ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ ಏನಿಲ್ಲ ಎಂದರೂ ೨೫’-೩೦’.ಗೋಕರ್ಣದ ಗಣೇಶ ಶಾಸ್ತ್ರಿ ಎನ್ನುವ ಯುವಕ ಈ ಕಮಾನಿನ ೨’ ಅಗಲದ ಕಮಾನಿನ ಈ ತುದಿಯಿಂದ ಆ ತುದಿಯವರೆಗೆ ಇಣಚಿ ಹತ್ತಿದಂತೆ ಏರಿ ಇಳಿದದ್ದು ನೆನಪು.
ಈ ಸೇತುವೆ ಕಟ್ಟುವ ಮೊದಲು ತೀರ್ಥಹಳ್ಳಿಯಿಂದ ಆಚೆ ದಡ ಕುರುವಳ್ಳಿಗೆ ಹೋಗಲು ತಾರಿದೋಣಿ. ಈಗಿನ ಅಘನಾಶಿನಿ-ತದಡಿ ಇದ್ದ ಹಾಗೆ. ಈಚೆ ದಡದಿಂದ ಆಚೆ ಹೋಗಲು ೫ ನಿಮಿಷ.ಇಲ್ಲಿ ಬಸ್ಸಿನಲ್ಲೇ ಹೋಗಬೇಕೆಂದರೆ ಕುಮಟಾದ ಮೇಲೆ ೪೦ ಮೈಲಿ ಆಗುವಂತೆ ಅಲ್ಲಿಯೂ ತೀರ್ಥಹಳ್ಳಿಯಿಂದ ಸುತ್ತಿಕೊಂಡು ಕುರುವಳ್ಳಿ ತಲುಪಲು ನಲವತ್ತು ಮೈಲಿ.
ಜೋಡುಸಾರ: ಬೇಸಿಗೆಯಲ್ಲಿ ಮಾತ್ರ ಅಗಸೆ-ತದಡಿಯಂತೆ ಅಲ್ಲ. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಕೆಳಗಿಳಿದು ಬಂಡೆಯಿಂದ ಬಂಡೆ ಹಾರುತ್ತ, ಬಂಡೆ ಸುತ್ತ ನೀರು. ಕಾಲು ಮೈಲಿ ಹೋದರೆ ಆಶ್ಚರ್ಯದ ಜೋಡುಸಾಗರ. ಸುಮಾರು ೧೫’-೨೫’ ಉದ್ದದ ದೈತ್ಯಗಾತ್ರದ ಶಿಲೆಯ ಎರಡು ತೊಲೆಗಳು. ಒಂದರ ಪಕ್ಕದಲ್ಲಿ ಒಂದು. ಉಳಿದ ಭಾಗಗಳಲ್ಲಿ ತುಂಗಾನದಿ ಸುತ್ತುತ್ತ ಸುತ್ತುತ್ತ ಹರಿಯುತ್ತದೆ. ಇಲ್ಲಿ ಕೆಳಗಿನ ಆಳ ಸುಮಾರು ಐದಾರು ಆಳಿನಷ್ಟು. ಈ ಸೇತುವೆಯನ್ನು ಸರಾಗವಾಗಿ ದಾಟಿ ಪುನಃ ಕುಪ್ಪಳಿಸುತ್ತಾ ಕುರುವಳ್ಳಿಗೆ ಹೋಗಬಹುದು- ಹೆಚ್ಚೆಂದರೆ ಹದಿನೈದಿಪ್ಪತ್ತು ನಿಮಿಷಗಳಲ್ಲಿ. ಅಂದಾಜು ಮಾರ್ಚ್‌ದಿಂದ ಜೂನ್‌ವರೆಗೆ ಈ ಸೌಲಭ್ಯ – ನಂತರ ತುಂಗಾನದಿ ತುಂಬಿ ಹರಿಯಿತು ಎಂದರೆ ಈ ರಸ್ತೆ ಒಂಬತ್ತು ತಿಂಗಳು ಬಂದ್. ರಾಷ್ಟ್ರಕವಿ ಕುವೆಂಪುರವರು ಕಾನೂರು ಸುಬ್ಬಮ್ಮ ಹೆಗ್ಗಡಿತಿಯಲ್ಲಿ ಈ ಜೋಡುಸಾರ ದಾಟಿ ಕುಪ್ಪಳ್ಳಿಗೆ ಹೋಗಿ ಬರುವುದನ್ನು ವರ್ಣಿಸಿದ್ದಾರೆ.
ನಾವು ತುಂಗಾ ಹೊಳೆಯ ಈಚೆಯವರು. ತೀರ್ಥಹಳ್ಳಿ ತಾಲೂಕಾ ಮುಖ್ಯ ಸ್ಥಳ. ಆಸ್ಪತ್ರೆ, ಪೋಲೀಸ್ ಕಛೇರಿ ಇವೆಲ್ಲ. ಹೊಳೆ ಆಚೆ ಕುರುವಳ್ಳಿ. ಪುತ್ತಿಗೆ ಶ್ರೀಗಳವರ ಮಠ, ಮಳಯಾಳ ಮಠ ಮತ್ತೂ ಕೆಲವು ಶಿಲಾಮಯ ದೇವರು. ಅಲ್ಲಿಂದ ದೊಡ್ಡದಾದ ರಸ್ತೆ- ಅದು ನಮ್ಮನ್ನು ಕುವೆಂಪುರವರ ಕುಪ್ಪಳ್ಳಿ, ಗಡೀಕಲ್ಲು, ದೇವಂಗಿ, ಕೊಪ್ಪ, ಶೃಂಗೇರಿ ಮೊದಲಾದ ಪ್ರೇಕ್ಷಣೀಯ ಪೂಜಾ ಸ್ಥಳಗಳಿಗೆ ಕರೆದೊಯ್ಯುತ್ತದೆ. ಗಂಗಾ ವಿಶ್ವೇಶ್ವರ ದೇವರು ನಮ್ಮ ತೀರ್ಥರಾಜಪುರ ಮಠಕ್ಕೆ ಸೇರಿದ್ದು. ಮಲೆಯಾಳ ಮಠದ ಯತಿಗಳಿಗೆ ತುಂಗಾನದಿಯ ದಕ್ಷಿಣ ತೀರದಲ್ಲಿ ತಾನು (ಗಂಗಾ ವಿಶ್ವೇಶ್ವರ) ಇರುವುದಾಗಿಯೂ, ಅಲ್ಲಿಂದ ತಂದು ಮೇಲೆ ಸ್ಥಾಪಿಸಬೇಕೆಂದೂ ಸ್ವಪ್ನವಾಯಿತಂತೆ. ಅದೇ ರೀತಿ ದಕ್ಷಿಣ ತೀರದಲ್ಲಿ ನೀರಿನಲ್ಲಿ ಹುಡುಕಲಾಗಿ ಸುಂದರ ಗಂಗಾವಿಶ್ವೇಶ್ವರ ಲಿಂಗ ದೊರಕಿತು, ಅದನ್ನು ತಂದು ತುಂಗಾಪ್ರವಾಹ ಎಷ್ಟೇ ಏರಿದರೂ, ದೇವಾಲಯಕ್ಕೆ ಅಪಾಯವಿಲ್ಲದಷ್ಟು ಎತ್ತರದಲ್ಲಿ ದೇವಾಲಯ ಕಟ್ಟಲಾಗಿದೆ. ಈ ಎತ್ತರದ ಜಾಗದಿಂದ ನೋಡಿದರೆ ತುಂಗಾನದಿ ಎದುರಿಗೆ ಬಹುವಿಸ್ತಾರವಾಗಿ ಕಲ್ಲು ಬಂಡೆಗಳ ಮಧ್ಯೆ ಹರಿಯುವುದು. ಮಳೆಗಾಲದಲ್ಲಿ ರುದ್ರಭೀಕರ ಪ್ರವಾಹದೊಂದಿಗೆ ಇಡೀ ತೀರ್ಥಹಳ್ಳಿ ತಾಲೂಕನ್ನೇ ನಡುಗಿಸುತ್ತಾ ಭೋರ್ಗರೆಯುತ್ತ ಹರಿಯುವ ರುದ್ರ ಮನೋಹರ ದೃಶ್ಯ. ಮೊದಲೇ ಹೇಳಿದಂತೆ ಈ ದೇವಾಲಯದಲ್ಲಿ ವನ ಭೋಜನ, ದೀಪೋತ್ಸವ ಪ್ರತಿವರ್ಷ ನಡೆಯುತ್ತದೆ.
ಹೊಳೆಯ ಈ ದಡದಿಂದಲೇ ಕೊಪ್ಪ ರಸ್ತೆಯಲ್ಲಿ ಕೆಲ ಮೈಲಿ ದೂರ ಹೋದರೆ ಚಿಪ್ಲಗುಡ್ಡ ಎನ್ನುವ ಗ್ರಾಮ. ಇದು ತೀರ್ಥಹಳ್ಳಿ ತಾಲೂಕಿನಲ್ಲಿದೆ. ಸುಂದರ ಗಣಪತಿ ದೇವಾಲಯ, ಎದುರಿಗೆ ವಿಶಾಲವಾಗಿ ನದಿ. ಅಲ್ಲಿ ಮೀನುಗಳು ನಯನ ಮನೋಹರವಾಗಿ ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಶೃಂಗೇರಿಯ ಮೀನುಗಳಿಗಿಂತಲೂ ದೊಡ್ಡವು. ಬಹುದೊಡ್ಡ ಮೀನು ಎಂದರೆ ತಿಮಿಂಗಿಲ ಗಾತ್ರದ್ದು. ಮಂಡಕ್ಕಿ ಚೆಲ್ಲಿದರೆ ತಿನ್ನಲು ಮೇಲೆ ಬರುತ್ತವಂತೆ, ಸ್ಥಳೀಯರು ಹೇಳಿದ್ದು. ತೀರ್ಥಹಳ್ಳಿಯಿಂದ ಎರಡು ಮೈಲಿ ದೂರದಲ್ಲಿ ಕುಂಬಾರದಡಿಗೆ ಚಿಕ್ಕ ಗ್ರಾಮ. ಎದುರಿಗೆ ಶಿಲಾಪರ್ವತವೇ ಇದೆ. ನಾನು, ನನ್ನ ಸ್ನೇಹಿತ ಬಿಚ್ಚುಗತ್ತಿ ಚಿದಂಬರರಾವ್ ಈ ಗುಡ್ಡವನ್ನು ಸಾಕಷ್ಟು ಏರಿ, ಉಳಿ-ಸುತ್ತಿಗೆ ಸಹಾಯದಿಂದ ನಮ್ಮ ಹೆಸರನ್ನು ಕೆತ್ತಿದ್ದೆವು: ಏಮ್. ಎ .ಬಿ. ಟಿ. ( ಮ. ಅ. ಭಟ್ಟ, ತೀರ್ಥಹಳ್ಳಿ), ಬಿ. ಸಿ. ಚಿದಂಬರ. ಸುಮಾರು ವರ್ಷ ಇತ್ತಂತೆ. ಈಗ ಶಿಲಾಧ್ವಂಸದ ಕಾಲದಲ್ಲಿ ನಮ್ಮ ಹೆಸರೂ ಅಳಿದಿರಬೇಕು!
…. ನಮ್ಮ ತಂದೆಯವರು ಅಮ್ಮ ಮತ್ತು ಸಹೋದರರೊಂದಿಗೆ ತೀರ್ಥಹಳ್ಳಿಗೆ ಬಂದರು. ನನ್ನನ್ನು ಮತ್ತು ಗಜಣ್ಣನನ್ನು ಶ್ರೀ ಶ್ಯಾಮಭಟ್ಟ ಎನ್ನುವವರ ಹತ್ತಿರ ಟ್ಯೂಶನ್‌ಗೆ ಕಳಿಸುವುದೆಂದೂ, ನಾನು ಆ ವರ್ಷ ಇಂಗ್ಲಿಷ್ ರಹಿತ ಎಲ್.ಎಸ್. ಕಟ್ಟುವುದೆಂದೂ ನಿರ್ಣಯಿಸಿದರು. ಅದರಂತೆ ಮುಂದುವರಿದೆವು. ಆ ವರ್ಷ ಎಲ್. ಎಸ್. ಪರೀಕ್ಷೆಗೆ ನಾನೊಬ್ಬನೇ ಕುಳಿತೆ. ಗಜಣ್ಣನಿಗೆ ಮೊದಲ ದಿನವೇ ವಾಂತಿ ಜ್ವರ. ಒಟ್ಟಿನಲ್ಲಿ ಪರೀಕ್ಷೆಗೆ ಕಟ್ಟಲಿಲ್ಲ. ನನ್ನ ಮುಂದಿನ ವಿದ್ಯಾಭ್ಯಾಸ ಪೈ ಮಾಸ್ತರರು ಎಂಬವರಲ್ಲಿ. ಒಂದು ವರ್ಷದಲ್ಲಿ ಇಂಗ್ಲಿಷ್ ಮೂರು ತರಗತಿ ಮುಗಿಸಿ ಮುಂದಿನ ವರ್ಷ ನನ್ನನ್ನು ಮಿಡ್ಲ್‌ಸ್ಕೂಲಿಗೆ ಕೊನೆ ವರ್ಷಕ್ಕೆ ದಾಖಲು ಮಾಡಿದರು. ಆ ವರ್ಷ ಕೇವಲ ಇಂಗ್ಲಿಷ್ ಪರೀಕ್ಷೆ ಕಟ್ಟಿ ಪೂರ್ಣ ಪ್ರಮಾಣದ ಎಲ್.ಎಸ್. ಆದೆ. ೧೯೪೭-೪೮ರಲ್ಲಿ ಹೈಸ್ಕೂಲ್ ಎಂಟನೇ ತರಗತಿ ಎಂದರೆ ಆಗಿನ ಹೈಸ್ಕೂಲ್ ೧ನೇ ತರಗತಿಗೆ ಸೇರಿದೆನು. ಆಗ ಹೈಸ್ಕೂಲಿನಲ್ಲಿ ಆರು ಸೆಕ್ಷನ್‌ಗಳು.
ಎಂಟನೇ ತರಗತಿಯಲ್ಲಿ ನನ್ನ ಸ್ನೇಹಿತರು ಎಂ. ಎಲ್., ವೈ.ಎಚ್. ಮತ್ತು ಎಚ್. ಎಂ. ನಮ್ಮ ಕ್ಲಾಸ್ ಮಾಸ್ತರರು ಕಮಕೋಡ ನರಸಿಂಹ ಶಾಸ್ತ್ರಿಗಳು. ನಮ್ಮ ಕನ್ನಡ ಪಂಡಿತರೂ ಅವರೇ. ಕನ್ನಡದಲ್ಲಿ ಪುಸ್ತಕಗಳನ್ನೂ ಬರೆದಿದ್ದಾರೆ. ಸೊಹ್ರಾಬ್ ರುಸ್ತುಂ ನಾಟಕ ಬಹುಪ್ರಸಿದ್ಧ. ಕನ್ನಡದ ಪ್ರಕಾಂಡ ಪಂಡಿತರು. ನಮ್ಮ ಹೆಡ್‌ಮಾಸ್ಟರ್ ಕೆ.ಶ್ರೀಪಾದ ಆಚಾರ್ಯರು. ಮುಂದೆ ಅವರಿಗೆ ವರ್ಗವಾದ ಮೇಲೆ ಶ್ರೀ ಕೆ.ಕೆ.ಅಯ್ಯಂಗಾರ್ ಹೆಡ್‌ಮಾಸ್ಟರ್ ಆಗಿ ಬಂದರು. ನಟಭಯಂಕರ, ತಾಪತ್ರಯ ಹೆಸರಿನೊಡನೆ ಪ್ರಖ್ಯಾತರು! ಇವರು ಬಂದ ಲಾಗಾಯ್ತು ಶಾಲೆಯಲ್ಲಿ ಚಟುವಟಿಕೆಗಳ ಭರ ಭರಾಟೆ. ನನ್ನ ಎಂಟನೆಯೆತ್ತೆಯ ಮೊದಲ ಸಾಹಸ ಮಾನಿಟರಾಗಿ ಆರಿಸಿ ಬಂದದ್ದು. ಎರಡನೆಯದು ನನ್ನ ಲೇಖನ “ಮೂರೂವರೆ ಆಣೆ ಸಿಡಿಲು”. ‘ಬಾಲ ಭಾರತಿ’ – ವಿದ್ಯಾರ್ಥಿಗಳ ಕೈಬರಹ ಪತ್ರಿಕೆ. ಅದಕ್ಕೆ ಸಂಪಾದಕರು, ನಿರ್ದೇಶಕರು – ಎಲ್ಲ ನಮ್ಮ ಕನ್ನಡ ಪಂಡಿತ ನರಸಿಂಹ ಶಾಸ್ತ್ರಿಗಳು. ಲೇಖನಗಳನ್ನು ಬರೆದು ತರಲು ಹೇಳಿದರು. ನಾನು ಅದೇ ಆದ ಘಟನೆ, ಭಯಂಕರ ಸಿಡಿಲಿನ ಅನಾಹುತಗಳನ್ನು ಹಾಸ್ಯಮಿಶ್ರಿತವಾಗಿ ಬರೆದಿದ್ದೆ. ಅದನ್ನು ಪತ್ರಿಕೆಗೆ ಆಯ್ದೂ ಆಯಿತು, ಪ್ರಕಟವೂ ಆಯಿತು.
ಅಂದು ಶಾಲೆ ಬಿಡುವ ಹೊತ್ತು. ದೊಡ್ಡ ಗುಡುಗು, ಸಿಡಿಲು. ಜನರೆಲ್ಲಾ ಭಯಭೀತರಾಗಿದ್ದರು. ಆಗ ಹೊಟೆಲ್ ಮಾಣಿ ಕೈಯಿಂದ ಚೆಲ್ಲಿದ ಕಾಫಿ ಬೆಲೆ, ಅಂಗಡಿಯಲ್ಲಿ ಚಿಮಣಿ ಎಣ್ಣೆ ಅಳೆಯುವಾಗ ಕೈನಡುಗಿ ಚೆಲ್ಲಿದ ಚಿಮಣಿ ಎಣ್ಣೆ ಬೆಲೆ, ಕಳಸಮ್ಮನ ಹಾಲಿನ ಪಾತ್ರೆಯಿಂದ ಚೆಲ್ಲಿದ ಹಾಲಿನ ಬೆಲೆ – ಬೇರೆ ಬೇರೆ ವಿಭಾಗದ ಜನರು ಅನುಭವಿಸಿದ ಹಾನಿಪ್ರಮಾಣ ಮೂರೂವರೆ ಆಣೆ. ನನ್ನ ದುರದೃಷ್ಟ. ಅದೇ ವರ್ಷ ನಮ್ಮ ಕನ್ನಡ ಪಂಡಿತರಿಗೆ ವರ್ಗವಾಯಿತು. ಬಾಲಭಾರತಿ ಆಲ್ಮೆರಾದಲ್ಲೇ ಉಳಿಯಿತು. ಆದರೂ ಲೇಖನಕ್ಕೆ ಅನ್ಯಾಯವಾಗಲಿಲ್ಲ. ಇನ್ನೂ ಮೂರು ನಾಲ್ಕು ವರ್ಷಗಳ ನಂತರ ಕನ್ನಡ ಪಂಡಿತ ಶ್ರೀ ಕ.ನ. ಅವರು ಆಫ಼್ ಪೀರಿಯಡ್‌ಗೆ ಬಂದಾಗ ಎಲ್ಲಾ ಕ್ಲಾಸುಗಳಲ್ಲೂ ‘ಮೂರೂವರಾಣೆ ಸಿಡಿಲು’ ಲೇಖನ ಓದಿ ಹೇಳುತ್ತಿದ್ದರಂತೆ. ಇದನ್ನು ನನ್ನ ತಮ್ಮ ಜಯರಾಮ ನನಗೆ ಹೇಳಿದಾಗ ಸಂತೋಷವಾಯಿತು ಮತ್ತು ಬರೆಯುವ ಬೀಜಕ್ಕೆ ನೀರು ಹನಿಸಿದಂತಾಯಿತು.
ನನ್ನ ಒಂಬತ್ತನೇಯತ್ತೆ ತುಂಬಾ ಸಡಗರದಿಂದ ಪ್ರಾರಂಭವಾಯಿತು. ಆ ವರ್ಷ ಸಾಗರದ ಹೈಸ್ಕೂಲಿನಲ್ಲಿ ಇಂಟರ್ ಹೈಸ್ಕೂಲ್ ಡಿಬೇಟ್. ವಿಷಯ: “ಭಾಷಾವಾರು ಪ್ರಾಂತರಚನೆ ಆಗಬೇಕು”. ನಮ್ಮ ಹೈಸ್ಕೂಲನ್ನು ಪ್ರತಿನಿಧಿಸಲು ನಾನು ಮತ್ತು ನನ್ನ ಸ್ನೇಹಿತ ಹಾ. ಮಾ. ನಾಯಕ ಆರಿಸಲ್ಪಟ್ಟೆವು. ನಾವಿಬ್ಬರೂ ಪರ, ವಿರೋಧಕ್ಕೆ ತಯಾರಾದೆವು. ಸಾಗರಕ್ಕೆ ಹೋದೆವು. ಅಂಥ ಸಭೆ ನಮ್ಮಿಬ್ಬರಿಗೂ ಹೊಸದು. ಸಾಗರದ ಪ್ರತಿಷ್ಠಿತ ವಕೀಲರು ನಿರ್ಣಾಯಕರು. ಕೋರ್ಟಿನ ಮುಖ್ಯ ನ್ಯಾಯಾಧೀಶರೇ ಅಧ್ಯಕ್ಷರು. ಚೀಟಿ ಎತ್ತಿದರು. ನನಗೆ ವಿರೋಧವಾಗಿಯೂ, ಹಾ.ಮಾ.ನಾಯಕರಿಗೆ ಪರವಾಗಿಯೂ ಮಾತನಾಡುವಂತೆ ಸರದಿ ಬಂತು. ನನ್ನ ಪಾಯಿಂಟ್‌ನಲ್ಲಿ ಎಲ್ಲರ ಗಮನ ಸೆಳೆದದ್ದು “ಇಂದು ಭಾಷಾವಾರು ಪ್ರಾಂತವಾದರೆ ಕನ್ನಡ ಒಂದೇ ಅಲ್ಲ, ಕೊಂಕಣಿಗರಿಲ್ಲವೆ, ತುಳುಜನರಿಲ್ಲವೇ, ಹೀಗೆ ಭಾಷಾವಾರು ಎಂದರೆ ಏಳೆಂಟು ಭಾಷೆಗಳವರೂ ರಾಜ್ಯ ಕೇಳಬಹುದು”. ಹಾ.ಮಾ.ನಾ. ಹೇಳಿದರು: “ನಾನು ಸ್ವತಃ ಭಾಷಾವಾರು ರಾಜ್ಯ ಆಗಲೇಬೇಕು ಎನ್ನುವವ. ನನಗೆ ಅದೇ ವಿಷಯವೂ ಬಂದಿದೆ”. ಆ ಕುರಿತು ಒಲವು ತೋರಿದ ಅನೇಕ ಮುಖ್ಯ ಪ್ರತಿಪಾದಕರನ್ನು ಉದಾಹರಿಸಿದರು. ಹಾ.ಮಾ.ನಾ. ಪ್ರಥಮ ಬಹುಮಾನ ಗಳಿಸಿದರು. ನಮ್ಮ ಶಾಲೆಗೆ ಕೇವಲ ಅರ್ಧ ಅಂಕದಿಂದ ಶೀಲ್ಡ್ ತಪ್ಪಿತಂತೆ ಎಂದು ಹಾ.ಮಾ.ನಾ.ರೇ ಹೇಳಿದರು. ನನ್ನ ಭಾಷಣವೂ ಉತ್ತಮ ಮಟ್ಟಿದ್ದಿತ್ತೆಂದು ಎಲ್ಲರೂ ಹೇಳಿದರು.
ಬಡ ವಿದ್ಯಾರ್ಥಿಗಳ ನಿಧಿಗಾಗಿ ಶಾಲಾ ಶಿಕ್ಷಕರಿಂದ ಮತ್ತು ವಿದ್ಯಾರ್ಥಿಗಳಿಂದ ನಾಟಕ. ಮುಂದಾದವರು ನಮ್ಮ ಹೆಡ್‌ಮಾಸ್ಟರ್ ಅಯ್ಯಂಗಾರರೇ. “ಭಕ್ತ ಪ್ರಹ್ಲಾದ”ದಲ್ಲಿ ಹೆಡ್‌ಮಾಸ್ಟರ್ ಹಿರಣ್ಯಕಶಿಪು. ಊರಿನ ಶಿಕ್ಷಕರಾದ ಪದ್ಮನಾಭಯ್ಯ ಇವರದು ಖಯಾದು. ನಮ್ಮ ಗೆಳೆಯ ಶಿವಾನಂದನದು ನಾರದ. ಪರಿಣಾಮ ನಮ್ಮ ಹೆ.ಮಾ. ಮತ್ತೊಮ್ಮೆ ನಟಭಯಂಕರರಾಗಿ, ಶಿವಾನಂದ ಉತ್ತಮ ಗಾಯಕನಾಗಿ ಊರ ಜನರ ಮನವನ್ನು ಗೆದ್ದರು. ಬಹುಕಾಲ ನೆನಪಿಡಬೇಕಾದ ನಾಟಕ ಎಂದು ಜನರ ಅಭಿಪ್ರಾಯ.
ಹಿಂದಿ ಸ್ಪೆಶಲ್ ಕ್ಲಾಸ್: ಶ್ರೀ ಎಂ.ಎನ್.ಜೆ. ಎಂಬ ಒಬ್ಬ ಶಿಕ್ಷಕರು ಹಿಂದಿ ಪರೀಕ್ಷೆಗೆ ಪಾಠಗಳನ್ನು ನಡೆಸುತ್ತಿದ್ದರು. ನಮ್ಮ ಕ್ಲಾಸಿನ ಹದಿನೈದು – ಇಪ್ಪತ್ತು ವಿದ್ಯಾರ್ಥಿಗಳು ಆಗಲೇ ಪ್ರಥಮಾ ಕ್ಲಾಸಿಗೆ ಹೋಗುತ್ತಿದ್ದರು. ನನ್ನ ಸ್ನೇಹಿತ ಎಂ. ಲಕ್ಷ್ಮೀನಾರಾಯಣನೂ ಹೋಗುತ್ತಿದ್ದ. ನನಗೆ ಗೊತ್ತಾಗಿದ್ದು ಒಂದು ತಿಂಗಳ ನಂತರ. ‘ನಾನೂ ಬರುತ್ತೇನೆ’ ಎಂದೆ. ಆದರೆ ಮಾಸ್ತರು ಏನೆನ್ನುತ್ತಾರೋ! ತಡವಾಗಿದೆ. ಗೆಳೆಯನೊಡನೆ ಮಾಸ್ತರರನ್ನು ಕಂಡೆ. ಅವರು “ಆಗುವುದಿಲ್ಲ. ಆಗಲೇ ಒಂದು ತಿಂಗಳ ಪಾಠ ಆಗಿದೆ” ಎಂದುಬಿಟ್ಟರು. ಆದರೆ ಲಕ್ಷ್ಮೀನಾರಾಯಣ ಬಿಡಲಿಲ್ಲ. “ಸರ್, ಮೇಕಪ್ ಮಾಡಿಕೊಳ್ಳುತ್ತಾನೆ” ಎಂದು ನನ್ನ ಪರವಾಗಿ ಬಲವಂತ ಮಾಡಿದ. ಕಡೆಗೆ ಅವರು ಒಪ್ಪಿದರು. ‘ಪ್ರಥಮಾ’ಕ್ಕೂ ಕಟ್ಟಿಸಿದರು. ಆ ವರ್ಷ ನಾನು ತೀರ್ಥಹಳ್ಳಿ ಕೇಂದ್ರಕ್ಕೇ ಪ್ರಥಮ! ಸರಾಸರಿ ಎಪ್ಪತ್ತೇಳು ಅಂಕಗಳಿಸಿದ್ದೆ. ನನಗೆ ಒಂದು ಬಹುಮಾನವೂ ಬಂತು. ಹಿಂದಿ ಕ್ಲಾಸು ಚರ್ಚಿನಲ್ಲಿ ರಾತ್ರಿ ಎಂಟರಿಂದ ಎಂಟೂನಲವತ್ತರವರೆಗೆ ನಡೆಯುತ್ತಿತ್ತು. ಒಮ್ಮೆ ಮಾಸ್ತರರು ‘ಕಾ,ಕೀ.ಕೇ’ ಪ್ರಯೋಗ ಹೇಳುತ್ತಿದ್ದರು.ಕಾಕರಳ್ಳಿ ಮಂಜಣ್ಣನ ಕೀ ಪ್ರಯೋಗ:‘ತೇರೀ ಮಾಕೀ’! ನಮಗೆಲ್ಲಾ ನಗು. ಮಾಸ್ತರರು ಮಾತ್ರ ಮಂಜ ಚುಪ್ ಎನ್ನುತ್ತಿದ್ದಂತೆ ಮಂಜಣ್ಣ ತಪ್ಪಾಯಿತು ಎಂದ.
ಮುಂದೆ ಮಧ್ಯಮಾ ಪರೀಕ್ಷೆಗೆ ತಯಾರಿ ನಡೆಸಿದರು. ಕಟ್ಟಿದ ನಲವತ್ತೈದರಲ್ಲಿ ನಲವತ್ತೈದೂ ಮಕ್ಕಳು ಪಾಸು. ಮಾಸ್ತರಿಗೆ ತುಂಬಾ ಉಮೇದಿ. ಮುಂದೆ ‘ರಾಷ್ಟ್ರಭಾಷಾ’. ಆದರೆ ನಾನು, ಲಕ್ಷ್ಮೀನಾರಾಯಣ ಕಟ್ಟಲಿಲ್ಲ. ಆ ವರ್ಷವೇ ನಮ್ಮ ಎಸ್.ಎಸ್.ಎಲ್.ಸಿ. ನಮ್ಮ ಅತ್ತಿಗೆ ಆಗ ತೀರ್ಥಹಳ್ಳಿಯಲ್ಲಿ ಇದ್ದವರು ‘ಪ್ರವೇಶಿಕಾ’ ಪರೀಕ್ಷೆ ಕಟ್ಟಿದರು. ಭದ್ರಾವತಿಯಲ್ಲಿ ‘ಮೌಖಿಕ’.
ನಮ್ಮ ದರ್ಜಿ ರಾಮಯ್ಯಗೌಡರು ಹಿಂದಿಯಲ್ಲಿ ತುಂಬಾ ಜಾಣರು. ಬರವಣಿಗೆಯಲ್ಲಿ ಮೊದಲನೇ ನಂಬರು. ಆದರೆ ತೋಂಡಿಯಲ್ಲಿ ಮಾತ್ರ ನಪಾಸು – ಅದೂ ಎರಡು, ಮೂರು ಸಲ. ತುಂಬಾ ಬೇಸರವಾಯಿತು, ಆದರೂ ಜೇಡರ ಹುಳದಂತೆ ಹಿಡಿದ ಪ್ರಯತ್ನ ಬಿಡಲಿಲ್ಲ. ಆ ವರ್ಷ ಪುನಃ ಮೌಖಿಕ ಪ್ರಶ್ನೆ: ” ಗೌಡಾಜೀ,ಕೋಯಲ್ ಔರ್ ಕೋಯ್ಲಾ ಮೇಂ ಕ್ಯಾ ಫ಼ರಕ್ ಹೈ?”.(ಕೋಗಿಲೆ ಮತ್ತು ಕಲ್ಲಿದ್ದಲು ಇವುಗಳ ನಡುವೆ ವ್ಯತ್ಯಾಸವೇನು?).ಗೌಡರಿಗೆ ಉತ್ತರ ಗೊತ್ತು. ಹೇಳಲು ಕಷ್ಟ. ಆದರೂ ಅಭಿನಯಪೂರ್ವಕವಾಗಿ ಹೇಳಲು ಯತ್ನಿಸಿದರು:”ಕೋಯಲ್ ಕೂಕೂ ಕರಕೇ ಗಾತೀ ಹೈ.ಕೋಯ್ಲಾ ಕೋ ತುಕಡಾ ತುಕಡಾ ಕರಕೇ ಇಂಜಿನ್ ಮೇಂ ಡಾಲತೇ ಹೈ.ರೇಲ್ ಕೂಕೂ ಕರಕೇ ಜಾತೀ ಹೈ.”.ಹೀಗೇ ಕೆಲ ಕಾಲ ಪ್ರಶ್ನೋತ್ತರ ನಡೆದ ಬಳಿಕ ಸಂದರ್ಶಕರು ಕೇಳಿದರು:”ಆಪ್ ಇಸ್ ಬಾರ್ ಭೀ ಫ಼ೇಲ್ ಹೋ ಜಾಯೇಂಗೇ ತೋ ಕ್ಯಾ ಕರೇಂಗೇ?”.ಗೌಡರು ನಿಟ್ಟುಸಿರು ಬಿಟ್ಟು ಹೇಳಿದರು:”ಮೇರೇ ಲಿಯೇ ಇಸ್ ಪರೀಕ್ಷಾ ಗೌರೀಶಂಕರಕೀ ಚೋಟಿ ಸಮಝೂಂಗಾ”.(ನನ್ನ ಪಾಲಿಗೆ ಈ ಪರೀಕ್ಷೆ ಗೌರೀಶಂಕರ ಶಿಖರವೇರಿದಂತೆ ಎಂದು ತಿಳಿಯುತ್ತೇನೆ”).ಆಗಿನ್ನೂ ಯಾರೂ ಗೌರೀಶಂಕರ ಶಿಖರ ಏರಿರಲಿಲ್ಲ.ಗೌಡರ ಅದೃಷ್ಟ ದೊಡ್ಡದು.ಗೌರೀಶಂಕರ ಶಿಖರವನ್ನು ಏರುವ ಮೊದಲೇ ಗೌಡರು ೪೦% ಅಂಕಗಳೊಂದಿಗೆ ಪ್ರವೇಶಿಕಾ ಪರೀಕ್ಷೆ ಪಾಸಾದರು!
“ಬ್ಲಾಕ್ ಮಾರ್ಕೆಟ್” ಒಂದು ಸಾಮಾಜಿಕ ನಾಟಕ. ಅಲ್ಲಿ ಶೇಟ್‌ಜಿ ಪಾತ್ರ ಪ್ರಧಾನ ಪಾತ್ರಗಳಲ್ಲಿ ಒಂದು. ನಾನೇ ಅದನ್ನು ಮಾಡಬೇಕೆಂದು ಸ್ನೇಹಿತರ ಒತ್ತಾಯ. ಒಪ್ಪಿಕೊಂಡೆ. ಹೈಸ್ಕೂಲ್ ವಿದ್ಯಾರ್ಥಿಗಳಿಂದಲೇ ಎಲ್ಲಾ ಪಾತ್ರ. ಆ ವರ್ಷ ಎಳ್ಳಮಾವಾಸ್ಯೆಗೆ ನಾಟಕ ಕಂಪನಿ ಬಂದಿತ್ತು. ಆ ಯಜಮಾನರದೇ ರುಮಾಲು ತಂದರು. ನಮ್ಮ ಮನೆಯಲ್ಲಿ ತಂದೆಯವರಿಗೆ, ಹಂದೆ ಮಾವನಿಗೆ ಯಾರಿಗೂ ನಾನು ಪಾರ್ಟ್ ಮಾಡುವುದು ಇಷ್ಟ ಇಲ್ಲ. ಆದರೂ ನಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಹ್ಞೂಂ ಅಂದರು. ಹಂದೆಮಾವನಿಗೆ ಮಹಾಬಲನ ಪಾರ್ಟು ನೋಡಲು ಕುತೂಹಲ. ನಾಟಕ ಪ್ರಾರಂಭವಾಯಿತು. ಪ್ರಥಮ ಪ್ರವೇಶವೇ ನನ್ನದು. ರುಮಾಲು ಸುತ್ತಿಕೊಂಡು ಕರಿಕೋಟು ಹಾಕಿಕೊಂಡು ಪೇಪರು ಓದುತ್ತಾ ಬರುತ್ತಾ ಎದುರಿಗೆ ಬರುವ ಇನ್ನೊಂದು ಪಾತ್ರಕ್ಕೆ ಬೇಕೆಂತಲೇ ಢಿಕ್ಕಿ ಕೊಟ್ಟೆ. ಪ್ರೇಕ್ಷಕರಿಂದ ಚಪ್ಪಾಳೆ. ಹಂದೆಮಾವನಿಗೆ ಎಲ್ಲಿಲ್ಲದ ಸಂತೋಷ. ಹಾಗೇ ಮಠಕ್ಕೆ ಬಂದವ “ಅನಂತ ಭಟ್ಟರೇ, ಮಹಾಬಲನ ಪಾತ್ರ ಏ-ಒನ್. ಬನ್ನಿ ನೋಡಿ ಬರೋಣ” ಎಂದನಂತೆ. “ಕರಿಕೋಟು, ರುಮಾಲು, ಹೆಗಲಿನ ಶಲ್ಯ, ವ್ಹಾ, ವ್ಹಾ”ಎಂದೆಲ್ಲ ವರ್ಣನೆ.ಮಾರನೇ ದಿನ ಬೆಳಿಗ್ಗೆ ನಾಗಾವಧಾನಿಗಳು “ಏಜೆಂಟರೇ, ನಿಮ್ಮ ಮಗ ಶೇಟ್‌ಜಿ ಪಾರ್ಟು ಕಂಪನಿಯವರಿಗಿಂತ ಚೆನ್ನಾಗಿ ಮಾಡಿದ ಎಂದು ನಾಟಕದ ಕಂಪನಿಯ ರಂಗಪ್ಪನೇ ಹೇಳಿದ”ಎಂದು ಹೇಳಿದರು.
ರಾಘಣ್ಣನ ರಥ: ಇದರಲ್ಲಿ ನಾನೇ ರಾಘಣ್ಣ. ಮುಂದೆ ಕೋಣಂದೂರು ಲಿಂಗಪ್ಪ ಎಂದು ಹೆಸರಾದ ಕೆ. ಲಿಂಗಪ್ಪ ‘ಕೈಯೆಣ್ಣೆ’. ಉಳಿದ ಪಾತ್ರಗಳೂ ಹೈಸ್ಕೂಲು ವಿದ್ಯಾರ್ಥಿಗಳದೇ. ನಾವು ಹೈಸ್ಕೂಲು ಒಂಬತ್ತು-ಹತ್ತನೇ ಇಯತ್ತೆಯಲ್ಲಿದ್ದಾಗಲೇ ಹಾ.ಮಾ.ನಾಯಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿದ್ದರು. ಆಗಲೇ ಅವರು ಬೇಂದ್ರೆ, ಅ.ನ.ಕೃ, ಶಿವರಾಮ ಕಾರಂತರು ಮೊದಲಾದವರನ್ನು ತೀರ್ಥಹಳ್ಳಿಗೆ ಕರೆಸಿ ಭಾಷಣ ಏರ್ಪಡಿಸುತ್ತಿದ್ದರು. ನನ್ನ ಮೆಚ್ಚುಗೆಯನ್ನು ಪ್ರತಿ ಸಲವೂ ಹೇಳುತ್ತಿದ್ದೆ. ಸಂತೋಷದಿಂದ ಸ್ವೀಕರಿಸಿ ಇಂಥ ಮೆಚ್ಚಿನ ನುಡಿ ಮುಂದಿನ ಚಟುವಟಿಕೆಗೆ ಬಂಡವಾಳ ಎನ್ನುತ್ತಿದ್ದರು. ಹತ್ತನೇಯತ್ತೆಗೆ ಬರುವ ಹೊತ್ತಿಗೆ ಹಾ.ಮಾ.ನಾ. ಮತ್ತು ನಾನು ಬಹಳ ನಿಕಟ ಸ್ನೇಹಿತರಾಗಿದ್ದೆವು. ಅವರು ಒಂದು ದಿನ ಸ್ನೇಹಿತರಿರುವಾಗ “ತಿಪ್ಪಾಭಟ್ಟರ ಜನಿವಾರ, ಇಲಿಗಳಿಗಾಗಿತ್ತಾಹಾರ” ಎಂದರು. ನಾನು “ಥೂ ಛೀ ಗೌಡನೆ ನೀ ಹಾಳಾಗ, ನಿನ್ನೀ ಗಂಟಲು ಬಿದ್ದೇ ಹೋಗ” ಎಂದೆ. ಬಿದ್ದು ಬಿದ್ದು ನಕ್ಕೆವು. ಇದು ಅನೇಕ ಸಲ ಪುನರಾವೃತ್ತಿ ಆಗುತ್ತಿತ್ತು. ಕೆಲ ಸಲ ಈ ವಿನೋದ ನನ್ನಿಂದಲೇ ಆರಂಭವಾಗುತ್ತಿತ್ತು. ಒಂದು ಸಂಜೆ ನಾವಿಬ್ಬರೂ ಸಿನಿಮಾ ನೋಡಲು ಹೋದಾಗ ಹೇಳಿದೆ, “ಮಾನಪ್ಪ, ಈಗ ನೀವು ‘ತಿಪ್ಪಾಭಟ್ಟರ…’ ಹೇಳುವಂತಿಲ್ಲ. ಯಾಕೆಂದರೆ ವಾಪಸು ನಾನೂ ಏನೂ ಹೇಳುವಂತಿಲ್ಲ. ಸಿನಿಮಾ ಟಾಕೀಸ್ ಮಾಲಿಕ ಚೆನ್ನಪ್ಪಗೌಡರು ತನಗೇ ಹೇಳ್ತಾರೆ ಎಂದು ನಮ್ಮಿಬ್ಬರನ್ನೂ ಹೊರಹಾಕ್ಯಾರು”. ನಗೆಯೋ ನಗೆ. ಪ್ರತಿ ರಜಾದಿನ ನಾಲ್ಕರಿಂದ ಆರರವರೆಗೆ ಕಂಬೈಂಡ್ ಸ್ಟಡಿ. ಎಸ್.ಎಸ್.ಎಲ್.ಸಿ. ಗಣಿತದ ತೊಂದರೆಗೆ ನಾನು, ಇಂಗ್ಲಿಷ್ ತೊಂದರೆಗೆ ಹಾ.ಮಾ.ನಾ. – ಇದು ಎಸ್.ಎಸ್.ಎಲ್.ಸಿ. ಪರೀಕ್ಷೆವರೆಗಗೂ ನಡೆಯಿತು. ಒಮ್ಮೆ ಶ್ರೀ ಹಾ.ಮಾ.ನಾ.ಅಂಕೋಲೆಗೆ ಬಂದಿದ್ದರು. ಹೋಗಿ ನನ್ನ ಹೈಸ್ಕೂಲಿಗೆ ಬರಲು ಹೇಳಿದಾಗ ಸಂತೋಷದಿಂದ ಒಪ್ಪಿದರು. ಕುಮಟಾಕ್ಕೆ ಹೋಗುವಾಗ ನಮ್ಮ ಹೈಸ್ಕೂಲಿಗೆ ಬಂದರು. ಮಕ್ಕಳನ್ನು ಉದ್ದೇಶಿಸಿ ‘ಎರಡು ಮಾತು ಹೇಳಿ’ ಎಂದಾಗ ‘ನಾಲ್ಕು ಹೇಳ್ತೇನೆ’ ಎಂದರು. ನಿಮ್ಮ ಹೆಡ್‌ಮಾಸ್ಟರು ಗಣಿತದಲ್ಲಿ ನೂರಕ್ಕೆ ನೂರು ಪಡೆದವರೆಂದು ವರ್ಣಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಿಮ್ಮ ಹೆಡ್ ಮಾಸ್ತರರ ಸಹಾಯದಿಂದ ಗಣಿತದಲ್ಲಿ ಪಾಸಾದೆ ಎಂದಾಗ ಹುಡುಗರೆಲ್ಲಾ ತಬ್ಬಿಬ್ಬು. ಹೊನ್ನಾವರದಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿನದತ್ತ ದೇಸಾಯಿ ಇದ್ದರು.ಅವರು ಬೇರೆ ಸಂದರ್ಭದಲ್ಲಿ ನನ್ನ ಕುರಿತು ಹೇಳುವಾಗ ನನ್ನ ಮತ್ತು ಹಾ.ಮಾ.ನಾ.ರ ಸ್ನೇಹದ ಕುರಿತು ಮುಕ್ತಕಂಠದಿಂದ ಶ್ಲಾಘಿಸಿದರು.
ಹೊಳೆ ಆಚೆ ಬೊಮ್ಮರಸಯ್ಯನ ಅಗ್ರಹಾರ. ಗಣಿತದಲ್ಲಿ ನೂರಕ್ಕೆ ನೂರು ಅಂದೆ. ಈ ಬೀಜಕ್ಕೆ ನೀರೆರೆದವರು ಲಕ್ಷ್ಮೀನಾರಾಯಣ ಮತ್ತು ಅವನ ಸ್ನೇಹಿತ ಪಾರ್ಥಸಾರಥಿ. ನನಗಿಂತ ಒಂದು ವರ್ಷ ಸೀನಿಯರ್. ಅವರು ಎಸ್.ಎಸ್.ಎಲ್.ಸಿ.ಯಲ್ಲಿದ್ದಾಗ ನನ್ನನ್ನು ರಿವಿಜನ್‌ಗೆ ಕರೆದುಕೊಳ್ಳುತ್ತಿದ್ದರು. ಎಂಟು, ಒಂಬತ್ತನೆಯ ತರಗತಿಗಳ ಗಣಿತ ಭಾಗವನ್ನು ಬಿಡಿಸುವಾಗ ನನ್ನ ಜೊತೆ ಬಿಡಿಸುತ್ತಿದ್ದರು. ಹಾಗಾಗಿ ಗಣಿತದ ಬಗೆಗೆ ನನಗೆ ಪೂರ್ಣ ವಿಶ್ವಾಸ ತುಂಬಿದವರು ಅವರು. ಅವರ ಎಸ್.ಎಸ್.ಎಲ್.ಸಿ.ಮುಗಿದ ಮೇಲೆ ಅವರ ನೋಟ್ಸ್ ನನಗೆ ಕೊಟ್ಟರು. ನನಗೆ ಬರದೇ ಹೋದ ಕಠಿಣ ಲೆಕ್ಕಗಳನ್ನು ಬಿಡಿಸುವಲ್ಲಿ ಸಹಾಯ ಮಾಡುತ್ತಿದ್ದರು. ಲಕ್ಷ್ಮೀನಾರಾಯಣ ಡಿಪ್ಲೋಮಾ ಕೋರ್ಸಿಗೆ, ಪಾರ್ಥಸಾರಥಿ ಬಿ.ಇ. ಕೋರ್ಸಿಗೆ ಹೋದರು.
ದರ್ಲಗೋಡ ನಾಗರಾಜ ಜೋಯ್ಸ ಕುರಿತು ಹೇಳುವೆ.ನಮ್ಮ ಸಂಸ್ಕೃತ ಪಂಡಿತರು, ವಿದ್ವಾನ್ ರಾಜಶೇಖರಯ್ಯ ವಿದ್ಯಾರ್ಥಿಗಳೊಂದಿಗೆ ತುಂಬಾ ಬೆರೆಯುತ್ತಿದ್ದರು. ಆರಗ ಒಂದು ಹಳ್ಳಿ. ಅಲ್ಲಿ ಶರಾವತಿ ನದಿಯ ಮೂಲ. ನಾವು ಮೂರು ನಾಲ್ಕು ಜನ ಶರಾವತಿ ಮೂಲಕ್ಕೆ ಟ್ರಿಪ್ ಹೋದೆವು. ಬೆಳಿಗ್ಗೆ ಆರು ಮೈಲಿ ನಡೆದು ಆರಗ, ಅಲ್ಲಿ ಒಂದೂವರೆ ಮೈಲಿ ನಡೆದರೆ ಝರಿಯ ಮೂಲಕ ಒಂದು ಕೆರೆ ಬರುತ್ತದೆ. ಇದೇ ಶರಾವತಿ ಮೂಲ. ನಾವೆಲ್ಲ ನೀರನ್ನು ಪ್ರೋಕ್ಷಣ್ಯ ಮಾಡಿಕೊಂಡು ತೀರ್ಥದಂತೆ ಕುಡಿದೆವು. ತೀರ್ಥ ಸರಿ, ಮಧ್ಯಾಹ್ನ ಪ್ರಸಾದಕ್ಕೆ ನಮ್ಮ ನಾಗರಾಜನ ಮನೆಯಲ್ಲಿ ಸುಗ್ರಾಸ ಭೋಜನ, ಬೋಂಡಾ, ಕೇಸರಿಬಾತು, ಬಾಳೆಹಣ್ಣು, ಕಾಫಿ ನಂತರ ಐದಕ್ಕೆ ತೀರ್ಥಹಳ್ಳಿಗೆ ಮರು ಪ್ರಯಾಣ.
ತೀರ್ಥಹಳ್ಳಿಯ ಸುತ್ತ ಎರಡು-ಮೂರು ಮೈಲಿಗಳ ಅಂತರದಲ್ಲೇ ಪುತ್ತಿಗೆ ಮಠ, ಭೀಮನಕಟ್ಟೆ ಮಠ, ಮುಳಬಾಗಿಲಮಠ, ಕೋದಂಡರಾಮಮಠ. ನಮ್ಮ ಬಿಡಾರ ಮನೆಯ ಎದುರಿಗೇ ಉಡುಪಿ ಶ್ರೀ ರಾಮಾಚಾರ್ಯರ ಮನೆ. ರಾಮಾಚಾರ್ಯರು ಆಗ ಅರವತ್ತೈದು, ಎಪ್ಪತ್ತು ವಯಸ್ಸಿನವರು, ನನ್ನ ಪರಿಚಯ ಇತ್ತು. ಒಮ್ಮೆ ನನ್ನ ಹತ್ತಿರ “ಮಹಾಬಲಭಟ್ಟರೇ, ನಾಡಿದ್ದು ಭಾನುವಾರ ನಮ್ಮ ಭೀಮನಕಟ್ಟೆ ಮಠದಲ್ಲಿ ಆರಾಧನಾ ಸಂತರ್ಪಣೆ ಉಂಟು. ಬನ್ನಿ, ಹೋಗೋಣ” ಎಂದರು. ನಾನು ಸ್ವಲ್ಪ ಅಳುಕಿದೆ. ‘ಅನಂತ ಭಟ್ಟರಿಗೆ ನಾನು ಹೇಳುತ್ತೇನೆ’ ಎಂದರು. ನಾನು ‘ಹೂಂ’ ಎಂದೆ. ಅದೇ ವೇಳೆಗೆ ನಮ್ಮ ಅಘನಾಶಿನಿಯ ಗಾಚಣ್ಣ (ಗಾಚಮಾವ) ತೀರ್ಥಹಳ್ಳಿಗೆ ಬಂದಿದ್ದ. ಅವನೂ ಜೊತೆಗೆ ಬರುವುದು ಎಂದಾಯ್ತು. ಮೂವರೂ ಬೆಳಿಗ್ಗೆ ಹೊರಟೆವು. ಹಾದಿಯಲ್ಲಿ ಒಂದು ಗಣಪತಿ ದೇವಾಲಯ, ನಂತರ ಮುಳಬಾಗಿಲು ಮಠ. ನಂತರ ಮಧ್ಯಾಹ್ನ ಭೀಮನಕಟ್ಟೆ ಮಠ ಮುಟ್ಟಿದೆವು. ಅಲ್ಲಿ ನಮಗೆ ರಾಜೋಪಚಾರ. ನಮ್ಮ ರಾಮಾಚಾರ್ಯರು ಅಲ್ಲಿ ಒಮ್ಮೆ ಅಧಿಕಾರಿಗಳಾಗಿದ್ದವರಂತೆ. ಇಲ್ಲಿಯ ಈಗಿನ ಏಜೆಂಟರು ಶ್ರೀ ರಾಜಗೋಪಾಲಾಚಾರ್ಯರು. ಇವರ ಮಗ ನನ್ನ ಹೈಸ್ಕೂಲ್‌ಮೇಟ್. ಒಂದೆರಡು ಸಲ ಮಾತನಾಡಿದ ಪರಿಚಯ. ಅವರೇ ಇಂದಿನ ಡಾ.ಯು. ಆರ್. ಅನಂತಮೂರ್ತಿ. ತಿರುಗಿ ಬರುವಾಗ ನಮ್ಮ ಗಾಚಮಾವ “ರಾಮಾಚಾರ್ಯರೇ, ನೀವು ಒಮ್ಮೆ ಗೋಕರ್ಣಕ್ಕೆ ಬನ್ನಿ. ಅಲ್ಲಿಂದ ನನ್ನ ಊರು ಮೂರು ಮೈಲಿ. ನಾನು ಬಂದು ಕರೆದುಕೊಂಡು ಹೋಗುವೆ” ಎಂದೆ. ರಾಮಾಚಾರ್ಯರು ‘ಹೂಂ’ ಎಂದರು. ಎಲ್ಲೋ ಸಹಜವಾಗಿ ’ಹೂ’ ಎಂದರು, ಅಂದುಕೊಂಡೆ. ಇಲ್ಲ, ಈ ಮಾತಿಗೆ ಹತ್ತು ಹದಿನೈದು ವರ್ಷಗಳಾಗಿರಬಹುದು. ಶ್ರೀ ರಾಮಾಚಾರ್ಯರು, ಅವರ ಧರ್ಮಪತ್ನಿ ಮತ್ತು ಹನುಮಂತ ದೇವಸ್ಥಾನದ ಅರ್ಚಕರು ಗೋಕರ್ಣಕ್ಕೆ ನಮ್ಮ ಮನೆ ಹುಡುಕಿಕೊಂಡು ಬಂದೇ ಬಂದರು. ಎರಡು ದಿನ ಉಳಿದು ಕೋಟಿ ತೀರ್ಥ, ಸಮುದ್ರ ಸ್ನಾನ, ಶ್ರೀ ದೇವರ ದರ್ಶನ ಎಲ್ಲಾ ಮುಗಿಸಿ ಹೋದರು. ನಾನು ‘ನಮ್ಮ ಸಭಾಹಿತರ ಮನೆಗೆ’ ಎಂದೆ. ‘ಇನ್ನೊಮ್ಮೆ’ ಎಂದು ಹೊರಟೇಬಿಟ್ಟರು. ಯು.ಆರ್. ಅನಂತಮೂರ್ತಿಯವರೂ ಒಮ್ಮೆ ಗೋಕರ್ಣಕ್ಕೆ ಬಂದಿದ್ದರು. ಅಂದು ಸಂಜೆ ಅವರು ಬಂಕಿಕೊಡ್ಲಕ್ಕೆ ಶ್ರೀ ಎಕ್ಕುಂಡಿ ಮಾಸ್ತರರನ್ನು ಭೇಟಿ ಆಗಲು ಹೋಗಿದ್ದರಂತೆ. ಮರಳಿ ಬರುವಾಗ ನನಗೆ ಜವಳಿ ಅಂಗಡಿ ಬಳಿ ಸಿಕ್ಕರು. ತೀರ್ಥಹಳ್ಳಿಯ ವಿಷಯ ಮಾತನಾಡಿದೆವು. ಅವರ ತಮ್ಮ ವೆಂಕಟೇಶಮೂರ್ತಿ ಇನ್ನಿಲ್ಲವಾದರೆಂಬ ವಿಷಯ ತಿಳಿಯಿತು.
ಶಿವರಾಮ (ದೊಡ್ಡಣ್ಣ): ತೀರ್ಥಹಳ್ಳಿಯ ವಿದ್ಯಾರ್ಥಿಗಳಲ್ಲೆಲ್ಲ ದೊಡ್ಡ ಹೆಸರು. ಈವರೆಗೂ ನೋಡರಿಯದ, ಕೇಳರಿಯದ ಎತ್ತರದಿಂದ ತುಂಗಾನದಿಗೆ ಧುಮುಕಿದ್ದ, ಸೇತುವೆಯ ಕಮಾನಿನ ಮೇಲಿಂದ! ಪೋಲೀಸರು ಸ್ಟೇಶನ್‌ಗೆ ಕರೆದು “ಇನ್ನು ನೀವು ಹಾಗೆ ಹಾರಬಾರದು. ಹಾರಿದರೆ ನಾವು ಕೇಸು ಮಾಡುತ್ತೇವೆ” ಎಂದು ಹೆದರಿಸಿದರಂತೆ. ಶ್ರೀ ರಾಮಕೃಷ್ಣಯ್ಯ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕಲೆ ಹಾಕಿ ಒಂದು ನಾಟಕ ಆಡಿಸಿದರು. ಅದರಲ್ಲಿ ಈ ಮೂವರು – ಹಾಜಗಲ್ಲ ಮಂಜಪ್ಪ, ಶ್ರೀಪತಿ ಮತ್ತು ಶಿವರಾಮ. ಇವರು ನಟನೆಯಿಂದ ಎಲ್ಲರ ಪ್ರೀತಿ ಗಳಿಸಿದರು. ಹೈಸ್ಕೂಲ್ ಒಂದನೇಯತ್ತೆಯಲ್ಲಿ ಹೆ.ಮಾ. “ಈಗ ಎಲ್ಲಾ ಆಧುನಿಕತೆ ಬಂದಿದೆ. ಪ್ರತಿಯೊಂದಕ್ಕೂ ಫ್ಯಾಶನ್” ಎಂದಿದ್ದರಂತೆ. ಸರಿ, ಅದೇ ಮಳೆಗಾಲದಲ್ಲಿ ನಮ್ಮಣ್ಣ ಕಂಬಳಿಕೊಪ್ಪೆ ಹಾಕಿಕೊಂಡು ಹೈಸ್ಕೂಲಿಗೆ ಹೋದ. ಹೆ.ಮಾ.ಶ್ರೀ ಕೆ.ಶ್ರೀಪಾದಾಚಾರ್ಯರು ಕರೆದು ಕೈಕುಲುಕಿ ಮೆಚ್ಚಿನ ಮಾತನಾಡಿದರಂತೆ. ನಾವು ಯಾರೇ ಆಗಲಿ, ತೀರ್ಥಹಳ್ಳಿಗೆ ಹೋದಾಗ ಸ್ನೇಹಿತರು “ಶಿವರಾಮ ಭಟ್ಟರು ಎಲ್ಲಿದ್ದಾರೆ? ಅವರಿಗೆ ಒಮ್ಮೆ ಬರಲು ಹೇಳಿ” ಎನ್ನುತ್ತಿದ್ದರು. ನನ್ನ ಸ್ನೇಹಿತ ಶ್ರೀ ವರದಾಚಾರ್ಯರ ಹತ್ತಿರ ಸೇತುವೆ ಬಗ್ಗೆ ಕೇಳಿದಾಗ ಅವರೂ ಶಿವರಾಮಣ್ಣನ ಸೇತುವೆ ಪ್ರಕರಣ ನೆನಪಿಸಿಕೊಂಡರು – ಪ್ರಕರಣ ಮುಗಿದು ಅರವತ್ತು, ಅರವತ್ತೈದು ವರ್ಷಗಳ ನಂತರ!
ಗೋಕರ್ಣದಲ್ಲಿ ಒಮ್ಮೆ ಮಾವಿನಕಟ್ಟೆ ಬೇಣದಲ್ಲಿ ಮರದ ಕೆಳಗೆ ಬೆಂಕಿ ಹಾಕಿಕೊಂಡು ಮರದ ಮೇಲೆ ನಾಟಕದ ಕಂಪನಿಯಿಂದ ತಂದ ಗಡ್ಡ, ಮೀಸೆ ಧರಿಸಿ ಯಾವುದೋ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದರು. ರಾಮಯ್ಯ ಮಾಸ್ತರರು ಯಾವುದೇ ಸಂತರು ಬಂದರೂ ಉಪಚಾರ ಮಾಡುವವರು. ಅವರು ಆ ರಸ್ತೆಯಲ್ಲಿ ತದಡಿಗೆ ಹೋಗುತ್ತಿದ್ದರಂತೆ. “ರಾಮ, ರಾಮಯ್ಯ, ಬಾ” ಎಂದುದು ಅವರಿಗೆ ಕೇಳಿಸಿತು. ರಾಮಯ್ಯ ಮಾಸ್ತರರು ಆಶ್ಚರ್ಯಚಕಿತರಾಗಿ ಮೇಲೆ ಕುಳಿತ ಯೋಗಿಗಳಿಗೆ ತಪ್ಪಾಯಿತೆಂದು ಇಪ್ಪತ್ತೊಂದು ನಮಸ್ಕಾರ ಮಾಡಿದರು. “ಸ್ವಾಮೀ, ತಪ್ಪಾಯಿತು, ಖಾಲಿ ಕೈಯಲ್ಲಿ ಬಂದಿದ್ದೇನೆ. ಊರಿನಿಂದ ಹಣ್ಣು ತರುತ್ತೇನೆ” ಎಂದು ಅವಸರವಾಗಿ ವಾಪಸು ಗೋಕರ್ಣಕ್ಕೆ ಹೋದರು. ಇವನೂ ಸರಸರ ಕೆಳಕ್ಕಿಳಿದು ಗೋಕರ್ಣಕ್ಕೆ ಮರಳಿದ.
ಗಜಾನನ (ಗಜಣ್ಣ): ಓದುವುದರಲ್ಲಿ ನನಗಿಂತ ಹುಶಾರಿ. ಆದರೆ ಆ ಹುಶಾರಿತನ ನನಗೇ ಇರಲೆಂದು ಆ ವರ್ಷ ಎಲ್. ಎಸ್. ಕಟ್ಟಲಿಲ್ಲ. ಶ್ರೀ ಶ್ಯಾಮಭಟ್ಟರು ಬೇಸರಿದಿಂದ ಹೇಳಿದರು “ಮಹಾಬಲನಿಗಿಂತ ಹೆಚ್ಚು, ೭೮% ಮಾರ್ಕ್ಸ ತೆಗೆದುಕೊಳ್ಳುತ್ತಿದ್ದ. ರ‍್ಯಾಂಕೇ ಬರುತ್ತಿದ್ದನೋ, ಏನೋ!!” ತೀರ್ಥಹಳ್ಳಿಯಲ್ಲಿ ಗಜಾನನ ಅನಂತ ಭಟ್ಟ ಎಂಬ ಹೆಸರೇ ಇಲ್ಲ. ಇಲ್ಲಿ ಬರೇ ಗಜಾನನ ಭಟ್ಟರು ಅಥವಾ ಮನೆ ಮಟ್ಟಿಗೆ ಗಜು, ಗಜಣ್ಣ. ಮಠದ ಗುರುಗಳು ಕಾಶಿಯಾತ್ರೆಗೆ ಹೊರಟಾಗ ನಮ್ಮ ಅಪ್ಪಯ್ಯನ ಜೊತೆ ಇವನೂ ಹೊರಟ. ನಾನೇ ಹೇಳಿದ್ದುಂಟು, “ಅಣ್ಣನೇ ಇನ್ನೂ ಕಾಶಿಯಾತ್ರೆಗೆ ಹೋಗಲಿಲ್ಲ, ಇವನು ಹೋಗುತ್ತಾನೆ” ಎಂದು. ಅದಕ್ಕೆ ಹಂದೆ ಮಾವ “ಇವನಿಗೆ ಪುನಃ ಕಾಶಿಯಾತ್ರೆ ಇಲ್ಲ ಮದುವೆಯಾಗುವುದು ಕಷ್ಟ” ಎಂದ. ಕಾಶಿಗೆ ಹೋದ ಇವನು ಬರುವಾಗ ಕೆಲವು ಜಾದು ಕಲಿತುಕೊಂಡು ಬಂದ. ಇಸ್ಪೀಟಿನದು, ಬಟ್ಟೆಯದು. ನಾನು ಅವುಗಳನ್ನು ಉಪಯೋಗಿಸಿಕೊಂಡು ನಮ್ಮ ಹೈಸ್ಕೂಲ್ ಗೇದರಿಂಗ್‌ದಲ್ಲಿ ಒಂದು ಮ್ಯಾಜಿಕ್ ಶೋ ಕೊಟ್ಟೆ. ತುಂಬಾ ಚೆನ್ನಾಗಿ ಇತ್ತೆಂದು ನನ್ನ ಸ್ನೇಹಿತ ಸೋಮಯಾಜಿ, ವಿಷ್ಣು, ಹಾಮಾನಾ ಹೇಳಿದ್ದುಂಟು. ಗಜಣ್ಣ ನೇರ ಗೋಕರ್ಣಕ್ಕೆ ಹೋದ. ಬಣ್ಣ ಹಾಕುವುದನ್ನು, ಹೊಲಿಗೆಯನ್ನು ಪೂನಾಕ್ಕೆ ಹೋಗಿ ಕಲಿತುಕೊಂಡು ಬಂದ. ಕೆಲವು ದಿನ ಚೆನ್ನಾಗಿಯೇ ನಡೆಸಿದ. ದಾಸನಮಠದಲ್ಲಿ ನನಗೆ ಗೊತ್ತಿದ್ದಂತೆ ಇನ್ನೊಬ್ಬರ ಜೊತೆ ಸೀರೆಗೆ ಅಚ್ಚು ಬಣ್ಣ ಹಾಕಿರಬೇಕು. ಊರಲ್ಲಿ ಅವನಿಗೆ ಯಕ್ಷಗಾನ ವರದಾನವಾಯಿತು. ಕಲಿತ, ಕುಣಿದ, ಕುಣಿಸಿದ.
