Home / ಕವನ / ಅನುವಾದ / ನಮ್ಮ ಕೊನೆಯ ಶರಣು

ನಮ್ಮ ಕೊನೆಯ ಶರಣು

(ಹುತಾತ್ಮ ಗೀತ)
[ಡಾಕ್ಟರ ಜೋಸ ರಿಝ್ಝೂಲರು (೧೮೬೧ ರಿಂದ ೧೮೯೬) ಫಿಲಿಪಾಯಿನ್ ದ್ವೀಪದ ಸ್ವಾತಂತ್ರ ಸಮರದಲ್ಲಿ ‘ಹುತಾತ್ಮ’ರಾದರು. ಇವರನ್ನು ಗಲ್ಲಿಗೇರಿಸುವ ಮುನ್ನಾ ದಿನ, ಡಿಸೆಂಬರ ೨೯, ೧೮೯೬, “My Last Fare well” ಈ ಕವನ ಅವರು ಬರೆದರು. ಅವರ ಶತಸಾಂವತ್ಸರಿಕ ಉತ್ಸವ ೧೯೬೧ರಲ್ಲಿ ಆಗುವದಿದೆ. ಇದನ್ನು ಇಂಗ್ಲಿಷಿನಲ್ಲಿ ತರ್ಜುಮೆ ಮಾಡಿದವರು `ನಿಕ್ ಟೋಕ್ವಿನ್’ ಅವರು. ಮೂಲ ಕವನ ಸ್ಪ್ಯಾನಿಶ್ ಭಾಷೆಯಲ್ಲಿದೆ. ಅದರ ಭಾವಾನುವಾದವನ್ನು ಲಾವಣಿ ಛಂದದ ಗತ್ತಿನಲ್ಲಿ ಮಾಡಿದ್ದಾಗಿದೆ.]
-ಅ೦ಬಿಕಾತನಯದತ್ತ
ನಾಳೆ | ಬೆಳಿಗ್ಗೆ ಐತಿ ಮಹ ಮರಣಾ
ಶರ | ಣಂತಾವ ನಮ್ಮ ಪಂಚ ಹರಣಾ
ಹಸ | ನುಳದಾನ ನಮ್ಮಂತಃಕರಣಾ
ದೇವ | ದೇವನು ಮಾಡ್ಯಾನೊ ಕರುಣಾ
ನಾಳೆ | ಹೊತ್ತ ಮೂಡ ಬಂದೈತಿ ಮರಣಾ || ಪಲ್ಲ ||
ಶರಣು ಶರಣೆಂಬೆ ನೆಚ್ಚಿನಾ ನಾಡಽ
ನೀ | ಸೂರ್ಯಾನ ಮೆಚ್ಚಿನಾಕಿ ನೋಡಽ
ಮೂಡಲ | ಕಡಲಾಗ ಮುತ್ತು ಹುಟ್ಟಿಧಾಂಗ
ಇಂದ್ರನ | ಬನಾನ ಕಡಕೊಂಡು ಬಿತ್ತೊ ಹಿಂಗಽ.
ಇಂಥಾ | ನಾಡಿಗಾಗಿ ನಮ್ಮ ದೇಹಾ
ಬೇಡಿದಾಗ ನೀಡಲಿಕ್ಕೆ.
ನಿಂತೇವು | ಒಂಟಿಕಾಲ ಮ್ಯಾಗಽಽಽ,
ಉಳಿದಿ | ಲ್ಲೇನೇನು ಇನ್ನಿದರಾಸೀಽ.
ಏನೋ | ಆಗೈತಿ ಒಂದಿಷ್ಟು ಬಾಸಿಽ
ಆದ್ರೂ ಕೊಟ್ಟೇವು ಮೈ ಹಡದಿ ಹಾಸಿಽ.
