ಒಮ್ಮೆ ಒಂದು ನಾಯಿಗೆ ತನ್ನ ಬಾಲದ ಮೇಲೆ ಅತ್ಯಂತ ಮೋಹ ಹುಟ್ಟಿತು. ಪ್ರೀತಿ ಚಿಗುರಿತು. ಅದನ್ನು ಅದು ತನ್ನಿಂದ ದೂರವಿದೆ, ಅದನ್ನು ತನ್ನದಾಗಿಸಿಕೊಳ್ಳಬೇಕೆಂದು ಪರಿಪರಿಯಲ್ಲಿ ಬಾಲವನ್ನು ಹಿಂಬಾಲಿಸಿತು. ತಪ್ಪಿಸಿ ತಪ್ಪಿಸಿ ಹೋಗುತ್ತಿದ್ದ ಬಾಲವನ್ನು ನಾಲ್ಕು ಕಾಲುಗಳಿಂದ ಸುತ್ತಿ ಸುತ್ತಿ ಹಿಂಬಾಲಿಸಿತು.
ಬಾಲವನ್ನು ಒಮ್ಮೆ ಮೂಸಿ, ಒಮ್ಮೆ ದಿಟ್ಟಿಸಿ, ಒಮ್ಮೆ ಬಾಯಿ, ಹಲ್ಲಿನಿಂದ ಹಿಡಿದು ಬಿಟ್ಟಿತು. ದೇಹದೊಳಗಣ ಆತ್ಮ ಸಿಕ್ಕಂತಾಯಿತು ನಾಯಿಗೆ. ಬಾಲವನ್ನು ಮುಟ್ಟಿ, ಮುದ್ದಿಸುತ್ತಾ ನಿಶ್ಚಿಂತವಾಗಿ, ಸಾಧನೆ ಮುಗಿದಂತೆ, ಗುರಿ ಸೇರಿದಂತೆ ಎನಿಸಿ ಹಾಗೇ ಸ್ಥಬ್ದವಾಗಿ ನಿಂತು ಬಿಟ್ಟಿತು.
ಇದನ್ನು ನೋಡುತ್ತಿದ್ದರು ಗುರು ಶಿಷ್ಯರು.
“ಶಿಷ್ಯ! ಈಗ ನಾಯಿಯನ್ನು ಏನೆಂದು ಕರೆಯುವೆ?”
“ಬುದ್ದ! ಬುದ್ದ!” ಎಂದು ಶಿಷ್ಯ ದೊಡ್ಡ ದನಿಯಲ್ಲಿ ಕೂಗಿದ.
“ಏಕೆ ಹೀಗೆ ಹೇಳುವೆ?” ಎಂದರು ಗುರುಗಳು.
“ಅದು ಆತ್ಮರತಿಯಲ್ಲಿ ತೊಡಗಿ ಪರಮಾತ್ಮನಲ್ಲಿ ಒಂದಾಯಿತು. ಅಲ್ಲವೇ ಗುರುಗಳೆ!” ಎಂದ ಶಿಷ್ಯ.
“ನಮ್ಮಲ್ಲೇ ಅಡಗಿರುವ ಆತ್ಮದ ಬಗ್ಗೆ ಅರಿವುಂಟಾದಾಗ ನಮಗೆ ಬುದ್ಧತ್ವ ಲಭಿಸುತ್ತದೆ ಅಲ್ಲವೇ?” ಎಂದಾಗ ಶಿಷ್ಯ ತಲೆ ತೂಗಿದ.
*****








