ನಗೆ ಇದು ಮನುಷ್ಯನಲ್ಲಿರುವ ಒಂದು ವೈಶಿಷ್ಟವು. ಜಗತ್ ನಿರ್ಮಾಣಕನು ಹುಟ್ಟಿಸಿದ ಪ್ರಾಣಿಕೋಟೆಯಲ್ಲಿ ಮನುಷ್ಯ-ಅರ್ಥಾತ್ ಸ್ತ್ರೀ ಪುರುಷರು ಮಾತ್ರ ನಗುವ ಗುಣವುಳ್ಳವರಿದ್ದಾರೆ. ಇನ್ನೊಂದು ಪ್ರಾಣಿಗೆ ಈ ಮಾನವ ವೈಶಿಷ್ಟ್ಯವನ್ನು ದೇವರು ದಯಪಾಲಿಸಿರುವನು. ಅದಾವ ದೆಂದರೆ “ಹಾಯಿನಾ” ಎಂಬ ನಾಯಿಯನ್ನು ಹೋಲುವ ಕೆಳಜಾತಿಯ ಪ್ರಾಣಿಯು !
* * * *
ಕೆಲವು ಜನರು ಇಡಿ ಆಯುಷ್ಯ ನಗುವದಿಲ್ಲ. ಇಂಥವರಿಗೆ ಹಾಯಿನಾ ಪ್ರಾಣಿಗಿಂತ ಅನಿಷ್ಟರೆಂದು ಕರೆಯದೆ ಗತ್ಯಂತರವಿಲ್ಲ.
* * * *
“ನಗೆ” ಈ ವೈಶಿಷ್ಟ್ಯವನ್ನು ದಯಪಾಲಿಸುವದರಲ್ಲಿ ದೇವರ ಕೆಲವೊಂದು ಉದ್ದೇಶ ಉಂಟೆಂದು ಸೂಕ್ಷ್ಮವಾಗಿ ವಿಚಾರಿಸಿದರೆ ತಿಳಿಯದಿರದು. ಅಸಮಾಧಾನ, ಚಿಂತೆ, ದುಃಖ ಮುಂತಾದ ಗುಣಗಳೂ ಮಾನವ ಜಾತಿಯ ವೈಶಿಷ್ಟ್ಯಗಳಾಗಿವೆ. ಇವುಗಳನ್ನು ಶರೀರದಿಂದ ಹೊಡೆದೋಡಿಸಲು ನಗೆಯ ಯೋಜನೆಯನ್ನು ದೇವರು ಕಲ್ಪಿಸಿದ್ದಾನೆ. ಮನುಷ್ಯನು ನಗುವದರಿಂದ ತನ್ನ ದುಃಖ ಮತ್ತು ಚಿಂತೆಗಳನ್ನು ಹೋಗಲಾಡಿಸಿ ಅವನ್ನು ಮರೆತುಬಿಡುತ್ತಾನೆ.
* * * *
ಕೆಲವರು ಏನೂ ಕಾರಣವಿಲ್ಲದೇ ಸುಮ್ಮ ಸುಮ್ಮನೆ ನಗುವರು. “ಏನರಿ, ಊರಿಂದ ಯಾವಾಗ ಬಂದಿರಿ ?” ಎಂದು ಕೇಳಿದರೆ ಮೊದಲು “ಹಿ, ಹಿ, ಹಿ” ಎಂದು ನಕ್ಕು “ನಿನ್ನೆ” ಎಂಬ ಒಂದು ಶಬ್ದದ ಉತ್ತರವನ್ನು ಕೊಡುವರು.
* * * *
ಕೆಲವರು ನಗುವದೇ ಇಲ್ಲ. ಆದರೆ ತಮ್ಮ ಪ್ರತಿಯೊಂದು ಮಾತಿನಿಂದ ಜನರನ್ನು ನಗಿಸುತ್ತಾರೆ. ಇದು ಮಹತ್ವದ ಕಲೆ ಎಂದು ಹೇಳಬಹುದು. ಇದು ಸಿಕ್ಕವರಿಗೆ ಸಾಧಿಸುವದಿಲ್ಲ. ಚುರುಕು ಬುದ್ಧಿ, ಅನುಭವ ಸಂಗ್ರಹ ಮತ್ತು ವಿನೋದವರ ಸ್ವಭಾವ ಇವು ಇದ್ದವರು ಮಾತ್ರ ಸಾಧಿಸಬಲ್ಲರು.
* * * *
ಇನ್ನು ಕೆಲವು ಜನರು ಒಂದು ವಿನೋದದ ಮಾತು ಕೇಳಿದ ಕೂಡಲೆ ನಗುವರು. ಕೆಲವರಿಗೆ ನಗೆಯ ಮಾತು ತಾಸು ಎರಡು ತಾಸುಗಳ ನಂತರ ಹೊಳೆದು ಆರ್ಥವಾಗಿ ಆಗ ನಗುವರು, ಕೆಲವರು ಎರಡೆರಡು ಮೂರು ಮೂರು ದಿವಸಗಳ ನಂತರ ಅರ್ಥವಾಗಿ ಆಗ ಒಮ್ಮಿಂದೊಮ್ಮೆ ” ಫಕ್ ” ಎಂದು ನಗುವರು ! ಸುತ್ತುಮುತ್ತು ಕುಳಿತವರು ಹುಚ್ಚನಾದನೆಂದು ಕಲ್ಪಿಸುವ ಸಂಭವವಿದೆ. ಕೆಲವರಿಗಂತೂ ಕೆಲವು ನಗೆಯ ಮಾತುಗಳು ಕಡೆಗೂ ಹೊಳೆಯುವದಿಲ್ಲ. ಆ ನಗೆಯ ಮಾತು ಹೇಳಿದವನ ದುರ್ದೈವ. ವಾಚಕರು ಈ ಪುಸ್ತಕವನ್ನು ಓದಿಓದಿದಂತೆ ಅವರೊಳಗಿನ ರಸಿಕತನವನ್ನು ಕಂಡು ಹಿಡಿದರೆಂದೂ, ಓದುತ್ತ ನಕ್ಕರೆಂದೂ ನಾವು ಭಾವಿಸುತ್ತೇನೆ. ಓದಿದ ಎರಡು ಮೂರು ದಿವಸಗಳ ಮೇಲೆ ಅದರೊಳಗಿನ ವಿನೋದವು “ಪಕ್”ಎಂದು ನಗುವ ಪ್ರಸಂಗೆ ಬರಲಿಲ್ಲವೆಂದು ಆಸಿಸುತ್ತೇನೆ.
*****






