ವರ್ಗ: ಬಾಲ ಚಿಲುಮೆ / ನಾಟಕ
ಪುಸ್ತಕ: ಅಗಿಲಿನ ಮಗಳು
ಲೇಖಕ: ಹೊಯಿಸಳ
ಕೀಲಿಕರಣ:
ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ
ಪಾತ್ರಗಳು
ಅಗಿಲಿನ ಮರ:-ಉದ್ದ ಅಂಗಿ ತೊಟ್ಟು, ತಲೆ ಕೆದರಿ ನಿಂತವರು ದೊಡ್ಡವರು ಯಾರಾರಾದರೂ ಸರಿ. ಗೊಗ್ಗರ ದನಿಯಲ್ಲಿ ಮಾತಾಡಬೇಕು. ಉದ್ದ ಅಂಗಿ ಬಾಯಿಬಿಡಿಸಿ ಒಳಗೆ ಏನಾದರೂ ಬಚ್ಚಿಟ್ಟುಕೊಳ್ಳುವ ಹಾಗಿರಬೇಕು.
ಅಗಿಲಿನ ದೇವತೆ:- ತೆಳ್ಳಗೆ ಹಳದಿ ಬಣ್ಣದ ಉಡುಗೆಯವಳು. ಥಳಥಳಿಸುವ ಕಿರೀಟದವಳು. ಸ್ವಲ್ಪ ನಾಜೂಕಾದ ಕುಣಿತ ಬರುವಂಥವಳು.
ಗೊಂಬೆ:- ಸ್ವಲ್ಪ ದೊಡ್ಡದಾಗಿರುವ ಮರದ ಅಥವ ಸೆಲುಲಾಯಿಡ್ ಗೊಂಬೆಯಾಗಿರಬೇಕು. ಬಟ್ಟೆ ತೊಡಿಸಿ ಒಡವೆಗಳನ್ನು ಇಡುವಂತಿರಬೇಕು.
ಬೆಡಗಿ:- ಇವಳು ಮಂತ್ರವಾದಿಯು ಜೀವಕ್ಕೆ ತಂದ ಹುಡುಗಿ. ಗೊಂಬೆಯಾಗಿದ್ದವಳು ಹುಡುಗಿಯಾಗಿದ್ದಾಳೆ. ಗೊಂಬೆಯ ಅಲಂಕಾರಗಳು ಎಲ್ಲಾ ಇವಳಿಗಿರಬೇಕು.
ಬಡಗಿ:- ಇವನು ಅಲಂಕಾರದಲ್ಲಿ ಒಬ್ಬ ಬಡ, ಬಡಗಿಯ ಹಾಗಿದ್ದರೆ ಸಾಕು. (ಪಕ್ಕದಲ್ಲಿ ಉಳಿ ಕೊಡತಿಗಳ ಗಂಟಿರಬೇಕು)
ಚಿಪ್ಪಿಗ:- ಇವನೊಬ್ಬ ದರ್ಜಿ ವೇಷದವನು. ಇವನ ಬಳಿ ಇರುವ ಗಂಟಿನಲ್ಲಿ ಬಟ್ಟೆ ಚೂರುಗಳು, ಹೊಲಿದ ಅಂಗಿ ಲಂಗಗಳು, ಸೂಜಿ, ದಾರ, ಕತ್ತರಿ ಇವೆಲ್ಲ ಇರಬೇಕು.
ಚಿನಿವಾರ:- ಇದು ಅಗಸಾಲಿಯ ವೇಷ. ಬಡಗಿಯ ಬಳಿ ಹೇಗೋ ಹಾಗೆಯೇ, ಇವನಲ್ಲಿಯೂ ಆಯುಧ ಸಾಮಗ್ರಿಗಳು ಇರುತ್ತವೆ. ಅಲ್ಲದೆ ತಯಾರಾದ ಒಡವೆಗಳೂ ಇರುತ್ತವೆ.
ಮಂತ್ರವಾದಿ:- ಉದ್ದನೆ ಅಂಗಿ, ಗಡ್ಡ, ಜೋಲು ಕೂದಲು ಇದ್ದು, ಕೈಯ್ಯಲ್ಲೊಂದು ಥಳಥಳಿಸುವ ಮಂತ್ರದ ಕೋಲು ಇರಬೇಕು.
ಕಾಡು:- ಕಾಡಿನ ಪರದೆ ಇಲ್ಲದಿದ್ದರೆ ಹುಲಿಯ ಹಲಗೆಯ ಮೇಲೆ ಹುಲಿಯ ಕಾಡು ಎಂದು ಬರೆದಿದ್ದರೆ ಸಾಕು. ಅಥವ ಕೆಲವರು ಹುಲಿ ವೇಷದವರೂ ಇರಬಹುದು. ಅಂತು ಹುಲಿ ಕರಡಿ, ಚಿರತೆ, ಆನೆ, ಕತ್ತೆ ಕಿರುಬ ಇವುಗಳ ಕೂಗುಗಳು ಮೊಟ್ಟಮೊದಲು ಒರಸೆಒರಸೆಯಾಗಿ ಕೇಳಿದರೆ ಒಳ್ಳೆಯದು.
