ಅಲ್ಲಿ ಬೇಸರವಿಲ್ಲ
ಸುಮ್ಮನೆ ಅಡ್ಡಾಡಬಹುದು ಒಂದರ್ಧಗಂಟೆ
ಛಿ ! ಥೂ ! ಅಣಕೂಡದು ಮುಖ ಸಿಂಡರಿಸಲೇಬಾರದು
ಹಸನ್ಮುಖರಾಗಿರಬೇಕು.
ತೆರೆದ ಕಣ್ಣು ಬಿಚ್ಚಿದ ಮನಸ್ಸುಗಳಷ್ಟಿದ್ದರೂ ಸಾಕು
ಹಣವಿಲ್ಲದಿದ್ದರೂ ನಡೆದೀತು
ಗಡಿಬಿಡಿ ಇರಬಾರದಷ್ಟೆ !
ಕೊಂಡುಕೊಳ್ಳಲೇಬೇಕೆಂದೇನಿಲ್ಲ
ಧಾರಾಳ ಅವಕಾಶ ಹತ್ತಿಪ್ಪತ್ತು ರೂಪಾಯಿಗಳ
ಸಾಮಾನು ನೋಡಲು
ಹೆಚ್ಚು ಮಾತನಾಡಬಾರದಷ್ಟೆ.
ಅಬ್ಬಬ್ಬಾ ಒಮ್ಮೊಮ್ಮೆ ಅದೇನು ಚೆಂದ
ಜನಜಂಗುಳಿ ಕೆಂಡಹಾಯ್ದು ಓಡುವಂಥಾ ಗಡಿಬಡಿ
ಆಚೆ ಕಾಯುತ್ತಿರಬಹುದೆ ಹುಡುಗಿ –
ಗೇಟ್ ಹಾಕಬಹುದೆ ಪ್ಯಾಕ್ಟರಿಯ ವಾಚಮನ್ –
ಕಾಲೇಜು ಬೆಲ್ ಬಾರಿಸಿತೋ ಏನೋ –
ದೂರದೂರಿನ ಬಸ್ಸು ಹೋಗಿದ್ದರೆ ! –
ಹೇಗಿದ್ದಾನೋ ಕೌನ್ಸಿಲರ್ ಅವನೊಬ್ಬ –
ಹೀಗೆ ಹೀಗೆ ಅದೇನೇನೋ ಕಾರಣದವರು.
ಮೆಟ್ಟಲಿನಾಚೆ ಈಚೆ ಹೊಟ್ಟೆಪಾಡಿಗರ ದೈನ್ಯತೆ
ಒಂದು ಕೊಂಡರೆ ಇನ್ನೊಂದು ಫ್ರಿ ಸರ್
ಪೆನ್ನು ಪೆನ್ಸಿಲ್ ಅಷ್ಟೇ ಅಲ್ಲ
ವಾಚು ಇಲೆಕ್ಟ್ರಿಕ್ ಸಾಮಾನುಗಳೂ
ಮೇಡ್ ಇನ್ ಚೈನಾ ಕೋರಿಯಾದವುಗಳು
ಅಲ್ಲಲ್ಲಿ ಜಪಾನದವುಗಳೂ ಅದೆಂತಹ ಮಿಂಚು
ಅಷ್ಟಷ್ಟೇ ಕೊಂಡು ಕೊಡುವ
ಜಾಣ ಜಿಪುಣರಿಗೆ ಜಾತ್ರೆಯೋ ಜಾತ್ರೆ
ಅಲ್ಲಿ ಏನುಂಟು ಏನಿಲ್ಲ
ಚಿನ್ನ ಚಿನ್ನ ಆಸೆ…..
