ದುಡಿಮೆಯೆ ದೇವರು ದುಡೀ ದುಡೀ
ಅಕ್ಷರ ಬ್ರಹ್ಮನ ಪಡೀ ಪಡೀ ||ಪ||
ಭೂಮಿ ತಾಯಿಯು ದುಡಿತಾಳೆ
ಸೂರ್ಯ ಚಂದ್ರರು ದುಡಿತಾವೆ
ಗಾಳಿ ಬೀಸುತಾ ನೀರು ಹರಿಯುತಾ
ಬೆಂಕಿ ಉರಿಯುತಾ ದುಡಿತಾವೆ ||೧||
ದುಡಿಮೆಯಿಂದಲೇ ಕೋಟೆ ಕೊತ್ತಲ
ವೈಭವ ರಾಜ್ಯವು ಮೆರೆದಾವೆ
ಗುಡಿ ಗೋಪುರಗಳು ಮಠಮಾನ್ಯಗಳು
ದುಡಿಮೆಯಿಂದಲೇ ಬೆಳೆದಾವೆ ||೨||
ಕಾರು ಲಾರಿಗಳು ಓಡುವ ರಸ್ತೆಯು
ದುಡಿಮೆಯಿಂದಲೇ ಓಡುತಿವೆ
ಮಂತ್ರಿ ಮಹಾಜನರಾಳುವಂತಹ
ವಿಧಾನ ಭವನಗಳಾಗುತಿವೆ ||೩||
ಚಳಿ ಬಿಸಿಲೆನ್ನದೆ ದುಡಿಯುವ ರೈತನು
ದೇಶಕೆ ಅನ್ನವ ಬೆಳಿತಾನೆ
ಕಾರಖಾನೆಗಳ ಮನೆ ಅರಮನೆಗಳ
ಕಾರ್ಮಿಕ ಕಟ್ಟುತ ನಿಲಿಸ್ಯಾನೆ ||೪||
ಹಾಡು ಕಟ್ಟುವವು ಕಾವ್ಯ ಮೊಳೆಯುವುವು
ದುಡಿಮೆಯೆ ಬಾಳಿನ ಬಟ್ಟೆಯಲಿ
ಕಲೆಗಳರಳುವುವು ನಾಟ್ಯವಾಡುವುವು
ದುಡಿಮೆಯೆ ದಾರಿಯ ಕಟ್ಟೆಯಲಿ ||೫||
ವಿದ್ಯ ಬುದ್ದಿಗಳು ನೀತಿನೇಮಗಳು
ಚೆನ್ನುಡಿ ಚೆನ್ನಡೆ ದುಡಿಮೆಯಲೆ
ದುಡಿಯುವ ಜನಗಳೆ ನಾಡಿನ ಬುನಾದಿ
ವಿಜ್ಞಾಗಳಿಗು ಅದೇ ನೆಲೆ ||೬||
ದುಡಿಯುವ ಜನರನು ಹೀರುತ ಬಂದಿವೆ
ಒಡೆತನ ಮಾಡುವ ಜಿಗಣೆಗಳು
ಕೆಚ್ಚಲ ಹಾಲದು ಕರುವಿಗೆ ದಕ್ಕದೆ
ರಕ್ತವ ಕುಡಿಯುವ ಉಣ್ಣೆಗಳು ||೭||
ಅಕ್ಷರ ಬಲ್ಲವ ರಕ್ಕಸನಾದರೆ
ದುಡಿಯುವ ಬಡವಗೆ ಉಳಿವಿಲ್ಲ
ಓದುತ ಬರೆಯುತ ಎಲ್ಲವನರಿತರೆ
ದೋಚುವರ್ಯಾರು ಉಳಿಯಲ್ಲ ||೮||
ದುಡಿಮೆಯೆ ಬದುಕಿನ ಹಣತೆಗೆ ಎಣ್ಣೆ
ವಿದ್ಯೆಯು ಉರಿಯುವ ಬತ್ತಿ
ಎರಡೂ ಸೇರಲು ಕಾಂತಿಯು ಶಾಂತಿಯು
ದುಡಿವವ ದೇಶದ ಶಕ್ತಿ ||೯||
*****