‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ
ಬುದ್ಧ ಬೋಧಿಯಾಗಿ ಆಗಾಗ
ಅಲ್ಲಲ್ಲಿ ಅವರವರ ಮನಸಿನಲಿ
ಚಿಗುರೊಡೆವ ಜೀವ
ಕಣ್ತೆರೆಸುವ ದೇವದೂತ.
ಸುಂದರ ನಗರಿ ವೈಶಾಲಿ
ಸಸ್ಯ ಶ್ಯಾಮಲೆಯ ನಾಡು ಬೀಡು
ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ
ಹೂ ಬಳ್ಳಿಗಳ ಪಿಸುಪಿಸು ಮಾತು ಅದೇ
ಬುದ್ಧನ ಆಗಮನ ತೋರಣಕೆ
ಪಾವನಕೆ ಮನದ ನಿರಾಳತೆಯ
ಸಮರ್ಪಿಕೆಯ ಭಾವನೆಗೆ ತೇವಗಣ್ಣು.
ಮಳೆಯೊಳು ಮಿಂದ ಮಣ್ಣು ಹಸನಾಗಿ
ಹದವಾಗಿ ಕಾಯ್ದಿತು ಬುದ್ಧನ ಪಾದಸ್ಪರ್ಶ
ಅದೋ ಬಂದೇ ಬಿಟ್ಟಿತು ಬಿಕ್ಖುಗಳ ಗುಂಪು
ನಡುವೆ ಅರವಿಂದವದನ
ಸಾಕ್ಷಾತ್ ತೇಜಪುಂಜ ಕಾಯಕಲ್ಪ.
ವೈಶಾಲಿಗೆ ಸಂಭ್ರಮ ಮನೆ ಮನೆ
ಬೀದಿ ಬೀದಿ ಸುತ್ತಲಿನ ಹಳ್ಳಿಪಳ್ಳಿಗೆ
ಪಸರಿಸತೊಡಗಿತು ’ಧಮ್ಮದೇಸನ’
ತುಂಬಿಕೊಳ್ಳುತ ಜನರ ಚಿಗುರೊಡೆಯಿತು ಅಂಬವನ.
ನೆಲಮುಟ್ಟುವ ಕ್ಷಣ ಹೊನ್ನಕಿರಣಗಳು
ಆಹಾ ! ‘ಅಂಬಪಾಲಿ’ ಅದೇನೋ ಮಾಂತ್ರಿಕತೆ
ಮೀಸೆಯೊಡೆದ ಪಡ್ಡೆಗಳ ಕನಸಿನೊಳಗೆಲ್ಲ ವಧು
ಕಣ್ಣು ಕೋರೈಸುವ ಸುಂದರಿ ಎದೆ ಝಲ್‌ಗುಡುವ
ಹರೆಯ ಮೋಹಕಮಾತಿನ ಬೆಡಗಿಯ
ತೋಳತೆಕ್ಕೆಗೆ ಬೀಳದವರಾರಲ್ಲಿ
ವೈಶಾಲಿಗೇ ವಧುವಾಗಿ ಕಿರುಬೆರಳಮೇಲೆ
ಕುಣಿಸುವ ಮಾಟಗಾತಿ ಮಲ್ಲಿಗೆಯ
ಮೊಗ್ಗುಗಳು ಅರಳುವ ಕಾತುರ
ಅವರವರ ಭಾವದ ಎದೆಗೂಡಲಿ.
ಬರುವುದೆಂದರೆ ಧರ್ಮೋಪದೇಶ ಕೇಳಲು
ಇರಬಹುದೆ ಹುನ್ನಾರ ಬಿಕ್ಖುಗಳ
ಮನವನಾವರಿಸುವ, ಭಗ್ನಗೊಳಿಸುವ
ದಿನಕೊಂದೊಂದು ಅಲಂಕಾರ ಆದರೂ
ಶಾಂತಚಿತ್ತ ಮನಸು ಗಂಭೀರೆ
ಆಲಿಸುವ ಅಂಬನೋಡಿ ಮನಕದಡಿಸಿಕೊಂಡದ್ದು
ಗಂಡುಜಾತಿ ತಮಗಿನ್ನೆಲ್ಲಿ ಕೈಜಾರುತ್ತೊ ಎನ್ನುವ ಭಯ.
ಧಮ್ಮದೇಸನ ಮುಗಿದು ಇನ್ನೇನು ಬಿಡಾರ
ಬಿಡಬೇಕು ಹೊರಡಬೇಕು ಮುಂದಿನೂರಿಗೆ
ಬಿಕ್ಖುಗಳ ನಡುವೆ ಹೆದರಿ ಅಂಜಿಕೆಯಿಂದಲೇ
ಬುದ್ಧನ ಕಾಲಿಗೆರಗಿ
‘ನೂರಾರು ಸಂಸಾರಗಳ ದುಃಖಕ್ಕೆ ಕಾರಣಳು ನಾನು
ದುಃಖಿಸಿದೆ ಗುರುವರ್ಯಾ ಈಗ
ನಿಮ್ಮ ಮಾತು ಕೇಳಿ, ತೋರಿಸಿದಿರೆನಗೆ
ಸತ್ಯದ ಬೆಳಕು ಅನಂತದೆಡೆಗೆ
ಗುರುಗಳೇ, ಬರಬೇಕೆನ್ನ ಮನೆಗೆ
ಬಿಕ್ಖುಗಳನೊಡಗೂಡಿ ಸ್ವೀಕರಿಸಬೇಕೆನ್ನ ಆತಿಥ್ಯ
ಪಾವನಳಾಗಿ ಮಾಡಿ ಹಾರೈಸು ತಂದೆ’.
ಆಗಬಹುದೆಂದಾ ಬುದ್ಧನ ಮಾತಿಗೆ ಬಿಕ್ಖುಗಳ
ಬಿಡಾರದೊಳಗೆ ಕದಡಿತು ಶಾಂತಿ
‘ಗುರುಗಳೇ ಇದೇನು ಮಾತುಕೊಟ್ಟಿರಿ
ಈ ನಗರಿಗರೆಲ್ಲರ ವಧು ಆಕೆ ಅದೇ ಅದೇs
ನೂರಾರು ಧನಿಕರ, ಯುವಕರ, ರಾಜರ ಮನ
ಕದ್ದು ಬುಟ್ಟಿಗೆ ಹಾಕಿಕೊಂಡ ನರ್ತಕಿ
ಹರೆಯಹಾಸಿ ಕಾಂಚಾಣ ