ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Anacleto Morones
ಮುದುಕಿಯರು, ಸೈತಾನನಿಗೆ ಹುಟ್ಟಿದವರು. ಎಲ್ಲಾರೂ ಒಟ್ಟಿಗೆ ಮೆರವಣಿಗೆ ಥರಾ ಬರುತ್ತಾ ಇದ್ದದ್ದು ನೋಡಿದೆ. ಕಪ್ಪು ಬಟ್ಟೆ ತೊಟ್ಟು, ಬಿಸಿಲಿನಲ್ಲಿ ಬೆವರುವ ಹೇಸರಗತ್ತೆಗಳ ಹಾಗೆ ಬೆವರುತ್ತಾ ಇದ್ದರು. ಅವರು ಬರುತ್ತಾ ಇದ್ದದ್ದನ್ನು ದೂರದಿಂದಲೇ ನೋಡಿದೆ. ಕತ್ತೆಗಳ ಸಾಲು ಧೂಳೆಬ್ಬಿಸುತ್ತ ಬರುವ ಹಾಗೆ ಕಾಣುತಿತ್ತು. ಅವರ ಮುಖಕ್ಕೆಲ್ಲ ಧೂಳು ಮೆತ್ತಿತ್ತು. ಕಪ್ಪಗಿದ್ದರು. ಎಲ್ಲಾರೂನೂ. ಅಮೂಲದಿಂದ ಬರುವ ರಸ್ತೆಯ ಮೇಲೆ ಬರುತ್ತಾ ಇದ್ದರು- ಪ್ರಾರ್ಥನೆ ಮಾಡುತ್ತ, ಮಧ್ಯ ಮಧ್ಯ ಹಾಡು ಹೇಳಿಕೊಂಡು; ಕೊರಳ ತಾಯತಗಳೆಲ್ಲ ಸೆಖೆಗೆ ಮುಖದಿಂದ ಹನಿ ಹನಿ ಇಳಿಯುವ ಬೆವರಿಗೆ ಕಪ್ಪು ಹಿಡಿದಿದ್ದವು.
ಅವರು ಬರುವುದು ನೋಡಿದೆ. ಬಚ್ಚಿಟ್ಟುಕೊಂಡೆ. ಏನು ಮಾಡುತ್ತಾ ಇದ್ದಾರೆ, ಯಾರನ್ನು ಹುಡುಕುತ್ತಾ ಇದ್ದಾರೆ ಗೊತ್ತಿತ್ತು. ಅದಕ್ಕೇ ನಾನು ಕೊಟ್ಟಿಗೆಯ ಹಿಂದಕ್ಕೆ ಓಡಿ ಹೋಗಿ ಬಚ್ಚಿಟ್ಟುಕೊಂಡೆ. ಪ್ಯಾಂಟು ಬಿಚ್ಚಿ ಕೈಯಲ್ಲಿ ಹಿಡಿದು ಓಡಿದ್ದೆ.
ಆದರೂ ನನ್ನ ಎದುರಿಗೆ ಬಂದು ನಿಂತರು. ‘ಆವೇ ಮರಿಯಾ ಪುರೀಸಿಮಾ’
ಅಂದರು.
ನಾನು ಪ್ಯಾಂಟು ಪಾದದವರೆಗೆ ಇಳಿಸಿಕೊಂಡು ಬಂಡೆಯ ಮೇಲೆ ಕುಕ್ಕುರುಗಾಲಲ್ಲಿ ಸುಮ್ಮನೆ ಕೂತಿದ್ದೆ-ನಾನು ಇರುವ ಸ್ಥಿತಿಯನ್ನು ನೋಡಿ ಅವರು ಹತ್ತಿರ ಬರದೆ ಇರಲಿ ಅಂತ, ಅವರೋ ‘ಆವೇ ಮರಿಯಾ’ ಅನ್ನುತ್ತ ಇನ್ನೂ ಹತ್ತಿರ ಬಂದರು.
ಇಂಡಿಯನ್ ಮುದುಕಿಯರು! ನಾಚಿಕೆ ಆಗಬೇಕು ಅವರಿಗೆ! ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡು ಇಡೀ ಮುದುಕಿಯರ ಹಿಂಡು ನನ್ನ ಹತ್ತಿರ ಬಂದುಬಿಟ್ಟಿತು. ಅವರ ಮೇಲೆ ತುಂತುರು ಮಳೆ ಬಂದಿದೆಯೋ ಅನ್ನುವ ಹಾಗೆ ಅವರ ಮುಖದ ಬೆವರಿಗೆ ಕೂದಲು ಅಂಟಿಕೊಂಡಿತ್ತು.
‘ನಿನ್ನನ್ನ ನೋಡುವುದಕ್ಕೆ ಬಂದೆವು, ಲುಕಾಸ್ ಲುಕಾಟೆರೋ. ಅಮುಲಾದಿಂದ ಬಂದೆವು. ನಿನ್ನ ನೋಡುವುದಕ್ಕೆ ಅಂತಲೇ. ಇಲ್ಲೇ ಹತ್ತಿರ ಬಂದಾಗ ನೀನು ಇಲ್ಲೇ ಇದೀಯ ಅಂದರು. ಇಷ್ಟು ದೂರ ಹುಡುಕಿಕೊಂಡು ಇಲ್ಲಿ ನೀನು ಹೀಗೆ ಕೂತಿರತೀಯ ಅಂದುಕೊಂಡಿರಲಿಲ್ಲ. ನೀನು ಕೋಳಿಗೆ ಕಾಳು ಹಾಕುತಾ ಇರತೀಯ ಅಂದುಕೊಂಡು ಬಂದೆವು. ನಿನ್ನ ನೋಡುವುದಕ್ಕೇ ಬಂದಿದೇವೆ.’
ಈ ಮುದುಕಿಯರು! ಕತ್ತೆಯ ಲದ್ದಿಯ ಹಾಗೆ ಅಸಹ್ಯ.
‘ಏನು ಬೇಕು ನಿಮಗೆ?’ ಪ್ಯಾಂಟಿನ ಗುಂಡಿ ಹಾಕಿಕೊಳ್ಳುತ್ತ ಕೇಳಿದೆ. ಅವರು ಮುಖ ಪಕ್ಕಕ್ಕೆ ತಿರುಗಿಸಿಕೊಂಡಿದ್ದರು.
‘ನಾವು ಕೆಲಸದ ಮೇಲೆ ಬಂದಿದೇವೆ. ನೀನು ಸಿಗಬಹುದು ಅಂತ ಸಾನ್ಟೋ ಸಾಂಟಿಯಾಗೋದಲ್ಲಿ ನೋಡಿದೆವು. ಸಾಂತಾ ಇನೆಸ್ನಲ್ಲಿ ನೋಡಿದೆವು. ನೀನು ಈಗ ಅಲ್ಲಿಲ್ಲ, ಈ ಹುಲ್ಲುಗಾವಲಿಗೆ ಬಂದಿದೀಯ ಅಂದರು. ಇಲ್ಲಿಗೆ ಬಂದೆವು. ಅಮುಲಾದಿಂದ ಬಂದೆವು.’
ಅವರು ಎಲ್ಲಿಂದ ಬಂದಿದ್ದಾರೆ, ಅವರು ಯಾರು ಅನ್ನುವುದು ಆಗಲೇ ಗೊತ್ತಾಗಿತ್ತು. ಬೇಕಾದರೆ ಅವರ ಹೆಸರು ಕೂಡ ಹೇಳುತಿದ್ದೆ. ಆದರೂ ಏನೂ ಗೊತ್ತಿಲ್ಲ ಅನ್ನುವವನ ಹಾಗೆ ಇದ್ದುಬಿಟ್ಟೆ.
‘ದೇವರು ದೊಡ್ಡವನು. ಕೊನೆಗೂ ನಿನ್ನ ಹುಡುಕಿಬಿಟ್ಟೆವು ಲುಕಾಸ್ ಲುಕಾಟೆರೋ.’
ಅವರನ್ನು ಒಳಕ್ಕೆ ಬನ್ನಿ ಅಂತ ಕರೆದು ಒಂದಷ್ಟು ಕುರ್ಚಿಗಳನ್ನು ತಂದು ಹಾಕಿದೆ. ಹಸಿವಾಗಿದೆಯಾ, ಗಂಟಲು ಪೀಪಿ ವದ್ದೆ ಮಾಡಿಕೊಳ್ಳುವುದಕ್ಕೆ ನೀರು ಏನಾದರೂ
ಬೇಕಾ ಅಂತ ಕೇಳಿದೆ.
ಕೂತುಕೊಂಡರು. ದೊಡ್ಡ ತಾಯತಗಳಲ್ಲಿ ಗಾಳಿ ಬೀಸಿಕೊಳ್ಳುತ್ತ ಬೆವರು
ಆರಿಸಿಕೊಂಡರು.
‘ಬೇಡ. ನಿನಗೆ ತೊಂದರೆ ಕೊಡುವುದಕ್ಕೆ ಬರಲಿಲ್ಲ. ನಿನಗೆ ಮೆಸೇಜು ತಂದಿದೇವೆ. ನಿನಗೆ ನನ್ನ ಪರಿಚಯ ಇದೆ ಅಲ್ಲವಾ, ಲುಕಾಸ್ ಲುಕಾಟೆರೋ?’ ಅವರಲ್ಲೊಬ್ಬಳು
ಕೇಳಿದಳು.
‘ಇದೆ ಅನ್ನಿಸತ್ತೆ. ನಿನ್ನನ್ನ ಎಲ್ಲೋ ನೋಡಿರಬೇಕು. ನೀನು ಆ ಪಾಂಚಾ ಫ್ರೆಗೋಸಾಳ ಮಗಳು. ಅದೇ ಹೊಂಬೋನೋ ರಾಮೋಸ್ ಹೊತ್ತುಕೊಂಡು ಹೋದಳಲ್ಲ ಅವಳು
ಅಲ್ಲವಾ?’
‘ಅವಳ ಮಗಳು ಹೌದು. ನನ್ನ ಯಾರೂ ಹೊತ್ತುಕೊಂಡು ಹೋಗಲಿಲ್ಲ. ಬರೀ ಕೆಟ್ಟ ಚಾಡಿ ಛಿದ್ರದ ಮಾತು ಅವೆಲ್ಲ. ನಾವಿಬ್ಬರೂ ನೆಲ್ಲಿಕಾಯಿ ತರಲು ಹೋಗಿ ದಾರಿ ತಪ್ಪಿಸಿಕೊಂಡೆವು. ನಾನು ಧರ್ಮ ಸಭೆಯ ಸದಸ್ಯಳು. ಬೇರೆಯವರು ನನ್ನ ಹತ್ತಿರ ಬರುವುದಕ್ಕೆ ಬಿಡುವವಳಲ್ಲ…’
‘ಪಾಂಚಾನ ಕೂಡಾ?’
‘ಅಯ್ಯೋ, ಕೆಟ್ಟ ಯೋಚನೆ ಮಾಡತೀಯಲ್ಲಾ ಲುಕಾಸ್. ಎಲ್ಲಾರೂ ಮಾಡಿದ ತಪ್ಪುಗಳನ್ನ, ಅಪರಾಧಗಳನ್ನ ಇನ್ನೂ ಬೆದಕುತ್ತಲೇ ಇದ್ದೀಯಲ್ಲ. ನಿನಗೆ ನನ್ನ ಪರಿಚಯ ಇರುವುದರಿಂದ ನಾವು ಯಾಕೆ ಬಂದೆವು ಅನ್ನುವುದನ್ನ ನಾನೇ ಹೇಳತೇನೆ.’
‘ಒಂದು ಲೋಟ ನೀರು ಕೂಡಾ ಬೇಡವಾ?’
‘ಸುಮ್ಮನೆ ತೊಂದರೆ ಯಾಕೆ? ಇಷ್ಟೊಂದು ಹೇಳತಿದ್ದೀಯಲ್ಲ, ಬೇಜಾರಾಗಬೇಡ, ಕೊಡು ಹೋಗಲಿ.’
