ಕರಿಮುಖ ಅಮೇರಿಕಾಕ್ಕೆ ಹೋದದ್ದು

ಪಾತ್ರವರ್ಗ

*   ಕರಿಮುಖ (ಆನೆ)

*   ನರಿ

*   ಬಾಸೂರಕ (ಸಿಂಹ)

*   ಕರಡಿ

*   ಸೀಳುನಾಯಿ

*   ಎರಡು ಜಿಂಕೆಗಳು

*   ಎರಡು ಮೊಲಗಳು

*   ಗಿಳಿ

*   ಎಂಟು ಇತರ ಪ್ರಾಣಿಗಳು , ಪಕ್ಷಿಗಳು.

ದೃಶ್ಯ -೧

(ರಂಗದ ಎರಡೂ ಬದಿಯಿಂದ, ಹಾಡಿನ ಲಯಕ್ಕನುಗುಣವಾಗಿ ಪ್ರಾಣಿಗಳ ಪ್ರವೇಶ)

ಹಾಡು     : ಹ….ಹ….ಹ…ಹಾಹಹ
ನಮ್ಮ ರಾಜ ಗಜಮುಖ
ಹೊರಟಿದಾನೆ ಅಮೇರಿಕಾ
ನೋಡಲೊಂದು ಬಿಳಿಮುಖ
ಜೋಡಿ ಬೇಡಿ ಕರಿಮುಖ
ಹ..ಹಹ….ಹಾಹಹ……

ಪ್ರಾಣಿ ೧ : ಮಹಾರಾಜ ಗಜಮುಖರಿಗೆ

ಎಲ್ಲರೂ   : ಜೈ

ಪ್ರಾಣಿ ೨ : ರಾಜಾಧಿರಾಜ ಕರಿಮುಖರಿಗೆ

ಎಲ್ಲರೂ   : ಜೈ

ಪ್ರಾಣಿ ೩ : ಸಾಮ್ರಾಟ ಹಸ್ತಿಮುಖರಿಗೆ

ಎಲ್ಲರೂ   : ಜೈ

ಪ್ರಾಣಿ ೪ : ಪರಮವೀರ ಕುಂಜರಮುಖರಿಗೆ

ಎಲ್ಲರೂ   : ಜೈ

ಕರಿಮುಖ : ಹಾಂ…ಸಾಕು ಸಾಕು ನಿಲ್ಲಿಸಿ ಕಾಡುಗಳೆಲ್ಲಾ
ಬರಿದಾಗುತ್ತಿದೆ. ನಮ್ಮ ಜಾಗಗಳನ್ನು ಮನುಷ್ಯರು
ಅಕ್ರಮವಾಗಿ ಪ್ರವೇಶಿಸಿ ಸಕ್ರಮಮಾಡಿಕೊಳ್ಳುತ್ತಿದ್ದಾರೆ.
ನಮಗೆ ಆಹಾರ ಸಿಗುತ್ತಿಲ್ಲ. ಮಲಕ್ಕೊಳ್ಳಲು ಜಾಗವಿಲ್ಲ.
ಸಂತತಿ ಬೆಳೆಸಲು ಸುರಕ್ಷಿತ ಸ್ಥಳ ಇಲ್ಲ. ದಂತಕ್ಕಾಗಿ
ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಈ ಸಮಸ್ಯೆಗಳ
ಪರಿಹಾರಕ್ಕೆ ಉತ್ತರ ಕಂಡು ಹಿಡಿಯಲು ನಾನು
ಹೊರಟಿದ್ದೇನೆ ಅಮೇರಿಕಾಕ್ಕೆ.

ಪ್ರಾಣಿ ೧   : ಮಹಾರಾಜರೇ ನಿಮ್ಮ ಪ್ರಯಾಣ ಸುಖಕರವಾಗಲಿ

ನರಿ      : ನೀವು ಬರುವವರೆಗೆ ನಾನು ಉಸ್ತುವಾರಿ ಮಹಾರಾಜನಾಗಿ
ಇಲ್ಲಿಯ ಆಡಳಿತ ನೋಡಿಕೊಳ್ಳುತ್ತೇನೆ.

ಪ್ರಾಣಿ ೨  : ಏನು ಬೇಕಾದ್ರೂ ಮಾಡಿ ಸ್ವಾಮಿ, ಆದ್ರೆ ಪೂರ್ತಿ ಅಧಿಕಾರ
ಹಸ್ತಾಂತರ ಮಾತ್ರ ಮಾಡ್ಬೇಡಿ. ರಾಜಕೀಯದಲ್ಲಿ ಯಾರನ್ನೂ
ನಂಬುವಂತಿಲ್ಲ.

ಪ್ರಾಣಿ ೩   : (ನಗುತ್ತಾ) ಮಹಾರಾಜರೇ, ಒಂದು ಬಿಳಿಮುಖದವಳನ್ನು
ನೋಡಿ, ಕರಕೊಂಡು ಬನ್ನಿ.

ಕರಿಮುಖ  : ಮೊದಲು ನಮ್ಮ ಪ್ರಾಣಿ ಸಂಕುಲಕ್ಕೆ ಬಂದಿರುವ
ಸಂಕಷ್ಟಗಳಿಗೆ ಪರಿಹಾರ ಕಂಡುಹಿಡಿಯಬೇಕು. ಅದು
ಸ್ವಾಮಿಕಾರ್ಯ. ಆಮೇಲೆ ಹಹ್ಹಹಾ… ಒಬ್ಳು
ಬಿಳಿಮುಖದವಳನ್ನು…. ಹಹ್ಹಹಾ ಅದು ಸ್ವಕಾರ್ಯ.
(ವಿಮಾನದ ಸದ್ದು)

ಪ್ರಾಣಿ ೧   : ಮಹಾರಾಜರೇ, ಬೇಗ ಹೊರಡಿ. ವಿಮಾನದ ಸದ್ದು ಕೇಳಿಸುತ್ತಿದೆ.

ಪ್ರಾಣಿ ೨   : ಮಹಾರಾಜರೇ, ನಿಮ್ಮ ಪಾಸ್ ಪೋರ್ರ್‍ಟ್ ಇಲ್ಲಿದೆ.

ಪ್ರಾಣಿ ೩   : ಮಹಾರಾಜರೇ, ಡಾಲರ್ ಚೀಲ ಮರೆತುಬಿಟ್ಟಿರಲ್ಲಾ?

ಕರಿಮುಖ  : ಆಗಲಿ ಪ್ರಜೆಗಳೇ, ಹೋಗಿ ಬರುತ್ತೇನೆ. ಎಲ್ಲರೂ ಸುಖವಾಗಿರಿ.

(ಕರಿಮುಖ ಮುಂದೆ- ಪ್ರಾಣಿಗಳು ಕುಣಿಯುತ್ತಾ, ಹಾಡುತ್ತಾ ಹಿಂದಿನಿಂದ ಹಿಂಬಾಲಿಸುವುವು)

ಪ್ರಾಣಿಗಳು : ಶುಭ ಪ್ರಯಾಣ …ಸುಖಪ್ರಯಾಣ
ಬಾನ್ ವಾಯೇಜ್
ಶುಭಪ್ರಯಾಣ.. ಸುಖಪ್ರಯಾಣ.
ಬಾನ್ ವಾಯೇಜ್ (ಕರಿಮುಖನ ನಿರ್ಗಮನ)

ಪ್ರಾಣಿ ೫   : ಸ್ವಾಮಿ ದೇವರೇ, ಆ ವಿಮಾನವನ್ನು ಭಯೋತ್ಪಾದಕರು
ಅಪಹರಿಸದಿರಲಪ್ಪ.

ಪ್ರಾಣಿ ೬   : ಭಗವಂತಾ, ಆ ವಿಮಾನ ಆಕಾಶದಲ್ಲಿ ಸ್ಫೋಟಿಸದಿರಲಪ್ಪ.

ಪ್ರಾಣಿ ೭   : ಮಹಾರಾಜರ ಭಾರಕ್ಕೆ ವಿಮಾನ ಕೆಳಕ್ಕೆ ಜಗ್ಗದಿರಲ್ಲಪ್ಪ.

