ನಾ-ಕಾಣೆ ನಾಕಾಣೆ
ಜೇಬಿನೊಳಿರುವುದು ನಾಲ್ಕೇ ಆಣೆ
ವೆಚ್ಚ ಗೈವುದೆಂತಿದ ನಾ ಕಾಣೆ!
`ಬಾರೋ ಬಾರೋ ವಿನೋದಗಾರ’
ಎಂಬುದು ಸರ್ಕಸ್ ಹುಡುಗಿಯ ಡೇರ;
`ಇದಕೂ ಮಿಕ್ಕಿನದುಂಟೇ, ಮೊದ್ದು’
ಎಂಬುದು ಸಿನಿಮಾ ಡೋಲಿನ ಸದ್ದು;
‘ಸಗ್ಗದ ಸೊಗವದು ಬೇಕೇ ? ತಾ-ತಾ’
ಎನ್ನುವುದೀ ಕಿವಿಸವಿ ಸಂಗೀತ;
ಒಳಗೊಂದೆಂಬುದು, `ತಿನ್ನುವ ಸುಖಕೆ
ಸಮನುಂಟೇ-ಹುಸಿ ಕಾಣಿಕೆ ತೋರಿಕೆ!’
ನನಗೋ ನಾಲ್ಕಾಣೆಯೆ ಆಧಾರ,
ಮನವೋ ‘ಅಲಾಬಿ ಪಾಳೆಯಗಾರ!’
ಕಿವಿಯೋ ಈ ಕಡೆ, ಕಣ್ಣೋ ಆ ಕಡೆ,
ನಾಲಗೆ ಬೇರೆಡೆ-ಹೋಗುವೆನೆತ್ತೆಡೆ?
* * * *
ಆ ಪಾರ್ಕೊ ಈ ಪಾರ್ಕೋ ತಿರುಗಿ
ತಿನ್ನುತ ಬಟಾಣಿ ಕಡ್ಲೆಯ ಬುರುಗಿ
ಮರಳುವುದೇ ಸೈ-ಸಲ್ಲದು ವೆಚ್ಚ
ಕೆಡುವುದೆ ದುಡ್ಡಿದ್ದರೆ ಬಾ ಹುಚ್ಚ!
*****