ಮಿರ್ಟಲ್ ಎಲೆ ಹಾಕಿದ ನೀರು ಒಂದು ಮಗ್ ತಂದುಕೊಟ್ಟೆ, ಕುಡಿದರು. ಇನ್ನೊಂದು ಮಗ್ ತಂದುಕೊಟ್ಟೆ. ಆಮೇಲೆ ಹೊಳೆಯ ನೀರು ತಂದು ಕೊಟ್ಟೆ. ಅದನ್ನ ಆಮೇಲೆ ಕುಡಿಯುವುದಕ್ಕೆ ಇರಲಿ ಅಂತ ಪಕ್ಕಕ್ಕೆ ಇಟ್ಟುಕೊಂಡರು. ತಿಂದದ್ದು ಜೀರ್ಣವಾಗುವಾಗ ಬಾಯಾರಿಕೆ ಆಗುತ್ತದೆ ಅನ್ನುವುದು ಅವರ ನಂಬಿಕೆ.
ಹತ್ತು ಹೆಂಗಸರು, ಧೂಳು ಮೆತ್ತಿ ಕೊಳಕಾದ ಕಪ್ಪು ಬಟ್ಟೆ ತೊಟ್ಟು ಸಾಲಾಗಿ ಕೂತಿದ್ದರು. ಪೋನ್ಸಿಯಾ, ಎಮಿಲಿಯಾನೋ, ಕೆಸೆನ್ಸಿಯಾನೋ, ಹೆಂಡದಂಗಡಿಯ ಟೊರಿಬಿಯೋ, ಕ್ಷೌರಿಕ ಅನಸ್ಟಾಸಿಯೋನ ಮಕ್ಕಳು.
ಹಳೇ ಚಿಂದಿಬಟ್ಟೆಯ ಹಾಗಿದ್ದರು. ಒಬ್ಬರಾದರೂ ನೋಡುವುದಕ್ಕೆ ಪರವಾಗಿಲ್ಲ ಅನ್ನುವ ಹಾಗಿರಲಿಲ್ಲ. ಎಲ್ಲಾ ಐವತ್ತರ ಮೇಲಿನವರು. ಒಣಗಿ, ಬತ್ತಿ, ಬಣ್ಣ ಕಳೆದುಕೊಂಡ ದೊಡ್ಡ ಹೂವುಗಳ ಹಾಗಿದ್ದರು. ಒಬ್ಬಳೇ ಒಬ್ಬಳಾದರೂ ನೋಡುವ ಹಾಗೆ ಇರಲೇ ಇಲ್ಲ.
‘ಏನು ಹುಡುಕಿಕೊಂಡು ಬಂದಿರಿ ಇತ್ತ ಕಡೆಗೆ?’
‘ನಿನ್ನ ನೋಡುವುದಕ್ಕೆ ಬಂದೆವು.’
‘ನೋಡಿದಿರಲ್ಲ. ಚೆನ್ನಾಗಿದ್ದೇನೆ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.’
‘ತುಂಬ ದೂರ ಬಂದಿದೀಯ, ಬಚ್ಚಿಟ್ಟುಕೊಂಡಿದೀಯ. ಅಡ್ರೆಸ್ಸೂ ಇಲ್ಲ. ನಿನ್ನ ಗುರುತಿನವರು ಒಬ್ಬರೂ ಇಲ್ಲ. ನಿನ್ನ ಹುಡುಕುವುದಕ್ಕೆ ಎಷ್ಟು ಕಷ್ಟವಾಯಿತು, ಎಷ್ಟು ಜನರನ್ನ ಎಷ್ಟು ಪ್ರಶ್ನೆ ಕೇಳಬೇಕಾಯಿತು.’
‘ಬಚ್ಚಿಟ್ಟುಕೊಂಡಿಲ್ಲ. ಸಂತೋಷವಾಗಿದೇನೆ. ಇಲ್ಲಿ ಯಾರೂ ಕಾಟ ಕೊಡಲ್ಲ. ಏನು ಕೆಲಸ ಇಟ್ಟುಕೊಂಡು ಬಂದಿದೀರಿ, ಕೇಳಬಹುದಾ?’ ಅಂದೆ.
‘ಅದು ಏನಂದರೆ…ಅಲ್ಲಾ, ನಮಗೆ ಊಟದ ವ್ಯವಸ್ಥೆ ಮಾಡುವುದು ಬೇಡ. ಲಾ ಟೋರ್ಕಾಸಿಟಾ ಮನೆಯಲ್ಲಿ ಮುಗಿಸಿಕೊಂಡು ಬಂದೆವು. ಒಳ್ಳೆ ಊಟ ಆಯಿತು. ಇಲ್ಲಿ ಬಂದು ನಮ್ಮ ಎದುರಿಗೆ ಕೂತುಕೋ, ನಿನ್ನ ಮುಖ ನಮಗೆ ಕಾಣಬೇಕು, ನಮ್ಮ ಮಾತು ನಿನಗೆ ಕೇಳಬೇಕು.’
ಆರಾಮವಾಗಿ ಇರುವುದಕ್ಕೆ ಆಗಲಿಲ್ಲ. ಮನಸ್ಸು ಕೊಟ್ಟಿಗೆಗೆ ಎಳೆಯುತಿತ್ತು. ಕೋಳಿ ಸದ್ದು ಮಾಡುತಿದ್ದವು. ಅದನ್ನು ಕೇಳಿ, ಮೊಲಗಳು ಬಂದು ತಿನ್ನುವ ಮೊದಲೇ ಮೊಟ್ಟೆಯೆಲ್ಲಾ ಎತ್ತಿಟ್ಟುಕೊಳ್ಳಬೇಕು ಅನ್ನಿಸಿತು.
‘ಮೊಟ್ಟೆ ತರುವುದಕ್ಕೆ ಹೋಗತೇನೆ,’ ಅಂದೆ.
‘ನಿಜವಾಗಲೂ? ನಮ್ಮದಾಗಲೇ ಊಟ ಆಯಿತು. ನಮಗೇ ಅಂತ ನೀನು ಹೊರಗೆ ಹೋಗಿ ಮೊಟ್ಟೆ ತರುವುದು ಬೇಡ.’
‘ಇಲ್ಲಿ ಎರಡು ಕಾಡು ಮೊಲ ಇವೆ, ನನ್ನ ಮೊಟ್ಟೆಗಳನ್ನೆಲ್ಲ ತಿಂದು ಹಾಕತವೆ, ಒಂದೇ ನಿಮಿಷ ಬಂದುಬಿಟ್ಟೆ’
ಕೊಟ್ಟಿಗೆಗೆ ಹೋದೆ.
ವಾಪಸ್ಸು ಬರುವ ಯೋಚನೆ ಇರಲಿಲ್ಲ. ಮೆಲ್ಲಗೆ ನುಣುಚಿಕೊಂಡು ಹೋಗಿ ಬೆಟ್ಟ ಸೇರಿಬಿಡತೇನೆ. ಆ ಮುದುಕಿಯರು ಇಲ್ಲೇ ಬಿದ್ದಿರಲಿ.
ಮೂಲೆಯಲ್ಲಿ ನಾನು ಒಟ್ಟಿದ್ದ ಕಲ್ಲು ರಾಶಿ ನೋಡಿದೆ. ಸಮಾಧಿಯ ಆಕಾರದಲ್ಲಿತ್ತು. ಕಲ್ಲುಗಳನ್ನ ಎತ್ತಿ ಎತ್ತಿ ಬಿಸಾಡಿದೆ. ಅತ್ತ, ಇತ್ತ, ಎಲ್ಲಾ ದಿಕ್ಕಿಗೂ, ಹೊಳೆಯಿಂದ ಆರಿಸಿ ತಂದವು. ನುಣ್ಣಗೆ ಇದ್ದವು. ತುಂಬಾ ದೂರಕ್ಕೂ ಎಸೆದೆ. ದರಿದ್ರ ಮುದುಕಿಯರು! ನನಗೆ ಕೆಲಸ ಹಚ್ಚಿದರು. ಬರಬೇಕು ಅಂತ ಯಾಕೆ ಅಂದುಕೊಂಡರೋ?
ಕೆಲಸ ನಿಲ್ಲಿಸಿ ವಾಪಸ್ಸು ಹೋದೆ.
ಮೊಟ್ಟೆಗಳನ್ನ ಅವರಿಗೆ ಉಡುಗೊರೆ ಕೊಟ್ಟೆ
‘ಮೊಲ ಸಾಯಿಸಿದೆಯಾ? ನೀನು ಕಲ್ಲು ಎಸೆಯುತ್ತಾ ಇದ್ದಿದ್ದು ನೋಡಿದೆವು. ಮೊಟ್ಟೆ ಹಾಗೇ ಇಟ್ಟುಕೊಳ್ಳತೇವೆ. ನೀನು ಸುಮ್ಮನೆ ಕಷ್ಟ ತಗೊಂಡೆ.’
‘ನಿಮ್ಮ ಅಂಗಿ ಒಳಗೆ ಇಟ್ಟುಕೊಂಡರೆ ಎದೆಯ ಶಾಖಕ್ಕೆ ಮರಿ ಆಗತವೆ. ಹೊರಗೇ ಇರಲಿ.’
‘ನೀನಿನ್ನೂ ಅದೇ ಥರ ಇದೀಯ ಲುಕಾಸ್ ಲುಕಾಟೆರೋ. ಎಷ್ಟು ಮುದ್ದು ಮುದ್ದು ಮಾತು ಆಡುತ್ತೀಯ. ನಾವು ಅಷ್ಟು ಬಿಸಿಯೇರಿದೇವೆ ಅನ್ನುವ ಹಾಗೆ.’
‘ನಿಮ್ಮ ವಿಚಾರ ಅದೇನೋ ನನಗೆ ಗೊತ್ತಿಲ್ಲ. ಇಲ್ಲಿ ಹೊರಗೆ ಸೆಖೆ, ಹಬೆ ಜಾಸ್ತಿ
ಇದೆ.’
ಏನಾದರೂ ಸರಿ, ಅವರು ಜಾಗ ಖಾಲಿಮಾಡುವುದು ಬೇಕಾಗಿತ್ತು ನನಗೆ. ಅವರನ್ನ ಮನೆಯಿಂದ ಹೊರಗೆ ದಬ್ಬಬೇಕು, ಅವರು ಮತ್ತೆ ಈ ಕಡೆ ಬರಬಾರದು, ಹಾಗೆ ಏನಾದರೂ ಮಾಡಬೇಕು ಅಂತ ಯೋಚನೆ ಮಾಡತ ಇದ್ದೆ. ಏನೂ ಹೊಳೆಯಲಿಲ್ಲ.
ಅವರು ನನ್ನನ್ನ ಜನವರಿ ತಿಂಗಳಿಂದ, ಅನಾಕ್ಲೆಟೋ ಮೊರೋನೆಸ್ ಮಾಯವಾದಾಗಿನಿಂದ, ಹುಡುಕುತ್ತಾ ಇದಾರೆ ಅನ್ನುವುದು ನನಗೆ ಗೊತ್ತಿತ್ತು. ಅಮುಲಾ ಧರ್ಮಸಭೆಯ ಹೆಂಗಸರು ನನ್ನ ಹುಡುಕುತಾ ಇದ್ದಾರೆ ಅಂತ ಒಬ್ಬರಲ್ಲ, ಇಬ್ಬರಲ್ಲ ಎಷ್ಟೋ ಜನ ಹೇಳಿದ್ದರು. ಅನಾಕ್ಲೆಟೋ ಮೊರೊನೆಸ್ ಬಗ್ಗೆ ಅವರಿಗಲ್ಲದೆ ಬೇರೆ ಯಾರಿಗೂ ಚಿಂತೆ, ಆಸಕ್ತಿ ಇರುವುದಕ್ಕೆ ಕಾರಣವೇ ಇರಲಿಲ್ಲ.
ಈಗ ನಮ್ಮ ಮನೆಗೆ ಬಂದಿದ್ದಾರೆ.
ಸಾಯಂಕಾಲ ಆಗಿ ಕತ್ತಲಿಳಿಯುವ ತನಕ ಅವರ ಜೊತೆ ಮಾತಾಡತಾ ಇರಬಹುದು, ಇಲ್ಲಾ ಕೆಲಸಕ್ಕೆ ಬಾರದ ವಿಚಾರ ಹೇಳಿ ಕಾಲ ಕಳೆಯಬಹುದು. ಕತ್ತಲಾದರೆ ಅವರು ಹೋಗಲೇಬೇಕು. ನನ್ನ ಮನೆಯಲ್ಲಿ ಉಳಿಯುವ ಧೈರ್ಯ ಅವರಿಗಿಲ್ಲ.