ನಮ್ಮ ಹೊಸಾ ಹರೇದಾಗ
ಎಳೇತನಾ ಖರೇದಾಗ
ಮಿಂಚತಿತ್ತು ಬರೇದಾಗ
ಉಕ್ಕುಕ್ಕಿ ಉತ್ಸಾಹ ಕಿರಣಾ.
ಆವಾಗ | ಬರಬೇಕು ಇತ್ತಽ ಈ ಮರಣಾ
ಆಗ | ಕೊಡಬೇಕು ಇತ್ತಽ ತಾಯಿ ಚರಣಾ.
ಈಗಾದರೂ ಏನಾತು
ಸಲ್ಲಿಸತೇವು ಕೊಟ್ಟ ಮಾತು
ನಿಮ್ಮ ಒಳಿತಿಗಾಗಿ ಆತ ಸಾವು.
ಶರ | ಣಂದೇವು ಅಂತ ನಿಮಗ ನಾವೂ
ನಾಳೆ ಹೊತ್ತ ಮೂಡ……..
ವ್ಯೂಹಕ್ಕ ವ್ಯೂಹಾ ಹೂಡಿ
ಯುದ್ಧದ ಸನ್ನಿ ಮೂಡಿ
ಸಂಶಯ ಗಿಂಶಯ ಕಳೆದೂಽಽ.
ವೀರ ಬಿಟ್ಟ ಗರಿ ಬಾಣಾ
ತೂರತಾರ ತಮ್ಮ ಪ್ರಾಣಾ
ದುಮ್ಮಾನ ದುಃಖಾನ ತೊಳದುಽಽ.
ತಾವರಿಯ ತಂಪಿನ್ಯಾಗ
ಕಣಗೀಲಿ ಕಂಪಿನ್ಯಾಗ
ಮದಗುಣಿಕೆಯ ಜಂಪಿನ್ಯಾಗ.
ಎಲ್ಲಿ ಬಂದ್ರು ಏನು ನಮಗ ಮರಣಾ
ಶೂಲಾನ ನೆಟ್ಟಿರಲಿ
ಹಾಳ ಬಯ ಮೆಟ್ಟಿರಲಿ
ಯಮನವರನಿಟ್ಟಿರಲಿ.
ಅಗ್ಗಿ ಹೊಕ್ಕು ಏರಿಸೇವು ದವನಾ
ಮನಿಗಾಗಿ, ನಾಡಿಗಾಗಿ
ಹ್ಯಾ೦ಗ ಸತ್ತರೇನು ಸಾವು.
ಎಲ್ಲಾನು ನಮಗ ಸರಿಸವನಾ
ನಾಳೆ ಹೊತ್ತ ಮೂಡ……..
ಪಂಚ ಪಂಚ ಉಷಃಕಾಲ
ಇಂಥಾ ಮೂರ್ತಾ ಬರಾಕಿಲ್ಲ
ಬಂತಣ್ಣಾ ಎಂಥಾದೀ ಹಗಲಾ
ಖುಲ್ಲಾ ಆಗ್ಯಾವ ಸ್ವರ್ಗದ ಬಾಗಿಲಾಽಽ,
ಸೂರ್ಯನ ಜ್ಯೋತಿ ಝಗ್ ಅಂತಽ
ಬೆಳಗೊ ಸಂಪ ಹೊತ್ತಿನ್ಯಾಗ
ಬಂದೈತಿ ಪರಲೋಕ ಪಯಣಾ.
ಕಾಳರಾತ್ರಿ ಕಪ್ಪಗಾಗಿ
ಸಪ್ಪಗಾಗಿ ತೆಪ್ಪಗಾಗಿ
ಹಿಂದೆ ಬಿದ್ದು ಮುಂದ ಬಂತೊ ಹವನಾಽ.
ಸುಣ್ಣಾ ಬಣ್ಣಾ ಮಾಡಬೇಕು
ತೋರಣಾ ಕಟ್ಟಿ ನೋಡಬೇಕು
ಮಾನಮ್ಮಿ ದಸರೇಧಾಂಗ ಮನೀಽಽ.