ಪ್ರಾಣಿ ೮   : ಗಗನಸಖಿ ಮಹಾರಾಜರ ಹೃದಯ ಕದಿಯದಿರಲಿ.

ಹಾಡು      : ಶುಭ ಪ್ರಯಾಣ..ಸುಖ ಪ್ರಯಾಣ . ಬಾನ್ ವಾಯೇಜ್
ಕರಿಮುಖ ವೆನ್ ಟು ಅಮೇರಿಕಾ(೩)
ಬಾನ್ ವಾಯೇಜ್….(೨)
ಕರಿಮುಖ ವೆನ್ ಟು ಅಮೇರಿಕಾ, ಹಿ ವಿಲ್ ಬ್ರಿಂಗ್ ಎ
ಬಿಳಿಮುಖ… ಶುಭಪ್ರಯಾಣ, ಸುಖಪ್ರಯಾಣ…..||

ದೃಶ್ಯ -೨
(ಪ್ರಾಣಿಗಳು ಮಾತಾಡಿಕೊಳ್ಳುವವು)

ಪ್ರಾಣಿ ೧   : ಕಾಡಿನ ವ್ಯವಸ್ಥೆ ಹಾಳಾಗಿ ಹೋಗಿದೆ.

ಪ್ರಾಣಿ ೨   : ಉಸ್ತುವಾರಿ ಮಹಾರಾಜ ಮಂತ್ರಿ ನರಿಯಣ್ಣನನ್ನು ಯಾರು
ಕ್ಯಾರೇ ಮಾಡುವುದಿಲ್ಲ.

ಪ್ರಾಣಿ ೩   : ಅವನು ಮೋಸಗಾರ , ಅವನಿಗೆ ಪ್ರಜೆಗಳ ಹಿತ ಮುಖ್ಯ ಅಲ್ಲ.

ಪ್ರಾಣಿ ೪   : ಅವನು ಯಾವುದೇ ಸಮಾರಂಭಕ್ಕೆ ಸರಿಯಾದ ಸಮಯಕ್ಕೆ ಬರುವುದಿಲ್ಲ.

ಪ್ರಾಣಿ ೫   : ಕೈ ಬಿಸಿ ಮಾಡದಿದ್ದರೆ ಯಾವ ಕೆಲಸವನ್ನೂ ಮಾಡುವುದಿಲ್ಲ.

ಪ್ರಾಣಿ ೬   : ಚೆಂದದ ಹೆಣ್ಣು ಪ್ರಾಣಿಗಳ ಕಡೆಗೆ ಕೊಳಕು ನೋಟ ಬೀರುತ್ತಾನೆ.

ಪ್ರಾಣಿ ೭   : ಸಣ್ಣ ಪುಟ್ಟ ಪ್ರಾಣಿಗಳನ್ನು ತಿಂದೇ ಬಿಡುತ್ತಾನೆ.

ಪ್ರಾಣಿ ೮   : ಹಾಗಾದ್ರೆ ಈಗ ಏನು ಮಾಡುವುದು?

ಪ್ರಾಣಿ ೯   : ಒಬ್ಬ ಬಲಶಾಲಿಯಾದ ರಾಜ ಇಲ್ಲದಿದ್ದರೆ ಕಾಡು
ಹಾಳಾಗಿ ಹೋಗುತ್ತದೆ.

ಪ್ರಾಣಿ ೧   : ಅಂತಹ ಬಲಶಾಲಿ ಎಲ್ಲಿದ್ದಾನೆ?

ಪ್ರಾಣಿ ೯   : ಯಾಕಿಲ್ಲ? ಪಕ್ಕದ ಕಾಡಿನಲ್ಲಿ ಇದ್ದಾನಲ್ಲ ಬಾಸೂರಕ!

ಪ್ರಾಣಿ ೨   : ಅಯ್ಯಯ್ಯೋ, ಬೇಡಪ್ಪಾ. ಅವನ ಹೆಸರು ಕೇಳುವಾಗಲೇ
ನನಗೆ ಒಂದು ಬರುತ್ತದೆ.

ಕರಡಿ     : ರಾಜನಾದ ಮೇಲೆ ಅವನು ಸರಿಹೋಗುತ್ತಾನೆ ಬಿಡು.

ಪ್ರಾಣಿ ೩   : ಅವನು ಯಾವ ಕಾನೂನನ್ನೂ ಕ್ಯಾರೆ ಮಾಡಲಿಕ್ಕಿಲ್ಲ.

ಕರಡಿ     : ಅಂತಹವರಿಗೆ ಆಡಳಿತಕೊಟ್ಟು ನೋಡಬೇಕು. ಆಗ ಅವರು ಸರಿಯಾಗುತ್ತಾರೆ.

ಪ್ರಾಣಿ ೪   : ಅದು..ಸರಿಯಾದ ಮಾತು!

ಎಲ್ಲರೂ     : ಹಾಗಾದ್ರೆ ..ಅವನೇ ಆಗ್ಬಹುದು . ಅವನನ್ನು ಕರಿಸೋಣ.

ಕರಡಿ     : ಎಲ್ಲರೂ ನನ್ಜೊತೆಗೆ ಬನ್ನಿ. ಬಾಸೊರಕನ ಗುಹೆಗೆ ಹೋಗಿ
ಅವನನ್ನು ಕೇಳೋಣ.

(ನಿರ್ಗಮನ)

ದೃಶ್ಯ -೩

(ಸಿಂಹ ನೃತ್ಯದೊಡನೆ ಬಾಸೊರಕನ ಪ್ರವೇಶ)

ಹಾಡು      : ಬಂ ಬಂ ಬಂ …. ಬಾಸೂರಕ (೪)

ಬಾಸೊರಕ  : ಹ…ಹ್ಹ…ಹಾ. ಪಕ್ಕದ ಕಾಡಿನ ರಾಜ
ಕರಿಮುಖ ಅಮೇರಿಕಾಕ್ಕೆ ಹೋಗಿದ್ದಾನೆ ಎಂಬ ಸುದ್ದಿ
ಬಿಡುಗಡೆಯಾಗುದೆ. ಹ..ಹ್ಹ…ಹಾ, ಇನ್ನು
ಎರಡೂ ಕಾಡಿಗೂ ನಾನೇ ಮಹಾರಾಜ . ಆ ಕಾಡಿಗೆ ನುಗ್ಗಿ,
ನನಗೆ ಇಷ್ಟ ಬಂದ ಪ್ರಾಣಿಗಳನ್ನು ತಿನ್ನುತ್ತೇನೆ (ಪ್ರಾಣಿಗಳು
ಕಾಣಿಸಿಕೊಳ್ಳುವುವು)

ಪ್ರಾಣಿ ೧   : ಮಹಾಪ್ರಭು ಬಾಸೊರಕನಿಗೆ

ಎಲ್ಲರೂ     : ಜಯವಾಗಲಿ

ಪ್ರಾಣಿ ೨   : ಸಿಂಹ ಮಹಾರಾಜನಿಗೆ

ಎಲ್ಲರೂ     : ಜಯವಾಗಲಿ

ಬಾಸೂರಕ  : ಹ…ಹ್ಹ…ಹಾ ಹುಡುಕುವ ಬಳ್ಳಿ ಕಾಲಿಗೇ
ಸಿಕ್ಕಿದಂತಾಗಿದೆ. ನೀವಾಗಿಯೇ ಇಲ್ಲಿಗೆ ಬಂದಿದ್ದೀರಿ.
ನಿಮ್ಮನ್ನೆಲ್ಲಾ ತಿಂದು ತೇಗುತ್ತೇನೆ.

ಪ್ರಾಣಿ ೩   : ಮಹಾಪ್ರಭು, ಶಾಂತಿ…ಶಾಂತಿ.

ಬಾಸೂರಕ  : ಆದೀತು… ಅವಳೂ ಆದೀತು. ಅವಳನ್ನೇ ಮೊದಲು
ತಿಂದು ಮತ್ತೆ ನಿಮ್ಮನ್ನು ನೋಡಿಕೊಳ್ಳುತ್ತೇನೆ.

ಪ್ರಾಣಿ ೧   : ನೀವು ಮಹಾಪ್ರಭುಗಳು ಸಮಾಧಾನ ಮಾಡಿಕೊಳ್ಳ ಬೇಕು.

ಪ್ರಾಣಿ ೨   : ಜೀವನದಲ್ಲಿ ತಿನ್ನುವುದೊಂದೇ ಮುಖ್ಯ ಅಲ್ಲ.

ಪ್ರಾಣಿ ೩   : ಕೊಲ್ಲವವನಿಗಿಂತಾ  ಕಾಯುವವನೇ ದೊಡ್ಡವನು.

ಕರಡಿ     : ನಮ್ಮ ಸಮಸ್ಯೆಯನ್ನು ನಿಮ್ಮಲ್ಲಿ ಹೇಳಿಕೊಳ್ಳಲು ಬಂದಿದ್ದೇವೆ

ಬಾಸೂರಕ  : ಸರಿ ಹಾಗಾದರೆ ನಿಮ್ಮ ಸಮಸ್ಯೆಯನ್ನು ಕೇಳಿದ ಮೇಲೆ…..
ಯಾರನ್ನು ತಿನ್ನುವುದೆಂದು ನಾನು ತೀರ್ಮಾನಿಸುತ್ತೇನೆ.
ಹ್ಞೂಂ ಬೇಗ ಬೊಗಳಿ ಸಾಯುಲು ಸಿದ್ದರಾಗಿ.

ಪ್ರಾಣಿ ೪   : ಮಾಹಾಪ್ರಭು, ಸಾಮ್ರಾಟ ಕರಿಮುಖರು ಅಮೇರಿಕಾಕ್ಕೆ ಹೋಗಿದ್ದಾರೆ.

ಪ್ರಾಣಿ ೫   : ಮಂತ್ರಿ ನರಿಯಣ್ಣನನ್ನು ಉಸ್ತುವಾರಿ ರಾಜನನ್ನಾಗಿ ಮಾಡಿ ಹೋಗಿದ್ದಾರೆ.

ಪ್ರಾಣಿ ೬   : ಮಂತ್ರಿ ನರಿಯಣ್ಣನಿಗೆ ಆಡಳಿತದ ಅನುಭವವಿಲ್ಲ.

ಪ್ರಾಣಿ ೭   : ಅವನು ಅವಿವೇಕಿ , ಅದಕ್ಷ, ಅಪ್ರಾಮಾಣಿಕ, ಜಾತಿವಾದಿ
ಕೋಮುವಾದಿ.

ಪ್ರಾಣಿ ೮   : ಅವನು ಭ್ರಷ್ಟಾಚಾರಿ, ದುರಾಚಾರಿ, ಅವಿಚಾರಿ, ಅನಾಚಾರಿ,
ಅತ್ಯಾಚಾರಿ.

ಕರಡಿ     : ನಮಗೊಬ್ಬ ಬಲಿಶಾಲಿ ಮಹಾರಾಜ ಬೇಕು. ಅದಕ್ಕೆ ನಾವು
ನಿಮ್ಮಲ್ಲಿಗೆ ಬಂದಿದ್ದೇವೆ.

ಪ್ರಾಣಿ ೧   : ನೀವು ಹಂಗಾಮಿ ಮಹಾರಾಜರಾಗಿ ನಮ್ಮನ್ನು ಕಾಪಾಡಬೇಕು.

ಬಾಸೂರಕ  : ಹ…ಹ್ಹ..ಹಾ. ಇದು ಒಳ್ಳೆಯ ಸಲಹೆ.
ಬಯಸದೆ ಬಂದ ಭಾಗ್ಯ.

ಪ್ರಾಣಿ ೧   : ಬೋಲೋ ಬಾಸೂರಕ ಮಹಾರಾಜ್ ಕೀ

ಉಳಿದವರು  : ಜೈ

ಪ್ರಾಣಿ ೨   : ಮಹಾ ಸಾಮ್ರಾಟ ಸಿಂಹ ಮಹಾರಾಜ್ ಕೀ

ಉಳಿದವರು  : ಜೈ

(ಸಿಂಹದ ಗರ್ಜನೆ, ಬಾಸೂರಕ ಪಕ್ಕದಲ್ಲೇ ಇದ್ದ ಪ್ರಾಣಿಯೊಂದನ್ನು ಹಿಡಿದು ತಿನ್ನುವುದು)

ಎಲ್ಲರೂ     : ಓಡಿ….ಓಡಿ…. ಬದುಕಿಕೊಳ್ಳಿ…ಅವನು ಯಾರನ್ನು
ಬಿಡುವಂತೆ ಕಾಣುವುದಿಲ್ಲ. (ಓಡುವವು)

ದೃಶ್ಯ – ೪

(ಪ್ರಾಣಿಗಳೆಲ್ಲಾ ಬೇಸರದಿಂದಿರುವವು ನರಿ ಅತ್ತಿಂದಿತ್ತ ಹೋಗುತ್ತಿರುವುದು)

ಪ್ರಾಣಿ ೧   : ದೇವರೇ…ಏನಿದು?

ಪ್ರಾಣಿ ೨   : ಹೇ ಭಗವಾನ್…ಏನಿದೆಲ್ಲಾ?

ಪ್ರಾಣಿ ೩   : ಅವನು ಎಷ್ಟೂಂದು ಪ್ರಾಣಿಗಳನ್ನು ತಿಂತಿದ್ದಾನೆ?

ಪ್ರಾಣಿ ೪   : ಅವನು ತೀಟೆಗಾಗಿ ಪ್ರಾಣಿಗಳನ್ನು ಕೊಲ್ತಾ ಇದ್ದಾನೆ.

ಪ್ರಾಣಿ ೫   : ಅವನ ಹೊಟ್ಟಿಗೆ ಬೆಂಕಿ ಬೀಳಾ.

ಪ್ರಾಣಿ ೬   : ಅವನ ಉಗುರು ಮೊಂಡಾಗ.

ಪ್ರಾಣಿ ೭   : ಅವನ ಹಲ್ಲು ಉದುರಿಹೋಗ.

ಪ್ರಾಣಿ ೮   : ಅವನ ಕಣ್ಣು ಕುರುಡಾಗ.

ಕರಡಿ     : ತೀಟೆಗೂ ಒಂದು ಮಿತಿ ಬೇಡ್ವಾ?

ಪ್ರಾಣಿ ೧   : ಸಿಂಹಕ್ಕೆ ಆಟ…ನಮಗೆ ಪ್ರಾಣಸಂಕಟ.

ಪ್ರಾಣಿ ೨   : ಅವನಿಗಿಂತ ನೀನೇ ಉತ್ತಮ ನರಿಯಣ್ಣ.

ಪ್ರಾಣಿ ೩   : ನೀನು ಭಷ್ಟಾಚಾರಿಯಾದ್ರೂ ಬಾಸೂರಕನ ಹಾಗೆ
ಸರ್ವಾಧಿಕಾರಿಯಲ್ಲ.

ಪ್ರಾಣಿ ೪   : ನಮ್ಮ ಪ್ರಾಣವನ್ನಾದ್ರೂ ಉಳಿಸುತ್ತಿ.

ನರಿ       : ಸ್ವಲ್ಪ ಸುಮ್ನೆ ಇರ್ತೀರಾ.

ಪ್ರಾಣಿ ೧   : ಬಾಸೂರಕ ತುಂಬಾ ಕ್ರೂರಿ.

ಪ್ರಾಣಿ೨    : ನಮ್ಮ ಸಾಮ್ರಾಟರು ಇಲ್ಲಾಂತ ತುಂಬಾ ಕೊಬ್ಬಿ ಹೋಗಿದ್ದಾನೆ.

ಪ್ರಾಣಿ ೩   : ಅವನನ್ನು ತಡೆಯುವವರೇ ಇಲ್ಲವಾಗಿದೆ.

ಪ್ರಾಣಿ ೪   : ಹೀಗಾದ್ರೆ ನಾವು ಯಾರೂ ಬದುಕಿ ಉಳಿಯೋ ಆಸೆ ಇಲ್ಲ.

ನರಿ       : ಓಚ್ನೆ… ನಂಗೊಂದು ಉಪಾಯ ಹೊಳೆದಿದೆ

ಎಲ್ಲರೂ     : ಏನದು ಉಪಾಯ?

ನರಿ       : ನಾವೆಲ್ಲರೂ ಗುಹೆಯ ಹತ್ತಿರ ಹೋಗುವ, ಬಾಸೂರಕನಲ್ಲಿ,
ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ.

ಎಲ್ಲರೂ     : ಏನದು ಒಪ್ಪಂದ ನರಿಯಣ್ಣ?

ನರಿ       : ಅದು ಅಲ್ಲಿಯೇ ಹೇಳ್ತೇನೆ ಬನ್ನಿ.

(ನಿರ್ಗಮನ)

ದೃಶ್ಯ ೫

(ಬಾಸೂರಕನ ಗುಹೆ)

ನರಿ              : ಬಾಸೂರಕ ಮಹಾರಾಜರೇ……(೨)

ಬಾಸೂರಕ         : (ಗರ್ಜನೆ -ಹೊರಗೆ ಬರುವುದು)
ಯಾರು? ಏನು ಇಲ್ಲಿಗೆ ಬಂದಿದ್ದೀರಿ? ನನ್ನ ಹೊಟ್ಟೆ ತುಂಬಿದೆ.
ಈಗ ನಿಮ್ಮನ್ನು ಹಿಡಿಯಲು ಪುರುಸೊತ್ತಿಲ್ಲ.

ನರಿ              : ಮಹಾರಾಜರೇ, ಪಾಣಿಗಳೆಲ್ಲಾ ಹೆದರಿವೆ.ನಿಮ್ಮ ರಕ್ಷಣೆ
ಕೋರಿ ಬಂದವರು ನಾವು, ನೀವು ನಮ್ಮ ಮೇಲೆ ಆಕ್ರಮಣ
ಮಾಡಿದ್ದೀರಿ. ಇದು ಸರಿಯಾ?

ಬಾಸೂರಕ         : ಹಾಗಾದರೆ ನನ್ನ ಹೊಟ್ಟೆ ತುಂಬುವುದು ಬೇಡ್ವೇ? ನಾನು ಹಸಿವಿನಿಂದ
ಸಾಯಬೇಕಾ?

ನರಿ              : ನೀವು ಮಹಾರಾಜರು. ಬೇಟೆಯಾಡಿ ಆಯಾಸ ಪಟ್ಟುಕೊಳ್ಳಬಾರದು.

ಪ್ರಾಣಿ ೧          : ನಾವು ನಿಮ್ಮ ಪ್ರಜೆಗಳು , ನಿಮ್ಮ ಹೊಟ್ಟೆ ತುಂಬಿಸುವುದು
ನಮ್ಮ ಜವಾಬ್ದಾರಿ.

ನರಿ              : ದಿನಕ್ಕೊಬ್ಬರಂತೆ ನಾವಾಗಿಯೇ ನಿಮ್ಮ ಗುಹೆಗೆ ಬರುತ್ತೇವೆ.

ಕರಡಿ            : ಹಾಗೆ ಬಂದವರನ್ನು ಮಾತ್ರ ಕೊಂದು , ಉಳಿದವರನ್ನು ನೀವು ರಕ್ಷಿಸಬೇಕು.

ಬಾಸೂರಕ         : ಇದು ಬಹಳ ಚೆನ್ನಾಗಿದೆ. ಹ…ಹ್ಹಾ…ಹಾ.
ಗುಹೆಗೇ ಬರುತ್ತದೆ ನನ್ನ ಭೋಜನ ! ಹ..ಹ್ಹಾ..ಹಾ.
ನೀವೀಗ ಮಾತುಕೊಟ್ಟಿದ್ದೀರಿ, ಕೊಟ್ಟ ಮಾತಿಗೆ ತಪ್ಪಬಾರದು.
ಕೆಟ್ಟ ಯೋಚನೆ ಮಾಡಬಾರದು.ಏನಾದರೂ ಹೆಚ್ಚು ಕಡಿಮೆ
ಮಾಡಿದಿರೋ…..  ಒಬ್ಬರೂ ಉಳಿಯುವುದಿಲ್ಲ (ಗರ್ಜನೆ)

ಎಲ್ಲರೂ           : ಓಡಿ… ಓಡಿ… ಜೀವ ಉಳಿಸಿಕೊಳ್ಳೀ (ನಿರ್ಗಮನ)

ದೃಶ್ಯ -೬

(ಪ್ರಾಣಿಗಳೆಲ್ಲಾ ಚಿಂತೆಯಿಂದಿರುವುದು)

ನರಿ           : ನಿನ್ನೆ ಮಾತುಕೊಟ್ಟಂತೆ ನಮ್ಮಲ್ಲಿ ಯಾರಾದರೂ ಒಬ್ಬರೂ
ಬಾಸೂರಕನ ಬಳಿಗೆ ಹೋಗಲೇಬೇಕು. ಇಲ್ಲದಿದ್ದರೆ ಅವನು
ನಮ್ಮನ್ನೆಲ್ಲಾ ತಿನ್ನುತ್ತಾನೆ. ಯಾರು ಹೋಗೋದು?

ಮೊಲ           : ನೀನು ದಷ್ಟಪುಷ್ಟವಾಗಿದ್ದಿ. ನೀನೇ ಹೋಗು ನರಿಯಣ್ಣ.

ನರಿ           : ಇಲ್ಲಪ್ಪ, ನನಗಿನ್ನೂ ಮದುವೇನೇ ಆಗಿಲ್ಲ. ಅಲ್ಲದೆ
ಕರಿಮುಖರು ಬರುವವರೆಗೆ ನನಗೆ ಇಲ್ಲಿಯ ಜವಾಬ್ದಾರಿ
ಇದೆಯೆಲ್ಲಾ?

ಪ್ರಾಣಿ ೧       : (ಇನ್ನೊಂದು ಪ್ರಾಣಿಗೆ ) ನೀನು ಹೋಗು.

ಪ್ರಾಣಿ ೨       : ನಾನು ಹೋದರೆ ನನ್ನ ಹೆಂಡತಿ ಮಕ್ಕಳ ಗತಿ ಏನು?

ನರಿ           : ಹಾಗಾದರೆ ಯಾರು ಹೋಗುವುದು?

ಪ್ರಾಣಿ ೩       : ನಿಲ್ಲಿ ನಿಲ್ಲಿ ನಂಗೊಂದು ಸೂಪರ್ ಸುಪ್ರೀಂ ಐಡಿಯಾ
ಹೊಳೀತಾ ಇದೆ.

ಪ್ರಾಣಿ ೪       : ಸೂಪರ್ ಸುಪ್ರೀಂ ಐಡಿಯಾನಾ, ಏನದು?

ಪ್ರಾಣಿ ೩       : ಸೀಳು ನಾಯಿ ಟೀನುವನ್ನು ಗುಹೆಗೆ ಕಳಿಸೋಣ.

ಎಲ್ಲರೂ         : ಒಳ್ಳೆಯ ಐಡಿಯಾ.ಟೀನು ಮರೀ, ಟೀನು ಮರೀ ಟೀನೂ….. ಟೀನೂ.

ಪ್ರಾಣಿ ೧       : ಅವನಿಗೆ ಸರಿಯಾಗೆ ಕೇಳಿಸೋದಿಲ್ಲ. ಅಂಗಡಿ ದೂರ.

ಪ್ರಾಣಿ ೨       : ಹೊಟ್ಟೆ ಬಾಕ . ತಿನ್ನೋದಿಕ್ಕೆ ಕೊಟ್ರ್‍ರೆ ಯಾರು ಕರೆದ್ರೂ ಹೋಗ್ತಾನೆ.

ಪ್ರಾಣಿ ೩       : ಬಾಸೂರಕನಲ್ಲಿ ನಾವು ನಿನ್ನೆ ಮಾಡಿಕೊಂಡ ಒಪ್ಪಂದ
ಅವನಿಗೆ ಗೊತ್ತೇ ಇಲ್ಲ.

ಪ್ರಾಣಿ ೪       : ಐಡಿಯಾಂದ್ರೆ ಇದಪ್ಪ!

ಎಲ್ಲರೂ         : ನಿಜವಾಗ್ಲು ಐಡಿಯಾ ಚೆನ್ನಾಗಿದೆ.

ಟೀನೂ….ಟೀನೂ….ಟೀನುಮರೀ (ಟೀನುವಿನ ಸ್ವರ)

ಎಲ್ಲರೂ         : ಟೀನು ಬಂದ….. ಟೀನು ಬಂದ (ಕುಣಿಯುವವು).

ಮೊಲ           : ಪಾಪ…. ಟೀನೂ ತುಂಬಾ ಸೊರಗಿದ್ದಾನೆ.

ಜಿಂಕೆ          : ನಿಂಗೇಂತಾ ಸೀಳುನಾಯಿ ಬಿಸ್ಕೇಟ್ ತಂದಿದ್ದೇನೆ . ತಗೋ
ಟೀನೂ ಪುಟ್ಟಾ.

ಪ್ರಾಣಿ ೩       : ನಿಂಗೆ ಚಾಕೋಲೇಟ್ ತಂದಿದ್ದೇನೆ ತಗೋ ಟೀನೂ.
(ಟೀನೂ ಎಲ್ಲವನ್ನೂ ಮೂಸಿ ಸ್ವರ ಹೊರಡಿಸುವುದು)

ಪ್ರಾಣಿ ೪       : ನಾವು ಟೀನುವನ್ನು ಗುಹೆಗೆ ಪಿಕ್ ನಿಕ್ ಗೆ ಕಳಿಸುವೆ.

ಪ್ರಾಣಿ ೫       : ಗುಹೆಯಲ್ಲಿ ಮಹಾರಾಜರಿದ್ದಾರೆ.

ಪ್ರಾಣಿ ೬       : ಅವರು ತುಂಬಾ ಒಳ್ಳೆಯವರು.

ಪ್ರಾಣಿ ೭       : ನಿಮ್ಮ ಟೀನುವಿನ ಹೊಟ್ಟೆ ತುಂಬಾ ಊಟ ಕೊಡ್ತಾರೆ.
(ಉಳಿದವರು ಟೀನುವಿನ ಮೈದಡವಿ ಪ್ರೀತಿತೋರಿಸುವಂತೆ ನಟನೆ.)

ಪ್ರಾಣಿ ೮       : ಟೀನು ಪುಟ್ಟ ಅಲ್ಲಿನಿಂಗೆ ಲಾಡು ಸಿಗ್ತದೆ.

ಪ್ರಾಣಿ ೧       : ಮಹಾರಾಜರು ಐಸ್ ಕ್ರೀಂ ಕೊಡ್ತಾರೆ.

ಟೀನು           : (ಬಾಯಿ ಚಪ್ಪರಿಸಿ ) ಲಾಡು.? ಐಸ್ ಕ್ರೀಂ.? ಹಾಗಾದ್ರೆ ಖಂಡಿತ
ಹೋಗ್ತೇನೆ. ಅಲ್ಲ ರಾಜರು ಎಲ್ಲಿ ವಾಸಮಾಡ್ತಾರೆ?

ಪ್ರಾಣಿ ೨       : ಬಾಸೂರಕ ಮಹಾರಾಜರು ಗುಹೆಯಲ್ಲಿದ್ದಾರೆ.

ಪ್ರಾಣಿ ೩       : ಆ ಗುಹೆ ಗುಡ್ಡದಲ್ಲಿದೆ.

ತೀನು           : ಹಾಂ…ಹಾಂ… ಗೊತ್ತಾಯ್ತು… ಗೊತ್ತಾಯ್ತು. ಆ
ಗುಹೆಯನ್ನು ನೋಡಿದ್ದೇನೆ . ನಾನಲ್ಲಿಗೆ ಹೋಗ್ತೇನೆ
(ಟೀನು ಹೊರಡುವುದು ).

ಎಲ್ಲರೂ         : ಬೇಗೆ ಹೋಗು ಟೀನು . ಜಾಗ್ರತೆ… ಹ್ಯಾಪಿ ಟೈಂ.

ಹಾಡು          : ಟೀನು ಗುಹೆಗೆ ಹೋಯಿತು (೩)
ಮಾಹಾರಾಜನ ನೋಡಲು ಲಲ….ಲಲ.

ನಿರ್ಗಮನ

ದೃಶ್ಯ -೭

(ಸಿಂಹ ಬಾಸೂರಕನ ಗುಹೆ, ಬಾಸೂರಕನ ಗುಹೆ ಹಸಿವೆಯಿಂದ ಅತ್ತಿಂದಿತ್ತ ಹೋಗುವುದು ಟೀನುವಿನ  ಪ್ರವೇಶ.)

ಬಾಸೂರಕ     : (ಗರ್ಜನೆ) ಹಾಂ…ಬಾ  ಇಲ್ಲಿ (ಟೀನುವನ್ನು
ಹಿಡಿಯಲು ಮುಂದಕ್ಕೆ ಬರುವುದು)

ಟೀನು          :  ಹಿಡಿಯೋದು ಬೇಡ. ನಾನೇ ಬರತೇನೆ. ಲಾಡು ಎಲ್ಲಿದೆ
ಮಹಾರಾಜರೇ? ಐಸ್ ಕ್ರೀಂ ಎಲ್ಲಿದೆ?

ಬಾಸೂರಕ     : ಲಾಡು….! ಐಸ್ ಕ್ರಿಂ ….. !! ನೋಡು ಅದೆಲ್ಲಾ
ನನ್ನ ಹೋಟ್ಟೆಯಲ್ಲಿದೆ, ಲಾಡು , ಹೋಳಿಗೆ ಏನು ಬೇಕಾದ್ರೂ ತಗೋ.

ಟೀನು         : ಹಾಂ!!…. ಹೊಟ್ಟೆಯಲ್ಲಿ ಯಾರಾದ್ರು ಲಾಡು , ಐಸ್ ಕ್ರೀಂ
ಇಡ್ತಾರಾ? ಇದರಲ್ಲಿ ಏನೋ ಮೋಸ ಇದೆ. ಇವನು ನನ್ನನ್ನು
ತಿನೋದಿಕ್ಕೆ ಬರುವ ಹಾಗೆ ಕಾಣಿಸ್ತಾನೆ. ಹೇಗಾದ್ರೂ ಇಲ್ಲಿಂದ
ತಪ್ಪಿಸ್ಕೋಬೇಕು.

ಬಾಸೂರಕ    : ಏನು ಸುಮ್ನೆ ನಿಂತಿದ್ದೀಯಾ? ಬಾ… ಹತ್ತಿರ (ಟೀನುವಿನ ಹತ್ತಿರ
ಬರುವುದು, ಟೀನು ಬಾಸುರಕನ ಕಾಲ ಎಡೆಯಲ್ಲಿ.
ನುಸುಳಿ ರಂಗದಲ್ಲಿ ಅತ್ತಿಂದಿತ್ತ ತಪ್ಪಿಸುತ್ತಾ ಓಡುವುದು.
ಬಾಸೂರಕ ಘರ್ಜಿಸಿ ಟೀನುವನ್ನು ಹಿಡಿಯುವ ಪ್ರಯತ್ನ
ಮಾಡುವಾಗ ಟೀನು ತಪ್ಪಿಸಿ ಪರಾರಿಯಾಗುವುದು.)

(ನಿರ್ಗಮನ)

ದೃಶ್ಯ -೮

(ಎರಡು ಮೊಲಗಳು ಹಾಡಿ ಲಯಕ್ಕನುಗುಣವಾಗಿ ಕುಣಿಯುವವು)

ಹಾಡು      : ಮೊಲದ ಮರಿ(೨) ಅಡಬಾರೆ
ಚುಪ್ ಕೆ(೨) ನೆಗೆದು ಬಾರೆ

ಪ್ರಾಣಿ ೧   : ಇವತ್ತು ಗುಹೆಗೆ ಹೋಗಲು ಮೊಲಗಳ ಸರದಿ.