ತೀರ್ಥಹಳ್ಳಿಯ ಪಂಡಿತರು ಗೋಕರ್ಣಕ್ಕೆ ಧಾರ್ಮಿಕ ಕೆಲಸಕ್ಕೆ ಹೋದವರು ಬಿಕ್ಕ ಭಟ್ಟರ ಜೊತೆ ಯಕ್ಷಗಾನ ನೋಡಲು ಹೋದರು. ಇವನ ಕೃಷ್ಣನ ಪಾತ್ರವನ್ನು ನೋಡಿ ಮೆಚ್ಚಿ ನೋಟಿನ ಹಾರ ಹಾಕಿದರು. ತೀರ್ಥಹಳ್ಳಿಗೆ ಹೋದವರು ಮರೆಯದೇ ಮಠಕ್ಕೆ ಬಂದು ವಿಷಯ ಹೇಳಿ ಹೊಗಳಿದರು. ತಾಯಿಯವರಿಗೆ ಸಹಜವಾಗಿಯೇ ಸಂತೋಷವಾಯಿತು. ತಂದೆಯವರಿಗೆ ಸಂತೋಷವಾಯಿತು ನಿಜ, ಆದರೆ “ಸರಿ, ಇದಕ್ಕೆಲ್ಲ ಅಡ್ಡಿ ಇಲ್ಲ” ಎಂದರು, ನಾಟಕದಲ್ಲೂ ಪಾರ್ಟ್ ಮಾಡುತ್ತಿದ್ದ, ಅವನಿಗೆ ಆಗಲೇ ಹಾಡುವ ಇಚ್ಛೆ ಆದದ್ದು. ಹಾರ್ಮೋನಿಯಂ ಮಾಸ್ತರರು “ಗಜುಭಟ್ಟರೇ, ನಿಮ್ಮ ಶೃತಿ ಯಾವ ಮನೆಗೂ ಬರುವುದಿಲ್ಲ. ಬೇಡ, ದಮ್ಮಯ್ಯ” ಎಂದರೂ ಬಿಡದೇ, ‘ನಾನೇ ಹೇಳುತ್ತೇನೆ’ ಎಂದು ಹಟಹಿಡಿದ. ಈಗ ಗಜುಭಟ್ಟರಿಂದ ಗಾನ ಸರಸ್ವತಿ ದೇವಿಯನ್ನು ಗಲ್ಲಿಗೇರಿಸುವ ಕಾರ್ಯಕ್ರಮ” ಎಂದು ಹೇಳಬೇಕೇ! ಬಿಡಲಿಲ್ಲ, ಹಾಡೇಬಿಟ್ಟ. ಕೊನೆಗೆ ಇವನ ಪೌರುಷ! “ಮುಂದೆ ಕುಳಿತವರು ಏಳಲಿಲ್ಲ. ಉಳಿದವರೂ ಹೊರಗೆ ಹೋಗಲಿಲ್ಲ!” ಅವರಿಗೆ ನಾಟಕದ ಮುಂದಿನ ಭಾಗದಲ್ಲಿ ಸೀಟು ಸಿಕ್ಕದೇ ಹೋದರೆ, ಎಂಬ ಭಯ! ಯಕ್ಷಗಾನದಲ್ಲಿ ಮಾತ್ರ ಚೆನ್ನಾಗಿಯೇ ಅಭಿನಯಿಸಿದ. ಗೋಕರ್ಣಕ್ಕೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಪ್ಪ ಶಾಸ್ತ್ರಿಗಳು ಬಂದಿದ್ದರು. ರಾತ್ರಿ ‘ಕೀಚಕ ವಧೆ’ ಪ್ರಸಂಗ. ಇವನದು ವಲಲ ಭೀಮನ ಪಾತ್ರ. ಇವನ ಮಾತು, ಅಭಿನಯ ನೋಡಿ ಶಾಸ್ತ್ರಿಗಳು ‘ಆಧುನಿಕ ವಲಲ’ ಎಂದು ಹೊಗಳಿದರು. ಆದರೆ ಮೂಲೆಮನೆ ವೆಂಕಪ್ಪಡಿಗಳು ಮಾತ್ರ “ಅನ್ನದ ಚರಿಗೆ ನೆಕ್ಕಿಕಿದ (ನೆಕ್ಕಿ ಬಿಟ್ಟಿದ್ದಾನೆ)” ಎಂದು ಶೇಷಣ್ಣನ ಹತ್ತಿರ ದೂರು ಕೊಡಲು ಮರೆಯಲಿಲ್ಲ. “ಅನ್ನದ ಚರಿಗೆಯ ಭಾಗ್ಯ” ಎಂದು ಶೇಷಭಟ್ಟರು ಆಧುನಿಕ ವಲಲನಿಗೆ ಬಹುಮಾನ ಎಂದು ವೆಂಕಪ್ಪಣ್ಣನಿಂದಲೇ ಹಾರ ತರಿಸಿ ಇವರಿಗೆ ಹಾಕಿದರು!
ಆಗಸ್ಟ್ ಹದಿನೈದು
ಪ್ರಥಮ ಸ್ವಾತಂತ್ರ್ಯೋತ್ಸವ, ಪ್ರಥಮ ಪ್ರಜಾರಾಜ್ಯೋತ್ಸವ – ಎರಡೂ ನಾನು ಹೈಸ್ಕೂಲಿನಲ್ಲಿದ್ದಾಗಲೇ ಆಯಿತು. ಸ್ವಾತಂತ್ರ್ಯದ ಸವಿನೆನಪಿಗೆ ಊರಿಗೆಲ್ಲಾ ಬುಂದಿಲಾಡು ಹಂಚಿದರು. ದೇವಂಗಿ ಚಂದ್ರಶೇಖರ ಇವರಿಂದ ಸುಶ್ರಾವ್ಯ ‘ವಂದೇ ಮಾತರಂ’. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳನ್ನೆಲ್ಲಾ ಸೇರಿಸಿ ಸ್ವಾತಂತ್ರ್ಯೋತ್ಸವಕ್ಕೆ ಕಾರ್ಯಕ್ರಮ ನಿರೂಪಿಸಲು ಹೇಳಿದರು. ನಾನು ‘ಸೂತ್ರಯಜ್ಞ’ ಎಂದೆ. ಆಗ ತೀರ್ಥಹಳ್ಳಿಯ ಕಡೆಗೆ ಆ ಶಬ್ದ ಹೊಸದು. ಎಂ.ಟಿ.ವಿ, ವಿಜ್ಞಾನ ಮೇಷ್ಟ್ರು, ‘ಈಗ ಯಜ್ಞ, ಯಾಗ ಎಲ್ಲಾ ಇಲ್ಲ. ಸಮಿಧ ಎಷ್ಟು ಬೇಕು, ತುಪ್ಪ ಎಷ್ಟು ಬೇಕು!’ ಎಂದರು. ಆಗ ನನಗೆ ನಗು ಬಂತು. ನಗೆ ತಡೆದುಕೊಂಡು “ಸರ್, ಸೂತ್ರ ಯಜ್ಞ ಎಂದರೆ ಚರಕಾ ರಾಟಿ ಮೊದಲಾದವುಗಳಿಂದ ನೂಲು ತೆಗೆಯುವುದು. ಅಂದಿನ ನೂಲನ್ನು ಖಾದಿನಿಧಿಗೆ ಕೊಡುವುದು” ಎಂದೆ. ಆಗ ಹೆಡ್‌ಮಾಸ್ಟರು “ಹತ್ತಿ ತರಿಸಿಕೊಡುತ್ತೇನೆ, ರಾಟಿ, ಚರಕ ನೀವೇ ತಂದುಕೊಳ್ಳಬೇಕು” ಎಂದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಭಾಷಣ. ನಂತರ ರಾತ್ರಿ ಹನ್ನೆರಡಕ್ಕೆ ಚರ್ಚ್ ಮೈದಾನದಲ್ಲಿ ಸಹಸ್ರಾರು ಜನರಿಂದ “ಸ್ವತಂತ್ರ ಹಿಂದೂಸ್ಥಾನಕ್ಕೆ ಜಯವಾಗಲಿ” ಎಂಬ ಘೋಷ. ಮಳೆಯೋ ಮಳೆ. ಸಭಾಕಾರ್ಯಕ್ರಮವನ್ನು ರಾತ್ರಿ ಒಂದು ಗಂಟೆಗೆ ರಾಮಮಂದಿರದಲ್ಲಿ ಜರುಗಿಸಲಾಯಿತು.
೧೯೫೦ ಜನವರಿ ೨೬ – ಪ್ರಜಾರಾಜ್ಯೋತ್ಸವ. ಅಂದು ಅರ್ಚಕ ವೆಂಕಟೇಶ ಎನ್ನುವ ಸಾಹಿತಿಗಳಿಂದ ಪ್ರಜಾಪ್ರಭುತ್ವದ ಕುರಿತು ಅಮೋಘ ಭಾಷಣ. ಅದು ನಡೆದುದು ರಾಮಮಂದಿರದಲ್ಲಿ. ಮಾರನೇ ದಿನ ಅವರಿಂದಲೇ ಒಕ್ಕಲಿಗರ ಹಾಸ್ಟೆಲಿನಲ್ಲಿ, “ವಿದ್ಯಾರ್ಥಿಗಳು ರಾಜಕೀಯದಲ್ಲಿ ಎಷ್ಟರ ಮಟ್ಟಿಗೆ ಭಾಗವಹಿಸಬೇಕು?” ಎಂಬ ಕುರಿತು ಭಾಷಣ.
ನಮ್ಮ ಹೈಸ್ಕೂಲಿನಲ್ಲಿ ವಿವಿಧ ಕಾರ್ಯಕ್ರಮಗಳು, ಭಾಷಣ, ಕವನ, ಕ್ರೀಡೆ – ಎಲ್ಲವೂ ಒಂದಕ್ಕಿಂತ ಒಂದು ಭಾರೀ ಉತ್ಕೃಷ್ಟ. ನನ್ನ ಸಾಧನೆ ಎಂದರೆ ಅಡೆತಡೆ ಓಟದಲ್ಲಿ ಮೊದಲನೇ ಅಥವಾ ಎರಡನೇ ಸ್ಥಾನ ಪಡೆದದ್ದು. ವಿದ್ಯುತ್ತಿಲ್ಲದ ಆ ಕಾಲದಲ್ಲಿ ನನಗೆ ಓದಲು ಬುಡ್ಡಿ ಲ್ಯಾಂಪ್ – ಬಹುಮಾನ. ಕಾಲೇಜು ಮುಗಿಯುವವರೆಗೂ ಇದೇ ದೀಪದಲ್ಲಿ ಓದುತ್ತಿದ್ದೆ. ಆಗಲೇ ಎಲೆಕ್ಟ್ರಿಸಿಟಿ ಪರಿಚಿತವಾಗುತ್ತಿತ್ತು. ಆದರೂ ನನಗೆ ನನ್ನ ಪ್ರಜಾಪ್ರಭುತ್ವದ ಜ್ಯೋತಿ! ಒಮ್ಮೆ ನಗರದ ಉಡುಪ ಹೇಳದ್ದ “ಭಟ್ಟರೇ, ನಿಮಗೆ ಗಣಿತದಲ್ಲಿ ನೂರಕ್ಕೆ ನೂರು. ಈ ಪ್ರಜಾಜ್ಯೋತಿಯಿಂದ ಅದು!” ಎಂದಿದ್ದ. ಜ್ಯೋತಿ ಸೇ ಜ್ಯೋತಿ ಜಗಾತೇ ಚಲೋ…. ನನ್ನ ಗಣಿತದ ಪ್ರಭೆಯನ್ನು ಆಗುಂಬೆ ವಿಷ್ಣು, ನಗರದ ಉಡುಪ, ಕಾಸರವಳ್ಳಿ ಗೋವಿಂದಣ್ಣ, ಹಾಮಾನಾ ಹೇಳಿದಂತೆ ಅವರು, ಮೂಲ, ಇತ್ಯಾದಿ…ಎಲ್ಲರ ಜೊತೆ ಹಂಚಿಕೊಂಡು ಸಂತಸ ಪಟ್ಟಿದ್ದೇನೆ.
ನಾವು ಎಸ್.ಎಸ್.ಎಲ್.ಸಿ.ಗೆ ಬರುವ ಹೊತ್ತಿಗೆ ಶಿಕ್ಷಕರಲ್ಲಿ ತುಂಬಾ ಬದಲಾವಣೆ ಆಗಿತ್ತು. ಹೆಡ್‌ಮಾಸ್ಟರರು ಯೋಗಾನರಸಿಂಹನ್, ಮಹಾಮೇಧಾವಿ. ಇವರ ಮಗನೇ ಶಾರದಾ ಪ್ರಸಾದ್. ಮೂರು ದಶಕಗಳ ಕಾಲ ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವಗಾಂಧಿ ಮತ್ತಿತರರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ಗಣಿತಕ್ಕೆ ಟಿ.ಕೆ.ಎಸ್ – ಬಹುಸಿಟ್ಟಿನ ಕೋಡಿ. ಯಾರಿಗೆ ಬೇಕಾದರೂ ಸಿಕ್ಕಾಪಟ್ಟೆ ಬೈಯುತ್ತಿದ್ದರು. ಆದರೆ ಗಣಿತ ಪಾಠದಲ್ಲಿ ಮಾತ್ರ ತುಂಬ ಸಮರ್ಥರು. ಹೀಗಾಗಿಯೇ ಸ್ಟಾಫ್‌ನವರು, ನಾವು-ಎಲ್ಲಾ ಅವರ ಬೈಗಳನ್ನು ಸಹಿಸುವುದಾಗಿತ್ತು. ಒಮ್ಮೆ ನಾನು ಮಠದ ಗೇಟಿನ ಹತ್ತಿರ ನಿಂತಿದ್ದೆನಂತೆ. ಇವರನ್ನು ನೋಡಿಯೂ ನಮಸ್ಕಾರ ಹೇಳಲಿಲ್ಲ ಎಂದು ಅವರ ಆಕ್ಷೇಪ, ಬೈಗುಳ. (ನಾನು ‘ಸರ್, ನಾನು ನಿಮ್ಮನ್ನು ನೋಡಲಿಲ್ಲ’ ಎಂದರೂ ಒಪ್ಪಲಿಲ್ಲ). ಹೋಟೆಲ್ ಸುಬ್ರಾಯರ ಹತ್ತಿರವೂ ಯಾವುದೋ ವಿಷಯಕ್ಕೆ ಜಗಳ. ಎರಡು ದಿನ ಊಟ ಮಾಡಲಿಲ್ಲಂತೆ! ನಮ್ಮ ಸೋಮಯಾಜಿ, ಶ್ರೀನಿವಾಸಮೂರ್ತಿ, ರಾಘವೇಂದ್ರ ಶರ್ಮಾ ಇವರಿಗೆ ಗಣಿತದಲ್ಲಿ ಎಂಬತ್ತರಿಂದ ನೂರರವರೆಗೆ ಅಂಕ ಬಂದುದರಲ್ಲಿ ಇವರ ಪಾಠದ ಪ್ರಭಾವವೇ ಖಂಡಿತವಾಗಿ ಹೆಚ್ಚಿನದು. ನಾನು ನನ್ನ ಕೃತಜ್ಞತೆ ಅರ್ಪಿಸಲು “ಸರ್, ನನಗೆ ಗಣಿತದಲ್ಲಿ ನೂರಕ್ಕೆ ನೂರು ಬಂತು, ತಮ್ಮ ಪಾಠದ ಫಲ” ಎಂದೆಲ್ಲ ಹೇಳಲು ಹೋದರೆ “ಹೋಗಯ್ಯ, ನನಗೆ ಮೊದಲೇ ಗೊತ್ತಿತ್ತು. ಪಾಠ ಹೇಳಿದವ ನಾನು, ಮೌಲ್ಯಮಾಪನ ಅವರದೋ?” ಎಂದು ಬೈದು ಕಳಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ನನ್ನ ಸರಾಸರಿ ಅಂಕ ೭೭. ಸಮಾಜ ವಿಜ್ಞಾನದಲ್ಲಿ ನನಗೆ ಭಯವಿತ್ತು. ಆದರೆ ಆ ವಿಷಯದಲ್ಲಿಯೂ ೭೯ ಅಂಕ ಗಳಿಸಿದ್ದೆ, ಎಲ್ಲರಿಗೂ ಸಂತೋಷ. “ಆದರೆ ಭಟ್ಟರೆ, ನಮಗೆ ನೂರಕ್ಕೆ ನೂರು ಇಲ್ಲವಲ್ಲ. ಆ ಹಿರಿಮೆ ನಿಮ್ಮದೇ” ಎಂದು ಖುಷಿಪಟ್ಟರು, ಆಪ್ತ ಗೆಳೆಯ ಬಿ.ವಿ.ಸೋಮಯಾಜಿ.
ಕಂಬೈಂಡ್ ಸ್ಟಡಿ: ರಾತ್ರಿ ಎಂಟು, ಹತ್ತರವರೆಗೆ -ಒಂದು ದಿವಸ ಸೋಮಯಾಜಿ, ಉಡುಪ, ರಾಘವೇಂದ್ರ ಶರ್ಮ ಇವರ ಜೊತೆ, ಇನ್ನೊಮ್ಮೆ ಇವರ ಜೊತೆ ಶ್ರೀ ಪುರುಷೋತ್ತಮ, ಶರ್ಮ, ಶ್ರೀನಿವಾಸಮೂರ್ತಿ (ಅಪರೂಪಕ್ಕೆ). ಶ್ರೀನಿವಾಸಮೂರ್ತಿ ಹನ್ನೊಂದನೇ ರ‍್ಯಾಂಕ್ ಗಳಿಸಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಸೋಮಯಾಜಿ ಇಂಜಿನಿಯರ್ ಆಗಿ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರೊಫೆಸರ್ ಆದರು. ನಾನು ಎರಡು ಸಲ ಮುಂಬೈಗೆ ಹೋದಾಗಲೂ ನನ್ನನ್ನು ಹುಡುಕಿಕೊಂಡು ಬಂದು ಜೊತೆಗಿದ್ದು ಮುಂಬೈ ದರ್ಶನ ಮಾಡಿಸಿದರು. ಕಳೆದ ಹದಿನೈದಿಪ್ಪತ್ತು ವರ್ಷಗಳಿಂದ ಪತ್ತೆಯಿಲ್ಲ. ತನ್ನ ಲೇಡಿಯೊಂದಿಗೆ ಆಸ್ಟ್ರೇಲಿಯಾದಲ್ಲೋ, ಇನ್ನೆಲ್ಲೋ ವಾಸವಾಗಿದ್ದಾರೆ. ಸುಖವಾಗಿರಲಿ. ರಾಘವೇಂದ್ರಶರ್ಮಾ ಕೂಡ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಆಗುಂಬೆ ವಿಷ್ಣು ಜೋಗಿಕುತ್ರಕ್ಕೆ ಓದಲು ಹೋಗುವಾಗ ಸಾಥಿ. ಅವನು ಟೆಲಿಗ್ರಾಫ್ ಇಲಾಖೆ ಸೇರಿದ. ಅವನ ಮನೆತನದವರು ನಡೆಸಿಕೊಂಡು ಬಂದ ಆಗುಂಬೆ ಗೋಪಾಲಕೃಷ್ಣದೇವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆಯಲ್ಲಿ ಮೂರ್ತಿಧಾರಕ. ಯಾವುದೇ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸುವ ದಕ್ಷತೆಯುಳ್ಳವನು. ಇವನ ದೊಡ್ಡಪ್ಪ ಶ್ರೀ ಶ್ಯಾಮಭಟ್ಟರೇ ನಮಗೆ ಎಲ್.ಎಸ್.ನಲ್ಲಿ ಟ್ಯೂಶನ್ ಹೇಳೀದವರು. ಶಿವರಾಮಯ್ಯನ ಶ್ರೀಧರ ನನಗಿಂತ ಐದಾರುವರ್ಷ ಕಿರಿಯರು. ಗುಣ, ನಡತೆಯಲ್ಲಿ ಹಿರಿಯರು. ಇನ್ನು ಮೂಲನ ಒಂದು ಪ್ರಸಂಗ. ತಾನು ಕೂರುವ ಡೆಸ್ಕಿನ ಮೇಲೆ ಮೂಲ ಎಂದು ಬ್ಲೇಡಿನಲ್ಲಿ ಕೊರೆದಿದ್ದ. ನಾಲ್ಕೈದು ದಿನಗಳ ನಂತರ ಇದರ ಮುಂದೆ ಯಾರೋ ಒಬ್ಬರು ವ್ಯಾಧಿ ಎಂದು ಅಷ್ಟೇ ದೊಡ್ಡ ಅಕ್ಷರದಲ್ಲಿ ಕೆತ್ತಿದ್ದರು! ಆ ಹುಡುಗ ಯಾರು ಎಂಬುದೂ ಮುಂದೆ ಪತ್ತೆಯಾಯಿತು.