ಮುಂಜಾವಿನ ಕೆಂಜ ಬೆಳಕಿಗೆ
ಕೆಂಪು ಕಡಿಮೀ ಬಿದ್ದಿದ್ರ
ಥಳಿ ಹಾಕಿ ನಮ್ಮ ರಕ್ತದ ಹನೀಽಽ.
ಜಳಕಾ ಮಾಡ್ರಿ
ಓಕುಳಿಯಾಡ್ರಿ.
ಅಸಿಮಿಸಿ ನೋಡಬ್ಯಾಡ್ರಿ
ಬಂದೈತಿ ನಮ್ಮ ಬಾಳಿಗ್ಗೊನೀಽಽ.
ನಾಳೆ ಹೊತ್ತ ಮೂಡ…….
ಮಕಮೀಸಿ ಒಡೆದಿರಲಿಲ್ಲಾ
ಆಗಽನ ನಮಗೆಲ್ಲಾ
ಬಿದ್ದಿತ್ತವ್ವಾ ತಾಯಿ ನಿನ್ನ ಕನಸುಽ.
ಹರೇದಾಗಽ ಕೇಳೋದೇನೂ
ರಕ್ತದಾಗಽ ಹೊಕ್ಕಿ ನೀನು
ನೀನಽ ಆಗಿಬಿಟ್ಟಿ ನಮ್ಮ ಮನಸುಽ.
ರತ್ನದ ಕಂಬಿಯಂಥಾ
ಜಗದಂಬಿ ಮೂಡಿ ಬಂದಿ
ಮೂಡಽಲ ಕಡಲಽ ಒಡಲಽ ಸೀಳಿಽಽ.
ಕಣ್ಣಾಗ ಸುಖ ಉಕ್ಕಿ
ಹುಬ್ಬೇರಿಸಿ ನೀನು ನಕ್ಕಿ
ಹೊಕ್ಕಿತವ್ವಾ ನಿನ ಮೈಯಾಗ ಗಾಳೀಽ
ದುಃಖಿಲ್ಲಾ ಸುಕ್ಕಿಲ್ಲಾ
ಕುಂದಿಲ್ಲಾ ಬಂದೆವ್ವಾ
ಗೌರವದಲೆ ಗೌರೀ ರೂಪಾ ತಾಳಿಽಽ.
ನಾಳೆ ಹೊತ್ತ ಮೂಡ……..
ಏನು ಮಂತ್ರಾ ಹಾಕಿದೆವ್ವಾ
ನಮ್ಮಽ ಜೀವಕ್ಕೆ ನೀನು
ನಮ್ಮಽ ಜೀವಾ ಪ್ರಾಣ ನೀನಽ ಆದೀಽಽ.
ಅಲಕ್ಕಂತ ಹಾರಿಕೊಂಡು
ಹೊತ್ತಿಕೊಂಡ ಕೊಂಡದಾಗ
ಹಿಡಿದೇವವ್ವಾ ನಿನ್ನ ಸ್ವರ್ಗದ ಹಾದೀಽಽ.
ನಮ್ಮ ಸಾವಿನ್ಯಾಗ ನಿನಗಽ
ಬದುಕಾದ್ರ ಸಾಕು ನಮಗಽ
ಬಿದ್ದಿರ್ತೇವಿ ಹೊತ್ತುಕೊಂಡು ಗಗನಾಽಽಽ.
ನಾಽವು ಬಿದ್ದರೇನಾತು
ನೀನು ಎದ್ದಿ ಅದೇ ಸಾಕು
ನೋಡುತಿರಲಿ ನಿನ್ನ ನೀಲಿ ನಯನಾ.
ತಾಯೀ ನಿನ್ನ ತೊಡಿ ಮ್ಯಾಲೆ
ಜೋಗುಳಿಸಿದ ಹುಡೀ ಮ್ಯಾಲೆ
ಹಾಕಿರ್ತೇವಿ ಶಾಶ್ವತ ಶಯನಾಽಽ.
