ನೆತ್ತಿಗೆ ಹರಳೆಣ್ಣೆಯ ಹಬ್ಬವೆ?
ಅಮವಾಸೆಯ ಕಗ್ಗತ್ತಲು
ನಮಗೆ ನಾವೇ ಕಾಣಿಸಲಾರೆವು
ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ
ಅಡ್ಡಾಡದಿದ್ದರೂ ಎಡುವಿದಂತೆ
ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ
ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ
ಯಾರೂ ಮಾತನಾಡದಿದ್ದರೂ ಪಿಸುಗುಡುತ್ತಿದ್ದಂತೆ
ಹೂಬಳ್ಳಿಗಳು ಅಲುಗಾಡಿದರೂ ಭೂತವೇ ಬರುತ್ತಿದ್ದಂತೆ….
ಮಂಪರು ಪರೀಕ್ಷೆಗೆ ಒಳಪಟ್ಟಂತೆಯೋ ಏನೋ !
ಬಿಸಿಲು ಬೆತ್ತವೇ ಹಿಡಿದುಕೊಂಡು ಬೆನ್ನುಹತ್ತಿದೆಯೆ?
ನಾವು ನೀವು ಅವರುಗಳೆಲ್ಲಾ
ಸ್ಪಷ್ಟವಾಗಿ ಅವರವರಿಗೇ ಕಾಣಿಸುತ್ತಾರೆ
ರಾಜಕಾರಣಿ, ಸಮಾಜಸೇವಕ, ಸಾಹಿತಿ
ಉದ್ಯೋಗಪತಿ, ಜಾತಿಧರ್ಮಗಳ ಕಿಚಾಚಿಗಳು
ಯುದ್ಧ ಬಾಂಬು, ಬೆಂಕಿ, ಸಾವು ನೋವಿನ
ದುರಂತಗಳೆಲ್ಲರ ಬಿಸುಲ್ಗುದುರೆಯ ಓಟ ಓಟ
ಬಿಸಿಲೇ ಬಿಸಿಲಿಗೆ ಬೆವರಿ ಬೇಸತ್ತು
ತೆರೆದ ಕಣ್ಣು ತೆರೆದಂತೆಯೇ
ಬೆತ್ತ ಎಸೆದು ಚಿತ್ಕಾರ ಮಾಡದೆಯೇ
ಮೆಲ್ಲಗೆ ಹೃದಾಯಾಘಾತದನುಭವ ಪಡೆದಂತೆಯೋ ಏನೋ !
ಹಪಾಹಪಿ ರಾಕ್ಷಸನ ಅಟ್ಟಹಾಸದ ಮಾತೆ?
ಬೆಳಗಿನ ಬ್ರಾಹ್ಮಿ ಮುಹೋರ್ತ ಪ್ರಶಸ್ತ ಸಮಯ
ಮಂತ್ರ ತಂತ್ರ ಪೂಜೆ ಪುನಸ್ಕಾರಕೆ
ಗಬ್ಬು ಹೃದಯಿಗಳ ಸ್ವಾರ್ಥ ಬಯಕೆ
ಬೆಳ್ಳಿತಟ್ಟೆ, ತುಪ್ಪದ ಬತ್ತಿ ಧೂಪ ದೀಪ
ಸಹಸ್ರ ನಾಮಾವಳಿಗಳು
ಮುಂಜಾವಿಗೇಕೋ ಕಪ್ಪು ಛಾಯೆ
ನಕ್ಷತ್ರಗಳು ಜಾರಿಕೊಳ್ಳುತ್ತವೆ
ಹಿತವಾದ ಗಾಳಿ ಮಂಜು ತುಂಬಿದ ಹುಲ್ಲು
ಕಾಣಿಸದೆ ದೂರಗುಡ್ಡನೇರಬಯಸುವ
ವಿಕಲಾಂಗರ ನಸುಕಿನ ಕನಸಿನಂತೆಯೋ ಏನೋ !
*****
ಪುಸ್ತಕ: ಇರುವಿಕೆ