ಅದೋ ಅಲ್ಲಿ ಗೌಜು ಗದ್ದಲದಲ್ಲೂ ತಣ್ಣಗೆ
ಪಿಟಿಲು ಬಾರಿಸಿ ಎದೆಕೊರೆಯುವ ಕುರುಡ
ಚಿಂದಿತೊಟ್ಟು ನಿಶ್ಚಿಂತತೆಯಲಿ ಬಿದ್ದ ಹೆಳವ
ಪಿಳಿ ಪಿಳಿ ಕಣ್ಣು ಕೈ ಸನ್ನೆಯ ಮೂಗ
ಹೇಳಿ ಯಾರಿಗಿದ್ದೀತು ಹಾದಿಹೋಕರಿಗೆ
ಹೃದಯ, ಸಮಯ ಇಲ್ಲಿ
ಕಿಸೆಗೆ ಭಾರವಾಗಿದ್ದರೆ ಎರಡು ಬಿಲ್ಲೆ
ಚೆಲ್ಲಿ ಹಗುರಾಗಿ ಓಡುವ
ಮನಸುಗಳ ಹೊರತಾಗಿ –
ಇಲ್ಲಿ ಗೋಡೆಯ ಪಿಚಕಾರಿಗೆ
ಹೊಂದಿ ಕುಳಿತ ಭಿಕ್ಷುಕರು
ಅಲ್ಲಿ ಗುಮಾನಿಯಾಗಿ ನಿಂತು
ನೋಡುವ ಕಳ್ಳ ಕದೀಮ ಪ್ರಚಂಡರು
ಅರೆಬರೆ ಬೆಳಕಿನಲ್ಲಿಯೇ ಎದೆ ಬಿರಿದುಕೊಂಡು
ಹಾದಿಹೋಕರ ಕಣ್ಣೆಳೆಯುತ
ಹದಿಹರೆಯದ ಮಾಂಸ ಮಾರಿಕೊಳ್ಳುವ
ಕೆಂಪು ದೀಪಿಕೆಯರು-
ಮತ್ತೊಂದೆಡೆ ಗಾಲಿಯ ಖುರ್ಚಿಯ ಮೇಲೊಬ್ಬ ಅಜ್ಜ
ಸುಸಂಸ್ಕೃತ ವೇಷ ಭೂಷಣಧಾರಿ
ಆಯಾ ದೇಶಗಳ ಪ್ರವಾಸಿಗರ ನೋಡುತ
ಅವರವರದೇ ದೇಶಗೀತೆಗಳಲಿ ಪಿಟಿಲಿಸಿ ಗಮನ ಸೆಳೆಯುವವ
ಇಲ್ಲಿ ಇವರ ಹಿಂದೆಯೇ ಅವನ ಮೊಮ್ಮಕ್ಕಳು
ಪಿಕ್ ಪಾಕೇಟ್‌ಮಾಡಿ ಮೆಲ್ಲಗೆ ಸರಿಯುವ ಸಮಯ
ಒಂದು ಜಾಲ, ಲೀಲಾಜಾಲ, ಕೈಚಳಕ.
ಇಲ್ಲಿ ಸುರಂಗದಲ್ಲಿ
ಸೂರ್ಯ ಒಳಗೆ ಬರಲೊಲ್ಲ
ಕನಸುಗಳು ಚಿಗಿತಾವು ಹೇಗೆ?
ಕತ್ತಲಗರ್ಭದಲ್ಲಿ ನಡೆಯುವ ತಳಮಳಕೆ
ಕೇವಲ ವರ್ತಮಾನ.
ಪೋಲಿಸನದೋ, ಹಪ್ತಾ ವಸೂಲಿಯವನದೋ
ಚಾಟಿ ಕಟ ಕಟ, ಅದರೊಳಗಿನ ಮಾತು ಗೊತ್ತಷ್ಟೇ
ಹೆದರಿದಂತೆ ಗಂಟು ಕಟ್ಟುವ ಓಡುವ ನಾಟಕ
ಕಳ್ಳ ಕಾಕರು ಮೆತ್ತಗೆ ಕಾಲುಕೀಳುವ ಸಮಯ
ಸೂರ್ಯ ಮುಳುಗುತ್ತಾನೆ,
ಸಂಜೆ ಮತ್ತದೇ ಗರಿಗರಿ ಮುದುರಿದ
ಸುಕ್ಕಾದ ಸುಸ್ತಾದ ದೇಹಗಳು
ಬೂದಿ ತುಳಿಯುತ ತೆವಳುತ ಸಾಗುವ ರೀತಿ.
*****
ಪುಸ್ತಕ: ಇರುವಿಕೆ