ಬೇಗ ಕೆಲಸ ಮುಗಿಸಿ ಅಮುಲಾಕ್ಕೆ ವಾಪಸ್ಸು ಹೋಗಬೇಕು ಅಂತ ಪೋನ್ಸಿಯಾನೋನ ಮಗಳು ಹೇಳಿದಾಗ ನನಗೆ ಹಾಗೆ ಅನ್ನಿಸಿತ್ತು. ಆವಾಗ ನಾನು ಏನು ಮಾಡಿದೆ ಅಂದರೆ ಅದಕ್ಕೇನಂತೆ, ಏನೂ ಚಿಂತೆ ಬೇಕಾಗಿಲ್ಲ, ಖಂಡಿತ ಆಗಬಹುದು, ಇಲ್ಲೇ ಉಳಿಯುವುದಾದರೂ ಬೇಕಾದಷ್ಟು ಜಾಗ ಇದೆ, ಎಲ್ಲರಿಗೂ ಚಾಪೆ ಕೂಡ ಇದೆ ಅಂದೆ. ಅಯ್ಯೋ ಅಂಥ ಯೋಚನೆಯೇ ಇಲ್ಲ, ನನ್ನ ಮನೆಯಲ್ಲಿ, ಅದೂ ನೀನು ಕೂಡ ಇರುವಾಗ, ನಾವೆಲ್ಲ ರಾತ್ರಿ ಕಳೆದೆವು ಅಂದರೆ ಜನ ಏನನ್ನುತ್ತಾರೆ ಅಂತ ಎಲ್ಲರೂ ಒಟ್ಟಿಗೆ ಅಂದರು. ಅಂಥ ಯೋಚನೆ ಕೂಡ ಇಲ್ಲ ಅಂದರು.
ಹಾಗಾದರೆ ರಾತ್ರಿ ಆಗುವ ತನಕ ಮಾತಾಡಿಸುತ್ತಾ ಇರುವುದು, ಅವರ ತಲೆಯಲ್ಲಿ ಗುಂಯ್ಗುಟ್ಟುತಾ ಇರುವ ವಿಷಯ ಕೈ ಬಿಡುವ ಹಾಗೆ ಮಾಡುವುದು, ಅದೇ ಸರಿ. ಅವರಲ್ಲಿ ಒಬ್ಬಳನ್ನ ಕೇಳಿದೆ:
‘ನಿನ್ನ ಗಂಡ ಏನನ್ನುತಾನೆ?’
‘ನನಗೆ ಗಂಡ ಇಲ್ಲ, ಲುಕಾಸ್. ನಿನಗೆ ಜ್ಞಾಪಕ ಇಲ್ಲವಾ, ನಾನು ನಿನ್ನ ಗರ್ಲ್ ಫ್ರೆಂಡು. ಕಾದೆ, ಕಾದೆ, ಕಾಯುತ್ತಾ ಇದ್ದೆ. ಆಮೇಲೆ ಗೊತ್ತಾಯಿತು, ನಿನಗೆ ಮದುವೆ ಆಯಿತು ಅಂತ. ಅಷ್ಟು ಹೊತ್ತಿಗೆ ನಾನು ಯಾರಿಗೂ ಬೇಡದವಳಾಗಿದ್ದೆ.’
‘ನನ್ನ ಕತೆ ಇನ್ನೇನು? ಏನಾಯಿತು ಅಂದರೆ ನಾನು ಯಾವ ಯಾವುದೋ ಕೆಲಸಗಳಲ್ಲಿ ಮುಳುಗಿಬಿಟ್ಟೆ, ಈಗೇನು ತೀರ ತಡ ಆಗಿಲ್ಲ ಬಿಡು.’
‘ನಿನಗೆ ಮದುವೆ ಆಗಿದೆ, ಲುಕಾಸ್. ಅಂತಿಂಥವಳಲ್ಲ, ಸಾನ್ತೋ ನಿನೋನ ಮಗಳ ಜೊತೆ ಮದುವೆ ಆಗಿದೆ. ಸುಮ್ಮನೆ ನನ್ನ ಮನಸ್ಸು ಯಾಕೆ ಕೆಡಿಸುತ್ತೀ? ನಾನು ನಿನ್ನ ಮರೆತ ಹಾಗೇ ಆಗಿದೆ.’
‘ನಾನು ಮರೆತಿಲ್ಲ. ನಿನ್ನ ಹೆಸರೇನು ಹೇಳು.’
‘ನೀವೆಸ್, ಈಗಲೂ ಅದೇ ನನ್ನ ಹೆಸರು. ನೀವೆಸ್ ಗಾರ್ಸಿಯ, ಸುಮ್ಮನೆ ನನ್ನ ಅಳಿಸಬೇಡ, ಲುಕಾಸ್, ನೀನು ಎಷ್ಟು ಸಿಹಿ ಮಾತು ಆಡುತಿದ್ದೆ, ಮಾತುಕೊಡುತಿದ್ದೆ ಜ್ಞಾಪಿಸಿಕೊಂಡರೆ ಹುಚ್ಚು ಹಿಡಿಯುವ ಹಾಗೆ ಆಗತದೆ.
‘ನೀವೆಸ್…ನೀವೆಸ್, ಅಯ್ಯೋ, ನಿನ್ನ ಜ್ಞಾಪಕ ಇದೆ. ನಿನ್ನ ಯಾರಾದರೂ ಮರೆಯುವುದಕ್ಕೆ ಸಾಧ್ಯವಾ? ನಿನ್ನ ಮೈ ಚರ್ಮ ಎಷ್ಟು ನಯವಾಗಿತ್ತು. ಜ್ಞಾಪಕ ಇದೆ. ನೀನು ಇನ್ನೂ ನನ್ನ ತೋಳಿನಲ್ಲಿ ಇದೀಯ ಅನ್ನಿಸತ್ತೆ. ನಯವಾಗಿ, ಮೃದುವಾಗಿ. ನನ್ನ ನೋಡುವುದಕ್ಕೆ ಬಂದಾಗ ನೀನು ಹಾಕಿದ್ದ ಬಟ್ಟೆಯ ಪರಿಮಳ ಜ್ಞಾಪಕ ಇದೆ. ಕರ್ಪೂರದ ವಾಸನೆ ಬರತಾ ಇತ್ತು. ನನ್ನ ಬಾಚಿ ತಬ್ಬುತ್ತಾ ಇದ್ದೆ. ಎಷ್ಟು ಬಲವಾಗಿ ಒತ್ತಿಕೊಳ್ಳುತ್ತ ಇದ್ದೆ ಅಂದರೆ ನನ್ನ ಮೂಳೆ ಕೂಡ ನೋಯತಿದ್ದವು. ಜ್ಞಾಪಕ ಇದೆ.’
‘ಇಂಥ ಮಾತಾಡಬೇಡ, ಲುಕಾಸ್. ನಿನ್ನೆ ತಾನೇ ಪಾಪ ನಿವೇದನೆ ಮಾಡಿಕೊಂಡೆ. ಈಗ ನನ್ನ ಮನಸಿನಲ್ಲಿ ಕೆಟ್ಟ ಯೋಚನೆ ಹುಟ್ಟಿಸತಾ ಇದೀಯ. ನನ್ನ ಮೇಲೆ ಪಾಪಗಳ ರಾಶಿ ಸುರಿಯುತ್ತಾ ಇದ್ದೀಯ.
‘ನಿನ್ನ ಮೊಳಕಾಲಿನ ಹಿಂದೆ ಮುತ್ತು ಕೊಡತಾ ಇದ್ದೆ. ಅಲ್ಲಿಗೆ ಮುತ್ತು ಕೊಡಬೇಡ, ಕಚಗುಳಿ ಆಗತ್ತೆ ಅನ್ನುತಿದ್ದೆ. ಈಗಲೂ ನಿನ್ನ ಮೊಳಕಾಲಿನ ಹಿಂದೆ ಗುಳಿ ಬೀಳುತ್ತವಾ?’
‘ಸಾಕು ನಿಲ್ಲಿಸು, ಲುಕಾಸ್, ನೀನು ನನಗೆ ಮಾಡಿದ ಅನ್ಯಾಯವನ್ನ ದೇವರು ಕ್ಷಮಿಸಲ್ಲ. ತಕ್ಕದ್ದು ಅನುಭವಿಸುತ್ತೀ’
‘ನಿನಗೆ ನಾನೇನಾದರೂ ಅನ್ಯಾಯ ಮಾಡಿದೆನಾ? ಕೆಟ್ಟದ್ದು ಮಾಡಿದೆನಾ?’
‘ಅದನ್ನ ತೆಗೆಸಬೇಕಾಯಿತು. ಇಲ್ಲಿ ಎಲ್ಲಾರ ಎದುರಿಗೂ ಅದನ್ನ ಹೇಳುವ ಹಾಗೆ ಮಾಡಬೇಡ. ನಿನಗೆ ಮಾತ್ರ ಗೊತ್ತಾದರೆ ಸಾಕು. ತೆಗೆಸಿಬಿಟ್ಟೆ, ಮಾಂಸದ ಪಿಂಡ. ಅದರ ಅಪ್ಪ ಲಫಂಗ, ಯಾಕೆ ಬೇಕು ನನಗೆ ಅದು?’
‘ಓ, ಹಾಗಾ! ನನಗೆ ಗೊತ್ತಿರಲಿಲ್ಲ. ಇನ್ನೂ ಸ್ವಲ್ಪ ಮಿರ್ಟಲ್ ನೀರು ಬೇಕಾ ನಿಮಗೆ? ಇಗೋ ಈಗ ತಂದುಬಿಟ್ಟೆ, ಒಂದೇ ನಿಮಿಷ’
ಮಿರ್ಟಲ್ ಸೊಪ್ಪು ತರುವುದಕ್ಕೆ ಕೊಟ್ಟಿಗೆಗೆ ಹೋದೆ. ಅವಳ ಮನಸ್ಸು ಸ್ವಲ್ಪ ಸಮಾಧಾನವಾಗಲಿ ಅಂತ ಎಷ್ಟು ಸಾಧ್ಯವೋ ಅಷ್ಟು ತಡಮಾಡಿಕೊಂಡು ಬಂದೆ. ನಾನು ಬಂದಾಗ ಹೊರಟು ಹೋಗಿದ್ದಳು.
‘ಹೋದಳಾ?’
‘ಹೂಂ. ನೀನು ಅವಳನ್ನ ಅಳಿಸಿಬಿಟ್ಟೆ’
‘ಅಯ್ಯೋ, ಸುಮ್ಮನೆ ಹೊತ್ತು ಕಳೆಯುವುದಕ್ಕೆ ಅವಳ ಹತ್ತಿರ ಮಾತಾಡಿದೆ ಅಷ್ಟೆ. ಈ ಸಾರಿ ಮಳೆ ತಡವಾಯಿತು, ಅಲ್ಲವಾ? ಅಮುಲಾದಲ್ಲಿ ಆಗಲೇ ಮಳೆ ಆಗಿರಬೇಕು, ಅಲ್ಲಾ?’
‘ಹೂಂ, ನಿನ್ನೆಯಲ್ಲ, ಮೊನ್ನೆ, ಜೋರು ಮಳೆ ಬಂತು.’
‘ಪುಣ್ಯವಂತರು ಇರುವ ಊರು. ಮಳೆ ಬಂದು ಜನ ನೆಮ್ಮದಿಯಾಗಿರತಾರೆ. ಇಲ್ಲಿ ಮಳೆ ಇರಲಿ, ಮೋಡ ಕೂಡ ಸುಳಿದಿಲ್ಲ. ಅಲ್ಲಿ ಇನ್ನೂ ರೊಗಾಸಿಯಾನೋ ಮೇಯರ್ ಆಗೇ ಇದ್ದಾನಾ?’
‘ಹೂಂ. ಹೌದು.’
