ಕಳೆದ ವರುಷವೆ ! ಮೊಳೆವ ವರುಷದ
ಮೊದಲ ದಿನದಲಿ ನಿಂದು ನಿನ್ನಯ
ಕೈ ಕುಲುಕಿ ಬೀಳ್ಕೊಳುವೆ ಕೈಕೊಳು ನನ್ನ ಈ ನಮನ.
ಹರಸು ಒಸಗೆಯ ಸರಸವಎನ್ನು ತ ಮುಂದಿನೀ ಗಮನ. ೧
ಎಂದಿನಂದದಿ ನವಯುಗಾದಿಯು
ಇಂದು ಬಂದಿದೆ ಮುಂದುನೋಟಕೆ
ಬಾಳ ಕರೆಯುವ ಗಾಳಿ ನಿಲ್ಲದೆ ಬೀಗಿ ಬೀಸುತಿದೆ
ಬೆಳಕು ಹೊಸಹೊಸದಾಗಿ ಹೊಳೆಯುತ ಕಿರಣ ಸೂಸುತಿದೆ. ೨
ಮೂಕ ಪ್ರಕೃತಿಯ ಹಾವಭಾವದ
ಹಾಗೆ ಕಾಣುವ ಚಲನವಲನವು
ತಿಳಿವ ಕಣ್ಣಿಗೆ ನಿತ್ಯ ಲೀಲಾಲೋಲ ರಸಿಕನದು
ಕುಣಿತಮಣಿತವೆ ಆಗಿ ತೋರಿದೆ ಮರೆಯ ತೆರೆತೆರೆದು. ೩
ಅಲ್ಲಿ ಬೇವಿನ ಮರದಿ ತುರುಗಿದೆ
ಅಚ್ಚ ಹಸುರೆಲೆ ಹೊಚ್ಚ ಹೊಸ ಹೂ
ಕಹಿಯ ಸಿಹಿಯನು ಸೊಬಗುಸೂರೆಯ ಹೊರಗೆ ಹೊಮ್ಮಿಸುತ
ಸೃಷ್ಟಿದೇವನ ನಿಚ್ಚ ಜವ್ವನ ಪರಿಯ ಸೊಮ್ಮಿಸುತ. ೪
ಕೆಂದುಟಿಯ ಕೆಂದಳಿರ ಮಾವಕೊ
ಹೂತು ಕಂಪಿನ ಮದವ ಬೀರಿದೆ,
ಮುಟ್ಟೆ ಮಾಸುವ ಚೆಲುವ ಸಿರಿಸಲ ಮತ್ತೆ ಮೂಡಿಹುದು
ಅಚ್ಚ ಕೆಂಪಿನ ಹಣ್ಣತೊಡಿಗೆಯ ಆಲ ಸೂಡಿಹುದು. ೫
ಇಲ್ಲಿ ಬಾಣತಿಬಣ್ಣ ಬಸರಿಯ
ಮರವು ತನ್ನೆಲೆ ಮಣ್ಣುಗೂಡಿರೆ
ವಿಗಡವಾಗಿಯೆ ಬರಿಯ ರೆಂಬೆಯ ಮೈಯ ಚಾಚಿಹುದು
ಜೊಳ್ಳ ಬಾಳಿದು ಏತಕೆಂಬೊಲು ಕೊರಗಿ ಯೋಚಿಹುದು. ೬
ಪರುಷ ವರುಷವೆ! ಹಂಬಲೊದವಿಸಿ
ಎಂಥ ಎದೆಝಲ್ಲುಗಳ ಸಲ್ಲಿಸಿ
ಸೋಲಮಾಲೆಯ ತೊಡಿಸಿ ಜೀವವ ಗಾಸಿಗೈದಿರುವೆ !
ಆಸೆಬುರುಜನು ಕೆಡವಿ ಕಡುನಗೆನಗುತ ನಿಂದಿರುವೆ ! ೭
ಜೋಕೆ ಎಂಬುದೆ ನಿಚ್ಚದುಸಿರನು
ಮಾಡಿ ಬದುಕಿರೆ, ತಿಳಿಯದಂತಿರೆ ಜೋಲಿಹೊಡೆಯಿಸಿ
ಮರೆಯ ಬರಸಿಡಿಲಾಗಿ ದುಗುಡವು ಎರಗಿ ಬಂದಿಹುದು
ಸುಖದ ಸ್ವಪ್ನ ವ ಸುಟ್ಟು ಕರಿಕನು ಮಾಡಿ ಸಂದಿಹುದು! ೮
ಹೃದಯವಿದರಲಿ ಮೇರುವಂದದಿ
ಧೀರವಾಗಿಸಿ ಬಾಳುವಂದದಿ
ಹೊಸತು ಬಲವನು ತಿಳಿವ ನೀಡುತ, ಮುಂದೆಸಾಗುವಗೆ
ಪರುಷವಾಗುತ ಹರುಷವಾಗಲಿ ನಿನ್ನ ಹೋಗೆನಗೆ ೯
*****








