ಒಬ್ಬ ಝೆನ್ ಗುರು, ಶಿಷ್ಯನಲ್ಲಿ ಕೇಳಿದರು- “ನಾನು ಧ್ಯಾನಕ್ಕೆ ಕುಳಿತಾಗ ನಿನಗೆ ಕೇಳುವುದು ಏನು”? ಎಂದು.
“ಗುರುಗಳೇ! ಇದು ಬಲು ಕಠಿಣ ಪ್ರಶ್ನೆ. ಅಲ್ಲಿ ಅನುಭಾವಿಯಾದವರು ಗುರು. ಎದುರಿಗೆ ನಿಂತಿರುವ ಶಿಷ್ಯ ಅವನೊಂದು ಕಂಭವಷ್ಟೆ, ಗುರುವಿನ ಎದೆಯ ಕಳಸವನ್ನು, ಜ್ಯೋತಿಯನ್ನು ಕಂಭಕ್ಕೆ ಏರಿಸುವ ಅಭಿಲಾಷೆ ಅವನದಾದರೂ, ಅವನು ಮೂಕವಿಸ್ಮಿತನು”
ಎಂದ.
“ನಾನು ಕೇಳಿದ್ದು ನೀನು, ನೋಡುವುದು ಏನು? ಎಂದು ಅಲ್ಲ. ನೀನು ಕೇಳುವುದು ಏನು ಎಂದು?” ಮತ್ತೆ ಗುರು ಸ್ಪಷ್ಟವಾಗಿ ಹೇಳಿದರು.
ಈ ಒಗಟನ್ನು ಬಿಡಿಸಲಾಗದೆ ಕೊನೆಗೆ ಶಿಷ್ಯ ಹೀಗೆಂದ. ಧ್ಯಾನಕ್ಕೆ ಕುಳಿತ ಝೆನ್ ಗುರುವಿನಿಂದ ಕೇಳುವ ನಾದ, ಭಾಷೆ ಯಾವುದೂ ಇಲ್ಲ ಗುರುಗಳೇ, ನನಗೆ ತೋಚುತ್ತಿಲ್ಲ. ನೀವೇ ಹೇಳಬೇಕೆಂದ.”
“ಹೃದಯ ಬಡಿತಕ್ಕೊಂದು ಭಾಷೆ ಢಬ ಢಬ
ಅನಂತತೆಯ ಭಾಷ್ಯಕ್ಕೆ ಎದೆ ಬಡಿತದ ದಭ ದಭ
ಮನದ ಮೃದಂಗದ ಭಾಷೆ ಘಮಘಮ” ಅಲ್ಲವೇ? ಶಿಷ್ಯಾ!” ಎಂದಾಗ ಝೆನ್ ಗುರುಗಳ ಮೌನದಲ್ಲಿ ಕೇಳಿ ಬರುವ ಮೌನ ಭಾಷಾ ಸ್ಪಂದನದ ಅರಿವು ಶಿಷ್ಯನಿಗಾಯಿತು. ಝೆನ್ ಅರಿವಿನಲ್ಲಿ ಕಾವಿಲ್ಲದ ಭಾವ, ಅಭಾವವಿಲ್ಲದ ಪ್ರಭಾವ, ಸ್ವಭಾವ ಮೀರಿದ ಅನುಭಾವವನ್ನು ಕಂಡುಕೊಂಡ ಶಿಷ್ಯ ಗುರುವಿನ ಧ್ಯಾನದಲ್ಲಿ ತನ್ಮಯವಾಗಿ.
*****








