ಪೀಠದಿ ಕುಳಿತಾ ದೇವರು ಅಮ್ಮಾ
ಸಂಭಾವಿತ ನೋಡು | ಬಹಳೇ
ಸಂಭಾವಿತ ನೋಡು.
ಇಲಿ ಜೊಂಡಿಂಗದ ಹಿಂಡೇ ಬಂದು
ಪ್ರತಿದಿನ ಕಾಡಿದರೂ
ಗಂಧಾಕ್ಷತೆ ಹೂ ಎಲ್ಲಾ ತಿಂದು
ಸೂರೆಯ ಮಾಡಿದರೂ-
ಪೀಠದ ದೇವರು ಕುಯ್ಗುಡಲೊಬ್ಬ
ಸಂಭಾವಿತ ನೋಡು | ಬಹಳೇ
ಸಂಭಾವಿತ ನೋಡು
ಗಂಟೆ ಜಾಗಟೆಯ ಎಷ್ಟೇ ಬಡಿದರೂ
ಅವ ಹೆದರುವದಿಲ್ಲ
ಚಳಿಗಾಲದಲಿ ತಣ್ಣೀರು ಸುರಿದರೂ
ಅವ ಮುದುರುವದಿಲ್ಲ.
ಅನ್ನದ ಬೋಗುಣಿ
ಎದುರಿಗೆ ಇಟ್ಟು
ನೈವೇದ್ಯದ ನೆವ
ಮಾಡಿಯೆ ಬಿಟ್ಟು
ಅಗಳೂ ಕೊಡದೇ ನಾವೇ ಎಲ್ಲಾ
ಉಂಡರು ಸುದ್ದಾ ಕುಯ್ಗುಡಲೊಲ್ಲ
ಸಂಭಾವಿತ ನೋಡು | ಬಹಳೇ
ಸಂಭಾವಿತ ನೋಡು.
*****