ನಾಳೆ ಹೊತ್ತ ಮೂಡ…….
ನಮ್ಮ ಗೋರಿ ದಿನ್ನಿ ಮ್ಯಾಲೆ
ಎಂದರೆ ಒ೦ದ ದಿನಾ
ಎದ್ದು ಮೂಡೀತೊಂದು ಸಾದಾ ಹೂವುಽಽ.
ಕಸ ಕಡ್ಡಿ ತಲೀ ಮ್ಯಾಲೆ
ತೂಗಾಽಡಿದರೂಽ ಸಾಕು
ತಿಳದೇಽವಿ ಪೂಜಿ ಅಂತ ನಾವುಽಽ.
ಮುದ್ದಿಟ್ರ ಅದನಽ ನೀವು
ಮರತಽ ಹೋದೀತು ಸಾವು
ಬಂದಿತಣ್ಣ ನಮಗ ಜೀವಾ ಮರಳಿ.
ತಣ್ಣಗಾದ ಕಲ್ಲಿನೊಳಗೂ
ಹುಟ್ಟಿತು ಸಣ್ಣ ಕಂಪಾ
ಮಾರೀ ಸವರೀಧಾಂಗ ನಮಗ ಹೊರಳಿಽಽ
ನಿಮ್ಮ ಉಸುರೀನುಸುರೀನೊಳಗೂ
ಹೆಸರುಗೊಂಡು ಕರೆಧಾಂಗ
ನಿಮ್ಮ ಕರುಳೂ ಬಂದೀತು ಅರಳಿಽಽ.
ನಾಳೆ ಹೊತ್ತ ಮೂಡ……..
ಶಾಂತವಾಗಿ ಕಾಂತೀಯಿಂದ
ರಾತ್ರಿ ಚಂದ್ರಾಮರಾಯ
ಪಹರೇ ಮಾಡುತಿರಲಿ ನಮ್ಮ ಮ್ಯಾಲಽಽ.
ಬೆಳಕಿನ ಕೆಚ್ಚಲಾಗಿ
ನಿಚ್ಚ ಮೂಡಲಾಗಿ ನಮಗ
ನಸುಕಿನ್ಯಾಕಿ ಕುಡಿಸತಿರಲಿ ಹಾಲಽಽ.
ಮರಾಮರಾ ಮರಗತಿರಲಿ
ಮರಾ ಗಿಡಾ ಸೇರಿಕೊಂಡು
ಭರಾ ಭರಾ ಹರಿಯೋ ಗಾಳಿ ಕೂಡಾಽಽ.
ಹಾರೋ ಹಕ್ಕಿ ಎರಗಿ ಸೋತು
ನಮ್ಮ ಶಿಲಬೀ ಮ್ಯಾಲ ಕೂತು
ಹೇಳತಿದ್ರಽ ಹೇಳಲೊಂದು ಹಾಡಾಽಽ.
ಶಾಂತೀ ಸೋಬಾನೇ ಹೇಳೀ
ಸಮಾಧಾನ ಮಾಡತಿದ್ರ
ಬ್ಯಾಡೋ ಗೆಣೆಯಾ ಅದನ್ನ ತಡವಬ್ಯಾಡಾಽಽ.
ನಾಳೆ ಹೊತ್ತ ಮೂಡಿ……..
ರವಿ ಸಾಕ್ಷಿಯಾಗಿ ನರೀ-
-ಮದಿವೀ ಆಗೋ ಹೊತ್ತಿನೊಳಗ
ಮಳಿ ಉದರಲಿ ಅಕ್ಕಿಕಾಳ ಗತೀಽಽ.
ಉಗೀ ಆಗಿ ಮಂಜ ಆಗಿ
ಮತ್ತೆ ಮ್ಯಾಲ ಏರಿ ಹೋಗಿ
ಸ್ವರ್ಗದಾಗ ಹೇಳಲಿ ನಮ್ಮ ಕಥಿಽಽ.
