ವರ್ಗ: ಕವನ
ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ
೨೩
ಧೋ ಎ೦ದು ಸುರಿಯುತಿದೆ ಭಾರಿ ಮಳೆ ಇಲ್ಲಿ,
ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ,
ಹೇಗೆ ಬರಲಿ ನಿನ್ನ ಬಳಿಗೆ ಇನಿಯ?
ಕೇಳಬೇಕಿದೆ ನಿನ್ನ ಜೇನುದನಿಯ,
ಇಂಗಿಹೋಯಿತು ಸಂಜೆ ಇರುಳ ಸೆರಗಲ್ಲಿ,
ಭಂಗಪಡುತಿವೆ ತಾರೆ ಮುಗಿಲ ಮರೆಯಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ,
ಹೇಗೆ ತಲುಪಲಿ ಹೇಳು ನಿನ್ನ ಮನೆಯ?
ಹೇಗೆ ಸೇರಲಿ ಪ್ರೀತಿಪಥದ ಕೊನೆಯ?
ಹಳ್ಳ ಕೂಗುತ್ತಲಿದೆ ತುಂಬಿ ಮಳೆಯಲ್ಲಿ,
ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ,
ಹೇಗೆ ಬರಲಿ ಇನಿಯ ನಿನ್ನ ಬಳಿಗೆ?
ಕರಗಬೇಕೋ ನಿನ್ನ ಪ್ರೀತಿಯೊಳಗೇ!
*****
ಪುಸ್ತಕ: ನಿನಗಾಗೇ ಈ ಹಾಡುಗಳು