‘ರೊಗಾಸಿಯಾನೋ ಒಳ್ಳೆಯ ಮನುಷ್ಯ’
‘ಅಲ್ಲ. ದುಷ್ಟ’
‘ಇರಬಹುದೇನೋ. ಎಡೆಲ್ಮಿರೋ ವಿಷಯ ಏನು? ಅವನ ಔಷಧದ ಅಂಗಡಿ ಇನ್ನೂ ಬೀಗ ಹಾಕಿಕೊಂಡೇ ಇದೆಯಾ?’
‘ಎಡೆಲ್ ಮಿರೋ ಸತ್ತುಹೋದ. ಹೋಗಿದ್ದೇ ಒಳ್ಳೆಯದಾಯಿತು. ಸತ್ತವರ ಬಗ್ಗೆ ಹಾಗನ್ನಬಾರದು, ಆದರೂ. ಅವನು ಇನ್ನೊಬ್ಬ ದುಷ್ಟ. ನಿನೋ ಅನಾಕ್ಷೆಟೋನ ಹೆಸರಿಗೆ ಮಸಿ ಬಳಿದವರಲ್ಲಿ ಅವನೂ ಒಬ್ಬ. ಜನಗಳನ್ನ ಮೋಸಮಾಡತಿದ್ದ, ಮಾಟ ಮಾಡತಿದ್ದ, ದುಡ್ಡು ಕೀಳುತಿದ್ದ ಅಂತ ಅನಾಕೆಟೋ ಬಗೆಗೆ ಏನೇನೋ ಅಂದ. ಬೈದುಕೊಂಡು ತಿರುಗಾಡುತಿದ್ದ. ಜನ ಅವನ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ. ದೇವರು ಶಿಕ್ಷೆ ಕೊಟ್ಟ. ಹುಚ್ಚು ನಾಯಿ ಕಚ್ಚಿ, ನಾಯಿ ಥರ ಊಳಿಡತಾ ಸತ್ತ.’
‘ನರಕಕ್ಕೆ ಹೋಗಿರುವುದು ಅವನು.’
‘ಸೈತಾನ ಅವನ ಮೇಲೆ ಸೌದೆ ಒಟ್ಟಿ ಉರಿ ಹಾಕಿ ಉರಿಸತಾನೇ ಇರಲಿ.’
‘ಜಡ್ಜು ಲಿರಿಯೋ ಲೋಪೆಝ್ಗೂ ಹಾಗೇ ಆಗಬೇಕು. ಅವನು ಎಡೆಲ್ಮಿರೋ ಮಾತು ಕೇಳಿ ನಿನೋ ಅನಾಪ್ಲೆಟೋನ ಜೈಲಿಗೆ ಹಾಕಿದ.’
ಈಗ ಅವರೇ ಮಾತಾಡತಾ ಇದ್ದರು. ಅವರು ಮನಸ್ಸಿಗೆ ಬಂದದ್ದೆಲ್ಲಾ ಹೇಳುವುದಕ್ಕೆ ಬಿಟ್ಟೆ. ನನ್ನ ಪಾಡಿಗೆ ನನ್ನ ಬಿಟ್ಟು ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಇದ್ದಕಿದ್ದ ಹಾಗೆ ಕೇಳಿಬಿಟ್ಟರು:
‘ನೀನು ನಮ್ಮ ಜೊತೆ ಬರುತ್ತೀಯ, ಅಲ್ಲವಾ?’
‘ಎಲ್ಲಿಗೆ?’
‘ಅಮುಲಾಕ್ಕೆ. ಅದಕ್ಕೇ ನಾವು ಬಂದಿದ್ದು, ನಿನ್ನ ವಾಪಸ್ಸು ಕರಕೊಂಡು ಹೋಗುವುದಕ್ಕೆ’
ಒಂದು ಕ್ಷಣ ನನಗೆ ಕೊಟ್ಟಿಗೆಗೆ ಹೋಗಬೇಕು, ಅಲ್ಲಿಂದ ಹೋಗಿ ಬೆಟ್ಟ ಹತ್ತಿ ತಲೆ ತಪ್ಪಿಸಿಕೊಳ್ಳಬೇಕು ಅನ್ನಿಸಿತ್ತು. ದರಿದ್ರ ಮುದುಕಿಯರು!
‘ಅಮುಲಾಕ್ಕೆ ಬಂದು ನಾನು ಕಡಿದು ಕಟ್ಟೆ ಹಾಕುವುದು ಏನಿದೆ?’
‘ನಮ್ಮ ಜೊತೆಯಲ್ಲಿ ಪ್ರಾರ್ಥನೆ ಮಾಡು. ನಿನೋ ಅನಾಕ್ಲೆಟೋ ಧರ್ಮಸಭೆಯ ಸದಸ್ಯರು ನಾವೆಲ್ಲಾ ಅವನನ್ನು ಸಂತನೆಂದು ಘೋಷಿಸಬೇಕು ಅಂತ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಶುರುಮಾಡಿದ್ದೇವೆ. ನೀನು ಅವನ ಅಳಿಯ. ನೀನು ಬಂದು ಸಾಕ್ಷಿ ಹೇಳಬೇಕು. ಅನಾಕ್ಲೆಟೋ ಪವಾಡಗಳನ್ನ ಮಾಡಿ ಪ್ರಸಿದ್ಧನಾಗುವ ಮೊದಲು ಅವನನ್ನು ತಿಳಿದಿದ್ದವರು ಯಾರಾದರೂ ಬಂದು ಸಾಕ್ಷಿ ಹೇಳಬೇಕು ಅಂತ ಚರ್ಚಿನ ದೊಡ್ಡವರು ಹೇಳಿದ್ದಾರೆ. ನಿನಗಿಂತ ಸರಿಯಾದವರು ಯಾರಿದಾರೆ? ಅವನ ಜೊತೆಯಲ್ಲೇ ಇದ್ದೆ. ಅವನು ಮಾಡಿದ ದಯಾ ಧರ್ಮದ ಕೆಲಸಗಳನ್ನೆಲ್ಲ ನೀನೇ ಹೇಳಬೇಕು. ಅದಕ್ಕೇ ನೀನು ನಮ್ಮ ಈ ಕೆಲಸದಲ್ಲಿ ಕೈ ಜೋಡಿಸು ಅಂತ ಕರೆದುಕೊಂಡು ಹೋಗುವುದಕ್ಕೆ
ಬಂದಿದೇವೆ.’
ಥೂ ಮುದುಕಿಯರಾ! ಮೊದಲೇ ಅನ್ನಬೇಕಾಗಿತ್ತು.
‘ಆಗಲ್ಲ. ನಿಮ್ಮ ಜೊತೆ ಬರಲಾರೆ. ಮನೆ ನೋಡಿಕೊಳ್ಳುವುದಕ್ಕೆ ಯಾರೂ ಇಲ್ಲ.’
‘ನಮ್ಮಲ್ಲಿ ಇಬ್ಬರು ಇಲ್ಲಿದ್ದು ಮನೆ ನೋಡಿಕೊಳ್ಳುತ್ತೇವೆ. ನೀನು ಹೀಗನ್ನಬಹುದು ಅನ್ನುವ ಊಹೆ ಇತ್ತು. ಅಲ್ಲದೇ ನಿನ್ನ ಹೆಂಡತಿ ಇಲ್ಲೇ ಇದಾಳೆ.’
‘ಅವಳಿಲ್ಲ. ಹೋದಳು. ಆಚೆಗೆ ಹಾಕಿದೆ.’
‘ಅದು ಹೇಗೆ ಲುಕಾಸ್? ಪಾಪದ ಹುಡುಗಿ. ಎಷ್ಟು ಕಷ್ಟಪಡುತ್ತಾಳೋ. ಒಳ್ಳೆಯವಳು. ಎಳೆಯ ಪ್ರಾಯದವಳು, ಲಕ್ಷಣವಾಗಿದ್ದಳು. ಎಲ್ಲಿಗೆ ಕಳಿಸಿದೆ ಅವಳನ್ನ ಲುಕಾಸ್? ಕೊನೇ ಪಕ್ಷ ತಪ್ಪು ಮಾಡಿ ಪಶ್ಚಾತ್ತಾಪ ಪಡುವ ಹೆಂಗಸರ ಕಾನ್ವೆಂಟಿಗಾದರೂ ಕಳಿಸಬೇಕಾಗಿತ್ತು.’
‘ಎಲ್ಲಿಗೂ ಕಳಿಸಲಿಲ್ಲ. ಮನೆಯಿಂದ ಆಚೆಗೆ ದಬ್ಬಿದೆ. ಅವಳು ಪಶ್ಚಾತ್ತಾಪ ಪಡುವ ಹೆಂಗಸರ ಜೊತೆಯಲ್ಲಿ ಇಲ್ಲ ಅನ್ನುವುದು ಚೆನ್ನಾಗಿ ಗೊತ್ತು. ಕುಡಿಯುವುದು, ಕುಣಿಯುವುದು ಅವಳಿಗೆ ಇಷ್ಟ. ಅದೇ ಕೆಲಸ ಮಾಡಿಕೊಂಡು ಪ್ಯಾಂಟು ಬಿಚ್ಚಿಕೊಂಡು ಇರಬೇಕು ಎಲ್ಲೋ.’
‘ನಿನ್ನ ಮಾತು ನಂಬಲ್ಲ, ಲುಕಾಸ್, ಬಿಲ್ಕುಲ್ ನಂಬಲ್ಲ. ಇದೇ ಮನೆಯಲ್ಲೇ ಎಲ್ಲೋ ಯಾವುದೋ ರೂಮಿನಲ್ಲಿ ಕೂತು ಪ್ರಾರ್ಥನೆ ಹೇಳತಾ ಇರಬಹುದು. ನೀನಂತೂ ಸುಳ್ಳ, ಸುಳ್ಳು ಸಾಕ್ಷಿ ಹೇಳುವವನು. ಜ್ಞಾಪಕ ಇದೆಯಾ, ಹೆರ್ಮೆಲಿಂಡೋನ ಹೆಣ್ಣು ಮಕ್ಕಳು ಬೀದಿಗೆ ಹೆಜ್ಜೆ ಇಟ್ಟ ತಕ್ಷಣ ಗಂಡಸರು ಸಿಳ್ಳೆ ಹಾಕತಾ ಇದ್ದರು, ಹುಡುಗಿಯರು ಪಾಪ ಊರು ಬಿಟ್ಟು ಎಲ್ ಗುರುಲೋಗೆ ಹೋಗಬೇಕಾಯಿತು. ಹಾಗೆ ನೀನು ಏನೇನೋ ಸುದ್ದಿ ಹಬ್ಬಿಸಿದ್ದೆ. ನಿನ್ನ ಮಾತು ಯಾರೂ ನಂಬಲ್ಲ, ಲುಕಾಸ್.’
‘ಹಾಗಾದರೆ ನಾನು ಅಮುಲಾಕ್ಕೆ ಯಾಕೆ ಬರಬೇಕಾಗಿಲ್ಲ.’
‘ಮೊದಲು ಪಾಪ ನಿವೇದನೆ ಮಾಡಿಕೋ. ಆಮೇಲೆ ಎಲ್ಲಾ ಸರಿ ಹೋಗತದೆ. ನೀನು ಕೊನೆಯ ಸಾರಿ ಪಾಪ ನಿವೇದನೆ ಮಾಡಿಕೊಂಡದ್ದು ಯಾವಾಗ?’