ಅರ್ಧಾ ಆಟದಾಗ ಹೀಂಗ
ಕೈ ಬಿಟ್ಟು ಹೋದ ಹ್ಯಾಂಗ
ಅತ್ತರಳಲಿ ಗೆಳೆಯಾ ಯಾವನಾರೆಽಽ.
ಸಂಜೆ ತಂಪು ಹೊತ್ತಿನ್ಯಾಗ
ನಮ್ಮನ್ನ ನೆನಿಸಿಕೊಂಡು
ಬೇಡಿಕೊಳ್ಳಲಿ ನನಗಾಗಿ ಬ್ಯಾರೆಽಽ.
ನಮ್ಮ ನಾಡು ನಮ್ಮ ಜನಾ
ನಮಗಾಗಿ ಬೇಡಿಕೊಳ್ಳಲಿ
ದೇವರೊಳಗ ಆಗೋ ಹಾಂಗ ಸೇರೆಽಽ.
ನಾಳೆ ಹೊತ್ತ ಮೂಡ……..
ಬೇಡಿಕೊಳ್ರ್ಯೊ ಬೇಡಿಕೊಳ್ರೀ
ಸತ್ತಾವ್ರ್ನ ನೋಡಿಕೊಳ್ರೀ
ಗತಿ ಇಲ್ದ ಸತ್ತಾರೆಷ್ಟೋ ಜನಾಽಽ.
ತಡೀಲಾರ್ದೆ ತಡಕೊಂಡು
ಬಾಯಿ ಬಿಗಿ ಹಿಡಕೊಂಡು
ಸತ್ತವರಂತಽ ನೀಗತಾರ ಪ್ರಾಣಾಽಽ.
ಹಡದ ಹೊಟ್ಟೇಕಿಚ್ಚು ಹೊತ್ತಿ
ಬಾಯಿ ಬಾಯಿ ಬಡಕೋತಾರ
ಕಳಕೊಂಡು ಹೊಟ್ಟೀ ಸಂತಾನಾಽಽ.
ರಂಡಿಮುಂಡಿ ಪರಾಧೀನಾ
ಪರದೇಶಿ ಮಕ್ಕಳು ಹೀನಾ
ತುರಂಗದ ನರಕವಾಗ ದೀನಾಽಽ.
ನಾನಾ ರೀತಿ ನಾನಾ ಜನಾ
ಸಾಯ್ತಾರ ದಿನಾ ದಿನಾ
ನಿಮ್ಮ ಮುಕ್ತಿಗಾದರೂ ಮಾಡಿ ಧ್ಯಾನಾಽಽ.
ನಾಳೆ ಹೊತ್ತ ಮೂಡ…….
ಅಮಾಸಿ ಇರುಳು ಹೊತ್ತು
ಮಸಣದಾಗ ಯಾರಿಗೊತ್ತು
ಸತ್ತವರ್ದಽ ಸತ್ತವರ ಮ್ಯಾಲೆ ಗಸ್ತೀಽಽ.
ಸ್ಮಶಾನಾ ಶಿವನ ಸ್ಥಾನಾ
ಗಹನಾ ಗಹನಾ ಅಲ್ಲಿ ಧ್ಯಾನಾ
ಕೋಟಿ ಕೋಟಿ ಭೂತ ಪ್ರೇತ ವಸ್ತೀಽಽ
ಏನಾರೇ ಧನೀ ಕೇಳಿ
ಏನಾರೇ ತಿಳೀಬ್ಯಾಡ್ರಿ
ದೇಶಭಕ್ತರ ದೆಲ್ಲ್ಯಾಽತೊ ಹನನಾಽಽ.
ಅಲ್ಲಿ! ಇರಬಹುದು ದೆವ್ವಗಾಳಿ
ಬರಬಹುದು ಭದ್ರಕಾಳಿ
ಮಳಿಗಾಳಿ, ಛಳಿಗಾಳಿ, ಝಣಣಾಽಽ
ದೇಶಭಕ್ತಿ ಗಾನಾ ಏಕತಾನದಾಗ.