ಬೆಂಕಿ:- ಎಲ್ಲರೂ ಹೆಚ್ಚು ಎಚ್ಚರಿಕೆಯಿಂದ ಇರುವುದಾದರೆ ಬೆ೦ಕಿ ಇಟ್ಟುಕೊಳ್ಳಬಹುದು. ಅಥವ ಕೆಂಪು ತಗಡನ್ನು ರಟ್ಟಿನ ಒಳಗಡೆ ಅಂಟಿಸಿ, ನಡುವೆ ದೀಪ ಇಟ್ಟಿದ್ದರೂ ಆಗುತ್ತೆ.
* * * * *
ಅಗಿಲಿನ ಮಗಳು
(ರಂಗಸ್ಥಳದಲ್ಲಿ ಅಗಿಲಿನ ಮರದ ವೇಷದವನು ತೋಳು ಬೀಸುತ್ತಾ, ನಿಂತಿರುವನು. ದೂರ ದೂರದಿಂದ ಹುಲಿ ಮೊದಲಾದ ಪ್ರಾಣಿಗಳ ಸದ್ದು ಕೇಳುತ್ತಿರುವುದು. ಬಡಗಿ, ಚಿಪ್ಪಿಗ, ಚಿನಿವಾರರು ಬೆಂಕಿಯ ಸುತ್ತಲೂ ಮಲಗಿರುವರು. ಬಿಡಾರದ ಬೆಂಕಿಯು ಸಣ್ಣಗೆ ಉರಿಯುತ್ತಿರುವುದು.
ಅಗಿಲಿನ ದೇವತೆಯು ಮರದ ಒಡಲಿಂದಲೋ ಅಥವ ಹಿ೦ಭಾಗದಿ೦ದಲೋ ರಂಗಮಂಟಪಕ್ಕೆ ಬರುವಳು. ಸ್ವಲ್ಪ ಕುಣಿತ ಮಾಡಬಹುದು.)
ಅಗಿಲು ದೇವಿ:- ನೀನೌ ಅಗಿಲುದೇವಿ
ನಮಿಪೆನೌ ಮುಗಿಲುದೇವೀ
ಗಾಳಿ ಕಳಿಸಿ ನಗಿಸು ನನ್ನನು
ಬೀಸಿ ಬೆಳಕ ನಗಿಸು ಹೂವನು
ಚಿಗರು ನಗಲಿ ಕಂಪು ಮಿಗಲಿ
ಸೊಗಸು ಹೊಮ್ಮಲಿ
ನಾನೌ ಅಗಿಲು ದೇವಿ
ಇದೋ ಈ ಬೆಂಕಿಯಲ್ಲಿ ಅಗಿಲಿನ ಪರಿಮಳವನ್ನು ಹಬ್ಬಿಸಿಬಿಡುವೆನು. ಈ ಒಣಗಿದ ಕೊಂಬೆಯನ್ನು ಇಲ್ಲಿ ಹಾಕುವೆನು. ಅದೋ! ಅವನಾರೋ ಹೊರಳುತ್ತಾನೆ.
ಎಚ್ಚರವಾಗಿದೆಯೋ ಏನೋ, ನಾನಿರಬಾರದು ಇಲ್ಲಿ (ಕುಣಿಯುತ್ತ ಮಾಯವಾಗುವಳು. ಬಡಗಿ ಏಳುವನು.)
ಬಡಗಿ:- ಇದೇನು ಕ೦ಪು ಇದೇನು ಮರ, ಇಲ್ಲಾರು ಕುಣಿದವರು, ಗೀತೆ ಹೇಳಿದವರಾರು, ಯಾರೋ ದೇವತೆ ಇರಬೇಕು. ಅಬ್ಬಬ್ಬಾ! ಇಂಥಾದ್ದೊಂದು ಕಾಡಿನಲ್ಲಿ ಏನು
ಬೇಕಾದರೂ ಇರಬಹುದು. ಅಯ್ಯೋ ಎಡವಿಬಿಟ್ಟೆ, ಇದಾವುದೋ ಕೊಂಬೆ. ಈ ಮರದ್ದೇ ಇರಬೇಕು. ಇದರ ಪರಿಮಳವೂ ಎಷ್ಟು ಚೆನ್ನಾಗಿದೆ. ಉಳಿ, ಹತ್ತರಿ, ಕೊಡತಿ, ಚಾಕು, ಚಾಣ, ಬೇಕಾದ್ದೆಲ್ಲಾ ಇದೆ. ಸೊಗಸಾದ್ದೊಂದು ಗೊಂಬೆಯನ್ನೇ ಮಾಡಿಬಿಡುವೆನು. ಮುದ್ದಾದ ಗೊಂಬೆ, ಚಲೋದೊಂದು ಗೊಂಬೆ. ಹ್ಯಾಗಿರಬೇಕು ಅಂದರೆ ಹ್ಯಾಗಿರಬೇಕು!
