ಎಂಥ ಚೆಲುವೆ ನನ್ನ ಹುಡುಗಿ
ಹೇಗೆ ಅದನು ಹೇಳಲಿ?
ಮಾತಿನಾಚೆ ನಗುವ ಮಿಂಚ
ಹೇಗೆ ಹಿಡಿದು ತೋರಲಿ?
ಕಾಲಿಗೊಂದು ಗಜ್ಜೆ ಕಟ್ಟಿ
ಹೊರಟಂತೆ ಪ್ರೀತಿ,
ಝಲ್ಲೆನಿಸಿ ಎದೆಯನು
ಬೆರಗಲ್ಲಿ ಕಣ್ಣನು
ಸೆರೆಹಿಡಿವ ರೀತಿ.
ಬೆಳಕೊಂದು ಸೀರೆಯುಟ್ಟು
ತೇಲಿನಡೆವ ರೂಪ,
ಗರ್ಭಗುಡಿಯಲಿ
ದೇವರೆದುರಲಿ
ಉರಿವ ಶಾಂತದೀಪ
ರಾಗದಲ್ಲಿ ಸೇರಿ ಕವಿತೆ
ಹಾಡು ಮೂಡುವಂತೆ
ಸಂಜೆ ಸುಳಿವ ಗಾಳಿಗೆ
ಹೊನ್ನ ಬಿಸಿಲ ಲೀಲೆಗೆ
ಮುಗಿಲಾಡುವಂತೆ
*****
ಪುಸ್ತಕ: ನಿನಗಾಗೇ ಈ ಹಾಡುಗಳು