ಸೋಮಯಾಜಿ ಒಮ್ಮೆ ನಮ್ಮ ಮನೆಗೆ ಬಂದಿದ್ದ (ತೀರ್ಥಹಳ್ಳಿಯಲ್ಲಿ). ಹಪ್ಪಳ ಮಾಡುತ್ತಿದ್ದರು. ನಮ್ಮಮ್ಮ ಎರಡು, ಮೂರು ಹಪ್ಪಳ ಸುಟ್ಟು, ಕಾಯಿಸುಳಿ ಹಾಕಿ ಕೊಟ್ಟರು. ಸಂಕೋಚದ ಸೋಮಯಾಜಿ ತಿಂದ. ನಂತರ ನನ್ನ ಹತ್ತಿರ ‘ನಿಮ್ಮ ಮನೆಯಲ್ಲಿ ಮೊಗೆಕಾಯಿ ಹಪ್ಪಳ ಮಾಡುವುದಿಲ್ಲವೇ’ ಎಂದ. ಬಾಳೆಕಾಯಿ, ಹಲಸು, ಗೆಣಸು ಇವುಗಳ ಹಪ್ಪಳ ಮಾಡುವುದು ಗೊತ್ತು. ಮೊಗೆಕಾಯಿ ಹಪ್ಪಳ! ಆಶ್ಚರ್ಯಚಕಿತರಾದೆವು. ಮಾರನೇ ದಿನ ಅವನದೇ ಒಂದು ತಮಾಷೆ. ದುಂಡಗಿರುವ ಮೊಗೆಕಾಯಿಯನ್ನು ತೆಗೆದುಕೊಂಡು ಕೋಳಪಾಟು, ಗುಣಿ ಬದಲು ಎಣ್ಣೆಸವರಿದ ಮೊಗೆಕಾಯಿ ಉರುಳಿಸಬೇಕಂತೆ! ನನ್ನನ್ನು ತಮ್ಮ ಮನೆ ಹಿತ್ತಲಿಗೆ ಕರೆದುಕೊಂಡು ಹೋಗಿ ಸವತೆ ಚಪ್ಪರ ತೋರಿಸಿ “ಭಟ್ಟರೆ, ಬಳ್ಳಿಯಲ್ಲಿರುವ ಮಿಡಿಸವತೆಯನ್ನು ಬಾಯಲ್ಲಿ ಕಚ್ಚಿ, ಅಗಿದು ತಿನ್ನಬೇಕು. ಬಹಳ ರುಚಿ. ನೀವೂ ತಿನ್ನಿ” ಅಂದ. ನನಗೆ ಭಯ – ಎಂಜಲಾಗುವುದಲ್ಲ! ನನ್ನ ಸಂಶಯ ನಿವಾರಣೆಗೆ ಅವನ ಬಳಿ ಉತ್ತರ ಸಿದ್ಧವಾಗಿತ್ತು. “ಭಟ್ಟರೆ, ಶಬರಿ ಎಂಜಲು ಎಂಜಲಲ್ಲ. ಗಿಳಿ, ಕಾಗೆ ಇವೆಲ್ಲ ಬಳ್ಳಿಯಲ್ಲಿರುವ ಕಾಯಿಯನ್ನೇ ತಾನೆ ಕಚ್ಚುವುದು?” ನಾನು “ಸರಿ, ನಾನು ಗಿಳಿಯಲ್ಲ, ಕಾಗೆ ಹೌದೋ, ಅಲ್ಲವೋ!” ಎನ್ನುತ್ತಾ ಅವನು ಹೇಳಿದಂತೆ ಕಚ್ಚಿ ತಿಂದೆ. ಎರಡು, ಮೂರು, ನಾಲ್ಕು! ‘ಭಟ್ರೇ, ಸಾಕು’ ಎಂದ. “ಏಕೆ?” ಎಂದೆ. “ರುಚಿ ಹೌದು. ಆದರೆ ಹೊಟ್ಟೆ ಕಡಿತ ಶುರುವಾದೀತು” ಎಂದ. ನನಗೆ ಡಿವಿಜಿಯವರ “ಮಿಡಿ ಚೇಪೆ ಕಾಯಿಗಳ ತಡಬಡದೆ ನುಂಗುವುದು,ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು,….. ಪೊಡವಿಯೊಳು ಭೋಗವಿಧಿ” ನೆನಪಾಯಿತು, ಹೇಳಿದೆ. ಅಷ್ಟರಲ್ಲಿ ಸೋಮಯಾಜಿ ಅಪ್ಪ ಪದ್ಮನಾಭ ಸೋಮಯಾಜಿಗಳು ಬಂದರು. ‘ನಾನು ದಕ್ಷಿಣವಾದರೆ ಅನಂತ ಭಟ್ಟರು ಉತ್ತರ” ಎಂದರು. ಬರುವಾಗ ಎರಡು ಬಾಟ್ಲಿ ಜೇನುತುಪ್ಪ ಕೊಟ್ಟರು. ತಂದೆಯವರಿಗೆ ‘ನಾನು ಕೊಟ್ಟೆ ಎಂದು ಹೇಳು’ ಎಂದರು. ಹೀಗೆ ಸೋಮಯಾಜಿಗಳೊಡನೆ ಮಧುರ ಬಾಂಧವ್ಯ. ಮುಂದೆ ಶಿವಮೊಗ್ಗಾದಲ್ಲಿ ಜೂನಿಯರ್, ಸೀನಿಯರ್, ಇಂಟರ್‌ಮೀಡಿಯೇಟ್‌ನಲ್ಲಿ ನಾವಿಬರೂ ಬ್ರಾಹ್ಮಣರ ಹಾಸ್ಟೆಲ್‌ನಲ್ಲಿ ರೂಂಮೇಟ್ಸ್ ಆಗಿದ್ದೆವು. ಯಾವತ್ತೂ ಅವನು ನನಗಿಂತ ಬುದ್ಧಿವಂತ – ವ್ಯವಹಾರದಲ್ಲೂ, ಓದುವುದರಲ್ಲೂ. ಒಮ್ಮೆ ನನಗೆ ಹೇಳಿದ. “ಭಟ್ಟರೆ, ಈಗ ನೀವು ಎಸ್.ಎಸ್.ಎಲ್.ಸಿ.ಯಲ್ಲಿ ಓದುವಂತೆ ಓದುತ್ತಿಲ್ಲ. ಬರೇ ಮಾತು. ಓದಿ ಬೇಜಾರಾದಾಗ ಬೇರೆ ಮಕ್ಕಳು ನಿಮ್ಮ ಹತ್ತಿರ ಬರುತ್ತಾರೆ. ನಿಮ್ಮ ತಮಾಷೆ ಅವರನ್ನು ಎಚ್ಚರಿಸುತ್ತದೆ. ಚೆನ್ನಾಗಿ ಓದಿ” ಎಂದು ಎಚ್ಚರದ ಮಾತು ಹೇಳಿದ್ದ. ನನಗೆ ಆ ವರ್ಷಗಳಲ್ಲಿ ಸೆಕೆಂಡ್ ಕ್ಲಾಸ್. ಅಂತೂ ಇಬ್ಬರೂ ಬೆಂಗಳೂರಿಗೆ ಹೋದೆವು. ಅವನ ಮೆರಿಟ್ ಮೇಲೆ ಅವನಿಗೆ ಬಿ.ಇ.ಗೆ ಸೀಟು ಸಿಕ್ಕಿತು. ನನಗೆ ಬಿ.ಎಸ್.ಸಿ.ಯಲ್ಲಿ ಪಿ.ಸಿ.ಎಂ. ಇಷ್ಟು ಹೊತ್ತಿಗೆ ಅವನ ಅಣ್ಣ ರಾಮಕೃಷ್ಣ ಸೋಮಯಾಜಿಗೆ ಬೆಂಗಳೂರಿಗೆ ವರ್ಗವಾಯಿತು. ಅವನು ಹಾಸ್ಟೆಲ್ ಬಿಟ್ಟು ಅಣ್ಣನ ಜೊತೆ ರೂಮಿನಲ್ಲಿ ಉಳಿದ. ಆದರೂ ಮಧುರ ಬಾಂಧವ್ಯ ದೂರವಾಗಲಿಲ್ಲ. ಬಬ್ಬೂರಕಮ್ಮೆ ಹಾಸ್ಟೆಲ್‌ಗೆ ಬಂದು ಆ ಮಾತು, ಈ ಮಾತು ಆಡುತ್ತ ಕಾಫಿ ಕುಡಿದು ಅವನು ರೂಮಿಗೆ ಹೋಗುತ್ತಿದ್ದ.
ಚಿತ್ರಗಿ ಕುಮಟಾಕ್ಕೆ ಹೊಂದಿರುವ ಒಂದು ಹಳ್ಳಿ. ಕುಮಟಾಕ್ಕೆ ಕೇವಲ ಎರಡು ಮೈಲಿ ದೂರ. ಪಟ್ಟಣದ ಎಲ್ಲಾ ತುಟಾಗ್ರತೆ, ಹಳ್ಳಿಯ ಸಮಸ್ಯೆಗಳಿಂದ ಕೂಡಿದ ಚಿತ್ರ.ಶಿವರಾಮಣ್ಣನಿಗೆ ಚಿತ್ರಗಿಗೆ ವರ್ಗವಾಗಿತ್ತು. ಅವನು ಆಗಲೇ ಶಿಕ್ಷಕನಾಗಿ ಮೂರು-ನಾಲ್ಕು ವರ್ಷಗಳಾಗಿದ್ದವು. ನಮ್ಮ ತಂದೆಯವರ ಯೋಚನೆ ಮಹಾಬಲನನ್ನು (ಅಂದರೆ ನನ್ನನ್ನು) ಕೆನರಾ ಕಾಲೇಜಿಗೆ ಸೇರಿಸಿದರೆ, ಭವಿಷ್ಯದ ದೃಷ್ಟಿಯಿಂದ ಹಾಗು ಆರ್ಥಿಕವಾಗಿ ಸಾರ್ಥಕವಾಗುತ್ತದೆ, ಎಂದು. ನನಗೆ ಇಷ್ಟವಿಲ್ಲ. ಆದರೂ ಹೊರಟೆ. ಅಣ್ಣನ ಬಿಡಾರದಿಂದ ಕಾಲೇಜು ಕೇವಲ ಎರಡು ಮೈಲು. ನಾನು ಮಠದಿಂದ ತಂದ ಕಣ್ಣಿಗೆ ಅಣ್ಣನ ಬಿಡಾರ ತೀರ ಚಿಕ್ಕದು. ಅದೇನು ವಿಚಿತ್ರವೋ! “ಮಹಾಬಲನನ್ನು ತೀರ್ಥಹಳ್ಳಿಗೆ ಕಳಿಸು. ಅಲ್ಲೇ ಕಾಲೇಜಿಗೆ ಕಳೀಸುತ್ತೇವೆ” ಎಂಬ ಸಂದೇಶ. ಅಂದೇ ಸಂಜೆ ಹೊರಟೆ. ಸಿರ್ಸಿಯಲ್ಲಿ ನಂದಿನಿ ಹೊಟೆಲ್, ರಾಮರಾಯರ ಹೊಟೆಲ್‌ನಲ್ಲಿ ರಾತ್ರಿ. ಮಧ್ಯಾಹ್ನ ಹನ್ನೆರಡು ಘಂಟೆಗೆ ಊಟದ ಹೊತ್ತಿಗೆ ಮಠ. ಮಾರನೇ ದಿನವೇ ಶಿವಮೊಗ್ಗಾಕ್ಕೆ ಪ್ರಯಾಣ. ಜೊತೆಯಲ್ಲಿ ಮೂಲ. ಮಧ್ಯಾಹ್ನದ ಊಟ ಅವನ ಖಾನಾವಳಿಯಲ್ಲಿ (ಕುಪ್ಪಯ್ಯನ ಖಾನಾವಳಿ). ಬ್ರಾಹ್ಮಣರಿಗೆ ಮಾತ್ರ. ಒಂದು ಕಂಡೀಶನ್: ಊಟಕ್ಕೆ ಕೂರುವಾಗ ಅಂಗಿ, ಬನಿಯನ್ ತೆಗೆಯಬೇಕು. ನನಗೆ ಇದು ಹೊಸದಲ್ಲ. ಮಠದಲ್ಲಿ ನಿತ್ಯದ ಪಾಠ, ಹೊಟೆಲ್‌ನಲ್ಲಿ ದುಡ್ಡು ಕೊಟ್ಟು ಊಟ ಮಾಡುವವರಿಗೆ ಈ ಕಂಡೀಶನ್ ವಿಚಿತ್ರ. ಮೂ.ಲ.ನಿಗೂ ಈ ಶಿಕ್ಷೆ ಇತ್ತು. ಆದರೆ ಅವನು ಸಂಬಂಧಿಕನಾದುದರಿಂದ ಊಟದಲ್ಲಿ ನಾಲ್ಕಾಣೆ ರಿಯಾಯಿತಿ. ಆದರೂ ಈ ವ್ಯವಹಾರದಲ್ಲಿ ನಾನೊಂದು ಸಮಾಧಾನ ಕಂಡುಕೊಂಡೆ. ಚಿತ್ರಗಿಯಿಂದ ಬಂದವನು ಜೋಗಾಕ್ಕೆ ಹೋಗಿದ್ದೆ. ಮಧ್ಯಾಹ್ನದ ಊಟ ಕರಿತಿಪ್ಪಯ್ಯನಲ್ಲಿ. ಆ ಕಡೆ ಈ ಕಡೆ ಪೇಟ, ಕೋಟು, ಟೋಪಿ ಧರಿಸಿದವರು. ಅನ್ನ ಬಡಿಸುವಾಗ ಟೋಪಿಯವನ ಬಾಳೆಯ ಅನ್ನ ನನ್ನ ಬಾಳೆಗೆ. ಅಯ್ಯೋ-ಗೋಕರ್ಣದ, ತೀರ್ಥಹಳ್ಳಿ ಶ್ರೀ ಮಠದ ವಾಸಿಗೆ ಈ ಶಿಕ್ಷೆಯೇ? ದೇವರೇ, ಇದೇನಿದು – ಏಂದುಕೊಂಡಿದ್ದೆ. ನನ್ನ ಮೊರೆ ಶ್ರೀ ದೇವರಿಗೆ ಕೇಳಿಸಿರಬೇಕು. ಇದಾದ ಮೂರು ದಿನಗಳಲ್ಲಿ ನಾನು ಶುದ್ಧ ಬ್ರಾಹ್ಮಣ್ಯವನ್ನು ಸ್ವೀಕರಿಸಿದೆ – ಶ್ರೀ ಕುಪ್ಪಯ್ಯನ ಹೊಟೆಲಿನಲ್ಲಿ!
ಮುಂದಿನದು ಶಿವಮೊಗ್ಗಾದಲ್ಲಿ ವಾಸ, ಗ್ರಾಸ. ಅಲ್ಲಿ ಸೋಮಯ್ಯನ ಹೊಟೆಲ್‌ನಲ್ಲಿದ್ದೆ. ಬ್ರಾಹ್ಮಣರ ಹಾಸ್ಟೆಲ್ ಉಂಟು ಎಂದರು, ಸರಿ, ಸೇರಿದೆ. ನಮ್ಮ ಸೋಮಯಾಜಿಯೂ ಅಲ್ಲೇ ಬಂದ. ಕಾಲೇಜಿಗೆ ಸಮೀಪವಲ್ಲದಿದ್ದರೂ ದೂರವಲ್ಲ. ದಿನಾ ಹತ್ತಕ್ಕೆ ಊಟ, ಹತ್ತೂ ನಲವತ್ತೈದಕ್ಕೆ ಕಾಲೇಜು ಪ್ರಾರಂಭ. ಐದೂ ಮೂವತ್ತಕ್ಕೆ ಬಿಡುಗಡೆ. ಕೃಷ್ಣ ಕೆಫೆಯಲ್ಲಿ ತಿಂಡಿ ಮತ್ತು ಒನ್-ಬೈ-ಟೂ ಕಾಫಿ. ನಂತರ ಏನಾದರೂ ಪುಸ್ತಕ ಖರೀದಿ ಇದ್ದರೆ ದೊಡ್ಡಪೇಟೆ. ಇಲ್ಲ, ಹೊಳೆ ಕಡೆ ವಾಕಿಂಗ್. ಸಂಜೆ ಎಂಟಕ್ಕೆ ಭಜನೆ, ಊಟ. ಪ್ರತಿಯೊಬ್ಬರೂ ಸಂಧ್ಯಾವಂದನೆ ಮಾಡಲೇಬೇಕು. ನಮ್ಮ ಹಾಸ್ಟೆಲ್‌ನಲ್ಲಿ ಶ್ರೀ ಹೊಳಲ್ಕೆರೆ ರಾಮಕೃಷ್ಣ ಅಯ್ಯಂಗಾರ್ ಮತ್ತು ಪ್ರಿನ್ಸಿಪಾಲ್ ರಾಮನಾಥ್ ಇದ್ದರು. ಇವರಿಗೆಲ್ಲ ನಮ್ಮ ಜೊತೆ ಊಟ. ಹೊಳಲ್ಕೆರೆ ಸರ್‌ಗೇ ಸಂಧ್ಯಾವಂದನೆಯಿಂದ ವಿನಾಯಿತಿ ಇತ್ತು. ಏಕೆಂದರೆ ಅವರಿಗೆ ಉಪನಯನ ಆಗಿರಲಿಲ್ಲ! ಒಮ್ಮೆ ನಾವು ಇಪ್ಪತ್ತೈದು, ಮೂವತ್ತು ಜನ ಊಟಕ್ಕೆ ಕುಳಿತಿದ್ದೇವೆ. ಒಂದು ದನ ಒಳಕ್ಕೆ ನುಗ್ಗಿ ಬಾಳೆಗೆ ಮುಖ ಒಡ್ಡುತ್ತಿತ್ತು. ನಾವು ಯಾರೂ ಏಳುವ ಹಾಗಿಲ್ಲ. ಶ್ರೀ ಹೊಳಲ್ಕೆರೆಯವರು ಬಡಿಸುವ ಅಡಿಗೆ ಭಟ್ಟನ ತಡೆದು, ಕೈಯಲ್ಲಿರುವ ಸಟ್ಟುಗವ ಕಸಿದು ದನವನ್ನು ಓಡಿಸಿದರು. “ಜೈ ಹೊಳಲ್ಕೆರೆ”, “ಹೊಳಲ್ಕೆರೆ ಜಿಂದಾಬಾದ್”. ಈ ಸತ್ಕಾರ್ಯಕ್ಕಾಗಿ ಅವರಿಗೆ ೫೧-೫೨ರಲ್ಲಿ ಉಪನಯನ. ಮಾರನೇ ದಿನವೇ ಮದುವೆ! ಇದು ಹೊನ್ನಳ್ಳಿಯ ಹೊಳ್ಳರು ಹೇಳಿದ ಮಾತು. ನಾನು ಸರ್‌ಗೆ ಹೇಳಿದಾಗ “ಭಟ್ಟ, ನಿನ್ನ ತಮಾಷೆ ಬಿಡಲಿಲ್ಲ, ಎಂದು ಬಿಡುವೆ?” ಎಂದಾಗ “ಮದುವೆ ಆಗಬೇಕಲ್ಲ” ಎಂದೆ.
ಸೀನಿಯರ್ ಇಂಟರ್‌ಮೀಡಿಯೇಟ್‌ನಲ್ಲಿದ್ದಾಗ ನಮ್ಮ ಹಾಸ್ಟೆಲ್ಲಿನ ನೂತನ ಕಟ್ಟಡದ ಉದ್ಘಾಟನೆ. ಹೊಸೋಡಿ ರಾಮಾ ಶಾಸ್ತ್ರಿಗಳು, ವೆಂಕಟರಮಣ ಶಾಸ್ತ್ರಿಗಳು, ಕೊಡ್ಲಿ ಅವಧಾನಿಗಳು – ಇವರೆಲ್ಲಾ ದಾನಿಗಳು, ಮಹಾದಾನಿಗಳು…. ಆ ವರ್ಷ ಕಾಲೇಜು ಯೂನಿಯನ್‌ಗೆ ಅಂದಿನ ಯುವಕರಲ್ಲೆಲ್ಲಾ ಪ್ರಾಯ, ಅಭಿಪ್ರಾಯ ಇರುವ ಒಬ್ಬನೇ ಯುವಕ (ನನ್ನ ಮಟ್ಟಿಗೆ) ಉಮೇದುವಾರಿಕೆಗೆ ನಿಂತಿದ್ದರು. ಇವರು ಆರಿಸಿ ಬಂದರು. ಮುಂದಿನ ಎಲ್ಲಾ ಕಾರ್ಯಕ್ರಮ ಉತ್ತಮವಾಗಿ ನಡೆಸಿಕೊಟ್ಟರು.