ಗಗನದಾಗ
ನಡೆದಿರತೈತಿ ತೋಂ ತೋಂ ತನನಾಽಽ
ನೆನಸ್ತಿರತೈತಿ | ಜೀವಾ ಶಕ್ತಿ ಶಿವನಾಽಽ
ಕಟ್ಟತಿರತೈತಿ | ನಮ್ಮ ಭಾವಾ ಕವನಽಽ.
ನಾಳೆ ಹೊತ್ತ ಮೂಡ…..
ಹೇಳಽ ಹೆಸರಿಲ್ಲದಾಗಿ
ಹೋದೀತು ಒಂದ ದಿನಾ
ನಮ್ಮ ಹುಗಿದ ಮಣ್ಣಗುಡ್ಡಿ ಸ್ಥಳಾಽಽ.
ಶಿಲುಬೀಯ ಕಲ್ಲ ಕುರುಹು
ಅಲ್ಲೋ, ಇಲ್ಲೋ, ಎಲ್ಲೋ ಬಿದ್ದು
ಸಪಾಟು ಆದೀತೀ ನೆಲಾ.
ಗುದ್ಲೀಲೆ ಹಡ್ಡಿ ತೆಗೆದು
ಸಲಕೀಲೆ ಸರಿ ಮಾಡಿ
ನೇಗಿಲ ಹೊಡೆದು ನೋಡಿ ಬಿಡ್ರಿ ರಣಾಽಽ.
ಮಣ್ಣು ಆಗಿ ಸುಣ್ಣ ಆಗಿ
ಬೂದಿ ಆಗಿ ಭಸ್ಮ ಆಗಿ
ಹೋಗೊದೈತಿ ಎಲ್ಲಾ ಒಂದಿನಾಽಽ.
ನಮ್ಮ ಮಣ್ಣ ಕಸಾ ಕೂಡ
ಹಸಾ ಆಗಿ ಹುಲ್ಲ ಬೆಳೆದು
ಸಸಿ ಹಸಿ ಕಾಣಲಿ ತಾಯಿ ಕ್ಷಣಾಽಽ.
ನಾಳೆ ಹೊತ್ತ ಮೂಡ……
ಯಾರು ನಮ್ಮ ಅರತರೇನು
ಯಾರು ನಮ್ಮ ಮರತರೇನು
ನಾವು ಮರ್ಯಾಕಿಲ್ಲ ನಮ್ಮ ದೇಶಾಽಽ.
ಇದೇ ಈ ಗಾಳಿವೊಳಗ
ಮುಗಿಲ ತುಂಬ ಧೂಳಿವೊಳಗ
ದಾರೀ ಉದ್ದಾ ತೊಟ್ಟು ಬ್ಯಾರೆ ವೇಷಾಽಽ.
ಕಿನ್ನರರ್ಹಾಂಗ ಕಿನ್ನರಿ ಮಿಡಿದು
ಗಂಧರ್ವರ ಗತ್ತು ಹಿಡಿದು
ಕಿವಿ ತುಂಬತಿರ್ತೇವಿ ನಿಮ್ಮ ಜೋಡಿಽಽ.
ಗಂಧಾ ತೂರಿ ಬೆಳಕ ತೂರಿ
ಬಣ್ಣಾ ತೂರಿ ಹರಾಹೂರಿ
ಗುಜ್ಜಾರಿ ಲಾವಣಿ ಕಟ್ಟಿ ತೋಡಿಽಽ.
ನಂಬಿಗೀಯ ಪಲ್ಲಾ ಮಾಡಿ
ಜೀವದ ನುಡಿ ಜೋಡಿ
ಹಾಡತಿರ್ತೇವಿ ಹಗಲು ರಾತ್ರಿ ಕೂಡಿಽಽ.