(ಕುಳಿತು ಕೆತ್ತಿ ಬಡಿದು ಹೊಡೆದು ತಿದ್ದಿ ಗೊಂಬೆಯನ್ನು ಎತ್ತಿ ತೋರಿಸುವನು.) ಉಸ್ಸಪ್ಪಾ! ಕಣ್ಣು ಬಿಗಿಯುತ್ತಾ, `ಇದೆ, ಈ ಬೆಂಕಿ ಬೆಳಕಲ್ಲಿ ಬಹಳ ಕೆಲಸ ಸಾಗೊಲ್ಲ. ಲೇ, ದರ್ಜಿ, ಚಿಪ್ಪಿಗ ಏಳೇನು-ಏಳಯ್ಯ. ನನ್ನ ಸರದಿಯು ಮುಗಿದಿದೆ, ಎದ್ದೇಳು. ಎಚ್ಚರವಾಗಿರು. ಕಾದು ಕೂತಿರು (ಬಡಗಿ ಮಲಗುವನು, ದರ್ಜಿ ಏಳುವನು)
ಚಿಪ್ಪಿಗ:- ಯಾರು, ದರ್ಜಿ, ದರ್ಜಿ ಎಂತ ಕೂಗಿದವರು, ಆಹಾ! ಇದೇನೋ ಚುಚ್ಚಿತು. (ಎದ್ದು ಕುಳಿತು ಗಂಟು ಬಿಚ್ಚಿನೋಡುವನು) ಇದು ಕತ್ತರಿ, ಇದು ಸೂಜಿ, ಓ
ಹೋ, ಎಷ್ಟೊಂದು ಸಿಲ್ಕಿನ ಬಟ್ಟೆ ಬನಾತೋ, ಕನಾತೋ, ಮಕಮಲ್ಲೋ, ಚಮಕಿ, ಜರತಾರಿ, ರಂಗಿನ ಟೇಪು ಎಲ್ಲಾ ಇದೆ. ಇದೇನು ವಾಸನೆ, ಹೊಸದಾಗಿ ಕತ್ತರಿಸಿದ ಮರದ ವಾಸನೆ. ಇನೇನು ಚಕ್ಕೆ ಚೂರು, ಬೆಂಕಿಗಾದರೂ ಹಾಕೋಣ. ಒಂದೋ, ಎರಡೋ, ಎಷ್ಟೊಂದಪ್ಪ! ಯಾರು ಆರಿಸ್ಯಾರು, ಅದೇನಲ್ಲಿ-ತಲೆಮೈಯಾಗಿ-ಕೈ ಕಾಲಾಗಿದೆ, ಓಹೋ! ಗೊಂಬೆ! ಇದರ ಮೈಯೆಲ್ಲ ವಾಸನೆ, ಪರಿಮಳವೇ ಪರಿಮಳ! ಎಲಾ ಗೊಂಬೆ! ಎಲ್ಲಿದ್ದಿಯೇ ನೀನು! ಲೇ ಬೆಡಗಿ-ನೀನು ಹುಡುಗಿಯಾಗೆ, ತು೦ಬಾ ಒಳ್ಳೋಳ್ಳೆ ಲಂಗ, ಪಾಜಾಮಿ, ಎದೆಕಟ್ಟು, ಕುಪ್ಪಸ, ಇನ್ನು ಏನೇನು ಬೇಕೋ ಅದೆಲ್ಲಾ ಮಾಡಿಯೇ ಕೊಟ್ಟುಬಿಡುತ್ತೇನೆ. ಹೆಣ್ಣಾಗಿ ಬಿಡು. ಇಲ್ಲೇ ಕೂತುಕೋ, ಅಳತೆ ತಗೋತೇನೆ. ಕತ್ತು, ಮೈಸುತ್ತು, ತೋಳುದ್ದ-ಸಾಕು ಬಿಡು. ಕಣ್ಣು ಮುಚ್ಚಿ ಬಿಡೋದರಲ್ಲೆ ಆಯ್ತು ಎಂತ ತಿಳಿ. (ದಾರ ಪೋಣಿಸಿ ಬೆರಳಿಗೆ ಅಂಗುಸ್ಥಾನ ಹಾಕಿಕೊಂಡು ಹೊಲಿಯುತ್ತಾ, ಕತ್ತರಿಸುತ್ತಾ, ಅಳತೆ ನೋಡುತ್ತಾ ಇರುವನು) ಈ ಬೆಳಕೇ ಸಾಲದು! ಎಲಾ, ಬೆಂಕಿ! ಸ್ವಲ್ಪ ಧಗ್ಗನೆ ಹತ್ತಿಕೋ, ಹಾಗೆ! ಅಷ್ಟು ಬೆಳಕು ಸಾಕು. ಮುಗಿಯಿತು ನನ್ನ ಕೆಲಸ (ಅಗಸಾಲಿಯು ಆಂ! ಹಾ! ಹಾ! ಎಂದು ಆಕಳಿಸಿ ಹೊರಳುವನು. ಮತ್ತೆ, ಏಳುವನು.)