ಒಂದು ತಮಾಷೆ. ಕಾಲೇಜ್ ಗೇದರಿಂಗ್‌ಗೆ ನನ್ನಲ್ಲಿರುವ ಜೋಡೆಳೆವಸ್ತ್ರ ಬಿಚ್ಚಿ ಕಚ್ಚೆಪಂಚೆ ಮಾಡಿ ಉಟ್ಟುಕೊಂಡೆ. ಕಾಲೇಜಿನಲ್ಲಿ ಕೆಲವು ಹುಡುಗರು ತಮಾಷೆ ಮಾಡಿದರು: ‘ಏ ಶಾಸ್ತ್ರಿ,ನಾಳೆ ಅಪ್ಪನ ತಿಥಿಗೆ ವೈದಿಕರು ಸಿಗಲಿಲ್ಲ ಎನ್ನುತ್ತಿದ್ದೆಯಲ್ಲ, ಈ ಭಟ್ಟರಿಗೆ ಹೇಳು’! ಕೇಳಿದ್ದೇ ತಡ, ಸೀದಾ ಹಿಂದೆ ಓಡಿದೆ. ಒಂದು ಮರದ ಕೆಳಗೆ ನಿಂತು ವಸ್ತ್ರ ಜೋಡೆಳೆ ಮಾಡಿ ಮುಂಡಾಗಿ ಪರಿವರ್ತಿಸಿ ಉಟ್ಟು ತಿರುಗಿ ಬಂದೆ. ಆ ಹುಡುಗರು ಮತ್ತೆ ಸಿಗಲಿಲ್ಲ. Thank God.
ನಮ್ಮ ಹೈಸ್ಕೂಲ್ ಗ್ಯಾದರಿಂಗ್‌ನಲ್ಲಿ ನನ್ನದು ‘ರಾಘಣ್ಣನ ರಥ’ದಲ್ಲಿ ಅದೇ ರಾಘಣ್ಣ. ಕೈಯೆಣ್ಣೆ ಗುಡ್ಡೇಕೊಪ್ಪದ ಶಂಕರರಾವ್. ಹಾಸ್ಟೆಲ್‌ನಲ್ಲಿ ನನ್ನ ನಡತೆಯನ್ನು ನೋಡಿ ಮೆಚ್ಚಿದ ಪ್ರಿ. ರಾಮನಾಥ ನನಗೆ ಫೀಯಲ್ಲಿ ಅರ್ಧ ಮಾಫಿ ಮಾಡಿದರು. ಪರೀಕ್ಷೆಗೆ ಮುಖ್ಯವಾಗಿ ಓದಬೇಕಾದ ಪಾಠಗಳು ಪ್ರಶ್ನೆಗಳು ಯಾವುವು ಎಂದೂ ವಿಶೇಷ ಮಾರ್ಗದರ್ಶನ ಮಾಡಿದರು. ಅದರಿಂದ ಸೀನಿಯರ್ ಇಂಟರ್ಮೀಡಿಯೇಟ್ ನಲ್ಲಿ ಚೆನ್ನಾಗಿ ಪಾಸಾದೆ. ಹಂದೆ ಶ್ಯಾನುಭೋಗರಿಗೆ ಆಕಾಶಕ್ಕೆ ಎರಡೇ ಗೇಣು. ಸೀನಿಯರ್ ಇಂಟರ್ ಫಿಲ್ಟರ್ ಇದ್ದ ಹಾಗೆ.
ಬೆಂಗಳೂರು ಎಂದ ಕೂಡಲೆ ಶ್ರೀ ಎಸ್.ವಿ.ತಿಮ್ಮಪ್ಪಯ್ಯ ನೆನಪಿಗೆ ಬರುತ್ತಾರೆ. ಆಶ್ರಯದಾತ, ಮಾರ್ಗದರ್ಶಕ. ವಿಷಯ ತಿಳಿದ ಕೂಡಲೇ “ಮಹಾಬಲನನ್ನು ಕಳಿಸಿ, ಹಾಸ್ಟೆಲ್ ನಲ್ಲಿ ವ್ಯವಸ್ಥೆ ಮಾಡುವಾ” ಎಂದರು. ಜೂನ್ ಕೊನೆಗೆ ಟ್ರಂಕ್, ಕೊಡೆ, ಹಾಸಿಗೆ ಸಮೇತ ಮಲೆನಾಡಿನವನೆಂಬ ಟ್ರೇಡ್‌ಮಾರ್ಕಿನೊಂದಿಗೆ ಬೆಂಗಳೂರಿಗೆ ಬಂದು ಇಳಿದೆನು. ಶ್ರೀ ತಿಮ್ಮಪ್ಪಯ್ಯ ನನ್ನನ್ನು ನರಸಿಂಹರಾಜಾ ಕಾಲೋನಿಯಲ್ಲಿ ಮನೆಗೆ ಕರೆದೊಯ್ದರು. ಸ್ವಲ್ಪ ದಿನಗಳಲ್ಲೇ ಬಬ್ಬೂರುಕಮ್ಮೆ ಹಾಸ್ಟೆಲಿನಲ್ಲಿ ಸೀಟು ಸಿಕ್ಕಿತು. ಸರಿ, ಆಗ ಬೆಂಗಳೂರಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕೆಲವೇ ವಿದ್ಯಾರ್ಥಿನಿಲಯಗಳಿದ್ದವು. ಎರಡು ಊಟ, ಒಂದು ಕಾಫಿ- ಚಾರ್ಜು ಕೇವಲ ಹದಿನೆಂಟು ರೂ. (ತಿಂಗಳಿಗೆ). ರೇಸ್ ಕೋರ್ಸ್ ರೋಡಿನಲ್ಲಿ ಆಚೆ ವೈಶ್ಯ ಹಾಸ್ಟೆಲ್ ಈಚೆ ನಮ್ಮ ಹಾಸ್ಟೆಲ್. ಕಾಲೇಜಿಗೆ ಮುಕ್ಕಾಲರಿಂದ ಒಂದು ಮೈಲಿ ದೂರ.ನಮ್ಮ ಅದೃಷ್ಟ. ನನ್ನ ರೂಂಮೇಟ್ ಹೊಸಬಾಳೆ ಶ್ರೀನಿವಾಸರಾವ್. ಒಮ್ಮೆ ಶ್ರೀನಿವಾಸನಿಗೆ ಟೈಫೈಡ್ ಆಯಿತು. ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಿ ಅವನ ತಂದೆಗೆ ಟೆಲಿಗ್ರಾಂ ಕೊಟ್ಟೆ. ಮಾರನೆ ದಿನ ಬೆಳಿಗ್ಗೆ ಹೊಸಬಾಳೆ ಸುಬ್ರಾಯರು ಹಾಜರ್. ಅವರನ್ನು ಹಾಸ್ಟೆಲ್‌ಗೆ ಕರೆದುಕೊಂಡು ಹೋದೆ. ಆಮೇಲೆ ಆಸ್ಪತ್ರೆಗೆ ಹೋದೆವು. ಶ್ರೀನಿವಾಸ ಮಲಗಿದ್ದ. ‘ಏನೋ ಹುಡುಗ’ ಎಂದರು ತಂದೆ. ಅದಕ್ಕೆ ಶ್ರೀನಿವಾಸ “ಅಪ್ಪ, ಹಾಸ್ಟೆಲ್‌ನಲ್ಲಿ ಕಾಟ್ ಇಲ್ಲ. ಹಾಗಾಗಿ ಹಾಸ್ಪಿಟಲ್‌ಗೆ ಬಂದೆ” ಎನ್ನಬೇಕೆ? ನಕ್ಕರು. ಅಂದೇ ಸಾಗರ, ಸೊರಬಕ್ಕೆ ಮಗನೊಂದಿಗೆ ಹೊರಟರು. ಹದಿನೈದು ದಿನಗಳ ಬಳಿಕ ಶ್ರೀನಿವಾಸ ಹಾಜರ್ ಆದ. ನನಗೂ ತುಂಬ ಬೇಸರ ಬಂದಿತ್ತು.
ಇದಕ್ಕೂ ಮೊದಲು.ನನಗಿನ್ನೂ ಹಾಸ್ಟೆಲ್ಲಿನಲ್ಲಿ ಸೀಟು ಸಿಕ್ಕಿರಲಿಲ್ಲ. ಹೆಬ್ಬಾರ ಶ್ರೀ ವೈಷ್ಣವ ಸಭಾದಲ್ಲಿ ಪ್ರತಿಯೊಬ್ಬರಿಗೆ ಹತ್ತು ರೂ. ಬಾಡಿಗೆ. ಒಂದು ರೂಮಿನಲ್ಲಿ ಮೂರುಜನರಿದ್ದರೆ ಮೂವತ್ತು ರೂ., ನಾಲ್ಕು ಜನರಿದ್ದರೆ ನಲವತ್ತು ರೂ. ಹೀಗೆ. ಇದರ ವ್ಯವಸ್ಠಾಪಕರು ಶ್ರೀ ರಾಮಕೃಷ್ಣ ಅಯ್ಯಂಗಾರ್. ಮಿತ ಭಾಷಿ. ಜವಾನನು ಸರ್ ಮಿರ್ಜಾ ಇಸ್ಮಾಯಿಲ್‌ರ ಕಾಲದಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದವ. ರಿಟೈರ್ ಆದ ಮೇಲೆ ಹೆಬ್ಬಾರ ಶ್ರೀ ವೈಷ್ಣವ ಸಭಾದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ದಿನವೂ ಬೆಳಿಗ್ಗೆ ಹಾಸಿಗೆ ಲೆಕ್ಕ ಮಾಡುತ್ತಿದ್ದ. ಒಮ್ಮೆ ಮಾತ್ರ ಲೆಕ್ಕ ವ್ಯತ್ಯಾಸ ಬಂತು. ಛಲಪತಿರಾಜ ಪ್ರಾಕ್ಟಿಕಲ್ಸ್‌ಗೆ ಹೋಗುವವ. ಹಾಸಿಗೆ ಮಡಿಸದೇ ಬಿಟ್ಟಿದ್ದ!
ಶ್ರೀ ರಾಮಕೃಷ್ಣ ಅಯ್ಯಂಗಾರರು ಜೂನ್, ಜುಲೈ ತಿಂಗಳಲ್ಲಿ ಇಪ್ಪತ್ತು ರೂಪಾಯಿ, ಆಗಸ್ಟನಲ್ಲಿ ಐವತ್ತು ರೂಪಾಯಿ ಸೂಟ್ ಬಿಟ್ಟರು. ಶ್ರೀ ಪ್ರಹ್ಲಾದಾಚಾರ್ಯ, ಶ್ರೀ ಚಕ್ರಪಾಣಿ ಆಚಾರ್ಯರು ಒಂದೇ ರೂಮಿನಲ್ಲಿದ್ದರು. ಅಂಥಿಂಥ ಮಡಿಯಲ್ಲ ಅವರದು. ನಾನು ಏನೇ ಕೊಟ್ಟರೂ ಅದಕ್ಕೆ ನೀರು ಹಾಕಿ ಕೊಡಬೇಕು. ಒಮ್ಮೆ ಅವರ ಅನ್ನದ ಒಲೆಗೆ ಇದ್ದಿಲು ಬೇಕಾಯಿತು. ನಾನು ಕೊಟ್ಟೆ. ಮತ್ತೆ ಕೇಳಿದೆ ” ನೀರು ಹಾಕಿ ಕೊಡಬೇಕೇ”?. ದಿನವೂ ಅವರ ಜೊತೆ ಚಾಮರಾಜಪೇಟೆ ಗುರುಮಠಕ್ಕೆ ಹೋಗುತ್ತಿದ್ದೆ. “ರಾಘವೇಂದ್ರ,ರಾಘವೇಂದ್ರ,ರಾಘವೇಂದ್ರ ಯೋ ವದೇತ್| ತಸ್ಯ ನಿಸ್ವರತೇ ವಾಣಿ ಜಹ್ನು ಕನ್ಯಾ ಪ್ರವಾಹವತ್” ಎಂದು ಗೋಡೆಯ ಮೇಲೆ ಒಳಗಡೆ ಬರೆದಿದ್ದಾರೆ. “ಧನ್ಯೋಸ್ಮಿ” ಎನ್ನಿಸಿತು. ಪ್ರತಿ ಗುರುವಾರವೂ ಹೋಗುತ್ತಿರಲಿಲ್ಲ. ಆದರೆ ಹೋದ ಪ್ರತಿ ಗುರುವಾರವೂ ಧನ್ಯೋಸ್ಮಿ ಭಾವ ಕ್ಷಣಿಕವಾಗಿಯಾದರೂ ಅನ್ನಿಸುತ್ತಿತ್ತು. ಪ್ರಹ್ಲಾದಾಚಾರ್ಯರ ಜಹ್ನು ಕನ್ಯಾ ಪ್ರವಾಹ ಮಳೆಗಾಲದ ಅಬ್ಬರದ್ದಲ್ಲ, ಚಳಿಗಾಲದ ನಿನಾದ. ಸಹಜ ವಾಣಿಯೇ ಮನಸ್ಸಿನ ಭಾವನೆಯನ್ನು ವ್ಯಕ್ತ ಪಡಿಸುತ್ತಿತ್ತು. ಭೀಮಸೇನಾಚಾರ್ಯರು ಶಿವಮೊಗ್ಗದವರು, ನನ್ನ ರೂಂಮೇಟ್, ಉತ್ತಮ ಸ್ನೇಹಿತ. ಪೆನ್ಸಿಲ್ ಸ್ಕೆಚ್ ಬಿಡಿಸುತ್ತಿದ್ದರು. ನನಗೆ ಪಾರ್ವತಿ ಪರಮೇಶ್ವರರನ್ನು ಬಿಡಿಸಿ ಕೊಟ್ಟಿದ್ದರು. ಆರು ದಶಕಗಳ ನಂತರವೂ ಮಾಸದೇ, ಮಾಸದ ಲೆಕ್ಕ ತನಗಿಲ್ಲ ಎನ್ನುತ್ತಿದೆ. ಇವರೆಲ್ಲಾ ನನ್ನ ಬಿ.ಎಸ್‌ಸಿ ಪ್ರಥಮ ಕೊನೇ ವರ್ಷದ ಸ್ನೇಹಿತರು.
ಇನ್ನು ಇಂಟರ‍್ಮೀಡಿಯೇಟ್‌ನಿಂದ ಬಿ.ಎಸ್‌ಸಿ.ವರಗೆ ಮಕಾರತ್ರಯರು-ಎಂ.ರಾಮಾಜೋಯಿಸ್, ಎಮ್.ವಿ.ಸೂರ್ಯನಾರಾಯಣ, ಎಮ್.ಮಂಜುನಾಥ (ಎಸ್.ಎಸ್.ಎಲ್.ಸಿ.ಯಲ್ಲಿ ೮ನೇ ರ‍್ಯಾಂP). ಇವರಲ್ಲದೆ ಭಾಗವತ ನಾಗಭೂಷಣ. ಇವರಲ್ಲಿ ಸೂರ್ಯನಾರಾಯಣ ಊರಿಗೆ ಹೋದಾಗ ಮೂರು-ನಾಲ್ಕು ಬಾಸ್ಕೆಟ್ ತಿಂಡಿ ತರುತ್ತಿದ್ದ – ನಮ್ಮನ್ನೆಲ್ಲಾ ಲೆಕ್ಕ ಇಟ್ಟುಕೊಂಡು. ಒಮ್ಮೆ ರಾಮಾಜೋಯಿಸರು ಶಿವಮೊಗ್ಗಕ್ಕೆ ಹೋಗಿ ಬಂದ ಸಂದರ್ಭ. ಮಧ್ಯಾಹ್ನ ಹನ್ನೆರಡಕ್ಕೆ ಅವರ ರೂಮಿಗೆ ಹೋದೆ. “ಇದೇನು ಮಹಾಬಲ ಭಟ್ಟರು, ಈಗ ಅಪವೇಳೆಯಲ್ಲಿ” ಅಂದರು. “ಇರುವೆಗೇನು ಅಪವೇಳೆ? ಇರುವೆಗಳ ಸಾಲು ನಿಮ್ಮ ರೂಮಿನ ಕಡೆ ಹೊರಟಿತ್ತು. ನೀವು ಊರಿಂದ ಬಂದಿದ್ದೀರಿ. ವೇಳೆ ಅಪವೇಳೆ ಎನ್ನುತ್ತಿದ್ದರೆ ಪುಣ್ಯಕಾಲ ಕಳೆದೇ ಹೋದೀತು ಎಂದು ಧಾವಿಸಿದೆ” ಭಾರಿ ನಗೆಯೊಂದಿಗೆ ಬಾಸ್ಕೆಟ್ ಕಡೆ ಹೋದರು. “ಆರಿರಿಸಿಹರು ತಿಂದ ತಿಂಡಿಯಾ ಲೆಕ್ಕ?”
ಬಬ್ಬೂರಕಮ್ಮೆ ಹಾಸ್ಟೆಲ್‌ನ ವಾರ್ಡನ್ ಹೆಸರು ಜವರಾಯಪ್ಪ. ಕೋರ್ಟಿನಲ್ಲಿ ಟೈಪಿಸ್ಟ್ ಆಗಿ ರಿಟೈರ್ ಆದವರು. ನನ್ನ ಹತ್ತಿರ “ಭಟ್ಟರೇ, ಜಜ್ಜರು ನಾನು ಟೈಪ್ ಮಾಡಿದ್ದನ್ನೇ ಓದಿ ಹೇಳುತ್ತಿದ್ದರು. ಜಜ್‌ರ ಜಜ್‌ಮೆಂಟ್ ಬೇರೆ ಅಲ್ಲ. ನನ್ನದು ಬೇರೆ ಅಲ್ಲ” ಎಂದು ಎನ್ನುತ್ತಿದ್ದರು. “ಸರಿ, ನಿಮಗೆ ಯಾರು ಬರೆದುಕೊಟ್ಟದ್ದು” ಅಂದರೆ “ಅದೇ,ಜಜ್‌ರು ಬರೆದದ್ದು. ಏನು ದಡ್ಡ ಪ್ರಶ್ನೆ?” ಎನ್ನುತ್ತಿದ್ದರು. ಒಂದು ಸಲ ಕಳ್ಳ ಬಂದು ನಮ್ಮ ಹಾಸ್ಟೆಲ್‌ನ ನೀರಿನ ಟ್ಯಾಪ್,ಪಕ್ಕದ ಜಯದೇವ ಹಾಸ್ಟೆಲ್‌ನಿಂದ ಮೂರು ನಾಲ್ಕು ಟ್ಯಾಪ್ ಕದ್ದು ಓಡುವುದರಲ್ಲಿದ್ದ. ಅಷ್ಟು ಹೊತ್ತಿಗೆ ಪಕ್ಕದ ಹಾಸ್ಟೆಲ್‌ನಿಂದ ಕೂಗು: ಕಳ್ಳ, ಕಳ್ಳ. ನಮ್ಮ ಶ್ರೀನಿವಾಸ ಮೂತ್ರ ಶಂಕೆಗೆ ಎದ್ದವ ಕೇಳಿದ, ಕಳ್ಳನನ್ನು ತಬ್ಬಿಬಿಟ್ಟ. ಅಷ್ಟು ಹೊತ್ತಿಗೆ ಐದಾರು ಜನ ಒಟ್ಟಾದರು. ನಮ್ಮ ಹಾಸ್ಟೆಲ್‌ನ ನಾರಾಯಣ ಮೂರ್ತಿ ಇನ್ನೊಬ್ಬನನ್ನು ಕಳ್ಳ ಎಂದು ತಿಳಿದು ಹಿಡಿದು ಬಾರಿಸಿದ. ಆತ ’ನಾನು ಮಲ್ಲೇಶಿ, ಅದಕ್ಕೇ ಬಂದೇನ್ರಿ’ ಎಂದ. ’ಅದಕ್ಕೇ’ ಎಂದರೆ ’ಕಳ್ಳನನ್ನು ಹಿಡಿಯುವುದಕ್ಕೆ’. “ಆಹಾ ಅದಕ್ಕೇ ಬಂದದ್ದಾ, ತಗೋ ಇನ್ನೊಂದು” ಎಂದು ನಾರಾಯಣ ಮೂರ್ತಿ ಮತ್ತೆ ಗುದ್ದಿದ. ಆಗ ಲಿಂಗೇಶಪ್ಪ “ಏ, ಅವ ಹಾಸ್ಟೆಲ್‌ನವ” ಎಂದ. “ಮೊದಲೇ ಹೇಳಿದ್ದರೆ ಹೊಡೀತಿರಲಿಲ್ಲ” ಎಂದು ಮೂರ್ತಿ,”ಹೊಡಿತೀರಿ ಎಂದು ಗೊತ್ತಿದ್ದರೆ ಮೊದಲೇ ಹೇಳ್ತಿದ್ದೆ” ಎಂದು ಮಲ್ಲೇಶಿ. ಅಂತೂ ಆ ಗದ್ದಲ ಮುಗಿಯಿತು. ಪಕ್ಕದ ಹಾಸ್ಟೆಲ್‌ನ ಮ್ಯಾನೇಜರು, ನಮ್ಮ ಹಾಸ್ಟೆಲ್‌ನ ಜವರಾಯಪ್ಪ “ಯಾರೂ ದೂರು ಕೊಡುವುದು ಬೇಡ” ಎಂದರು. ಅವರು ಕೋರ್ಟಿನಲ್ಲಿದ್ದವರಲ್ಲವೇ! ಕಳ್ಳನನ್ನು ಕಂಬಕ್ಕೆ ಕಟ್ಟಿ ಎಚ್ಚರದಲ್ಲಿರುವ ವಿದ್ಯಾರ್ಥಿಗಳು ಕ್ಯೂ ನಿಂತು ಬಾರಿಸಿದರು. ‘ಈ ಶಿಕ್ಷೆಯೇ ಸಾಕು’ ಎಂದು ಜವರಾಯಪ್ಪ ಠರಾಯಿಸಿದ್ದು ಸರ್ವಾನುಮತ ಪಡೆಯಿತು.