‘ಹ್ವಾ.. ಹದಿನೈದು ವರ್ಷ ಆಯಿತು. ಕ್ರಿಸ್ಟೆರೋ ಸೈನಿಕರು (ಕ್ರಿಸ್ಟೆರೋ ಯುದ್ಧ ಅಥವಾ ಕ್ರಿಸ್ಟೆರೋ ದಂಗೆ ೧೯೨೬-೨೯ರ ನಡುವೆ ಮಧ್ಯ ಮತ್ತು ಪಶ್ಚಿಮ ಮೆಕ್ಸಿಕೋ ಪ್ರಾಂತಗಳಲ್ಲಿ ನಡೆಯಿತು. ಕ್ಯಾತೊಲಿಕ್ ವಿರೋಧಿ ಮತ್ತು ಚರ್ಚಿನ ಅಧಿಕಾರಿಗಳ ವಿರೋಧಿಯಾದ ಮೆಕ್ಸಿಕನ್ ಸರ್ಕಾರದ ವಿರುದ್ಧ ನಡೆದ ಹೋರಾಟ
ಇದು.) ನನ್ನ ಶೂಟ್ ಮಾಡುವುದರಲ್ಲಿದ್ದರು. ನನ್ನ ಬೆನ್ನಿಗೆ ಬಂದೂಕು ಒತ್ತಿ ಹಿಡಿದು ಪಾದ್ರಿಯ ಮುಂದೆ ಮೊಳಕಾಲೂರಿ ಕೂರಿಸಿದರು. ನಾನು ಮಾಡದೆ ಇರುವ ಕೆಲಸಗಳನ್ನೆಲ್ಲ ನನ್ನ ಬಾಯಲ್ಲಿ ಹೇಳಿಸಿ ನಿವೇದನೆ ಮಾಡಿಸಿದರು. ನಾನು ಮುಂದೆ ಯಾವತ್ತೂ ಮಾಡುವ ಪಾಪಗಳನ್ನು ಕೂಡ ಹೇಳಿ ಒಪ್ಪಿಕೊಂಡಿದೇನೆ.’
‘ನೀನು ಸಾನ್ತೋ ನಿನೋ ಅನಾಲೆಕ್ಟೋನ ಅಳಿಯ ಅಲ್ಲದಿದ್ದರೆ ನಿನ್ನ ಏನಾದರೂ ಕೇಳುವುದಿರಲಿ, ನಿನ್ನ ಹುಡುಕಿಕೊಂಡು ಕೂಡ ಬರುತ್ತಾ ಇರಲಿಲ್ಲ. ನೀನು ದೆವ್ವದ ಇನ್ನೊಂದು ರೂಪ, ಲುಕಾಸ್’
‘ನಾನೇನು ಸುಮ್ಮಸುಮ್ಮನೆ ಅನಾಕ್ಲೆಟೋ ಮರೋನೆಸ್ನ ಕೆಲಸದವನಾಗಿದ್ದೆನಾ? ಅವನಂತೂ ಸೈತಾನನ ಇನ್ನೊಂದು ಅವತಾರ.’
‘ದೇವರಿಗೆ ಸಿಟ್ಟು ಬರುವ ಕೆಟ್ಟ ಮಾತಾಡಬಾರದು.
‘ನಿನಗೆ ಅವನು ಗೊತ್ತಿಲ್ಲ, ಅಷ್ಟೇ.’
‘ಅವನು ಸಂತ ಅಂತ ಗೊತ್ತು.’
‘ಆಶೀರ್ವಾದ ಮಾಡುವ ಶಕ್ತಿ ಇಲ್ಲ, ಸಂತರ ವ್ಯಾಪಾರ ಮಾಡತಿದ್ದ ಅಂತ ಗೊತ್ತಿಲ್ಲ.’
‘ಏನಂದೆ?’
‘ಮುಂಚೆ ಅವನು ಸಂತೆಗೆ, ಜಾತ್ರೆಗೆ ಹೋಗಿ, ಚರ್ಚಿನ ಬಾಗಿಲಲ್ಲಿ ಕೂತು ಸಂತರ ಚಿತ್ರಗಳನ್ನ ಮಾರಾಟಮಾಡತಿದ್ದ. ಚಿತ್ರಗಳ ಹೊರೆ ನಾನು ಹೊತ್ತುಕೊಂಡು ಹೋಗತಿದ್ದೆ.
‘ಊರಿಂದ ಊರಿಗೆ ಇಬ್ಬರೂ ಹೋಗತಾ ಇದ್ದೆವು. ಮುಂದೆ ಅವನು, ಹಿಂದೆ ನಾನು. ಸಾನ್ ಪಾನ್ಟಿಯಾನ್, ಸಾನ್ ಆಮ್ಬ್ರೋಸಿಯೋ, ಸಾನಸ್ ಪಾಸ್ಕಲ್ ಹೀಗೆ ಎಲ್ಲಾ ಸಂತರ ಪ್ರಾರ್ಥನೆ ಪುಸ್ತಕಗಳನ್ನ ಹೊತ್ತುಕೊಂಡು ಹೋಗತಾ ಇದ್ದೆ. ಕೊನೇ ಪಕ್ಷ ಮೂವತ್ತು ಪೌಂಡು ತೂಕ ಇರುತಿತ್ತು.
‘ಒಂದು ದಿನ ಯಾರೋ ಯಾತ್ರಾರ್ಥಿಗಳ ಗುಂಪು ಕಾಣಿಸಿತು. ಅನಾಕ್ಲೆಟೋ ತಟ್ಟಂತ ಇರುವೆ ಗೂಡಿನ ಹತ್ತಿರ ಕೂತು ನಾಲಗೆ ಕಡಿದುಕೊಂಡು ನೆಕ್ಕಿದರೆ ಇರುವೆ ಕಚ್ಚುವುದೇ ಇಲ್ಲ ಅನ್ನುವುದನ್ನು ತೋರಿಸಿದ. ಆವಾಗ ಯಾತ್ರಾರ್ಥಿಗಳು ನಮ್ಮ ಪಕ್ಕದಲ್ಲೇ ಹೋಗತಾ ಇದ್ದರು. ಅವನನ್ನ ನೋಡಿದರು. ಅಲ್ಲಾ, ಇರುವೆ ಗೂಡನ್ನು ನೆಕ್ಕಿದರೂ ಅದು ಹೇಗೆ ಇರುವೆ ಕಚ್ಚಲ್ಲ ಅಂತ ಕೇಳಿದರು.
‘ಆಗ ಅವನು ಕೈ ಕಟ್ಟಿ ನಿಂತುಕೊಂಡು ‘ಈಗ ತಾನೇ ರೋಮ್ನಿಂದ ಬಂದೆ, ಅಲ್ಲಿಂದ ಸಂದೇಶ ತಂದಿದೇನೆ, ಏಸುವನ್ನು ಶಿಲುಬೆಗೆ ಏರಿಸಿದ್ದರಲ್ಲ ಆ ಮೂಲ ಶಿಲುಬೆಯ ಚಕ್ಕೆ ತಂದಿದೇನೆ,’ ಅಂದ.
‘ಯಾತ್ರಾರ್ಥಿಗಳೆಲ್ಲ ಅವನನ್ನು ಮೇನೆಯಲ್ಲಿ ಕೂರಿಸಿ ಅಮುಲಾವರೆಗೂ ಹೊತ್ತುಕೊಂಡು ಹೋದರು. ಅಲ್ಲಿಗೆ ಹೋದ ತಕ್ಷಣ ಅವನ ಮೈಮೇಲೆ ದೇವರು ಬಂದಿದ್ದಾನೆ ಅಂತ ಹೇಳಿ ಎಲ್ಲಾರೂ ಅವನ ಕಾಲಿಗೆ ಬಿದ್ದರು. ಪವಾಡಗಳನ್ನ ತೋರಿಸು
ಅಂತ ಕೇಳಿಕೊಂಡರು.
‘ಅಲ್ಲಿಂದ ಶುರು. ಅವನು ಜನಗಳನ್ನ, ಯಾತ್ರಾರ್ಥಿಗಳನ್ನ, ಅವನನ್ನು ಕಾಣಲು ಬಂದ ಭಕ್ತರನ್ನ ಪೆದ್ದು ಮಾಡಿ ಮೋಸಮಾಡುವುದನ್ನ ಬಾಯಿ ಬಿಟ್ಟುಕೊಂಡು ನೋಡುತ್ತಾ ಇದ್ದೆ.’
‘ಬಾಯಿಗೆ ಬಂದದ್ದು ಬೊಗಳುತ್ತೀಯ. ನೀನು ಪಾಖಂಡಿ. ಅವನ ಕಣ್ಣಿಗೆ ಬೀಳುವುದಕ್ಕೆ ಮೊದಲು ನೀನು ಏನಾಗಿದ್ದೆ? ಬರೀ ಹಂದಿ ಸಾಕಿಕೊಂಡಿದ್ದೆ. ಅವನು ನಿನ್ನ ಸಾವುಕಾರನ್ನ ಮಾಡಿದ. ನಿನ್ನ ಹತ್ತಿರ ಇರುವುದೆಲ್ಲ ಅವನು ಕೊಟ್ಟದ್ದೇ. ಆದರೂ ಅವನ ಬಗ್ಗೆ ಕೆಟ್ಟ ಮಾತು ಆಡುತ್ತೀ. ಮಾಡಿದ ಉಪಕಾರ ನೆನೆಯದೆ ಇರುವ ದುಷ್ಟ ನೀನು.’
‘ನನ್ನ ಹಸಿವು ನೀಗುವ ಹಾಗೆ ಮಾಡಿದ. ಅದಕ್ಕೆ ಅವನಿಗೆ ದೊಡ್ಡ ನಮಸ್ಕಾರ ಹಾಕತೇನೆ. ಆದರೆ ಅವನು ನಿಜವಾಗಲೂ ದೆವ್ವ, ಸೈತಾನ ಅನ್ನುವುದು ಮಾತ್ರ ಸತ್ಯ. ಅವನು ಈಗ ಎಲ್ಲೇ ಇದ್ದರೂ ದುಷ್ಟ ದೆವ್ವವಾಗಿಯೇ ಇರತಾನೆ.’
‘ಸತ್ತು ಸ್ವರ್ಗದಲ್ಲಿದಾನೆ, ಪುಣ್ಯಾತ್ಮ, ದೇವತೆಗಳ ಜೊತೆಯಲ್ಲಿ, ನಿನಗೆ ಹೊಟ್ಟೆ ಉರಿಯಾದರೂ ಇದು ಸತ್ಯ’
‘ಅವನು ಜೈಲಿನಲ್ಲಿದ್ದ ಅನ್ನುವುದು ನನಗೆ ಗೊತ್ತು.’
‘ಅದು ಬಹಾಳ ಹಿಂದೆ. ಅಲ್ಲಿಂದ ತಪ್ಪಿಸಿಕೊಂಡ. ಒಂದಿಷ್ಟೂ ಸುಳಿವು ಸಿಗದ ಹಾಗೆ ಮಾಯವಾದ. ಈಗ ಅವನ ದೇಹ, ಆತ್ಮ ಎಲ್ಲಾ ಸ್ವರ್ಗ ಸೇರಿವೆ. ಅಲ್ಲಿಂದ ನಮ್ಮನ್ನೆಲ್ಲ ಹರಸುತ್ತಾನೆ. ಹುಡುಗಿಯರೇ, ಮೊಳಕಾಲೂರಿ ಕೂತುಕೊಳ್ಳಿ, ಪ್ರಾರ್ಥನೆ ಮಾಡಿ.’
ಮುದುಕಿಯರೆಲ್ಲ ಮೊಳಕಾಲೂರಿ ಕೂತರು. ಎದೆಯ ಮೇಲೆ ಇಳಿಬಿಟ್ಟುಕೊಂಡಿದ್ದ ಬಟ್ಟೆಯ ಮೇಲೆ ಇದ್ದ ಅನಾಕ್ಲೆಟೋ ಮೊರೋನೆಸ್ ಕಸೂತಿ ಚಿತ್ರಕ್ಕೆ ಮುತ್ತಿಟ್ಟರು. ಮಧ್ಯಾಹ್ನ ಮೂರು ಗಂಟೆಯಾಗಿತ್ತು.
ಏನೋ ನೆಪ ಹೇಳಿ ಅಡುಗೆ ಮನೆಗೆ ಹೋದವನು ಹುರುಳಿಯ ಪಲ್ಯ ಬ್ರೆಡ್ಡು ತಿಂದು ಬಂದೆ. ನಾನು ವಾಪಸ್ಸು ಬಂದಾಗ ಐದು ಜನ ಉಳಿದಿದ್ದರು. ‘ಮಿಕ್ಕವರೆಲ್ಲ ಎಲ್ಲಿ’ ಅಂತ ಕೇಳಿದೆ.
