ ಬೀಸುತಿರುವುದು
ಮೋಡದೊಡಲು ಗಡಬಡಿಸುತಿದೆ
ಒಂದೆರಡು ಹನಿ ಉದುರಿಸುತಿದೆ
ಅಶ್ರುತರ್ಪಣ ನಿಷ್ಕಾರಣ |
ಸುದ್ದಿ ಸಾರುವುದು ಪತ್ರಿಕೆ
ಮರುದಿನ ರದ್ದಿ ಅದೇ ಹಳೆ ಸುದ್ದಿ
ದಿನವೂ ಸಾಯುವವರಿಗೆ ಅಳುವವರು ಯಾರು
ಯಾರು ಕೆಡಿಸಿಕೊಳ್ಳುತ್ತಾರೆ ನಿದ್ದಿ
ಮರಣಂ ಶರಣಂ ಗಚ್ಛಾಮಿ
*****