ಚಿಪ್ಪಿಗ:- ಇದೇನು ಎದ್ದೇ ಬಿಟ್ಟ ಅಗಸಾಲಿ. ಬಟ್ಟೆ ತೊಡಿಸಿಬಿಡುತ್ತೇನೆ, ಎಷ್ಟು ಮುದ್ದಾಗಿದೆ ಗೊಂಬೆ, ಕೈಕಾಲೆಲ್ಲಾ ಅಲ್ಲಾಡುತ್ತೆ, ಮುಖ ಮೂತಿಯಲ್ಲಾ ತಿರುಗುತ್ತೆ. ನನಗಂತೂ ಇಂಥಾ ಕೆಲಸ ಮಾಡುವುದೇ ಆನಂದ. ಹಾ! ಹಾ! ಹಾ! ನಿದ್ರೆ ಬಂತು ನಿದ್ರೆ. ಸ್ವಲ್ಪ ಮಲಗಿಬಿಟ್ರೆ ಉತ್ತಮ. ಗೊಂಬೇ. ಬೆಂಕಿ ಹತ್ತಿರ ಬರಬೇಡ ಅಲ್ಲಿರು, ಹಾಗೆ! ಎಲಾ ಚಿನಿವಾರ ಏ ಅಗಸಾಲಿ ಏಳೋ ಅಪ್ಪ (ಎಂದು ಮಲಗುವನು, ಅಗಸಾಲಿ ಏಳುವನು.)
ಚಿನಿವಾರ:- ವಸ್ತ್ರ ಗಲ್ಲಕ್ಕೆ ಅದೇನು ಹತ್ತಿದ್ದೀತೋ! ಓಹೋ ಬಿಳಿಗಾರ! ಕರಗಿಸಿದ ಬಂಗಾರಕ್ಕೆ ಹಾಕಿದ್ದೇ! ಉಳಿದ್ದೆಲ್ಲಾ ಅಲ್ಲಿಟ್ಟದ್ದೇ ಅದೇಯೋ ಏನೋ, ಗಲ್ಲಕ್ಕೆ ಹತ್ತಿ ಬಿಟ್ಟಿದೆ. ಹೌದೇ! ಅಷ್ಟಕ್ಕೇ ನಗಬೇಕೇ ಅವನು! ಅಗಸಾಲೀಯೆಂತ ಕರೆದೊರ್ಯಾರೋ ! ಅದೋ, ಯಾರೋ ಅಲ್ಲಿದಾರೆ. ಮಗುವೇ? ಅಲ್ಲ, ಗೊಂಬೆಯೇ? ಅಲ್ಲ, ಮಗುವಿನಂಥ ಗೊಂಬೆ ! ಎದ್ದು ಬರೋಹಾಗಿದೆ, ನಕ್ಕುನಲಿಯೋ ಹಾಗಿದೆ. ಜರಿಲಂಗ, ತೆಳುಪರದೆ. ಬಿಗಿ ಕುಬಸ. ಯಾವ ಹೆಣ್ಣೇ? ಓಹೋ! ತಿಳಿಯಿತು. ಈ ಬೆಡಗೀನ ಬಡಗಿ ಮಾಡಿದಾನೆ. ಚಿಪ್ಪಿಗ ಬಟ್ಟೆ ಹೊಲಿದ. ಇನ್ನು ಚಿನಿವಾರನ ಸರದಿ! ಬಾರೆ ಗೊಂಬೆ! ಏನು ಬೇಕೆ ಒಡವೆ? ಹಣೆ ಬಟ್ಟೂ (ಒಂದೊಂದಾಗಿ ಗಂಟಿನಿಂದ ತೆಗೆದಿಡುವನು) ಬೆರಳು ಪಿಲ್ಲಿ, ಕಾಲುಸರ, ಕೈಬಳೆ, ಹರಳುಂಗುರ, ತೋಳುವಂಕಿ, ಬಾಜೂಬಂದಿ, ಒಡ್ಯಾಣ, ಶರಟು ಅಡ್ಡಿಕೆ ಕಟ್ಟಾಣಿಹಾರ,
ವಾಲೆ, ಮಲಕು, ಹೂವು, ಜಡಬಂಗಾರ ಇನ್ನೇನು ಬೇಕೇ ಗೊಂಬೆ? ನನ್ನ ಮದುವ್ಯಾಗು. ಭಾಳ ಒಡವೆ ಇಟ್ಟಿದ್ದೀನಿ. ಮದಿವ್ಯಾಗೇ ವಾರಾ ನಂಜೀ ಚಪ್ಪರದಟ್ಟಿಗೆ ನಡಿಯೌವ್ವಾ ನಿನಗೊಪ್ಪುಳ್ಳ ಗಂಡನ ಪಡಿಯೌವ್ವಾ, ಪಡಿಯೌವ್ವಾ (ವಕ್ರವಾಗಿ ಕುಣಿದು) ಒಡವೆ ಕಳೆದುಗಿಳದೀ., ಎಚ್ಚರ! ಯಾಕೋ ನಿದ್ದೆ ಬರುತ್ತೆ. ಮೈ ಕೈ ಭಾರ-ರೆಪ್ಪೆ ಕೂರುತ್ತೆ. (ಮಲಗುವನು. ಮಂತ್ರವಾದಿ ಬರುವನು, ಉದ್ದನಾದ ಅಂಗಿ, ಕೈಯಲ್ಲಿ ಹೊಳೆಯುವ ಕೋಲು, ಉದ್ದ ಕೂದಲು, ಗಡ್ಡ)