ಮೇಲು ತುಟಿಯ ಮೇಲೆ ಬೆಳೆದಿದ್ದ ಮೀಸೆಯ ನಾಲ್ಕು ಕೂದಲು ಪಕ್ಕಕ್ಕೆ ಸರಿಕೊಂಡು
ಪಾಂಚಾ ಹೇಳಿದಳು:
‘ನಿನ್ನ ಜೊತೆ ವ್ಯವಹಾರ ಬೇಡ ಅಂತ ಹೊರಟು ಹೋದರು.’
‘ಒಳ್ಳೆಯದೇ ಆಯಿತು. ಕತ್ತೆಗಳು ಕಡಿಮೆಯಾದರೆ ಮೇವು ಜಾಸ್ತಿ ಸಿಗುತ್ತದೆ. ನಿಮಗೆ ಇನ್ನೂ ಸ್ವಲ್ಪ ಮಿರ್ಟಲ್ ನೀರು ಬೇಕಾ?’
ಅವರಲ್ಲಿ ಒಬ್ಬಳು, ಫಿಲೊಮೆನಾ, ಇಷ್ಟು ಹೊತ್ತೂ ಸುಮ್ಮನೇ ಇದ್ದವಳು, ‘ಹೆಣ’ ಅನ್ನುವ ಅಡ್ಡಹೆಸರು ಸಂಪಾದಿಸಿಕೊಂಡಿದ್ದವಳು, ನಮ್ಮ ಮನೆಯ ಹೂವಿನ ಕುಂಡದ ಮೇಲೆ ಬಗ್ಗಿ, ಬಾಯಿಗೆ ಬೆರಳು ಹಾಕಿ ನಮ್ಮ ಮನೆಯಲ್ಲಿ ಕುಡಿದಿದ್ದ ಮಿರ್ಟಲ್ ನೀರನ್ನೆಲ್ಲ ವಾಂತಿ ಮಾಡಿದಳು. ಅದರಲ್ಲಿ ಹಂದಿಮಾಂಸದ ಸಣ್ಣ ಚೂರು, ಒಂದಷ್ಟು ಕಾಳು ಕೂಡ ಇದ್ದವು.
‘ನಿಮ್ಮ ಮನೆಯದು ನನಗೆ ಏನೂ ಬೇಡ, ಮಿರ್ಟಲ್ ನೀರು ಕೂಡ. ನೀನು ಪಾಖಂಡಿ, ದುಷ್ಟ, ನಿನ್ನ ಮೊಟ್ಟೇನೂ ತಗೋ, ನಾನು ಹೋಗತೇನೆ’ ಅಂದಳು.
ಮೊಟ್ಟೆಯನ್ನು ಕುರ್ಚಿಯ ಮೇಲಿಟ್ಟಳು.
ಈಗ ನಾವು ನಾಲ್ಕು ಜನ ಮಾತ್ರ ಉಳಿದಿದ್ದೆವು.
‘ನನಗೂ ಕಕ್ಕಬೇಕು ಅನ್ನಿಸತದೆ. ಆದರೆ ಹಾಗೆ ಮಾಡಲ್ಲ. ಏನಾದರೂ ಆಗ, ನಿನ್ನ ಅಮುಲಾಕ್ಕೆ ಕರಕೊಂಡೇ ಹೋಗತೇವೆ. ಸಾಂತೊ ನಿನೋ ಅನಾಕ್ಟೆಲೋ ಮೊರೋನೆಸ್ ಸಂತ ಅಂತ ಸಾಕ್ಷಿ ಹೇಳುವುದಕ್ಕೆ ಇರುವವನು ನೀನೊಬ್ಬನೇ. ಅವನು ನಿನ್ನ ಮನಸ್ಸು ಕರಗುವ ಹಾಗೆ ಮಾಡತಾನೆ. ಚರ್ಚಿನಲ್ಲಿ ಆಗಲೇ ಅವನ ವಿಗ್ರಹ ಮಾಡಿಸಿಟ್ಟಿದೇವೆ. ನೀನು ಬರಲಿಲ್ಲ ಬಂದು ಸಾಕ್ಷಿ ಹೇಳಲಿಲ್ಲ ಅನ್ನುವ ಕಾರಣಕ್ಕೆ ಅದನ್ನು ಬೀದಿಗೆ ಎಸೆಯುವುದು ಅನ್ಯಾಯ,’ ಅಂದಳು ಪಾಂಚಾ.
‘ನೀವು ಬೇರೆ ಯಾರನ್ನ ಬೇಕಾದರೂ ಹುಡುಕಿಕೊಳ್ಳಿ. ನಾನಂತೂ ಈ ವಿಚಾರಕ್ಕೆ ತಲೆ ಹಾಕುವವನಲ್ಲ.’
‘ನೀವು ಅವನ ಮಗ ಇದ್ದ ಹಾಗೆ ಇದ್ದೆ. ಆ ಸಂತನ ಪುಣ್ಯವೆಲ್ಲ ನಿನ್ನ ಪಾಲಿಗೆ ಬಂದಿದೆ. ತಾನು ಅಮರನಾಗಬೇಕು ಅಂತಲೇ ನಿನಗೆ ಮಗಳನ್ನು ಕೊಟ್ಟು ಮದುವೆ
ಮಾಡಿದ.’
‘ನಾನು ಅವನ್ನ ಮದುವೆ ಆಗುವ ಹೊತ್ತಿಗಾಗಲೇ ಅವನ ವಂಶವನ್ನು ಅವಳು ಅಮರ ಮಾಡಿದ್ದಳು.’
‘ಎಂತೆಂಥಾ ಮಾತಾಡತೀಯ, ಲುಕಾಸ್’
‘ನಾನು ಹೇಳಿದ್ದು ನಿಜ. ಅವನು ಮಗಳನ್ನ ನನಗೆ ಕೊಟ್ಟು ಮದುವೆ ಮಾಡುವ ಹೊತ್ತಿಗೆ ಅವಳು ಆಗಲೇ ನಾಲ್ಕು ತಿಂಗಳ ಬಸುರಿ.’
‘ಸಂತನ ಪರಿಮಳವಿತ್ತಲ್ಲವಾ?’
‘ಅಂಟುರೋಗದ ವಾಸನೆ ಇತ್ತು ಅವಳೆದುರಿಗೆ ಯಾರಿದ್ದರೂ ಹೊಟ್ಟೆ ತೋರಿಸತಾ ಇದ್ದಳು. ಒಳಗೆ ಇದ್ದ ಮಗುವಿನ ಕಾರಣದಿಂದ ಹೊಟ್ಟೆ ಕೆಂಪಗೆ ಊದಿತ್ತು. ನಾಚಿಕೆ ಇಲ್ಲದವಳು ಅಂತ ಜನ ನಗತಾ ಇದ್ದರು. ಇಂಥಾವಳು ಅನಾಕ್ಲೆಟೋ ಮೊರೋನೆಸ್ನ
ಮಗಳು.’
‘ನಿನ್ನೊಳಗೆ ದೆವ್ವ ಸೇರಿಕೊಂಡು ಹೀಗೆ ಆಡಿಸತಾ ಇದೆ. ನಿನಗೆ ಒಂದು ತಾಯತ ಕೊಡತೇವೆ. ದೆವ್ವ ನಿನ್ನ ಬಿಟ್ಟು ಓಡಿ ಹೋಗತದೆ.’
‘….ಯಾವನೋ ಒಬ್ಬನ ಜೊತೆ ಹೋದಳು. ಅವನು ಅವಳನ್ನ ಪ್ರೀತಿ ಮಾಡತಿದ್ದನಂತೆ. ‘ನಿನ್ನ ಮಗುವಿನ ತಂದೆ ಆಗುವುದಕ್ಕೆ ಒಪ್ಪತೇನೆ’ ಅಂದನಂತೆ, ಅವಳು ಅವನ ಜೊತೆ
ಹೋದಳಂತೆ.’
‘ಅವಳು ಸಾಮೋ ನಿನೊನ ಮಗಳು. ಹುಡುಗಿ. ನಿನಗೆ ದೊರೆತ ಉಡುಗೊರೆ. ಸಂತನ ಪುಣ್ಯದ ಹಕ್ಕುದಾರಳು ಅವಳು.’
‘ಬರೀ ಬುರುಡೆ!’
‘ಏನಂದೇ!’
‘ಅನಲೆಕ್ಟೋ ಮೊರೋನೆಸ್ನ ಮಗಳ ಹೊಟ್ಟೆಯಲ್ಲಿದ್ದದ್ದು ಅನಲೆಕ್ಟೋ ಮೊರೋನೆಸ್ನ ಮಗು.’
‘ಅವನು ಕೆಟ್ಟವನು ಅಂತ ಆಪಾದಿಸುವುದಕ್ಕೆ ಹೀಗೆ ಕಥೆ ಕಟ್ಟುತಾ ಇದೀಯ. ನೀನಂತೂ ಸುಳ್ಳ’
‘ಹೌದಾ? ಮಿಕ್ಕವರ ಬಗ್ಗೆ ಏನನ್ನುತೀರಿ? ಈ ಸುತ್ತಮುತ್ತ ಅವನು ಯಾವ ಹುಡುಗಿಯನ್ನೂ ಕನ್ಯೆಯಾಗಿ ಉಳಿಸಲಿಲ್ಲ. ನಿದ್ದೆ ಮಾಡತಾ ಇರುವಾಗ ಎದ್ದಿದ್ದು ನೋಡಿಕೊಳ್ಳುವುದಕ್ಕೆ ಕನ್ಯೆ ಬೇಕು ಅನ್ನುತಿದ್ದ.’
‘ಶುದ್ಧವಾದ ಮನಸ್ಸಿನಿಂದ ಹಾಗೆ ಮಾಡುತಿದ್ದ. ನಿದ್ದೆ ಮಾಡುವಾಗ ಪಾಪ ಬಂದು ಮೆತ್ತಿಕೊಳ್ಳದೆ ಇರಲಿ ಅಂತ ತನ್ನ ಆತ್ಮಕ್ಕೆ ಬಾಲಕಿಯರ ಮುಗ್ಧತೆಯ ಕಾವಲು ಇಡುತ್ತಿದ್ದ.’
‘ನಿನ್ನನ್ನ ಯಾವತ್ತೂ ಕರೆದಿಲ್ಲ ಅವನು. ಅದಕ್ಕೇ ಹಾಗನ್ನುತ್ತೀಯ.’
‘ನನ್ನನ್ನ ಕರೆದಿದ್ದ. ಅವನು ನಿದ್ದೆ ಮಾಡುವಾಗ ನಾನು ಕಾವಲಿದ್ದೆ, ಮೆಲ್ಕ್ವಿಯಾಡಿಸ್ ಅನ್ನುವ ಹೆಸರಿನವಳು ಅಂದಳು.
‘ಏನಾಯಿತು ಅವತ್ತು ರಾತ್ರಿ?’
‘ಏನೂ ಇಲ್ಲ. ರಾತ್ರಿ ಒಂದು ಹೊತ್ತಿನಲ್ಲಿ ತುಂಬ ಚಳಿ ಆಗುತದಲ್ಲ ಆಗ ಅವನ ಪವಾಡದಂಥ ತೋಳು ನನ್ನ ಅಪ್ಪಿ ಪವಿತ್ರ ಶಾಖವನ್ನು ನೀಡಿದವು. ಅಷ್ಟೇ. ಇನ್ನನೂ ಇಲ್ಲ.’
‘ನೀನು ಮುದುಕಿ, ಅದಕ್ಕೆ. ಅವನಿಗೆ ಎಳೆಯ ಹುಡುಗಿಯರು ಬೇಕು. ಅಪ್ಪಿಕೊಂಡಾಗ ಅವರ ಮೈಯ ಮೂಳೆ ಕಡಲೆಕಾಯಿ ಸಿಪ್ಪೆಯ ಹಾಗೆ ಸದ್ದು ಮಾಡಿಕೊಂಡು ಮುರಿದು ಹೋಗಬೇಕು. ಅಂಥಾವರು ಬೇಕು ಅವನಿಗೆ.’