ಪ್ರಾಣಿ ೨   : ಅಲ್ಲಿ ನೋಡು. ಅವು ಎಟ್ಟು ಸಂತೋಷದಿಂದಿವೆ?

ಪ್ರಾಣಿ ೧   : (ಮೊಲಗಳನ್ನು ಉದ್ದೇಶಿಸಿ) ಅಲ್ಲ… ಇಷ್ಟೊಂದು
ಖುಷಿಯಲ್ಲಿದ್ದೀರಲ್ಲಾ.? ಇವತ್ತು ಗುಹೆಗೆ ಹೋಗಲು
ನಿಮ್ಮ ಸರದಿ, ಗೊತ್ತಿದೆಯಾ?

ಮೊಲಗಳು   : ನಾವು ಹೋಗೋದಿಕ್ಕೆ ತಯಾರಾಗಿದ್ದೇವೆ.

ಪ್ರಾಣಿ ೨   : ನಿಮ್ಗೆ ಹೆದ್ರಿಕೆ ಆಗೋದಿಲ್ವಾ?

ಮೊಲ ೧     : ಹೇಗೂ ಸಾಯ್ತೇವೆ.

ಮೊಲ ೨     : ಸಾಯೋದಿಕ್ಕೆ ಉಳಿದಿರೋ ಪ್ರತೀ ಕ್ಷಣವನ್ನು
ಸಂತೋಷದಿಂದ ಅನುಭವಿಸುತ್ತಿದ್ದೇವೆ.

ಮೊಲ ೧     : ಆಟ ಆಡಿ ನಂತ್ರ ಗುಹೆಗೆ ಹೋಗ್ತೇವೆ .(ಸೀಳು ನಾಯಿ ಟೀನುವಿನ ಪ್ರವೇಶ).

ಟೀನು       : ಅಯ್ಯೋ ಗುಹೆಗೆ ಹೋಗ್ಬೇಡಿ. ಬಾಸೂರಕ ಸಿಂಹ ತಿನ್ನಲು ಬರ್ತಾನೆ .

ಮೊಲ ೨     : ನಾವು ಹೋಗದಿದ್ದರೆ ಅವನು ಎಲ್ಲಾ ಪ್ರಾಣಿಗಳನ್ನು ತಿಂದು ಬಿಡ್ತಾನೆ.

ಮೊಲ ೧     : ನಮ್ಮ ತ್ಯಾಗ ಬಲಿದಾನಗಳಿಂದ ಉಳಿದ ಮೃಗಗಳು ಉಳಿಯುವಂತಾಗಲಿ.

ಮೊಲ ೨     : ಅಳಿಯುವುದು ಕಾಯ, ಉಳಿಯುವುದು ಕೀರ್ತಿ.

ಮೊಲ ೧     : ಅಡಿಯ ಮುಂದಿಡೆ ಸ್ವರ್ಗ, ಅಡಿಯ ಹಿಂದಿಡೆ ನರಕ.

ಮೊಲಗಳು   : ಆದುದರಿಂದ ನಾವು ಹೋಗಿಯೇ ಹೋಗುತ್ತೇವೆ.
(ಇವರು ಮಾತನಾಡುತ್ತಿರುವಾಗ ಉಳಿದ ಪ್ರಾಣಿಗಳು ಒಂದೊಂದಾಗಿ ಅಲ್ಲಿ ಸೇರುವವು.)

ಎಲ್ಲರೂ    : ಪಾಪ…. ಬಡಪಾಯಿಗಳು ಟೀನು ಹೇಗೋ
ತಪ್ಪಿಸಿಕೊಂಡು ಬಂದ . ಇನ್ನು ಇವುಗಳ ಗತಿ ಏನೋ?
(ಪ್ರಾಣಿಗಳು ಮೊಲಗಳನ್ನು ಬೀಳ್ಗೊಟ್ಟು ನಿರ್ಗಮಿಸುವವು)

ಮೊಲ ೧    : ಹೇಗೂ ಇವತ್ತು ಆ ಬಾಸೂರಕನ ಹೊಟ್ಟೆ ಸೇರುವವರು.
ಸಾಯೋ ಮೊದಲು ಸ್ವಲ್ಪ ಹೊತ್ತು ಕ್ರಿಕೆಟ್ ಆಡೋಣ್ವಾ?

ಮೊಲ ೨    : ಆಡೋದಿಕ್ಕೆ ಬಾಲ್ ಇಲ್ಲ, ಬ್ಯಾಟು ಇಲ್ಲ. ಕಬಡ್ಡಿ ಆಡುವ.

ಮೊಲ ೧    : (ಕಾಲಿನಿಂದ ನಡುಗೆರೆ ಎಳೆದು) ಅದು ಸರಿ .
ನೋಡು ಇದು ನಡುಗೆರೆ. ನೀನು ಆ ಕಡೆ,
ನಾನು ಈ ಕಡೆ, ಆಟ ಶುರು ಮಾಡೋಣ್ವಾ….?
ಕಬಡ್ಡಿ…. ಕಬಡ್ಡಿ (ಸ್ವಲ್ಪ ಹೊತ್ತು
ಆಟ ಆಡಿ). ಇಬ್ರೇ ಆಡೋದ್ರಲ್ಲಿ ಮಜಾ ಇಲ್ಲ.

ಮೊಲ ೨     : ಬಾಯಾರಿಕೆ ಆಗ್ತಿದೆ.

ಮೊಲ ೧     : ನಂಗೂ ಅಷ್ಟೆ.

ಮೊಲ ೨     : ಬಾವಿ ಇಲ್ಲೇ ಇದೆ. ಆದ್ರೆ ನೀರು ಕುಡಿಯೋದು ಹೇಗೆ ?

ಮೊಲ ೧     : ಅಗೋ ಇಬ್ರು ಜಿಂಕೆ ಹುಡುಗೀರು ಬರತಾ ಇದ್ದಾರೆ.

ಮೊಲ ೨     : ಅವರ ಕೈಯಲ್ಲಿ ಕೂಡ ಇದೆ.

ಮೊಲ ೧     : ಹಾಗಾದ್ರೆ ಅವರು ನೀರು ಸೇದ್ತಾರೆ.

ಮೊಲ ೨     : ನೀರು ಸೇದಿದ್ರೆ ನಮ್ಗೆ ಕೊಡ್ತಾರೆ.
(ಎರಡು ಜಿಂಕೆಗಳು ಕೊಡ ಹಿಡಿದು ಒಯ್ಯಾರದಿಂದ ಅಗಮನ)

ಹಾಡು      : ದೊಡ್ದ ಬಾವಿಗೆ ನೀರನ್ನು ತರಲು
ಹೋಗುವ ಬಾರೆ ಬೇಗ ಸಖಿ (೨)
ಕೊಡದಲಿ ನೀರನು ತುಂಬಿಸಿ ತುಳುಕಿಸಿ
ಕುಲುಕುತ ನಡೆಯುವ ಚಂದ್ರಮುಖಿ

ಮೊಲ ೧     : ಜಿಂಕೆಯಕ್ಕಾ, ಜಿಂಕೆಯಕ್ಕಾ, ತುಂಬಾ
ಬಾಯಾರಿಕೆಯಾಗುತ್ತಿದೆ, ಬೇಗ ನೀರು ಸೇದಿ.

ಜಿಂಕೆ ೧    : ಅರೇ, ನೀವು ಇನ್ನೂ ಇಲ್ಲೇ ಇದ್ದೀರಾ? ಆಗಲೇ
ಬಾಸೂರಕನ ಗುಹೆಗೆ ಹೋಗಬೇಕಿತ್ತಲ್ಲಾ?

ಜಿಂಕೆ ೨    : ಯಾಕಿಷ್ಟು ತಡಮಾಡಿದ್ರಿ?

ಮೊಲಗಳು   : ಹೇಗೂ ಸಾಯ್ತೇವಲ್ಲಾ ಜಿಂಕೆ ಅಕ್ಕಾ, ಸ್ವಲ್ಪ ಹೊತ್ತು ಆಡೋಣ ಅನ್ನಿಸ್ತು.