ಮಂತ್ರವಾದಿ:- ತುಂಗಾನದಿ ಮಡುವಿನಲ್ಲಿ ಮಾಡಿದೆ ಸ್ನಾನ. ಬಂದೆ, ಹೀಗೇ ಬಂದೆ. ಮೊಸಳೆ ಬೆನ್ನಮೇಲೆ, ಹುಲಿಹೆಗಲಮೇಲೆ, ಹಕ್ಕಿ ರೆಕ್ಕೇಮೇಲೆ, ಗುಹೆಬಿಟ್ಟೆದ್ದು. ಕಲ್ಲೂ ನೀರೂ ಕರಗುವ ಸಮಯ! ನಾನು ಹೊರಟರೆ ಹುಲಿಹದಿನೆಂಟು ಪ್ರಾಣಿಗಳೆಲ್ಲಾ ಗಪ್‌ಚುಪ್, ಕಾಡಿಗೆಕಾಡೇ, ಗುಡಾಣಗಪ್ ! ಹಾಜರಿ ತೆಕ್ಕೋಳೋಣವೇ! ಹುಲೀ. ಪಟ್ಟೆ ಹುಲಿ (ಹುಲಿ ಆರ್ಭಟಿಸುತ್ತೆ) ಆನೇ! ಓ ಮದ್ದಾನೆ! (ಆನೆ ತುತ್ತೂರಿ ಕೂಗುತ್ತೆ) ಕೋಳೀ. ಕಾಡು ಕೋಳೀ! (ಕೋಳಿ ಕೊ! ಕೋ!! ಕೊ !!! ಎನ್ನುತ್ತೆ.) ಇವರಾರು ಇಲ್ಲಿ ಮಲಗಿರುವವರು? ನಡುವೆ ಬೆಂಕಿ ಸುತ್ತ ಜನ. ಓಹೋ! ಇವನು ಅಗಸಾಲಿ ಉಳಿ, ಕೊಡತಿ ಗಂಟಲ್ಲಿದೆ. ಈ ಗಂಟಿನಲ್ಲಿ ಇಣಿಕಿನೋಡ್ತಾ, ಇದೆ ಕತ್ತರಿ! ಇವನೇ ದರ್ಜಿ. ಇವನಾರೋ? ಇವನ ಮೋರೆ ನೋಡಿದರೆ ಅಗಸಾಲೆಹಾಗಿದೆ. (ಅಲ್ಲಿ ಇಲ್ಲಿ ಹುಡುಕಾಡಿ ಚಕ್ಕೆ ಚೂರುಗಳನ್ನಾರಿಸಿ, ಹರಕುಬಟ್ಟೆಗಳನ್ನು ಜೋಡಿಸಿ. ಉದುರಿದ ಗೆಜ್ಜೆ ಮುತ್ತುಗಳನ್ನು ಕೈಗೆ ತೆಗೆದುಕೊಂಡು.) ಇವರಿಷ್ಟು ಜನವೂ ಒಂದಾಗಿ ಯಾವುದೋ ಗೊಂಬೆಯನ್ನು ಮಾಡಿ,
ಯಾವುದೋ ಜಾತ್ರೆಗೆ, ಕೊಂಡೊಯ್ಯುತ್ತಿರಬಹುದು. ನಾನೀಗ ಆ ಗೊಂಬೆ ಎಲ್ಲಿದ್ದರೂ ಸರಿ. ಅದಕ್ಕೆ ಜೀವ ಬರುವಂತೆ ಮಾಡಿ ನನ್ನ ಹಿಂದೆ ಹಿಂದೆಯೇ ಕುಣಿಕುಣಿಯುತ್ತಾ ಬರುವಂತೆ ಮಾಡುವೆನು (ನೆಟ್ಟಗೆ ನಿಂತು ಓಲಾಡುತ್ತಾ ಮಂತ್ರ ಹೇಳುವ೦ತೆ ನಟಿಸುತ್ತಾ, ಇರುವನು,) ಛೂ, ಮಂತ್ರಗಾಳಿ, ಕಾಳಿ, ಕರಾಳಿ, ಹ್ರಾಂ, ಹ್ರೀಂ, ಜೈ ಮಹಂ ಕಾಳೀ (ಎಂದು ಮಂತ್ರಹಾಕಿ-ಮೂರು ಕಲ್ಲುಗಳನ್ನು ಎಸೆಯುವನು, ಬೆಂಕಿಯು ದೊಡ್ಡದಾಗುವದು. ಸಾಧ್ಯವಾದರೆ ಪಟಾಸಿನ ಶಬ್ದವಾಗಬಹುದು. ಬೆಂಕಿಯ ಕಡೆಯಿಂದ ಗೊಂಬೆಗೆ ಜೀವಬಂದು ಬೆಡಗಿನ ಹುಡುಗಿಯಾಗಿ ಬಾಗುತ್ತಾ, ಬಳುಕುತ್ತಾ ಮಂತ್ರವಾದಿಯ ಕಡೆಗೆ ಬರುವಳು.)