‘ನೀನು ದೇವರನ್ನು ನಂಬದ ನಾಸ್ತಿಕ, ಪಾಪಿ, ದುಷ್ಟ’
ಈಗ ಮಾತಾಡಿದ್ದು ಎಲ್ಲಾರಿಗಿಂತ ಹೆಚ್ಚು ವಯಸ್ಸಾಗಿದ್ದವಳು, ಸದಾ ಗೋಳಾಡುವ ‘ತಬ್ಬಲಿ’ ಅನ್ನುವ ಅಡ್ಡಹೆಸರಿನ ಲಾ ಹ್ಯುರೆಫಾನ, ಅವಳ ಕಣ್ಣಲ್ಲಿ ನೀರು ತುಂಬಿತ್ತು, ಕೈ ಅದುರುತಿತ್ತು.
‘ನಾನು ತಬ್ಬಲಿ. ನನ್ನ ತಬ್ಬಲಿತನವನ್ನು ಅವನು ಒಪ್ಪಿಸಿಕೊಂಡ. ಅವನಲ್ಲಿ ನನ್ನ ಅಪ್ಪನನ್ನೂ ಕಂಡೆ, ಅಮ್ಮನನ್ನೂ ಕಂಡೆ. ರಾತ್ರಿಯೆಲ್ಲ ನನ್ನ ದುಃಖ ಕಡೆಮಯಾಗಲಿ ಅಂತ ನೇವರಿಸುತ್ತಾ ಇದ್ದ ಅವನು.’
ಕಣ್ಣೀರಿಟ್ಟಳು.
‘ಹಾಗಾದರೆ ಅಳುವುದಕ್ಕೆ ಕಾರಣವೇ ಇಲ್ಲ.’ ಅಂದೆ.
‘ಅಪ್ಪ ಅಮ್ಮ ಸತ್ತು ಹೋಗಿದಾರೆ. ಈ ವಯಸ್ಸಿನಲ್ಲಿ ತಬ್ಬಲಿಯಾಗಿದ್ದುಕೊಂಡು ಯಾರ ಆಸರೆ ಇಲ್ಲದೆ ಇರುವುದು ಎಷ್ಟು ಕಷ್ಟ. ನಾನು ಕಳೆದ ಒಂದೇ ಒಂದು ಸಂತೋಷದ ರಾತ್ರಿ ಅಂದರೆ ಅನಾಕ್ಲೆಟೋನ ಜೊತೆಯಲ್ಲಿ ಅವನ ಸಮಾಧಾನ ಅನುಭವಿಸುತ್ತ ಕಳೆದದ್ದು. ಈಗ ಅವನ ಬಗ್ಗೆ ಕೆಟ್ಟ ಮಾತು ಆಡುತ್ತೀಯ.
‘ಅವನು ಸಂತ.’
‘ಒಳ್ಳೆಯ ಮನಸ್ಸಿನ ಒಳ್ಳೆಯ ಮನುಷ್ಯ’
‘ಅವನ ಸಂಪತ್ತೆಲ್ಲ ನಿನ್ನದಾಯಿತು. ಅವನ ಒಳ್ಳೆಯ ಕೆಲಸ ನೀನು ಮುಂದುವರೆಸುತ್ತೀಯ ಅಂದುಕೊಂಡಿದ್ದೆವು.’
‘ಎಲ್ಲಾ ದೆವ್ವಗಳಿಂದ ಆರಿಸಿ ಆರಿಸಿ ಇಟ್ಟುಕೊಂಡಿದ್ದ ರಾಶಿ ಕೆಟ್ಟಗುಣ ಮತ್ತೆ ಒಬ್ಬ ಹುಚ್ಚಿ ಮಗಳು, ನಿಮ್ಮಷ್ಟು ಮುದುಕಿ ಅಲ್ಲ, ಆದರೂ ನಿಮ್ಮ ಹಾಗೇ ಹುಚ್ಚಿ, ಇಷ್ಟೇ ಅವನಿಂದ ನನಗೆ ಸಿಕ್ಕಿದ್ದು.’
‘ಕೇಳಬಾರದ ಕೆಟ್ಟ ಮಾತು ಆಡುತ್ತೀಯ. ಏನೇನೋ ಕಥೆ ಕಟ್ಟುತೀಯ.’
ಅಂತ ಹೇಳಿ, ಆಮೇಲೆ ಇಬ್ಬರು ಮುದುಕಿಯರು ಮಾತ್ರ ಉಳಿದಿದ್ದರು. ಮಿಕ್ಕವರೆಲ್ಲ ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಳ್ಳುತ್ತ, ಮಂತ್ರವಾದಿಯನ್ನ ಕರೆದುಕೊಂಡು ಬರುತ್ತೇವೆ ಅನ್ನುತ್ತ ಒಬ್ಬರಾದ ಮೇಲೆ ಒಬ್ಬರು ಹೊರಟು ಹೋಗಿದ್ದರು.
‘ಅನಾಕ್ಲೆಟೋ ಪವಾಡಗಳನ್ನ ಮಾಡುವ ಶಕ್ತಿ ಇದ್ದವನು ಅನ್ನುವುದನ್ನ ಯಾರೂ ಇಲ್ಲ ಅನ್ನುವುದಕ್ಕೆ ಆಗುವುದೇ ಇಲ್ಲ’ ಅಂದಳು, ಅನಾಸಿಯೋನ ಮಗಳು.
‘ಹೆಂಗಸರನ್ನ ಬಸುರಾಗುವ ಹಾಗೆ ಮಾಡುವುದು ಪವಾಡ ಅಲ್ಲ, ಅವನ ತಾಕತ್ತು,
ಅಷ್ಟೇ.’
‘ನನ್ನ ಗಂಡನಿಗೆ ಬಂದಿದ್ದ ಸಿಫಿಲಸ್ ವಾಸಿ ಮಾಡಿದ.’
‘ನಿನಗೆ ಗಂಡ ಇರುವುದೇ ಗೊತ್ತಿರಲಿಲ್ಲ. ನೀನು ಕ್ಷೌರಿಕ ಅನಸ್ಟಾಸಿಯಾನ ಮಗಳಲ್ಲವಾ? ನನಗೆ ತಿಳಿದ ಮಟ್ಟಿಗೆ ಅವನ ಮಗಳು ಒಬ್ಬಂಟಿ.’
‘ನಾನು ಒಂಟಿ. ಆದರೆ ಗಂಡ ಇದಾನೆ. ಮದುವೆ ಆಗದೆ ಇರುವುದೂ ಒಂಟಿಯಾಗಿರುವುದೂ ಎರಡೂ ಬೇರೆ ಬೇರೆ. ಮದುವೆ ಆಗಿದ್ದೇನೆ, ಒಂಟಿಯಾಗಿದೇನೆ.’
‘ನಿನ್ನ ವಯಸ್ಸಲ್ಲಿ ಇಂಥಾ ಕೆಲಸ ಮಾಡತೀಯಲ್ಲಾ, ಮಿಕೇಲಾ.’
‘ಮಾಡಲೇಬೇಕಾಗಿತ್ತು. ಸಭ್ಯ ಶ್ರೀಮತಿಯಾಗಿದ್ದುಕೊಂಡು ನನ್ನ ಬದುಕಿನಲ್ಲಿ ಏನು ಪಡೆದ ಹಾಗಾಗುತಿತ್ತು? ನಾವು ಹೆಂಗಸರು. ನಾವು ಏನು ಪಡೆಯುತ್ತೇವೋ ಅದನ್ನು ಕೊಡುವುದಕ್ಕೇ ಹುಟ್ಟಿದೇವೆ.’
‘ಅನಾಕ್ಲೆಟೋ ಮೊರೋನೆಸ್ ಥರಾನೇ ಮಾತಾಡತಾ ಇದೀಯ.’
‘ನನ್ನ ಲಿವರ್ ಸಮಸ್ಯೆಗಳಿಂದ ಪಾರಾಗುವುದಕ್ಕೆ ಹೀಗೆ ಮಾಡು ಅಂತ ಅವನೇ ಹೇಳಿದ. ಯಾರೋ ಒಬ್ಬರು ಸರಿಹೋಗತಾರೆ ಅನ್ನಿಸಿತು. ಆಯಿತು. ಐವತ್ತು ವರ್ಷವಾದರೂ ಕನ್ಯೆಯಾಗೇ ಇದ್ದರೆ ಅದು ಪಾಪ.’
‘ಈ ಮಾತನ್ನೂ ಅನಾಕ್ಲೆಟೋ ಮೊರೋನೆಸ್ ಹೇಳಿದನಾ?’
‘ಅವನೇ ಹೇಳಿದ್ದು, ಹೌದು. ಆದರೆ, ನಾವು ಬಂದದ್ದು ಬೇರೆ ಕೆಲಸಕ್ಕೆ, ನೀನು ನಮ್ಮ ಜೊತೆ ಬಂದು ಅವನು ಸಂತ ಅಂತ ಸಾಕ್ಷಿ ಹೇಳಬೇಕು.’
‘ನಾನೇ ಯಾಕೆ ಸಂತ ಆಗಬಾರದು?’
‘ನೀನು ಯಾವ ಪವಾಡಾನೂ ಮಾಡಿಲ್ಲ. ಅವನು ನನ್ನ ಗಂಡನ ಕಾಯಿಲೆ ವಾಸಿ ಮಾಡಿದ. ಅದಕ್ಕೆ ನಾನೇ ಸಾಕ್ಷಿ. ನೀನು ಯಾರ ಸಿಫಿಲಸ್ ಕಾಯಿಲೆಯಾದರೂ ವಾಸಿ ಮಾಡಿದೀಯಾ?’
‘ಇಲ್ಲ, ಆ ಕಾಯಿಲೆ ಬಗ್ಗೆ ಕೂಡ ನನಗೇನೂ ಗೊತ್ತಿಲ್ಲ.’
‘ಅದು ಗ್ಯಾಂಗ್ರೀನ್ ಥರಾನೇ. ಅವನ ಮೈಯೆಲ್ಲ ಕೆಂಪಾಯಿತು. ಗುಳ್ಳೆ ಎದ್ದವು. ಅವನಿಗೆ ನಿದ್ದೆ ಬರತಾ ಇರಲಿಲ್ಲ. ನರಕದ ಬಾಗಿಲಿಂದ ನೋಡುತ್ತಿದೇನೋ ಅನ್ನುವ ಹಾಗೆ ಎಲ್ಲಾ ಕೆಂಪಗೆ ಕಾಣತವೆ ಅನ್ನುತಾ ಇದ್ದ. ಮೈಯೆಲ್ಲ ಉರಿ ಎದ್ದು ಮುಖ ಕಿವುಚುತಿದ್ದ. ಅನಾಕ್ಲೆಟೋನ ನೋಡುವುದಕ್ಕೆ ಹೋದೆವು. ಅವನು ವಾಸಿ ಮಾಡಿದ. ಅವನು ಜೊಂಡು ಹುಲ್ಲು ಸುಟ್ಟು ಮೈಗೆ ಹಚ್ಚಿ, ತನ್ನದೇ ಉಗುಳು ಸವರಿದ. ನೋಡ ನೋಡತಾ ಇದ್ದ ಹಾಗೆ ವಾಸಿ ಆಗಿಹೋಯಿತು. ಇದು ಪವಾಡ ಅಲ್ಲವಾ?’
‘ಅವನಿಗೆ ದಡಾರ ಆಗಿತ್ತು ಅಂತ ಕಾಣತ್ತೆ. ನಾನೂ ಮಗು ಆಗಿದ್ದಾಗ ದಡಾರ ಆಗಿತ್ತು. ಅದಕ್ಕೂ ಉಗುಳು ಸವರಿ ವಾಸಿ ಮಾಡಿದ್ದರು.’
‘ಸರಿ, ಸರಿ. ನೀನು ಪಕ್ಕಾ ನಾಸ್ತಿಕ.’
‘ಇರಬಹುದು. ಅನಾಕ್ಲೆಟೋ ನನಗಿಂತ ಪರಮ ನೀಚ ಅನ್ನುವ ಸಮಾಧಾನ ಇದೆ ನನಗೆ.’
‘ಅವನು ನಿನ್ನನ್ನ ಸ್ವಂತ ಮಗನ ಹಾಗೆ ನೋಡಿಕೊಂಡ. ನೀನು ನೋಡಿದರೆ…ಇಲ್ಲ. ಇನ್ನು ನಿನ್ನ ಮಾತು ಕಿವಿಗೆ ಬೀಳಬಾರದು. ನಾನು ಹೊರಟೆ. ನೀನೂ ಬರತೀಯಾ ಪಾಂಚಾ?’
