೧
ಈ ಬದುಕಿಗೊಂದು ಬೆಲೆಯಿಹುದು ಮಗು
ಹಿಡಿ ಮಣ್ಣು ತಿಂದು ನಾ ಬದುಕಬೇಕು;
ಹುಲ್ಲು ಹೊದೆಸದ ಹಳೆಯ ಚಪ್ಪರದ ಗತಿನೋಡು
ಈ ದೇಹ ಕುಸಿಬಿದ್ದರೂ ಜೀವ ಹಿಡಿಯಬೇಕು.
೨
ನೂರು ಹೊರೆ ಕೆಲಸವಿದೆ ಮಜಲು ಮಜಲಿನ ಕೆಳಗೆ
ಮೈಬಾಗಿ ದುಡಿ ಬಿಡದೆ ಮೂರು ಹೊತ್ತು;
ಮುಖವೆತ್ತಿ ನೋಡದಿರು ಮತ್ತೆ ಮೇಲೇಳದಿರು
ಹಸಿವೆಯಾದರೆ ತಿನ್ನು ನಾಲ್ಕು ತುತ್ತು.
೩
ಸುರಿದ ಹನಿ ಹನಿ ಬೆವರು ಎದೆತಿದಿಯ ಬಿಸಿಯುಸಿರು
ನಾ ಕೊಟ್ಟ ಋಣವಹುದು ಈ ಭೂಮಿಗೆ;
ನೆಲದ ಬಸುರಿಂದೆದ್ದ ಮರದ ಹೂ ಹಣ್ಣುಗಳ
ಕೊಯ್ದು ಒಯ್ಯಲು ಬಂತೊ, ಶ್ರೀಮಂತಿಕೆ.
೪
ಬದುಕು ಬಾಯಾರಿದರು ಹೌಹಾರಿ ಹೋದರೂ
ಸೆಲೆಯಿಲ್ಲವೋ ಎದೆಯ ಹಾಳೊರತೆಗೆ;
ಪಾರಿಜಾತದ ಹೂವಿನಂಥ ಕೋಮಲ ಜೀವ
ಹೋಳಾಡಿತೋ ಒರಟು ಕಾಲ ಕೆಳಗೆ.
೫
ನೆಲ ಬೆಂದು ಬಲ ಬೆಂದು ಜೀವ ಸಣ್ಣಾದಂದು
ಎತ್ತಿ ಹಿಡಿಯಲುಬೇಕು ಅಡ್ಡ ಕೋಲು;
ಮೈಭಾರ ಮನಭಾರ ಎಳೆದ ಉಸಿರೂ ಭಾರ
ಮರಣ ಕೂಗಿದ ಮೇಲೆ ಯಾರ ಪಾಲು!
*****