ಮಂತ್ರವಾದಿ:- ಕುಣಿ! ಮತ್ತೂ ಕುಣೀ (ಹುಡಿಗಿಯು ಕುಣಿಯುತ್ತಾಳೆ. ತಾಳ, ಮದ್ದಲೆ, ಗೆಜ್ಜೆಗಳ ಶಬ್ದವಾಗುತ್ತೆ. ಹಿಂದೆ ಇರುವ ಕಾಡೆಲ್ಲ ಸುಯಿಂ ಗುಟ್ಟಿ
ಕೊಂಡು ಶಬ್ದಮಾಡುತ್ತದೆ ಅಗಿಲಿನ ಮರವು ತೋಳು ಬೀಸುತ್ತದೆ.)
ಮಂತ್ರವಾದಿ:-ಅಗಿಲಿನ ಮರವೇ! ಇದೇನೂ ನಿನಗೂ ಆನ೦ದ? ನಿನ್ನ ಒಡಲಿಂದ ಬಂತೇ ಈ ಗೊಂಬೆ? (ಮರವು ಕೊಂಬೆ, ಬೀಸುವುದು, ಗೊಗ್ಗರ ಧನಿಯಲ್ಲಿ
ಹೂಗುಟ್ಟುವುದು.)
ಮಂತ್ರವಾದಿ:- ಏ! ಬೆಡಗಿನ ಹುಡುಗೀ. ನೀನು ಹಾಡು ಹೇಳಿದರೆ ನೀನು ಕುಣಿದರೆ, ಅಗಿಲಿಗೂ ಮುಗಿಲಿಗೂ, ಮಿಗಲಾದ ಆನಂದ. ಕುಣೀ ಮತ್ತೂ ಕುಣಿ?
ಬೆಡಗಿ:- ನಾನು ಕುಣಿ ನೀನು ದಣಿ ನಾನು ಮಣಿ
ನೀನು ದಣಿ ಹೋ! ಹೊ! ಹೋ!!!
ಗೆಜ್ಜೆ ಗಲು, ಗಲು, ಗಲು ಹೆಜ್ಜೆ ತಕ,
ಹುಡುಗಿಯನೆ ಬೆಡಗಿಯನೆ ನೋಡಿ
ನಲಿ ಕಾಡಿನಲಿ ಹೋ! ಹೋ!! ಹೋ!!!