‘ಇಲ್ಲ. ಇನ್ನೂ ಸ್ವಲ್ಪ ಹೊತ್ತು ಇದ್ದು ಒಬ್ಬಳೇ ಕೊನೇ ಯುದ್ಧ ಮಾಡಿ ನೋಡತೇನೆ.’
* * *
‘ನೋಡು ಫ್ರಾನ್ಸಿಸ್ಕಾ, ಎಲ್ಲಾರೂ ಹೋದರು. ನೀನು ಇಲ್ಲೇ ಉಳಿದು ನನ್ನ ಜೊತೆ ಮಲಗುತೀಯ, ಸರೀನಾ?’
‘ಅಯ್ಯೋ ದೇವರೇ, ಜನ ಏನನ್ನುತ್ತಾರೆ? ನಿನ್ನನ್ನ ಒಪ್ಪಿಸುವುದಕ್ಕೆ ಉಳಿದುಕೊಂಡೆ.’
‘ಸರಿ, ನೀನು ನನ್ನ ಒಪ್ಪಿಸು. ನಾನು ನಿನ್ನ ಒಪ್ಪಿಸುತ್ತೇನೆ. ಅಲ್ಲಾ, ನೀನು ಕಳಕೊಳ್ಳುವುದೇನಿದೆ? ನಿನಗೆ ಆಗಲೇ ತುಂಬ ವಯಸಾಗಿದೆ. ನಿನ್ನ ನೋಡಿಕೊಳ್ಳುವವರು, ಆರೈಕೆ ಮಾಡುವವರು ಯಾರೂ ಇಲ್ಲ.’
‘ಜನ ಪಿಸುಮಾತಿನಲ್ಲೇ ಸುದ್ದಿ ಹಬ್ಬಿಸುತ್ತಾರೆ. ಕೆಟ್ಟ ಯೋಚನೆ ಮಾಡತಾರೆ.’
‘ಜನ ಏನು ಬೇಕಾದರೂ ಅಂದುಕೊಳ್ಳಲಿ, ಯಾರು ತಲೆ ಕೆಡಿಸಿಕೊಳ್ಳುತ್ತಾರೆ. ನಿನ್ನ ಹೆಸರು ಹೇಗಿದ್ದರೂ ಪಾಂಚಾ (ಸ್ಪಾನಿಶ್ ಭಾಷೆಯಲ್ಲಿ ಪಾಂಚಾ ಅಂದರೆ ‘ಶಾಂತ’ ಎಂಬ ಅರ್ಥವಿದೆ.) ಅಲ್ಲವಾ?’
‘ಸರಿ, ನಿನ್ನ ಜೊತೆ ಇರತೇನೆ. ಹೊತ್ತು ಹುಟ್ಟುವವರೆಗೆ ಅಷ್ಟೆ, ಮತ್ತೆ ನನ್ನ ಜೊತೆಯಲ್ಲಿ ಅಮುಲಾಕ್ಕೆ ಬರುತ್ತೇನೆ ಅಂತ ನೀನು ಮಾತು ಕೊಡಬೇಕು. ಹಾಗಾದರೆ ನಿನ್ನ ಬೇಡುತ್ತಾ ಕೋರುತ್ತಾ ನಾನು ರಾತ್ರಿಯೆಲ್ಲ ಕಳೆದೆ ಅಂತ ಹೇಳಬಹುದು. ಇಲ್ಲದೆ ಇದ್ದರೆ ನಾನು ಏನು ತಾನೇ ಹೇಳಬಹುದು?’
‘ಆಗಬಹುದು. ಮೊದಲು ನಿನ್ನ ಮೀಸೆ ಕೂದಲು ಕತ್ತರಿಸಿಹಾಕು. ಕತ್ತರಿ ತರತೇನೆ.’
‘ತಮಾಷೆ ಮಾಡತಾ ಇದೀಯ ಲುಕಾಸ್. ಯಾವಾಗಲೂ ಬೇರೆಯವರ ದೋಷ ಮಾತ್ರ ಹುಡುಕುತೀಯ. ನನ್ನ ಮೀಸೆ ಇರಲಿ ಬಿಡು. ಜನಕ್ಕೆ ಅನುಮಾನ ಬರಲ್ಲ.’
‘ಸರಿ, ನಿನ್ನಿಷ್ಟ’
ಕತ್ತಲಾಗುತ್ತಿದ್ದ ಹಾಗೇ ಕೋಳಿಗಳನ್ನು ಗೂಡಿಗೆ ಸೇರಿಸುವುದಕ್ಕೆ, ನಾನು ಎಲ್ಲೆಲ್ಲೋ ಎಸೆದಿದ್ದ ಕಲ್ಲುಗಳನ್ನು ಮೊದಲಿದ್ದ ಮೂಲೆಯಲ್ಲೇ ಇಡುವುದಕ್ಕೆ ಸಹಾಯ ಮಾಡಿದಳು.
ಅಲ್ಲಿ ಅನಲೆಕ್ಟೋ ಮೊರೋನೆಸ್ನನ್ನು ಹೂತಿದೆ ಅನ್ನುವ ಅನುಮಾನ ಕೂಡ ಅವಳಿಗೆ ಬರಲಿಲ್ಲ. ಅಥವಾ, ಅವನು ಜೈಲಿನಿಂದ ತಪ್ಪಿಸಿಕೊಂಡು ಬಂದು ಆಸ್ತಿಯೆಲ್ಲಾ ವಾಪಸ್ಸು ಕೊಡು ಅಂತ ನನ್ನ ಕೇಳಿದ ದಿನವೇ ಸತ್ತು ಹೋದ ಅನ್ನುವುದೂ ಅವಳಿಗೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದು ಕೇಳಿದ:
‘ಎಲ್ಲಾನೂ ಮಾರಿ ನನಗೆ ದುಡ್ಡು ಕೊಡು. ನಾನು ಎಲ್ ನೋರ್ಟೆಗೆ ಹೋಗಬೇಕು. ಅಲ್ಲಿಗೆ ಹೋದಮೇಲೆ ಪತ್ರ ಬರೀತೇನೆ. ಮತ್ತೆ ನಮ್ಮ ವ್ಯಾಪಾರ ಶುರುಮಾಡೋಣ.’
‘ನಿನ್ನ ಮಗಳನ್ನ ಯಾಕೆ ಜೊತೆಗೇ ಕರಕೊಂಡು ಹೋಗಬಾರದು? ನಿನ್ನ ಆಸ್ತಿ ಅಂತ ಏನೇನು ಹೇಳುತ್ತೀಯೋ ಅದರಲ್ಲಿ ನನ್ನ ಹತ್ತಿರ ಉಳಿದಿರುವುದು ಅವಳೊಬ್ಬಳೇ. ನಿನ್ನ ಕುತಂತ್ರಗಳಲ್ಲಿ ನನ್ನನ್ನೂ ಸೇರಿಸಿಕೊಂಡೆಯಲ್ಲ’ ಅಂದೆ.
‘ನಾನು ಎಲ್ಲಿದೇನೆ ಅಂತ ಹೇಳಿದ ಮೇಲೆ ನೀವಿಬ್ಬರೂ ಹೊರಡಿ. ನಮ್ಮ ಲೆಕ್ಕ ಅಲ್ಲಿ ಚುಕ್ತಾ ಮಾಡೋಣ.’
‘ಇಲ್ಲೇ ಚುಕ್ತಾ ಆದರೆ ಒಳ್ಳೆಯದು.’
‘ನಿನ್ನ ಜೊತೆ ಆಡತಾ ಕೂರುವುದಕ್ಕೆ ನನಗೆ ಮನಸ್ಸಿಲ್ಲ. ನನ್ನದೇನೋ ಅದನ್ನ ನನಗೆ ಕೊಡು. ಎಷ್ಟು ದುಡ್ಡು ಉಳಿಸಿದೀಯ, ಹೇಳು,’ ಅಂದ.
‘ಸ್ವಲ್ಪ ಇದೆ. ನಿನಗೆ ಮಾತ್ರ ಕೊಡಲ್ಲ. ನಿನ್ನ ನಾಚಿಕೆ ಇಲ್ಲದ ಮಗಳನ್ನ ಕಟ್ಟಿಕೊಂಡು ನರಕ ಅನುಭವಿಸಿಬಿಟ್ಟೆ. ಅವಳನ್ನ ನೋಡಿಕೊಂಡಿದೇನಲ್ಲ, ಅದರಲ್ಲೇ ನಿನಗೆ ಸೇರಬೇಕಾದದ್ದೆಲ್ಲ ಬಂತು ಅಂದುಕೋ’
ನೆಲವನ್ನು ಜೋರಾಗಿ ಒದ್ದ. ಹೊರಡುವುದಕ್ಕೆ ಚಡಪಡಿಸಿದ…
‘ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅನಾಕ್ಲೆಟೋ ಮೊರೋನೆಸ್’ ಅನ್ನುತ್ತಾ ಅವನ ಸಮಾಧಿ ಮಾಡಿದೆ. ಒಂದೊಂದು ಸಾರಿ ನದಿಗೆ ಹೋದಾಗಲೂ ಒಂದಷ್ಟು ಕಲ್ಲು ಹೊತ್ತು ಬಂದು ಅವನ ಸಮಾಧಿಯ ಮೇಲೆ ಹೇರಿದೆ. ‘ನೀನು ಏನೇ ತಂತ್ರ ಮಾಡಿದರೂ ಇಲ್ಲಿಂದ ಎದ್ದು ಬರುವುದಕ್ಕೆ ಆಗಲ್ಲ’ ಅಂದೆ.
ಅವನ ಮೇಲೆ ಮತ್ತೆ ಕಲ್ಲು ಹೇರುವುದಕ್ಕೆ ಪಾಂಚಾ ಈಗ ನನ್ನ ಜೊತೆ ಕೈ ಜೋಡಿಸಿದ್ದಳು. ಅವನ ಹೆಣ ಅಲ್ಲಿದೆ, ಅವನು ಎದ್ದು ಬಂದು ನನಗೆ ಕಷ್ಟ ಕೊಟ್ಟಾನು ಅನ್ನುವ ಭಯಕ್ಕೆ ಕಲ್ಲು ಹೇರಿದ್ದೇನೆ ಅನ್ನುವ ಅನುಮಾನ ಕೂಡ ಅವಳಿಗೆ ಬರಲಿಲ್ಲ. ಅವನು ಜಾಣ ಮತ್ತೆ ಜೀವಬಂದು ಎದ್ದು ಬರುವುದಕ್ಕೆ ಏನಾದರೂ ಉಪಾಯ ಹುಡುಕುತ್ತಾನೆ ಅನಿಸುತಿತ್ತು ನನಗೆ.
‘ಇಲ್ಲಿ ಇನ್ನೊಂದಷ್ಟು ಕಲ್ಲು ಪೇರಿಸು, ಪಾಂಚಾ. ಕೊಟ್ಟಿಗೆಯಲ್ಲಿ ಕಲ್ಲು ಅಲ್ಲಲ್ಲಿ ಬಿದ್ದಿದ್ದರೆ ನನಗೆ ಇಷ್ಟ ಆಗಲ್ಲ.’ ಅಂದೆ.
* * *
ಆಮೇಲೆ, ಬೆಳಕು ಹರಿಯುವ ಹೊತ್ತಿನಲ್ಲಿ ಅವಳು ಅಂದಳು:
‘ನೀನು ದಂಡ, ಲುಕಾಸ್. ನಿನಗೆ ಪ್ರೀತಿ ತೋರಿಸುವುದಕ್ಕೆ ಬರಲ್ಲ. ನಿಜವಾಗಲು ಪ್ರೀತಿ ಮಾಡುವ ಗಂಡಸು ಯಾರು ಗೊತ್ತಾ?’
‘ಯಾರು?’
‘ಅನಾಕ್ಲೆಟೋ ಮೊರೋನೆಸ್. ಹೇಗೆ ಪ್ರೀತಿ ಮಾಡಬೇಕು ಅನ್ನುವುದು ಅವನಿಗೆ ಗೊತ್ತಿತ್ತು.’
*****