ಹಾಸ್ಟೆಲ್‌ನ ಗ್ಯಾದರಿಂಗ್‌ನಲ್ಲಿ ಒಂದು ನಾಟಕ. ನನ್ನದು ಪುರೋಹಿತರ ಪಾತ್ರ. ಮದುವೆ ಮನೆ. ಎಷ್ಟು ಹುಡುಕಿದರೂ ಪುರೋಹಿತರಿಲ್ಲ. ಗೌಜು. ಪುರೋಹಿತರೆಲ್ಲಿ, ಪುರೋಹಿತರೆಲ್ಲಿ? ನಾನೇ ಪುರೋಹಿತ, ಅಲ್ಲೇ ಇದ್ದೇನೆ, ಅಡಿಗೆ ಮನೆಯಲ್ಲಿ. ನನ್ನ ಹೇಳಿಕೆ: “ಮದುವೆ ಮುಗಿದು ನೆಂಟರ ಊಟ ಮುಗಿಯುವವರೆಗೂ ನಮ್ಮ ಕಾರ್ಯ ಮುಗಿಯುವುದಿಲ್ಲ. ಕಡೆಗೆ ನಮಗೆ ಊಟ ತಣಿದಿರುತ್ತದೆ. ಬಿಸಿ ಬಿಸಿ ಹೋಳಿಗೆ ಮದುವೆ ಗುರಿ. ಆ ರಾತ್ರೆ ಊಟ ಯಾರಿಗೆ ಬೇಕು? ಪುರೋಹಿತರಿಗೆ ಲಗ್ನದ ಮುಹೂರ್ತಕ್ಕೂ ಸ್ವಲ್ಪ ಮೊದಲು ಊಟ ಹಾಕಬೇಕು. ಇಲ್ಲವಾದರೆ ನಿಮ್ಮ ದಕ್ಷಿಣೆಯೂ ಬೇಡ. ಆಗಲೇ ಅಡ್ವಾನ್ಸ್ ನೂರು ರೂ.ತೆಗೆದುಕೊಂಡಾಗಿದೆ.” ಈ ಪಾತ್ರವನ್ನು ಮನೋಜ್ಞವಾಗಿ ಸಾಗಿಸಿದ ನನಗೆ ಒಂದು ಬಹುಮಾನ. ಗೆಳೆಯ ಸೋಮಯಾಜಿಗೆ ತುಂಬಾ ಖುಷಿ. ಆದರೆ ತನ್ನನ್ನು ಬಿಟ್ಟು ಊಟ ಮುಗಿಸಿದಿರಲ್ಲಾ ಎಂಬ ಆಕ್ಷೇಪ! :ಅದು ಬರೇ ನಟನೆ” ಎಂದಾಗ ಸೋಮಯಾಜಿ “ಭಟ್ಟರೇ, ನಿಮ್ಮಂಥ ಪುರೋಹಿತರು ನನಗೆ ಬೇಡ” ಎಂದ.”ನೀನು ಬಿ.ಇ. ಆಗಿ ಫಾರಿನ್‌ಗೆ ಹೋಗಿ ಲೇಡಿ ರಿಜಿಸ್ಟರ್ ಮಾಡಿಕೋ. ನೀನು ಕರೆದರೂ ನಾನು ಬರಲಾರೆ. ಇಂಡಿಯಾದಲ್ಲೇ ಆದರೆ ಅಕ್ಷತೆ ನಿನ್ನ ಹೆಂಡತಿ ತಲೆಗೆ, ಮಂತ್ರಾಕ್ಷತೆ ನಿನ್ನ ತಲೆಗೆ ಹಾಕಿ ಊಟ ಮುಗಿಸಿ ಬರುವೆ” ಎಂದೆ.
ಅಘನಾಶಿನಿಯ ವಿಷ್ಣು ಸಭಾಹಿತರು ನಮ್ಮ ಕುಟುಂಬಕ್ಕೆ ಸಮೀಪದ ಸಂಬಂಧ. ತೀರ್ಥಹಳ್ಳಿಗೆ ಅಲ್ಲಿಂದ ಪತ್ರ ಬಂತು. ಚಿ. ವಿಷ್ಣುವಿಗೆ ಮದ್ಗುಣಿ ಹೆಣ್ಣು. ಮದುವೆ ಚಿತ್ರ ಶುದ್ಧ ಪಂಚಮಿಗೆ.ಬರಲೇ ಬೇಕು. ಸರಿ,ಹೊರಟರು. ಒಬ್ಬರೇ ಅಲ್ಲ. ವೇ.ನಾಗಾವಧಾನಿಗಳ ಜೊತೆ ಎರಡು ದಿನ ಪ್ರಯಾಣ. ಗೋಕರ್ಣ ತಲುಪಿದರು. ಹೆಂಡತಿಯನ್ನು ಕರೆದುಕೊಂಡು ಸ್ನೇಹಿತ ಅವಧಾನಿಗಳೊಂದಿಗೆ ಅಘನಾಶಿನಿಗೆ (ಅಂದರೆ ತದಡಿ ತೀರದವರೆಗೆ) ಕಾಲು ನಡಿಗೆ. ಮುಂದೆ ಅಘನಾಶಿನಿಗೆ ಹೋಗಲು ದೋಣಿ ಹತ್ತಲು ಅವಧಾನಿಗಳಿಗೆ ಭಯ ಇಲ್ಲವಂತೆ. ತುಂಗಾನದಿಯಲ್ಲಿ ದೋಣಿ ದಾಟಿದವರು. ಆದರೆ ಅಲ್ಲಿ ದೈತ್ಯಾಕಾರದ ಸಮುದ್ರದ ತೆರೆಗಳಿಲ್ಲ. ಆದರೂ ಆಚೆ ಪಕ್ಕಕ್ಕೆ ಹೋಗಿ ತಲುಪಿದರು.”ಅನಂತ ಭಾವ ಬಂಜ, ಸುಬ್ಬಕ್ಕ ಬಂಜು”ಹರ್ಷೋದ್ಗಾರ. ಅಂದೇ ರಾತ್ರೆ ಮದುವೆ. ಇಲ್ಲಿ ಸಂಜೆ ಊಟ ಮಾಡಿ ಒಂಭತ್ತು ಗಂಟೆಗೆ ಹಡಗಿನಲ್ಲಿ ಹಳಕಾರಿಗೆ ಪ್ರಯಾಣ. ಹತ್ತರ ಸುಮಾರಿಗೆ ಹಳಕಾರು ತಲುಪಿದರು. ನಾಗವಧಾನಿಗಳಿಗೆ ನಿದ್ದೆ ಜೊಂಪು. ಆಗ ನಾಗಪ್ಪಣ್ಣ ದೊಡ್ಡಬಾಯಿ ಮಾಡಿದ: “ಹೋಯ್, ತೀರ್ಥಹಳ್ಳಿಯವರು ಏಳಿ, ಹಳಕಾರು ಬಂತು.” ಎದುರುಗಡೆ ಸಾಲಿನಲ್ಲಿ ಸೂಡಿ ಬೆಳಕು ಹಿಡಿದು ನಿಂತಿದ್ದಾರೆ. ನಾಗಾವಧಾನಿಗಳು ಕೂಡಲೇ ರಾಮ ರಾಮ ಎಂದು ಕಣ್ಣು ಮುಚ್ಚಿದರು. ಆಗ ಸಮೀಪದಲ್ಲಿರುವ ಅನಂತ ಭಟ್ಟರು ’ಏನು,ಏನು’ ಎಂದರು. ನಾಗಾವಧಾನಿಗಳು “ಎದುರುಗಡೆ ನೋಡಿ, ಸೂಡಿ ಭೂತಗಳು! ಇದೇನು ಮದುವೆ ದಿಬ್ಬಣವೋ, ಭೂತಗಳ ಮೆರವಣಿಗೆಯೋ” ಎಂದರು. ಆಗ ಅನಂತ ಭಟ್ಟರು ಹೇಳಿದರು: “ಗ್ಯಾಸ್ ಲೈಟ್ ಇಲ್ಲಿಯ ಗಾಳಿಗೆ ನಿಲ್ಲುವುದಿಲ್ಲ.ತೆಂಗಿನ ಗರಿಯಿಂದ ಸೂಡಿ ತಯಾರಿಸಿ ಹೀಗೆ ಬೆಳಕು ತೋರುತ್ತಾರೆ”. ಆಕಡೆ,ಈ ಕಡೆ ರಭಸದಿಂದ ಸೂಡಿ ಬೀಸುತ್ತಾ ಅವರು ಮುಂದೆ, ಮೆರವಣಿಗೆಯೂ ಮುಂದುವರಿಯಿತು. ನಾಗಾವಧಾನಿಗಳಿಗೆ ಇನ್ನೂ ಸಂಶಯ! “ಇನ್ನೂ ಎಷ್ಟು ದೂರ ಮನುಷ್ಯರ ವಾಸಸ್ಠಳಕ್ಕೆ?” ಎಂದರು. ಅಷ್ಟರಲ್ಲಿ ಮದ್ಗುಣಿ ಬಂತು. ಕಾಲು ತೊಳೆಯಲು ದೊಡ್ಡ ಮಡಿಕೆಗಳಲ್ಲಿ ಶುದ್ಧ ನೀರು ಸಿದ್ಧವಾಗಿತ್ತು. ನೀರನ್ನು ಮಡಿಕೆಯಿಂದ ಎತ್ತಿಕೊಳ್ಳಲು ಚೊಂಬು ಬಿಂದಿಗೆ ಇಲ್ಲ. ದೊಡ್ಡ ಕರಟಗಳನ್ನಿರಿಸಲಾಗಿತ್ತು. “ಅನಂತ ಭಟ್ಟರೇ, ನೀವು ನಾವು ಬಂದು ಕೆಟ್ಟೆವು. ಮಂಗಲದ ಮನೆಯಲ್ಲಿ ಕರಟ, ಕರಟದ ಚಿಪ್ಪು. ಸಾಲದ್ದಕ್ಕೆ ಅನ್ನ ಬಡಿಸಲು ಅಡಿಕೆಯ ಹಾಳೆ” ಎಂದೆಲ್ಲಾ ಮರುಗುತ್ತಾ ರಾತ್ರಿ ಎಲ್ಲೋ ಮಲಗಿದರು. ಬೆಳಿಗ್ಗೆ ಎದ್ದು ಎಲ್ಲಾ ಗದ್ದೆ ಕಡೆ, ಹೊಳೆ ಕಡೆ. ಸಮಸ್ಯೆ ಊಹಿಸಿದ್ದ ಸುಬ್ಬಾಭಟ್ಟರು ಮೊದಲೇ ಎರಡು ಮಡಲು ಗರಿಗಳ ಪಾಯಿಖಾನೆ ಮಾಡಿಸಿದ್ದರಂತೆ. ಸರಿ, ಮದುವೆ ಮುಗಿಯಿತು. ಊಟಕ್ಕೆ ಮನೋಹರ. ಮಂಗಲ ಕಾರ್ಯಕ್ಕೆ ಮನೋಹರವೇ! ಮತ್ತೆ ನಾಗಾವಧಾನಿಗಳ ಆಶ್ಚರ್ಯಭರಿತ ಉದ್ಗಾರ. ಆವತ್ತೇ ರಾತ್ರಿ ಅಲ್ಲಿಂದ ಹೊರಟು ಬೆಳಿಗ್ಗೆ ಅಘನಾಶಿನಿ ದಡಕ್ಕೆ ಬಂದರು. ಅಲ್ಲಿ ಗೃಹಪ್ರವೇಶ, ಊಟ, ಮಂತ್ರಾಕ್ಷತೆ. ಸಂಜೆ ಆರಕ್ಕೆ ಅನಂತ ಭಟ್ಟರು, ಸುಬ್ಬಕ್ಕ, ನಾಗಾವಧಾನಿಗಳು ಗೋಕರ್ಣಕ್ಕೆ ಬಂದರು. ಅವಧಾನಿಗಳು ಕೋಟಿ ತೀರ್ಥ ಸ್ನಾನ, ಸಮುದ್ರ ಸ್ನಾನ ಮಾಡಿ ಮಹಾಬಲೇಶ್ವರನ ಪೂಜೆ ಮಾಡಿ ಮರುದಿನ ತೀರ್ಥಹಳ್ಳಿಗೆ ಪ್ರಯಾಣ ಬೆಳೆಸಿದರು. ಇದು ನನ್ನ ತಂದೆಯವರು (ಅನಂತಭಟ್ಟರು) ಹೇಳಿದ ವಿಷ್ಣು ಮಾವನ ಮದುವೆ ಕಥೆ. ಇದನ್ನು ರಸಪೂರ್ಣವಾಗಿ ವಿವರಿಸಿದ್ದು ನನ್ನ ಮದುವೆಯ ಮಾರನೇದಿನ. ಅಘನಾಶಿನಿಯಲ್ಲಿ ಇಪ್ಪತ್ತು ವರ್ಷಗಳ ನಂತರ!
ಇಷ್ಟರೊಳಗೆ ಅಘನಾಶಿನಿಯ ಮಂಕಾಳತ್ತೆ ಮದುವೆ. ಅವಳನ್ನು ಹೊಲನಗದ್ದೆಯ ಕಾಸೆ ಗ.ಪ.ಹೆಗಡೆಯವರಿಗೆ ಕೊಟ್ಟು ಮದುವೆ. ಗ.ಪ.ಹೆಗಡೆ ಹಳಿಯಾಳದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರು. ತುಂಬಾ ಶಿಸ್ತಿನವರು. ಪ್ರತಿಯೊಂದೂ ಅಚ್ಚುಕಟ್ಟಾಗಿರಬೇಕು. ಅಗಸೆ ಮದುವೆ ಮುಗಿಸಿ ಅಂದೇ ರಾತ್ರಿ ಹೊಲನಗದ್ದೆಗೆ ಬೋಟಿಯಲ್ಲಿ ಪ್ರಯಾಣ. ಸುಮ್ಮನೆ ಹೊತ್ತು ಕಳೆಯುವುದೇ? ಶ್ರೀ ಗ.ಪ.ಹೆಗಡೆಯವರೇ ಸ್ವರಚಿತ ಪದ್ಯ ಹಾಡಿದರು. ’ ಇಂದು ಬರುವರು, ಕಾಳೆ ಸಾಬರು, ನಮ್ಮ ಶಾಲೆಗೆ ಬರುವರು, ಬಿಳಿಯ ಪೈಝಣ, ಬಿಳಿಯ ಟೋಪಿ, ಖಾಕಿ ಚಡ್ಡಿ ತೊಟ್ಟು ರಂಗ ಬಂದನು ಶ್ಯಾಮ ಬಂದನು, ರಾಮ ಬಂದನು ಶಾಲೆಗೆ, ಕಾಳೆ ಸಾಬರು ಬಂದೇ ಬಂದರು, ಹುಡುಗರೆಲ್ಲ ಏಕ ಸಾಥ್ ನಮಸ್ತೇ ಕೂಗಿದರು”.
ಸೀನಿಯರ್ ಬಿ.ಎಸ್.ಸಿ (ಫೈನಲ್): ೧೯೫೨,೫೩,೫೪. ಬಿ.ಎಸ್.ಸಿ ಜೂನಿಯರ್ ಬಿ.ಎಸ್.ಸಿ ಸೀನಿಯರ್ ಕನ್ನಡ ವಿಧ್ಯಾರ್ಥಿಗಳ ಭಾಗ್ಯ. ಕನ್ನಡದ ಎರಡು ರತ್ನಗಳು, ಶ್ರೀ ವಿ.ಸೀ ಯವರು ಮತ್ತು ಶ್ರೀ ಜಿ.ಪಿ. ರಾಜರತ್ನಂ ಅವರು ನಮ್ಮ ತರಗತಿಗಳಿಗೆ ಪಾಠ ಹೇಳಿದರು. ಸೆಂಟ್ರಲ್ ಕಾಲೇಜಿನ ದೊಡ್ಡ ಹಾಲ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು! ಅವರು ಬರೇ ಕನ್ನಡ ವಿದ್ಯಾರ್ಥಿಗಳಲ್ಲ. ಪಿ.ಸಿ.ಎಮ್. ಸಿ.ಬಿ.ಝಡ್ ವಿದ್ಯಾರ್ಥಿಗಳೂ ಬಿಡುವಿನ ಸಮಯ ಹೊಂದಿಸಿಕೊಂಡು, ಕೆಲವೊಮ್ಮೆ ತಮ್ಮ ತರಗತಿಗಳಿಗೆ ಹಾಜರಾಗದೆ ಕನ್ನಡ ತರಗತಿಗಳಲ್ಲಿ ಪ್ರತ್ಯಕ್ಷ! ನಮ್ಮ ಮನೆಯಲ್ಲಿ (ಅದು ನಮ್ಮ ತರಗತಿ) ಮನೆಯ ಮಕ್ಕಳೇ ಅನಾಥರು! ಒಮ್ಮೆ ವಿ.ಸೀ.ಅವರು ‘ಆಗ್ರಹ’ ನಾಟಕ ಪಾಠ ಮಾಡುತ್ತಿದ್ದರು. ನಾನು ಧೈರ್ಯ ಮಾಡಿ ಎದ್ದು ನಿಂತೆ. “ಏನು ನಿಮ್ಮ ಹೆಸರು? ಎಂದರು. ಹೇಳಿದೆ. “ಆಗ್ರಹ ಎಂದರೆ ಒತ್ತಾಯ ಎಂಬ ಅರ್ಥವಲ್ಲವೇ? ಇಲ್ಲಿ ಸಿಟ್ಟು ಎಂಬ ಅರ್ಥದಲ್ಲಿ ಬಳಸಿದ್ದಾರಲ್ಲ” ಎಂದೆ. “ನೀವು ಉತ್ತರ ಕನ್ನಡದವರೋ?” ಎಂದರು ವಿ.ಸೀ.. ಹೌದು ಎಂದೆ. ವಿ.ಸೀ.ಯವರು ತಾಳ್ಮೆಯಿಂದ ಉತ್ತರಿಸಿದರು: “ಆಗ್ರಹ ಎಂದರೆ ಕೋಪ ಎಂದೇ ಅರ್ಥ. ನಿಮ್ಮಲ್ಲಿಯೂ ವಾಸ್ತವಿಕವಾಗಿ ಅದೇ ಅರ್ಥದಲ್ಲಿ ಬಳಕೆಯಲ್ಲಿದೆ. ‘ ಬಡಿಸಿದ್ದು ಸಾಕು ಆಗ್ರಹ ಮಾಡಬೇಡಿ’ ಎಂದಾಗ ಮತ್ತೆ ಬಡಿಸುವುದು ಬೇಡ ಎಂದುದಕ್ಕೆ ಸಿಟ್ಟು ಮಾಡಿಕೊಳ್ಳಬೇಡಿ ಎಂದೇ ಅರ್ಥ”. ನಾನು ಸಂತೋಷದ ನಗುವಿನಿಂದ ಕುಳಿತುಕೊಂಡೆ. ನನ್ನಲ್ಲಿರುವ ಅಜ್ಞಾನ ಕಳೆಯಿತು. “ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ| ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ” ವಿ.ಸೀ.ಅಂದದ್ದೇ ಅವರ “ಅಭೀ:” ಜ್ಞಾಪಕಕ್ಕೆ ಬರುತ್ತದೆ. ಅವರ ನಯ ನಾಜೂಕು ನೆನಪಿಗೆ ಬರುತ್ತದೆ. ಅದು ಅವರ ಇಡೀ ವ್ಯಕ್ತಿತ್ವವನ್ನು ಸಮಗ್ರವಾಗಿ ಬೆಳಗುತ್ತಿದ್ದ ನಾಜೂಕು. “ಹೂ ಕೀಳುವುದು’ ಎಂಬುದು ಸಾಮಾನ್ಯ ಪ್ರಯೋಗ. ವಿ.ಸೀ.ಯವರ ಮೃದು ಮನಸ್ಸು ಆ ಪದ ಕೇಳಿದರೆ ನೋಯುತ್ತಿತ್ತು. “ಹೂವು ಆಯುವುದು” ಎಂಬುದು ಹಿತಕರವಾದ ಪ್ರಯೋಗ. “ಅಶ್ವತ್ಥಾಮನ್”- “ಶ್ರೀ”ಯವರ ನಾಟಕವನ್ನು ನಮಗೆ ಪಾಠ ಹೇಳಿದವರು ವಿ.ಸೀ. ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ಅಲ್ಲಿಯ ದೃಶ್ಯಾನುಭವ ಮಾಡಿಸಿದರು, ಮೂಡಿಸಿದರು. ನನ್ನೀ ವಯಸ್ಸಿನಲ್ಲೂ ಅಶ್ವತ್ಥಾಮನ್ ನಾಟಕದ ಸಾಲುಗಳು ನನಗೆ ಕಂಠಸ್ಥವಾಗಿವೆ. ನನ್ನ ಮಕ್ಕಳಿಗೆ ಆ ನಾಟಕ ಓದಿ ಹೇಳಿದ್ದೇನೆ.
