೧
ತಿಳಿಯದಂತೆಯೆ
ಗೆಳೆಯ ಗೆಳೆಯನ
ಬಳಿಗೆ ಬರುವಂತೆ
ಒಳಗೆ ಇರುವಂತೆ
ಜೀವವಿಂದಿಗೆ
ದೇವನಲ್ಲಿಗೆ
ಧಾವಿಸುತಲಿಹುದು
ಭಾವಿಸುತಲಿಹುದು!
೨
ತೆರಳಿ ಪ್ರಾಣವು
ಮರಳಿ ಬಂದಿತು
ಹೊಸತು ಬಾಳುವೆಯು
ಹಸಿತ ಏಳುವೆಯು!
ಅಲ್ಲಗಳೆಯುವ-
ದೆಲ್ಲಿಗುಳಿಯಿತೊ
ಸುಹೃದಬಹುದಹುದು
ಅಹುದು ಇಹುದಹುದು!
೩
ಇಹನು ಇಹನೋ
ಸುಹೃದನಿಹನೋ
ನಲಿವು ಬಾಳುತಿದೆ
ಉಲಿವು ಕೇಳುತಿದೆ
ಗಾಳಿಯಲೆಯಲಿ
ತೇಲಿ ಬರುತಿದೆ
ಕೇಳಿ ನೀಗುವುದೇ?
ತಾಳಲಾಗುವುದೇ?
೪
ಎದೆಯು ವಿರಹದಿ
ಕುದಿಯುತಿದೆ ನೀ
ಬಾರದಿರೆ ಬೇಗ
ತೋರದಿರೆ ಈಗ
ಕುರುಹ ಕೊಟ್ಟವ
ವಿರಹವಿತ್ತವ
ಬರದೆ ಹೋಗುವರೇ?
ಇರದೆ ಸಾಗುವರೇ?
೫
ಬಂದು ಬಿಡು ಬಾ
ಬಂದೆ ಬಿಡು ಬಾ
ದರ್ಶನವೆ ಬೇಕು
ಸ್ಪರ್ಶನವೆ ಬೇಕು!
ಬಂದುದಾದರೆ
ಇಂದಿಗಾಗುವ
ಹರುಷವೇ ಹರುಷಾ!
ಅರಿಕೆಯಿದು ಪುರುಷಾ!
*****








