ಈಗೀಗ ನನ್ನ ಡೈರಿಪುಟಗಳು
ಅಲ್ಲಲ್ಲಿ ಮಸಿ ಉರುಳಿ
ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ
ಆದರೂ ಹೊರಡಲೇಬೇಕು
ಸರಿಯಾದ ಸಮಯಕೆ
ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ
೧
ಇಡೀ ರಾತ್ರಿಗಳೆಲ್ಲ ನನ್ನವೇ
ಬಾಚಿಕೊಳ್ಳುವ ನಶೆಗಳಲಿ ತೇಲಿ
ಪ್ರೇಮಿಗಳ ಸ್ವರ್ಗ ಸುಖದ ಕನಸುಗಳಿಗೆ
ಕಚಗುಳಿಯ ನೋವು ಕೊಟ್ಟು
ಮಕ್ಕಳಿಗೆ ದಂತಕಥೆಯಾಗಿ ಉಬ್ಬುಬ್ಬುತ
ಕತ್ತಲೆಯೊಳಗೆ ಕಟ್ಟುಮಸ್ತಾಗಿ
ಅಡ್ಡಾಡುವವ ನಾನು ಆಹಾ !
೨
ಅದೇಕೋ ಈಗ ರಾತ್ರಿಯಾದರೆ ಹೆದರಿಕೆ ಹೊರಬೀಳಲು
ಹಾದಿ ಬೀದಿಯಲಿ ಏನೇನನು ನೋಡುವೆನೋ ನಡುಕ ಭಯ
ನಾನೆಂದೋ ಬಂದಿದ್ದರಿಲ್ಲಿ
ಭರತವರ್ಷಕಾಲದಿಂದಲೂ
ಬರೆಯುತಿದ್ದುದು ನಿಜ,
ಮಹಾಭಾರತ ಯುದ್ಧ, ರಾಜಪಟ್ಟಕ್ಕೆ ಹಣಾಹಣಿ
ಭ್ರಾತೃಪ್ರೇಮದ ಕರಳುಬಳ್ಳಿಗಳೆಲ್ಲ
ಚಿಲ್ಲಾಪಿಲ್ಲಿ ನರಳಾಟ ಚೀತ್ಕಾರ
ನೋಡಿದ್ದಕ್ಕೊ, ಗೀತೋಪದೇಶಕ್ಕೊ ಇರಲೆಂದು
ನಾಲ್ಕಕ್ಷರ ಧಾಖಲಿಸಿಕೊಂಡು
ಬಿಳಿಪುಟಕೆ ಚುಕ್ಕೆ ಅಕ್ಷರಗಳಿಟ್ಟು ಹೊರಟಿದ್ದೆ
೩
ಬೆಟ್ಟಗುಡ್ಡ ದೇಶಗಳ ಗಡಿದಾಟುತ
ಸಮುದ್ರ ಏರುಬ್ಬರಿಸಿ ತಾರೆಗಳ ಗುಂಪಿನಲಿ
ಚಕ್ಕಂದವಾಡುತ ತಂಪುಗಾಳಿಗೆ
ಎದೆಯೊಡ್ಡಿ ನಡದದ್ದೇನು ಸಂಭ್ರಮ
ಏನೂ ನೆನಪಿಸಿಕೊಳ್ಳಬಾರದೆನುತ
ಯಾತಕ್ಕೂ ದುಃಖಿಸಬಾರದೆನ್ನುವ
ಛಲ ತೊಟ್ಟಿದ್ದೆ.
ನನ್ನ ಡೈರಿ ಪುಟಗಳು ಖಾಲಿ ಉಳಿದಿದ್ದಕ್ಕೆ
ಅಣಿಕಿಸುತಿವೆ ಬೇಸರ ಬಗೆಹರಿಸಲು ಕರೆದವೊ !