(ಚಿಪ್ಪಿಗ, ಚಿನಿವಾರ, ಬಡಗಿ, ಎದ್ದೇಳುವರು, ಅಚ್ಚರಿಯಿಂದ ಬಾಯ್ ಕಳೆದುಕೊಂಡು ನೋಡುತ್ತಾ ನಿಲ್ಲುವರು)
ಮಂತ್ರವಾದಿ:- ಏ ಬೆಡಗೀ? ನೀನೆಷ್ಟು ಚೆಲುವೇ ನನ್ನ ಗುಹೆಯಲ್ಲಿ ಇನ್ನಾರೂ ಇಲ್ಲೇ. ಯೇ! ಗಿಣೀ-ರಮಣೀ-ಮುತ್ತಿನಮಣೀ-ಚೆಲುವಿನ ಕಣೀ-ಬಾರೆ ಮಣಿ! (ಹಿಡಿಯ
ಹೋಗುವನು, ವಕ್ರವಾಗಿ ಕುಣಿಯುತ್ತ)
ಬೆಡಗಿ:- (ಕೈಗೆ ಸಿಕ್ಕದಲೆ ಓಡಿಹೋಗಿ)
ಕುಣಿಸಿ ದಣಿ, ದಣಿಸಿ ಕುಣಿ
ನಾನು ಕುಣಿ, ನೀನು ದಣಿ
ಅಕ್ಕೋ ಇಕ್ಕೋ ಮಣಿ
ದಕ್ಕೆ ನಿನಗೆ ನಾನು, ಸಿಕ್ಕೆ ನಿನಗೆ ನಾನು,
ಅಣ್ಣ ಗಾಳಿ, ಅಕ್ಕ ಬಿಸಿಲು
ಸೊಗದ ತಾಯಿ, ನನಗೆ ಅಗಿಲು
ಮುಗಿಲ ಅಗಿಲ ಮಗಳು ನಾನು ಹೆಣ್ಣು
ಬಡಗಿ:- ಚಿನಿವಾರಾ ! ಹೆಗಲಮೇಲೆ ನೋಡಿದೆಯಾ, ಆ ಗುರುತು. ಆ ನಿನ್ನ ರುಳಿ. ಆ ಮುಂಗೈ ನಿನ್ನ ಮಚ್ಚೆ; ನನ್ನ ಉಳಿ ಮಾಡಿದ ಗುರುತು ಅಲ್ಲವೆ ಎಡಗಲ್ಲದಲ್ಲಿ! ನನ್ನ ಗೊಂಬೆಗೆ, ಜೀವ ಬಂದಿದೆ! ನನ್ನವಳೇ ಆ ಬೆಡಗಿ. ಹುಡುಗೀ ಬಾರೆ ನನ್ನ ಬೆಡಗಿ! ಗೊಂಬೇ ಏ ನನ್ನ ರಂಬೆ ?
ಬೆಡಗಿ:- ಬರವಲ್ಲೆ ನಾ ನೆಂಬೆ ಮಂತ್ರವಾದಿ ತಂದೆ
ಪ್ರಾಣ ಕೊಟ್ಟ ಇಂದೆ
ತ್ರಾಣ ಕೊಟ್ಟ ಇಂದೆ
ಬಡಗಿ, ನನಗೆ ತಾಯಿ.
ಒಡಲಕೊಟ್ಟನೆಂಬೆ
ನಾನು ಕುಣಿ ನೀನು ಮಣಿ
ತಕ್ಕ ತಾನನ.
ಚಿಪ್ಪಿಗ:- ಕುಪ್ಪಸದ ಅಂಚು, ಲಂಗದ ಮಿಂಚು, ಸೆರೆಗಿನ ಕುಂಚು. ಎಲ್ಲಾ ನಂದೇ -ಚೆನ್ನಾಗಿ ನೆನಪಿದೆ. ಬೆಂಕಿಯ ಬೆಳಕಲ್ಲಿ ಹೊಲಿದಿದ್ದಲ್ವೆ ಬಟ್ಟೆಕೊಟ್ಟು ಬರಿಕೊಟ್ಟೆ, ಮಾನಕೊಟ್ಟೆ. ನನ್ನವಳು ಆ ಬೆಡಗಿ! ಭಲೇ, ಬಾಲೇ,
ಬೆಡಗಿ:- ನೆರಿಗೆ ಇಟ್ಟು, ಲ೦ಗತೊಡಿಸಿ,
ಕಸೆಯ ಕಟ್ಟಿ, ಕುಪಸವಿಟ್ಟೆ,
ವಾವೆಯಲ್ಲಿ ಅಕ್ಕ ನೀನು
ಬರಲುವಲ್ಲೆ ಹೋಗೆಲೋ||
ನೀನು ದಣಿ ನಾನು ಕುಣಿ
ತಕ್ಕ ತಾನನ. ತಕ್ಕ ತಾನನ.
ಅಕ್ಕಸಾಲೆ:- ಕಾಲುಪಿಲ್ಲಿಯಿಂದ ಹಣೆಯ ಬಟ್ಟಿನವರಿಗೂ, ಆ ಒಡವೆಗಳೆಲ್ಲಾ ನನ್ನವೆ? ನನ್ನ ಕೈವಾಡ! ನಾನೇ ಅರಿಯನೇ? ಒಡವೆ ಇಟ್ಟೆ. ಮಾತುಕೊಟ್ಟೆ, ಬಾರೆಗೊಂಬೆ, ಮದುವೆಗೆಂಬೆ !
ಬೆಡಗಿ:- ಬಾರೆನೆಂಬೆ, ಚಿನ್ನಿನವರ
ಅಣ್ಣ ನೀನು, ಬಡಾಯ್ಗಾರ
ಅಗಿಲಮಗಳು, ನಾನು ಮುಗಿಲ
ಹೆಣ್ಣು ನಾನು
ತಕ್ಕ ತೈ ತಕ್ಕ ತೈ
ತಕ್ಕ ತಾನನ.
ಮಂತ್ರವಾದಿ:- ಮೋಸಗಾರ್ತಿ.