ನಾಳೆ ಹೊತ್ತ ಮೂಡಿ……..
ದೇವೀ ಅಂತ ನಾವು ನಿಮಗ
ಎ೦ದಽನ ಅ೦ದೇವಿ
ಅದಽ ನಮ್ಮ ಕೊರಳಿಗಾತು ಹಗ್ಗಾಽಽ.
ಫಿಲಿಪೀನಾ! ನಾಡದೇವಿ!
ನಮ್ಮ ಕೊನಿ ಶರಣು ಕೇಳಽ
ಅದಽ ನಮ್ಮ ಜೀವಾಳದ ಹಿಗ್ಗಾಽಽ.
ಇದ್ದೆಲ್ಲಾ ಮನೀಮಾರು
ಮುಡುಪು ನಮ್ಮ ಚೂರುಚಾರು
ಋಣಾನುಬಂಧ ಬ್ಯಾರೆ ಬಂಧಾ ಭಾವಾಽಽ.
ನಂಬಿಗ್ಗೆ ಸಾವಿಲ್ಲದಲ್ಲಿ
ಗುಲಾಮರಿಗೆ ಬಾಳಿಲ್ಲದಲ್ಲಿ
ಕಾಟಕಾಯಿ ಕಟಕರಿಲ್ಲದ ಠಾವಾಽಽ.
ದೇವರಿದ್ದ ರಾಜ್ಯೇದಾಗ
ದೇವರ ಸಾಮ್ರಾಜ್ಯೇದಾಗ
ಇಡತೇವಿ ನಾಳೆ ನಾವು ಜೀವಾಽಽ.
ನಾಳೆ ಹೊತ್ತ ಮೂಡ……
ತಂದಿಗಳಿರಾ ಶರಣು ಅಂದ್ವಿ
ತಾಯಿಗಳಿರಾ ಶರಣು ಬಂದ್ವಿ
ಶರಣಣ್ಣಾ ಶರಣೊ ತಮ್ಮಾ ನಾವೂಽಽ
ನಮ್ಮ ಜೀವಽದ ತೊಳಿತೊಳಿ ನೀವೂಽಽ.
ಮನೀ ಕಣ್ಣ ಮರೀಗಾದ್ರು
ಮಂದಿನ್ನ ಮರ್ತೇವ್ಹ್ಯಾಂಗ
ಹಳೇ ಪಳೇ ಗೆಣೇರಿಗೆ ಶರಣು
ದಣಿವಾರ್ಕಿ ಹೊತ್ತು ಬಂತು ಶರಣು.
ಯಾರ ಹೊಸಬ ನೀನು?
ನಿನಗೂನೂ ಶರಣು ನಾನು.
ಪ್ರಾಣಿ ಜಾತಕ್ಕಽ ನಮ್ಮ ಕೊನೀ ಶರಣುಽಽ.
ನಮ್ಮ ಮುದ್ದೀನ ಮಣಿ ಬಂತು ಬಂತು
ನಮ್ಮ ಹಿಗ್ಗೀನ ಕುಣಿ ಬಂತು ಬಂತು.
ಸಾಕು, ದಣಿಸೀದ ಹಗಲಿನ ಸುದ್ದಿಽಽ
ಆಹಾ | ಸಾವಂದ್ರ ಘನಾ ಘನಾ ನಿದ್ದಿಽಽ.
ನಾಳೆ ಹೊತ್ತ ಮೂಡ ಐತಿ
ಮಹಾ ಮರಣಾ ||
ನಾಳೆ | ಬೆಳಿಗ್ಗೆ ಐತಿ ಮಹಾ ಮರಣಾ
ಶರ | ಣಂತಾವ ನಮ್ಮ ಪಂಚ ಹರಣಾ
ದೇವ | ದೇವನು ಮಾಡ್ಯಾನೊ ಕರುಣಾ
ನಾಳೆ ಹೊತ್ತ ಮೂಡ ಬಂದೈತಿ ಮರಣಾ…..
*****
Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...