ನೋವುಗಳು ಚುಚ್ಚುವಾಗ
ತಾರಾ ಸಖಿಯರು ಇರುವುದೇ ಇಲ್ಲ
ಗೆಳೆತನಕೆ ಬಯಸಿದ ಮನ
ಪುಟಗಳನು ಅಪ್ಪಿಬಿಡುವವು
೪
ಕಂಡದ್ದು ಕಂಡಂತೆ ಹೇಳಲೇ ಬೇಕಾದರೆ-
ಎಂಥ ಸುಂದರ ಬ್ರಹ್ಮಾಂಡ
ಆಹಾ ನಯನ ಮನೋಹರ ಸೆಳೆತ
ಹಿಮಾಚ್ಛಾದಿತ ಪರ್ವತಗಳ ಬಿಗಿದಪ್ಪುಗೆ
ಜೀವಸಂಕುಲದಾಧಾರ ಸರೋವರ ಮದವೇರಿದ
ಸಮುದ್ರ ತರುಲತೆ ಬೃಂಗಗಳ
ಬೆನ್ನೇರಿದ ಮನಕಿನ್ನೇನು –
ಕಪ್ಪು ನೀಲಿ ಕಣ್ಣುಗಳೊಳಗಿನ ಚಿತ್ರಗಳಿಗೆಲ್ಲ
ಬಂಗಾರ ಚೌಕಟ್ಟು ನನ್ನ ಪುಟಗಳಿಗೆಲ್ಲ
ಪ್ರೀತಿಯ ಚೌಕಟ್ಟು
ಜೇನು ಹರಿಯುವ ಸಂಭ್ರಮ
ಕ್ಷಣ ಕ್ಷಣಗಳಿಗೆಲ್ಲ ಹೊಳಪು ಸ್ಪಟಿಕ
೫
ಯಾಕೋ ಎದೆಭಾರ
ಭೂಮಿಗೆ ಯಾಕಿಷ್ಟೊಂದು ನೋವು ವೇದನೆ
ಎಂತಹ ಮಕ್ಕಳಿವರೆಲ್ಲ
ಎಷ್ಟೊಂದು ದುರಹಂಕಾರ
ಮಾಡಬೇಕಾದುದು ಮಾಡಿಯೇ ತೀರುವ
ಮಾತು ಕೇಳದವರ ಶಿಕ್ಷಿಸುವ ಹಿಂಸಿಸುವ
ಸಂತೋಷಿ ಚಕ್ರವರ್ತಿಗಳ ಪಟ್ಟಿ….
ಅಬ್ಬಾ ! ಸಾಕಾಗಿತ್ತು ತೆಪ್ಪಗೆ ಬೀಳಬೇಕಾಗಿತ್ತು
ಆದರೂ ಮತ್ತೆ ಎದ್ದೆ ಯಾಕೋ !
ಸುಸಂಸ್ಕೃತರ ಕುಸಂಸ್ಕೃತಿ
ಚುಚ್ಚಿ ಚುಚ್ಚಿ ಬಡಿದೆಬ್ಬಿಸಿತೆ?
೬
ಯಜಮಾನ ದರ್ಪದ ತಪ್ಪು ಹೆಜ್ಜೆಗಳ
ದುರಂತನಾಯಕರ ಪ್ರೀತಿಯ
ಅಣುಬಾಂಬ್ ಶಸ್ತ್ರಾಸ್ತ್ರಗಳ ಪೈಪೋಟಿ
ಅಮೆರಿಕದ ದಬ್ಬಾಳಿಕೆ
ಭಯೋತ್ಪಾದಕರ ದಾಳಿ, ಬಾಣಕ್ಕೆ ಬಾಣ
ತಿರುಗುಬಾಣ
ಮಾನವ ಹಕ್ಕುಗಳ ದಮನ
ಪ್ರೀತಿ ಬೆಳೆಸುವುದೇ?
ಹಸಿವು ಹಿಂಗಿಸುವುದೆ?
೭
ಕೈಗಾರಿಕಾ ಕ್ರಾಂತಿ
ಜಾಗತೀಕರಣದ ನೋಟ್ಸಿಗೆ
ಸಾಕಷ್ಟು ಪುಟಗಳು
ಕಂಪ್ಯೂಟರ್, ಟಿ.ವಿ. ಮೊಬೈಲ್‌ಗಳ
ಸಂಶೋಧನಾ ಮುಖಾಮುಖಿ ಪ್ರಜ್ಞೆ
ಈ ಪಯಣಿಗೆ ಸುಸ್ತಾಗಿಲ್ಲ ವಯಸ್ಸಾಗಿಲ್ಲ
ದೇವನಾಜ್ಞೆ, ಜಗತ್ತನು ಸುತ್ತು ಹೊಡೆಯಲೇಬೇಕು
ರಿಪೋರ್ಟ್ ಕೊಡಲೇಬೇಕು.
೮
ಆದರೂ ಈಗೀಗ ಅದಾವುದರಲಿ
ಕರಗುತಿರುವೆನೊ, ಬೆರಗುಗೊಳುತಿಹೆನೊ
ಅಳುತಿಹೆನೊ ಹಿಂಸೆ ಪಡುತಿಹೆನೊ
ಉತ್ತರಗಳಿಲ್ಲದೆ ಒಳಗೊಳಗಿನ
ಚಡಪಡಿಕೆಗಳಿಗೆ ಮೋಡಿನ ಚದ್ದಾರ
ಒಮ್ಮೊಮ್ಮೆ ಎಳೆದು ತೆಪ್ಪಗೆ ಬಿದ್ದರೆ
ನಿಸರ್ಗದ ತಂತಿಮೀಟಿನ ಸೆಳೆತ ಮತ್ತೆ
ಹೊಸ ಪಯಣದ ಪುಟಕೆ ಕರೆಯುವುದು
ಕೆಂಪು ಹಳದಿ ನೀಲಿ ಗುಲಾಬಿ
ಬಣ್ಣಗಳಲಿ ಮಸಿಕಲೆಗಳ ನೊರಸುತ
ಮಂದಹಾಸವ ಬೆರೆಸಿ ಮತ್ತೆ ಹೊರಡುವೆ
*****
ಪುಸ್ತಕ: ಇರುವಿಕೆ