ನಿನ್ನ ಮಾತುಗಳೆಲ್ಲ ಈಗ ನನ್ನವು
ಬಾ ನನ್ನ ಕೊಡೆಯೊಳಗೆ, ಮಾತನಾಡಿಸುವೆ
ಅಲ್ಲಿಯೇ ನಿಂತರೆ ಹೇಗೆ?
ಬಾ ಹತ್ತಿರ ಇನ್ನೂ ಹತ್ತಿರ
ನಿನ್ನ ಪ್ರಿಯಬಣ್ಣ ನನ್ನ ಕಿಮೊನೋದಲ್ಲಿ
ಹರಡಿದೆ ನೋಡಿಲ್ಲಿ
ಕೆಂಪು ಹಸಿರು ನೀಲಿ ಹಳದಿ
ಮೇಲೆ ಮೆತ್ತನೆಯ ಹೊಳಪು
ನಿನ್ನ ಉಸಿರು ಕೇಳು ಕೇಳು
ಈ ಬೀಸಣಿಕೆಯಲಿ
ಜೊತೆಗೆ ಆಲಿಸು ನಿನ್ನೆದೆಯದೇ ಬಡಿತ
ಹಾತೊರೆಯುವ ನಿನ್ನ ಪ್ರತಿರೂಪ
ನನ್ನ ಚಿಕ್ಕ ಕಣ್ಣುಗಳಲಿ ಕಾಣು
ನೋಡು ನೋಡಿಲ್ಲಿ ಬೀಸಣಿಕೆ
ಬಿಚ್ಚಿದರೆ ಪ್ರಸನ್ನತೆ
ಮುಚ್ಚಿದರೆ ನಿರಾಶೆ
ಮುದ್ರೆಗಳಿಲ್ಲ ಆದರೆ ಸಂಜ್ಞೆಗಳಿವೆ
ನನ್ನ ನೃತ್ಯಕ್ಕೆ ನೋವು
ನಲಿವುಗಳೂ ಇವೆ
ನನ್ನ ಮುಗುಳ್ನಗೆಗೆ,
ನಿನಗೆ ಮಾತ್ರ ಬಿರಿದ ನಗೆ
ಬೆಡಗಿನ ಮಾತು ಪ್ರೀತಿಯ ಸ್ಪರ್ಶ
ಬಾ ಬೇಗ ಬಾ ಕೈಹಿಡಿ
ಹಾಗೆಯೇ ತಬ್ಬಿಬಿಡು
ಕಳೆದುಬಿಟ್ಟರಾಯ್ತು ಯಾರಿಗೂ ಕಾಣದಂತೆ
ಟೋಕಿಯೋ ನಗರಿಯಲಿ
ಡೊಜೊ ಡೊಜೊ.
*****
ಗೇಶಾಹುಡುಗಿಯರು
ಗೇಶಾ = ಜಪಾನಿ ಭಾಷೆಯಲ್ಲಿ ಕಲಾತ್ಮಕ ಅಥವಾ ಆಕರ್ಷಕ ವ್ಯಕ್ತಿ ಎಂದರ್ಥ. ಗೇಶಾ ಹುಡುಗಿಯರು ಮದುವೆಯಾಗುವಂತಿಲ್ಲ. ಪುರುಷ ಪ್ರವಾಸಿಗಳನ್ನು ಆಕರ್ಷಿಸಿ ಅವರಿಗೆ ಮನರಂಜನೆ ನೀಡುತ್ತಾರೆ. ಬೆಲೆಬಾಳುವ ಬಣ್ಣ ಬಣ್ಣದ ಕಿಮೊನೋ ಉಡುಪುಗಳನ್ನು ಧರಿಸಿ ಕೊಡೆ ತೆರೆದು ಬೀಸಣಿಕೆ ಹಿಡಿದು ಮುಗುಳ್ನಗೆ ಬೀರಿ ಮಾತನಾಡಿದರೆ ಏಕಾಂಗಿ ಪ್ರವಾಸಿಗೆ ಸ್ವರ್ಗವೇ ಇಳಿದು ಬಂದಂತೆ.
ಡೊಜೊ ಡೊಜೊ = ಆಕರ್ಷಕವಾದ ರೀತಿಯಲ್ಲಿ ನೆಲಕ್ಕೆ ಮೊಳಕಾಲನ್ನೂರಿ ಡೊಜೊ ಡೊಜೊ ಎಂದು ಸ್ವಾಗತಿಸುವರು.
ಗೇಶಿಯಾ ಸಂಸ್ಕೃತಿ ಜಪಾನಿ ಸಮಾಜದ ಒಂದು ಭಾಗವಾಗಿ ಬೆಳೆದುಬಂದಿದೆ. ೪೦೦ ವರ್ಷಗಳಷ್ಟು ಹೆಚ್ಚುಕಾಲದ ಇತಿಹಾಸವಿರುವ ಗೇಶಿಯಾವನ್ನು ವೇಶ್ಯಾವೃತ್ತಿಯೆಂದು ತಪ್ಪಾಗಿ ತಿಳಿಯಲಾಗಿದೆ. ಹೆಣ್ಣು ಮಕ್ಕಳಿಗೆ ಕಲೆ ಸಾಹಿತ್ಯ ನೃತ್ಯಗಳಲ್ಲಿ ತರಬೇತಿ ನೀಡುತ್ತಾರೆ. ಅವರು ವಿಶೇಷವಾಗಿ ರೆಸ್ಟೋರಾಗಳಲ್ಲಿ, ಚಹಕೂಟಗಳಲ್ಲಿ ಪುರುಷರಿಗೆ ಮನರಂಜನೆ ನೀಡುವರು.
*****
ಪುಸ್ತಕ: ಇರುವಿಕೆ