ಜಿಂಕೆ `೧   : ಸರಿ, ಬಾವಿಯ ಕಟ್ಟೆ ಮೇಲೆ ಕೊತ್ತುಕೊಳ್ಳಿ. ನೀರು ಸೇದಿ
ಕೊಡುತ್ತೇವೆ.

ಮೊಲ ೧     : ಆಹಾ, ಏಷ್ಟು ಚೆನ್ನಾಗಿದೆ, ಜಿಂಕೆ ಅಕ್ಕಾ, ನೀರು ನೋಡು.

ಮೊಲ ೨     : ಅಲ್ಲೆ ನೀನು ಕಾಣುತ್ತೀ.

ಮೊಲ ೧     : ಅವಳು ಮಾತ್ರ ಅಲ್ಲ. ನಾವೂ ಕಾಣ್ತಾ ಇದ್ದೇವೆ.

ಜಿಂಕೆ ೨    : ಹೌದು, ಅದರಲ್ಲಿ ಏನು ವಿಶೇಷ? ನೀರಿನಲ್ಲಿ ನಮ್ಮ ಮುಖ
ಕಾಣುತ್ತಿದೆಯಲ್ಲಾ?
(ಮೊಲ ೧, ದಪಕ್ಕನೆ ಕಟ್ಟೆಯ ಈ ಕಡೆಗೆ ನೆಗೆದು)

ಮೊಲ ೧     : ಯುರೇಕಾ, ಯುರೇಕಾ…. ಐಡಿಯಾ.

ಮೊಲ ೨     : ಏನು ಹೊಳೀತು ನಿನ್ನ ತಲೆಗೆ?

ಜಿಂಕೆ ೧    : ಹೊಳೀಲಿಕ್ಕೆ ಅವನ ತಲೇಲಿ ಇರೋದು ಜೇಡಿಮಣ್ಣು.

ಮೊಲ ೧     : ನೋಡ್ತಾ ಇರು ಜಿಂಕೆ ಅಕ್ಕಾ, ಏನು ಮಾಡ್ತೇನೇಂದು.
(ಇನ್ನೊಂದು ಮೊಲದ ಹತ್ತಿರ) ಇವರು ಇಲ್ಲೇ ಇರಲಿ, ನಾವು
ಗುಹೆಗೆ ಹೋಗುವ ಬಾ.

(ಮೊಲಗಳು ಹಾಡುತ್ತಾ ಕುಣಿಯುತ್ತಾ ನಿರ್ಗಮನ,
ಜಿಂಕೆಗಳು ನೀರು ಸೇದಿ ಕೊಡ ಕಂಕುಳಲ್ಲಿಟ್ಟು ಬಳುಕುತ್ತಾ
ನಿರ್ಗಮನ)

ದೃಶ್ಯ – ೯

(ಬಾಸೂರಕನ ಗುಹೆ ಸಿಂಹ ಅಸಹನೆಯಿಂದ ಅತ್ತಿಂದಿತ್ತ ಹೋಗುವುದು)

ಬಾಸೂರಕ     : ಸೀಳುನಾಯಿ ತಪ್ಪಿಸಿಕೊಂಡು ಹೋಗಿದೆ. ಬೇರೆ ಯಾವ
ಪ್ರಾಣಿಗಳೊ ಕಾಣುವುದಿಲ್ಲ. ಈಗಲೇ ಆ ಕಾಡಿಗೆ ನುಗ್ಗಿ
ಎಲ್ಲಾ ಪ್ರಾಣಿಗಳನ್ನು ತಿಂದು ಬಿಡುತ್ತೇನೆ.

ಮೊಲಗಳು      : ಮಹಾರಾಜರೇ ನಿಲ್ಲಿ …ನಿಲ್ಲಿ. ನಾವು ಬಂದಿದ್ದೇವೆ.

ಬಾಸೂರಕ     : (ಘರ್ಜಿಸಿ) ನೀವಾ? ನೀವು ನನ್ನ ಹೊಟ್ಟೆಗೆ ಎಲ್ಲಿ ಸಾಕು?
ತಡವಾಗಿ ಬಂದಿದ್ದೀರಾ? ಹಸಿವಿನಿಂದ ಪ್ರಾಣ ಹೋಗ್ತಾ
ಇದೆ . ಮೊದಲು ನಿಮ್ಮಿಬ್ಬರನ್ನು ಮುಗಿಸುತ್ತೇನೆ .ಮತ್ತೆ
ಉಳಿದವುಗಳನ್ನು ವಿಚಾರಿಸಿಕೊಳ್ಳುತ್ತೇನೆ.

ಮೊಲ ೧        : ಮಹಾರಾಜರೇ, ಕ್ಷಮಿಸಿ, ಆಗಲೇ
ಹೊರಟೆವು.

ಮೊಲ ೨        : ದಾರಿಯಲ್ಲಿ ಅನಾಹುತವಾಯ್ತು.

ಬಾಸೂರಕ     : ಏನು ಅನಾಹುತ ? ಬೇಗ ಬೊಗಳು.

ಮೊಲ ೧        : ಮಹಾರಾಜರೇ, ನಾವು ನಾಲ್ಕು ಮೊಲಗಳಿದ್ದೆವು ದಾರಿಯಲ್ಲಿ
ಬರುವಾಗ, ಇನ್ನೊಂದು ಸಿಂಹ ” ಎಲ್ಲಿಗೆ ಹೊರಟವರು
ನೀವು?” ಎಂದು ಗದರಿಸಿತು

ಮೊಲ ೨        : ನಾವು ಹೆದರಿ ಕಂಗಾಲು.

ಮೊಲ ೧        : ಕೊನೆಗೆ ಧೈರ್ಯದಿಂದ ಹೇಳಿಯೇ ಬಿಟ್ಟೆವು, ಬಾಸೂರಕ
ಮಹಾರಾಜನಲ್ಲಿಗೆ ಅಂತ.

ಮೊಲ ೨        ; ಆಗ ಆ ಸಿಂಹ ಏನು ಹೇಳಿತು ಗೊತ್ತಾ?

ಮೊಲ ೧        : ಯಾರು ಆ ಬಾಸೂರಕ ? ಅವನಿಗೆ ಮೀಸೆ ಉಂಟಾ?

ಮೊಲ ೨        : ಅವನಿಗೆ ಭಾಷೆ ಉಂಟಾ?

ಮೊಲ ೧        : ಅವನಿಗೆ ಮಾನ, ಮರ್ಯದೆ ಉಂಟಾ?

ಮೊಲ ೨        : ಅವ ಗಂಡಸಾದರೆ ನನ್ನ ಎದುರಿಗೆ ಬರಲಿ.

ಮೊಲ ೧        : ಹಾಗೆ ಹೇಳಿ, ಎರಡು ಮೊಲಗಳನ್ನು ತನ್ನೊಂದಿಗೆ
ಇಟ್ಟುಕೊಂಡಿದೆ.

ಮೊಲ ೨        : ನಾವು ಹೇಗೋ ತಪ್ಪಿಸಿಕೊಂಡು ಬಂದಿದ್ದೇವೆ.

ಮೊಲ ೧        : ಮಹಾರಾಜರೇ, ಇದು ನಿಮಗಾದ ಅಪಮಾನ.

ಮೊಲ ೨        : ಮಹಾರಾಜರಿಗೆ ಅಪಮಾನವಾದರೆ ಪ್ರಜೆಗಳಿಗೆ ಅಪಮಾನ
ಆದ ಹಾಗೆ.

ಬಾಸೂರಕ     : ನಿಲ್ಲಿಸಿ ನಿಮ್ಮ ಮಾತುಗಳನ್ನು , ಆ ಸಿಂಹ ಎಲ್ಲಿದೆ, ಮೊದಲು
ತೋರಿಸಿ ಅದನ್ನು ಈಗಲೇ ಕೊಲ್ಲುತ್ತೇನೆ. ಮತ್ತೆ ನಿಮ್ಮನ್ನು
ತಿನ್ನುತ್ತೇನೆ, ಬನ್ನಿ. (ಮೊಲಗಳು ಬಾಸೂರಕನನ್ನು ಬಾವಿಯ
ಬಳಿ ಕರೆದುಕೊಂಡು ಹೋಗುವವು. ಕಟ್ಟೆಯ ಮೇಲೆ ಕೂತು,
ಬಾಸೂರಕನಿಗೆ ಪಿಸು ಮಾತಿನಲ್ಲಿ)

ಮೊಲ ೧        : ಮಹಾರಾಜರೇ, ಅಲ್ಲಿ ನೋಡಿ ಎರಡು ಮೊಲಗಳು.
ನೋಡಿ, ನೋಡಿ, ಅದೇ ಆ ಸಿಂಹ.