ಬಡಗಿ:- ಸೊಗಸುಗಾರ್ತಿ
ಚಿಪ್ಪಿಗ:- ಸೆಣಸುಗಾರ್ತಿ
ಚಿನಿನಾರ:- ಮಾಟಗಾರ್ತಿ
ಬೆಡಗಿ:- ಈ ಸಾರ್ತಿ, ಈ ಸಾರ್ತಿ
ಮರಳಿ ಮರಳಿ ಹೇಳುವೆ
ನಿಮಗೆ ನಾನು ದಕ್ಕವಲ್ಲೆ
ಆಸೆ ಸಲ್ಲ, ನಿಮಗೆ ಎಲ್ಲ
ಅಕ್ಕೋ ಇಕ್ಕೋ ತಕ್ಕ ತೈ-ತಕ್ಕ ತೈ
ತಾನ ನಾನನ, ತಾನ ನಾನನ.
ಮಂತ್ರವಾದಿ:- ಹಿಡಿ ಶಾಪ. ಕಿಡಿಕಿಡಿ ಕೋಪ. ತಡೆಯಲಾರೆ ತಾಪ. ಹಿಡೀ ಶಾಪ. ಹ್ರಾಂ, ಹ್ರೀಂ, ಹ್ರೂಂ, ಶ್ರೀಮಹಾಂಕಾಳಿ, ರಕ್ತ ಬೀಜೇಶ್ಚರೀ, ಹ್ರಾಂ, ಹ್ರೀಂ, ಹ್ರೂಂ.
(ಎಲ್ಲರೂ ಹತ್ತಿರ ಹತ್ತಿರ ನಿಧಾನವಾಗಿ ಬರುವರು- ಮಂತ್ರವಾದಿಯು ಮಹಾ ರೌದ್ರಾವತಾರಿಯಾಗುವನು. ಮರದೊಳಗಿಂದ, ಗೊಗ್ಗರ ಧನಿಯಲ್ಲಿ ಶಬ್ದವಾಗುವದು.)
ಅಗಿಲಿನ ಮರ:- ಎಚ್ಚರ ! ಎಚ್ಚರ !! ಮಂತ್ರವಾದೀ ನೀನೆಲ್ಲಿದ್ದೀ? (ನಿಧಾವಾಗಿ ಗೊಗ್ಗರ ದನಿಯಲ್ಲಿ)
ಮಗಳೇ ಅಗಿಲಿನ ಮಗಳೇ
ಎಡರಲಿ ಇಹಳೇ
ಬಾ ನನ್ನೊಳಗೆ
ಮುಗಿಲಿನ ಕೆಳಗೆ
ಮಗಳೇ-ಮಗಳೇ !
(ಮಂತ್ರವಾದಿಯು ಕೆಳಗೆ ಬೀಳುವನು-ಬಡಗಿ ಮೊದಲಾದವರು. ನಿಧಾನನಾಗಿ ಕುಳಿತು ನೆಲಕ್ಕೆ ಒರಗುವರು. ಬೆಂಕಿಯ್ ಬೆಳಕು ಹೆಚ್ಚುವುದು. ಅಗಿಲಿನ ವಾಸನೆ ಮೀರಿ ಬರುವುದು. ಮರದ ಒಡಲೊಳಗಿಂದ ಅಗಿಲುದೇವಿ ಕುಣಿಯುತ್ತಾ, ಬರುವಳು. ಬೆಡಗಿಯ ಕೈ ಹಿಡಿದು ಹಾಡು ಹೇಳುವಳು.)
ಅಗಿಲುದೇವಿ:- ನಾನೌ ಅಗಿಲು ದೇವಿ
ಬಾ ಮುಗಿಲು ದೇವಿ
ಅಗಿಲ ಮಗಳೆ ಮುಗಿಲ ಹೆಣ್ಣೆ
ಸೊಗಸು ಮೂರುತಿ
ಬೀರು ಕೀರುತಿ!
ಮರವ ಸೇರು, ಮರದ ಗೊಂಬೆ
ಮುಗಿಲಿಗೇರು ಚೆಲುವು ಗೊಂಬೆ;
ಹುಡುಗಿ ಬೆಡಗಿ ಬಾರೆಲೇ!
(ಇಬ್ಬರೂ ಮಾಯವಾಗುವರು.)
ಮಂಗಳ:- ಮುಗಿಲಲೆಲ್ಲ ಮಿಗಿಲು ಪ್ರಭಾ
ಇಳೆಯೊಳೆಲ್ಲ ಸತ್ಯ ಪ್ರಭಾ
ನಾಡಲೆಲ್ಲ ನಿತ್ಯ ಪ್ರಭಾ
ಶಾಂತಿ ಪ್ರಭಾ ಶಾಂತಿ ಪ್ರಭು
ಪ್ರಭು ಚಾಮ ಪ್ರಭು ಪ್ರಭಾ!
*****