ವೆಂಕಾ…….?
ಮೊದಲೇ ಡೊಂಕಾ
ಬಹಳ ಬಿಂಕಾ
ಬಣ್ಣ ಬಣ್ಣದ ಮಾತು
ಬರಿ ತೂತು, ತೂತು.
ಕತ್ತಲೆಯು ಇವನ ಮನೆ
ಬೆಳಕು ಕನಸು.
ಇವನ ತಕ್ಕಡಿಗಿಲ್ಲ ಸರಿದೆಂಡಿಗೆ
ಇವನು ತಿನ್ನುವದು ಕನಸಿನ ಮಂಡಿಗೆ
ಇವನ ಮಾಪು
ಭಾಪು, ಭಾಪು.
ಇವನ ಕಣ್ಣಿನ ಚೂಪು
ಶುದ್ಧ ಬೇವಕೂಫು
ಏನೊ ಕಾಣುತ
ತಾನು ಎಲ್ಲೊ ಹೊಕ್ಕ.
ಇತ್ತು ಜೇಡನ ಬಲೆಯು
ಇರಲಿಲ್ಲ ಜೇಡ……..
ಆದರೂ ಅದರಲ್ಲಿ ಇವನು ಸಿಕ್ಕ
ಒದ್ದಾಡಿದಾ, ಜಿಗಿದಾಡಿದಾ
ಕಾಲ್ಬಿಚ್ಚಿಕೊಂಡಾ ಕೈಕಚ್ಚಿಕೊಂಡಾ
ಕಣ್ಣಿಗಿದೆ ಕಟ್ಟು
ಗೋಣಿಗಿದೆ ನೇಣು
ಯಾವುದೋ ದಾವಣಿಯು ಹಾದಿಯುದ್ದಾ,
ಬಿದ್ದಾ-ಎದ್ದಾ
ಕೊರಳಿಗಿದೆ ಗುದ್ದಿ
ಬಾಯಿಗೆ ಮಕಾಡಾ
ಯಾರೊ ಅಂದರು ಬಡವಾ
ಯಾರೊ ಅಂದರು ಭಡವಾ.
ಬಿದ್ದ ಗೂಳಿಗೆ ಆಳಿಗೊಂದು ಕಲ್ಲು
ಹೊಟ್ಟೆಯಲ್ಲಿಯೆ ಕೊಳಕ
ಅಂತೆ ಹುಳಕ.
ಒಂದೆ ಮಗ್ಗುಲಿಗಿಲ್ಲ ಇವನ ನಿದ್ದೆ
ಗಡಬಡಾ
ಧಡಪಡಾ
ಲಡಬಡಾ
ಕನವರಿಕೆ, ಬಡಬಡಿಕೆ,
ಇಲ್ಲೊಡಂಬಡಿಕೆ.
ಬಿದ್ದ ಹಾಸಿಗೆಯಲ್ಲೆ ಎಲ್ಲ ಯುದ್ಧಾ
ಕನಸಿನಲಿ ಸತ್ತರೂ
ಎಚ್ಚರದೊಳೆದ್ದಾ.
*****