ಮೊಲ ೨        : ನಂಗೆ ಹೆದರಿಕೆ ಆಗ್ತಿದೆಯಪ್ಪ.

(ಸಿಂಹ ಬಾವಿಯೊಳಗೆ ಇಣುಕುವುದು.)

ಬಾಸೂರಕ     : (ಗರ್ಜಿಸಿ) ಹೇ…ಯಾರು ನೀನು ? (ಅಲ್ಲಿಂದ ಪ್ರತಿಧ್ವನಿ)

ಮೊಲ ೧        : ನಿಮ್ಮ ಸ್ವರ ಕೇಳಿ ಹೆದ್ರಿಕೆ ಆಗಿರಬೇಕು.

ಮೊಲ ೨        : ಬಾವಿಯೊಳಗೆ ಅಡಗಿ ಕೂತಿದೆ.

ಬಾಸೂರಕ     : ಹ…ಹ್ಹ….ಹಾ….ಧೈರ್ಯ ಇದ್ರೆ ಬಾರೋ . ಈ
ಕಾಡಿನ ಮಹಾರಾಜ ಕರೀತಾ ಇದ್ದೇನೆ. ಬಾರೋ ಹೊರಗೆ
ಹೇಡಿ… (ಪ್ರತಿಧ್ವನಿ ಕೇಳುವುದು ) ನೀನು ನಂಗೆ ತಮಾಷೆ
ಮಾಡ್ತಿದ್ದೀಯಾ…? ಕಲಿಸ್ತೇನೆ ಬುದ್ದಿ. (ಬಾವಿಗೆ
ಹಾರುವುದು). ( ಮೊಲಗಳು ಖುಷಿಯಿಂದ ಚಪ್ಪಾಳೆ ತಟ್ಟಿ
ಕುಣಿಯುವವು)

ಮೊಲಗಳು      : ಗೆದ್ದೇ ಬಿಟ್ಟೆವು…. ಹುರ್ರಾ..

ಹಾಡು         : ಬಾಸೂರಕ ಬಾಸೂರಕ
ಎಲ್ಲಿರುವೆ ?
ದೊಡ್ಡ ಬಾವಿಯಲ್ಲಿ
ನೀನಿರುವೆ.

ಮೊಲ ೧        : ಎಲ್ಲರನ್ನೂ ಕರೆಯೋಣ
ಬನ್ನಿ ಗೆಳೆಯರೇ…. ಬನ್ನೀ.

ಮೊಲ ೨        : ಹೇ ಕಪೀಶ ಬಾರೋ.

ಮೊಲ ೧        : ಜಿಂಕೆ ಅಕ್ಕಾ ಬಾರೇ…..

ಎರಡೂ ಒಟ್ಟಿಗೆ  : ಕರಡಿ ಮಾಮ, ನರಿಯಣ್ಣ ಎಲ್ಲಾ ಬನ್ನಿ
ಬಾಸೂರಕ ಸತ್ತು ಹೋದ (೨)
ಅವನನ್ನು ಕೊಂದು ಬಿಟ್ಟೆವು.
ಬನ್ನಿ….ಎಲ್ಲಾ ಬನ್ನಿ.
(ಪ್ರಾಣಿಗಳು ಗಾಬರಿಯಿಂದ ಬರುವವು)

ಎಲ್ಲರು        : ಬಾಸೂರಕ ಸತ್ತುಹೋದ (೨)

ಪ್ರಾಣಿ ೧      : ಇನ್ನು ಮುಂದೆ ನಾವೆಲ್ಲಾ ಸಂತೋಷವಾಗಿರಬಹುದು.

ಪ್ರಾಣಿ ೨      : ಜಾಣ ಮೊಲಗಳು ನಮ್ಮ ಪ್ರಾಣ ಉಳಿಸಿದವು (ಮೊಬೈಲ್
ಸದ್ದು)

ನರಿ          : (ಜೇಬಿನಿಂದ ಮೊಬೈಲ್ ತೆಗೆದು) ಸ್ವಲ್ಪ ಸುಮ್ನಿರ್ತೀರಾ?
ಹಲೋ…….. ಮಹಾರಾಜರೇ.

ಪ್ರಾಣಿಗಳು     :  ಮಹಾರಾಜ….ಯಾವ ಮಹಾರಾಜ?
ಮಹಾರಾಜ… ಸೊಂಯ್ ದಬಕ್….ಬಾವಿಯೊಳಗೆ!

ನರಿ          : ನಿಮ್ಮ ಗದ್ದಲದಲ್ಲಿ ಏನೂ ಕೇಳಿಸ್ತಾ ಇಲ್ಲ (ಮೊಬೈಲ್
ರಿಂಗ್).

ಓ…. ಕರಿಮುಖ ಮಹಾರಾಜರೇ, ಕ್ಷೇಮವಾಗಿ ಇದ್ದೀರಾ?
ಆಯ್ತು ಸ್ವಾಮಿ . ನಾನೆಲ್ಲಾ ರೆಡಿ ಮಾಡ್ತೇನೆ,(ಪಾಣಿಗಳನ್ನು
ಉದ್ದೇಶಿಸಿ) ಸಂತೋಷದ ಸುದ್ದಿ. ಕರಿಮುಖ ಮಹಾರಾಜರು
ವಿಮಾನದಲ್ಲಿ ಬರ್ತಾ ಇದ್ದಾರೆ. ನಾವೆಲ್ಲಾ ಅವರನ್ನು
ಸ್ವಾಗತಿಸಬೇಕು. ಎಲ್ಲಾ ರೆಡಿಯಾಗಿ. ಬೇಗ….ಬೇಗ.
ಹೂಮಾಲೆ, ಆರತಿ ತಟ್ಟೆ ರೆಡಿ ಮಾಡಿ. (ವಿಮಾನದ ಸದ್ದು.)

ಎಲ್ಲರೂ        : ಕರಿಮುಖ ಮಹಾರಾಜರು ಬಂದ್ರು(೨)

ನರಿ          : ಕರಿಮುಖ ಮಹಾರಾಜರಿಗೆ

ಎಲ್ಲರೂ        : ಜೈ

ನರಿ          : ನಮ್ಮೆಲ್ಲರ ಪ್ರೀತಿ ಕರಡಿ ಮಾಮನವರು ಮಹಾರಾಜರಿಗೆ
ಹಾರಾರ್ಪಣೆ ಮಾಡಿ ಸ್ವಾಗತಿಸಲಿದ್ದಾರೆ, ಚಪ್ಪಾಳೇ…..

ಪ್ರಾಣಿ ೧      : ರಾಜನ ಹತ್ತಿರ ಇರುವ ಚೆಲುವೆ ಯಾರು?

ಪ್ರಾಣಿ ೨      : ಅವಳು, ಅವಳು, ಹೋ, ಅವಳೇ ಬಿಳಿಮುಖ!

ನರಿ          : ಶ್ರೀಮತಿ ಗಿಳಿಯವರು ಹೂಗುಚ್ಚ ಕೊಟ್ಟು ಬಿಳಿಮುಖ
ಮಹಾರಾಣಿಯವರನ್ನು ಅಭಿನಂದಿಸುತ್ತಾರೆ. ಚಪ್ಪಾಳೇ……
ಈ ಸಂತೋಷದ ಕ್ಷಣವನ್ನು ಹಾಡಿ ಸಂಭ್ರಮದಿಂದ
ಆಚರಿಸೋಣ

(ಆರಂಭದ ಹಾಡು – ಪುನರಾವರ್ತನೆ)

(ನಿರ್ಗಮನ)

*****************************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೩೩
Next post ಪಾರಿವಾಳದ ಆಟ ಛಂದಾ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…