ಜಿ.ಪಿ.ರಾಜರತ್ನಂ ಅವರು ನಮಗೆ ‘ರೂಪದರ್ಶಿ’ ಕಾದಂಬರಿ ಹೇಳುತ್ತಿದ್ದರು. “ಅಥೆನ್ಸ್ ನಗರ ದೇವಾಲಯಗಳ ಬೀಡು. ಕೋಟ್ಯಾಂತರ ರೂಪಾಯಿ ದೇವಾಲಯಗಳನ್ನು ನಿರ್ಮಿಸಲು ಸಾರ್ಥಕಗೊಳಿಸಿದ್ದರು.” ಎಂಬರ್ಥದ ವಾಕ್ಯ ಆ ಕಾದಂಬರಿಯಲ್ಲಿದೆ, ನೆನಪಿನಿಂದ ಹೇಳುತ್ತಿದ್ದೇನೆ. ಇಲ್ಲಿ ರಾಜರತ್ನಂ ಅವರು ‘ಸಾರ್ಥಕಗೊಳಿಸಿದ್ದರು’ ಎಂಬ ಪದ ಪ್ರಯೋಗದತ್ತ ನಮ್ಮ ಗಮನ ಸೆಳೆಯುತ್ತಿದ್ದರು. ಬೇರೇ ಯಾರೇ ಬರೆದರೂ ‘ಖರ್ಚು ಮಾಡುತ್ತಿದ್ದರು’ ಎಂದು ಬರೆಯುತ್ತಿದ್ದರೇನೋ. ಆದರೆ ಕಾದಂಬರಿಕಾರರ ಶಬ್ದಗಳ ಬಳಕೆಯಲ್ಲಿರುವ ವ್ಯತ್ಯಾಸ, ಔಚಿತ್ಯ ಗಮನಿಸಿ. ವನಿತೆ, ಭಾಮಿನಿ, ಕಾಂತೆ ಎಲ್ಲವೂ ಒಂದೇ, ಆದರೆ ಪ್ರತಿ ಪದವೂ ಬೇರೆಯೂ ಹೌದು.
ಆ ವರ್ಷ ಬಿ.ಎಸ್.ಸಿ.ಯಲ್ಲಿ ನನ್ನದು ಫೈನಲ್ ಇಯರ್ ಪಾಸಾಗಲಿಲ್ಲ. ಸೋದೆ ಮಠದ ಪುರುಷೋತ್ತಮನವರದು ಮತ್ತು ವರದಾಚಾರ್ಯರದೂ ಅದೇ ಬಾಳು,ಗೋಳು. ಮೂವರೂ ಬೆಂಗಳೂರಿಗೆ ಹೋದೆವು. ಯಾವ ಮಾರ್ಗದಲ್ಲಿ ಹೋದರೂ ‘ಕೇಶವಂ ಪ್ರತಿ ಗಚ್ಛತಿ’. ನಾನು, ಪುರುಷೋತ್ತಮ ಶೇಷಾದ್ರಿಪುರದಲ್ಲಿ ಒಂದು ರೂಮಿನಲ್ಲಿ ಉಳಿದೆವು. ವರದಾಚಾರ್ಯರು ಅವರ ತಂದೆಯ ಪರಿಚಯಸ್ಥರ ಮನೆಯಲ್ಲಿ ಉಳಿದರು. ಪ್ರಯತ್ನ ಸಾಗಿತು. ಎಲ್ಲರೂ ಪಾಸಾದೆವು. ಶ್ರಮ ಪಟ್ಟರೆ ಯಾವುದು ಅಸಾಧ್ಯ? ಮುಂದೆ ನಾವು ಶಿಕ್ಷಕರಾದ ಮೇಲೂ ಅನೇಕ ಸಲ ಭೇಟಿಯಾಗಿದ್ದೇವೆ. ತಮ್ಮನ ಮನೆ (ಜಯರಾಮನದು)ಜೋಗದಲ್ಲಿ, ಮೌಲ್ಯಮಾಪನಕ್ಕೆ ಬಂದಾಗ ಬೆಂಗಳೂರಿನಲ್ಲಿ… . ನಾನು ಶ್ರೀ ತಿಮ್ಮಪ್ಪಯ್ಯನವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಆದುದರಿಂದ ವರದಾಚಾರ್ಯರದು ಒಂದು ತಮಾಷೆ. “ಭಟ್ಟರೆ ನಿಮಗೆ ಮುಂದಿನ ವರ್ಷ ಮೌಲ್ಯಮಾಪನಕ್ಕೆ ಬರೋದಿಲ್ಲ” “ಯಾಕೆ ಮಾರಾಯರೆ, ನಾನು ಡಿ.ಸಿ.ಆಗಬಹುದು ಅಂದುಕೊಂಡಿದ್ದೇನೆ.” “ನೋಡಿ, ನಿನ್ನೆ ಎನ್.ಆರ್,ಕಾಲೋನಿಯಿಂದ ಒಬ್ಬರು ಹಿರಿಯರು ಬಂದು ಇಂಥವರಿಗೆ ಮುಂದಿನ ವರ್ಷ ಮೌಲ್ಯಮಾಪನಕ್ಕೆ ಕರೆಯಬೇಡಿ ಎಂದು ಹೇಳಿ ಹೋಗಿದ್ದಾರೆ. ನಿಮ್ಮ ಹೆಸರು ಬರೆದುಕೊಟ್ಟು ಹೋದ ಹಾಗಿತ್ತು. ಪುಕ್ಕಟೆ ಊಟ, ಆಸರಿ ಕೊಟ್ಟು ಸಾಕಾಗಿ ಹೋಯ್ತು ಅಂದ ಹಾಗಿತ್ತು. ಅದಕ್ಕೆ ಸುಂದ್ರಾಮಯ್ಯನವರೂ “ಆಯ್ತು ರೆಕಮೆಂಡ್ ಮಾಡ್ತೇನೆ ಎಂದರು” ಎಂಬ ಬಾಲಂಗೋಚಿ ಬೇರೆ. ಎಲ್ಲರೂ ಜೋರಾಗಿ ನಕ್ಕೆವು. ಹಾಗೆಂತ ವರದಾಚಾರ್ಯರು ನಮ್ಮ ಗುರುತ್ವವನ್ನು ಪಡೆದವರು. ಶಿಷ್ಯರು ಗುರುವಿನಂತೆಯೇ ಅನ್ನುತ್ತಿದ್ದರು! ಒಂದೇ ಗರಿಯ ತೀರ್ಥಹಳ್ಳಿಯ ಕಾಜಾಣ ಪಕ್ಷಿಗಳು, ಎಲ್ಲರೂ ಜಾಣರೇ!
ಮೊದಲನೇ ಬೋಗಿ ಮೂರನೆ ಬೋಗಿಯಂತೆ! III part ನವರು ಎರಡನೇ ಬೋಗಿ ಲ್ಯಾಂಗ್ವೇಜಂತೆ. ಪುರುಷೋತ್ತಮ ಹೇಳಿದ್ದು:ಅಂಕಾನಾಂ ವಾಮತೋ ಗತಿ: ಅಂಕೆಗಳನ್ನು ತಿರುಗಿಸಿ ಓದಬೇಕಂತೆ. I, II, III ಬದಲಿಗೆ III, II, I. ಸಂಖ್ಯಾ ಶಾಸ್ತ್ರ. ಸಂಜೀವರಾಯರಿಗೆ ಇದನ್ನು ಶ್ರೀನಿವಾಸಾಚಾರ್ಯ ವಸ್ತರೆ ಹೇಳಿದ್ದರಂತೆ. ಪುರುಷೋತ್ತಮ ಕೇಳಿಸಿಕೊಂಡಿದ್ದನ್ನು ನನಗೆ ಹೇಳಿದ್ದನಂತೆ. ಆದರೆ ಗ್ರಹಚಾರ. ನಾನು ಮರೆಯಬೇಕೇ? ಪುರುಷೋತ್ತಮ ನಾನು ಸೇರಿ ಅವನ ಮನೆ ರೂಮಿನಲ್ಲಿ ಕಂಬೈಂಡ್ ಸ್ಟಡೀಸ್. ನಮ್ಮಮ್ಮ ಮಾಡಿದ ಚೂಡಾ(ಅವಲಕ್ಕಿ), ಅವನಮ್ಮ ಜಾನಕಮ್ಮ ಮಾಡಿದ ಕಾಫಿ-ರಾತ್ರೆ ನಿದ್ದೆ ಬರದಂತೆ. ಪರೀಕ್ಷೆ ನಂತರವೂ ನಮಗೆ ಕಾಫಿ ಬೇಕಾಗುತ್ತಿತ್ತು. ರಾತ್ರಿ ಕಾಫಿ ಕುಡಿಯದಿದ್ದರೆ ನಿದ್ದೆ ಬರುವುದಿಲ್ಲ! ಜೈ ಕಾಫಿ. ಅನಂತ ರೂಪಿ ನೀನು, ನಿದ್ರೆ ತರಬಲ್ಲೆ, ನಿದ್ರೆ ಕೆಡಿಸಲೂ ಬಲ್ಲೆ!
ನಮ್ಮ ಬಿಡಾರಕ್ಕೂ, ಅವನ ಮನೆಗೂ ಒಂದೇ ರಸ್ತೆ. ನಡುವೆ ಒಂದು ದೇವಸ್ಥಾನವಿತ್ತು. ಸಂಜೀವರಾಯರು ಪುರುಷೋತ್ತಮನ ತಂದೆ. ರಿಟೈರ್ಡ್ ಮಾಸ್ತರರು. ಮನೆ ಊಟದ ವಿನಾ ಪರಾನ್ನ ಮಾಡುತ್ತಿರಲಿಲ್ಲ. ಬೆಳಿಗ್ಗೆ ಹತ್ತೂ ಮೂವತ್ತಕ್ಕೆ ಊಟ. ಅದಕ್ಕೂ ಮೊದಲು ಬೆಳಗಿನ ನಿಯಮಿತ ವಿಧಿ, ವಿಧಾನ. ಅದರಲ್ಲಿ ಕಟ್ಟಿಗೆ ತುಂಡು ಮಾಡುವುದೂ ಸೇರಿತ್ತು. ಎಪ್ಪತ್ನಾಲ್ಕು ವಯಸ್ಸಿನ ಸಂಜೀವರಾಯರು ಕೊಡಲಿಯಿಂದ ಕಟ್ಟಿಗೆ ಸೀಳಿ. ಕತ್ತಿಯಿಂದ ತುಂಡು ಮಾಡಿ ಅವರೇ ಒಳಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಹಾಗೆ ಮೂರು ನಾಲ್ಕು ಸಲ ಒಳ ಹೊರಗೆ ಅವರು ಓಡಾಡುತ್ತಿದ್ದರೆ ಇಪ್ಪತ್ತು ಇಪ್ಪತ್ನಾಲ್ಕರ ನಮಗೆ ನಾಚಿಕೆಯಾಗುತ್ತಿತ್ತು. ಪುರುಷೋತ್ತಮನ ತಾಯಿ ಜಾನಕಮ್ಮ ಗಂಡನಿಗೆ ತಕ್ಕ ಸಾಧ್ವಿ. ಇಂಥ ಆದರ್ಶ ದಂಪತಿಗಳ ಜೋಡಿ ಆಗಲೂ ಅಪರೂಪ! ಈಗ ಫೋಟೋಗಳಲ್ಲಿ ಮಾತ್ರ ಅವರ ರೂಪ!
ನನಗೂ, ಪುರುಷೋತ್ತಮನಿಗೂ ಆರ್.ಎಸ್.ಎಸ್. ಸಂಬಂಧ. ಆದರೆ ಎಸ್.ಎಸ್.ಎಲ್.ಸಿ. ಬಳಿಕ ನನಗೆ ಅರ್.ಎಸ್.ಎಸ್. ಸಂಪರ್ಕ ತಪ್ಪಿಹೋಯಿತು. ಪುರುಷೋತ್ತಮ ಮಾತ್ರ ನಿಷ್ಠಾವಂತ ಆರ್.ಎಸ್.ಎಸ್. ಸದಸ್ಯನಾಗಿ ಮುಂದುವರಿದ. ಮುಂದೆ ಟೌನ್ ಮುನಿಸಿಪಾಲಿಟಿಯ ಸಮರ್ಥ ಅಧ್ಯಕ್ಷರೂ ಆದರು. ಕೃಷಿ ಋಷಿ. ಹೊಸದೊಂದು ಅಡಿಕೆ ತೋಟವನ್ನೇ ಸೃಷ್ಟಿಸಿದ. ಆ ತೋಟ ಬ್ರಹ್ಮ ಸೃಷ್ಟಿ. ಪುರುಷೋತ್ತಮನ ಕರ್ತೃತ್ವ ಶಕ್ತಿಯ ಸಹಜರೂಪ. ನಮಗೆ ಅಪರೂಪ. ಅವನ ತೋಟಕ್ಕೆ ನಾನು ಇಪ್ಪತ್ತೈದು ವರ್ಷಗಳ ನಂತರ ಹೋದಾಗ ನನ್ನನ್ನು ಐದು ನಿಮಿಷ ತಬ್ಬಿಕೊಂಡೇ ಇದ್ದ. ಅಬ್ಬಾ ಎಂಥಾ ಸ್ನೇಹಮಯಿ! ನನಗೆ ಮೈಯೆಲ್ಲಾ ಹರ್ಷ ಪುಳಕ. ತೀರ್ಥಹಳ್ಳಿ ಸ್ನೇಹಿತರಲ್ಲಿ ಪೇಟೆ ಶ್ರೀಪತಿರಾಯರ ಮಕ್ಕಳು, ಶ್ರೀ ತ್ರಿವಿಕ್ರಮ, ಶ್ರೀ ನಾಗರಾಜ. ಮೊದಲನೆಯವ ನನ್ನ ಕ್ಲಾಸ್ ಮೇಟ್. ಎರಡನೆಯವ ನಾಗರಾಜ ನನ್ನ ಸಂಘದ ಚಾಲಕ ಮತ್ತು ನನ್ನ ಆಪ್ತ ಸ್ನೇಹಿತ. ದಿನವೂ ಸಂಜೆ ಹೊಳೆ ಹತ್ತಿರ ನಾವಿಬ್ಬರೂ ಸೇರಲೇ ಬೇಕು. ಊರ ಮಾತು, ತಮಾಷೆ, ದೊಡ್ಡವರ ಬಗ್ಗೆ, ಅವರ ಸಣ್ಣತನದ ಬಗ್ಗೆ, ಸಣ್ಣವರ ಬಗ್ಗೆ, ಅವರ ದೊಡ್ಡತನದ ಬಗ್ಗೆ ನಮ್ಮ ದರ್ಪಣ. ನಂತರ ತುಂಗಾ ನದಿಯಲ್ಲಿ ಎಲ್ಲವೂ ತರ್ಪಣ. ಶುದ್ಧ ಮನದಿಂದ ನನ್ನ ಮಠಕ್ಕೆ ನಾನು, ಅವನ ಪೇಟೆ ಮನೆಗೆ ಅವನು. ಸಂಘದ ಚಾಲಕನಾಗಿ ಎಲ್ಲರನ್ನೂ ಬಲು ಆತ್ಮೀಯತೆಯಿಂದ ಕಾಣುತ್ತಿದ್ದ, ಮಾತನಾಡಿಸುತ್ತಿದ್ದ. ಓಲೈಸುತ್ತಿರಲಿಲ್ಲ. ನನ್ನ ದೋಸ್ತ ನಾಗರಾಜ ಈಗಿಲ್ಲ.ಎಂ.ಲಕ್ಷ್ಮಿನಾರಾಯಣ (ಮೂಲ-ಮೂಲವ್ಯಾಧಿಯ ಕಾರಣ ಪುರುಷ ಎಂದು ನಮ್ಮ ಹಾಸ್ಯ) ನನಗೆ ಹಿಂದಿ ಪ್ರೇರಕ. ಮುಂದೆ ದ.ಕ.ದಲ್ಲಿ ಹಿಂದಿ ಶಿಕ್ಷಕ ಆದ. ಗೋಕರ್ಣಕ್ಕೆ ಬಂದಾಗಲೆಲ್ಲಾ ಮಾತನಾಡಿಸುತ್ತಿದ್ದ. ನಾನು ಅಘನಾಶಿನಿಗೆ ಬಂದು ನೆಲಸಿದ ಮೇಲೆ ಅವನ ದರ್ಶನ ಇಲ್ಲ.
ನನ್ನ ಬಿ.ಎಸ್.ಸಿ. ಫಲಿತಾಂಶ ಬಂದಾಗ ನಾನು ಸಾಗರ ಸೀಮೆಯ ಮಾವಿನಕುಳಿಯ ಚೆನ್ನಕೇಶವ ಭಟ್ಟರ ಮನೆಯಲ್ಲಿದ್ದೆ. ನಮ್ಮ ಶ್ರೀ ಶ್ರೀ ರಾಘವೇಂದ್ರ ಭಾರತಿ ಶ್ರೀ ಸ್ವಾಮಿಗಳ ಸವಾರಿ ಅವರಲ್ಲಿತ್ತು. ನಾನು ರಜೆಯಲ್ಲಿ ಶ್ರೀಗಳವರ ಪರಿವಾರದಲ್ಲಿ ಒಬ್ಬನಾಗಿ ಇರುತ್ತಿದ್ದೆ. ಶ್ರೀಚೆನ್ನ ಕೇಶವ ಭಟ್ಟರು ನಿಷ್ಠಾವಂತ ಆಸ್ತಿಕರು. ನಾನು ಚಿಕ್ಕವನಿದ್ದಾಗಲೇ ಅವರನ್ನು ಗೊಕರ್ಣದಲ್ಲಿ ನೋಡಿ ಅವರು ನಡೆಸಿದ ಶ್ರೀ ದೇವರ ಪೂಜೆಯಲ್ಲಿ ಪ್ರಸಾದ ಭಾಗಿಯಾಗಿದ್ದೆ. ಕಾಮೇಶ್ವರ ಮಠಕ್ಕೆ ಅವರು ಶಿಷ್ಯರು. ಅಲ್ಲಿಯ ನರಸಿಂಹಭಟ್ಟರು(ನಾವೆಲ್ಲಾ ಶಾಮಣ್ಣ ಅನ್ನುತ್ತಿದ್ದೆವು) ನಮ್ಮ ತಂದೆಯವರ ಅನ್ಯೋನ್ಯ ಸ್ನೇಹಿತರು. ಅಲ್ಲದೆ ಚೆನ್ನಕೇಶವಭಟ್ಟರೂ ಮಠದ ಅಭಿಮಾನಿಗಳಾದ್ದರಿಂದ ಈ ಸ್ನೇಹ ವರ್ಧಿಸಿತು. ಗೋಕರ್ಣದಿಂದ ಗಜಣ್ಣ ಅಂದು ಸಂಜೆ ಗುರುಗಳ ಕ್ಯಾಂಪಿಗೆ ಬಂದು ನಾನು ಪಾಸಾದ ಸುದ್ದಿ ಹೇಳಿ ಗೋಕರ್ಣ ಹೈಸ್ಕೂಲಿಗೆ ಶಿಕ್ಷಕ ಜಾಗಕ್ಕೆ ಅರ್ಜಿ ಮಾಡಲು ನನ್ನನ್ನು ಊರಿಗೆ ಕರೆದುಕೊಂಡು ಹೋಗಲು ಬಂದಿದ್ದ. ಶ್ರೀಶ್ರೀಗಳವರಿಂದ ಮಂತ್ರಾಕ್ಷತೆ ಪಡೆದು ಶುಭವಾಗಲೆಂಬ ಆಶೀರ್ವಾದ ಪಡೆದು ಬೆಳಿಗ್ಗೆ ಅರ್ಜಿ ಕೊಡು ಎಂದರು. ‘ಹೂಂ’ ಎಂದೆ. ಮಾರನೆ ದಿನ ನಾನು ದೇವತೆ ಜಯರಾಮಣ್ಣನ ಮನೆಗೆ ಅರ್ಜಿ ತೆಗೆದುಕೊಂಡು ಹೋದೆ. ಅಲ್ಲಿಗೆ ದತ್ತರಾಯರೂ ಬಂದಿದ್ದರು. ಅರ್ಜಿ ನೋಡಿದರು. ಅಲ್ಲಿ ಇಲ್ಲಿ ನನ್ನ ವಾಕ್ಯಗಳನ್ನಿಟ್ಟು ಬೇರೆಯೇ ಅರ್ಜಿ ಬರೆಸಿ ತೆಗೆದುಕೊಂಡರು. ಎರಡು ದಿನ ಬಿಟ್ಟು ತಮ್ಮಲ್ಲಿಗೆ ಸಾಯಂಕಾಲ ನಾಲ್ಕು ಗಂಟೆಗೆ ಬರಲು ಹೇಳಿದರು. ಅಲ್ಲಿ ಕೆನರಾ ಶಿಕ್ಷಕ ಮಂಡಲಿಯ ಅಧ್ಯಕ್ಷರು ಚೇರಮನ್ ಕಮತಿಯವರು ನನ್ನ ಇಂಟರ್ವ್ಯೂ ಮಾಡಿದರು. ಉತ್ತರ ಸಮಾಧಾನಕರ ಎಂದರು. ಶ್ರೀ ದತ್ತೂರಾಯರು ಕೆಲವು ಪ್ರಶ್ನೆ ಕೇಳಿದರು. ಉತ್ತರಗಳಿಗೆ ಇಬ್ಬರೂ ತೃಪ್ತಿ ವ್ಯಕ್ತಪಡಿಸಿ ‘ಮೀಟಿಂಗಿನಲ್ಲಿ ಇಡುತ್ತೇವೆ, ಪರಿಣಾಮ ತಿಳಿಸುತ್ತೇವೆ’ ಎಂದರು. ನಮಸ್ಕಾರ ಹೇಳಿ ಮನೆಗೆ ಬಂದೆ. ಜೂನ್ ೨೫ಕ್ಕೋ ೨೬ಕ್ಕೋ ಭದ್ರಕಾಳಿ ಹೈಸ್ಕೂಲಲ್ಲಿ ಅಧ್ಯಾಪಕನಾಗಿ ನೇಮಿಸಿರುವ ಕುರಿತು ಪತ್ರ ಬಂತು. ಅದನ್ನು ಮನೆಯಲ್ಲಿದ್ದ ಹಿರಿಯರಾದ ಗಜಣ್ಣ, ಭೂಮಿ ಅತ್ತಿಗೆಯವರಿಗೆ ಓದಿ ಹೇಳಿದೆ. ದೇವರಿಗೆ ವಂದಿಸಿದೆ.
ಮುಂದುವರೆಯುವುದು….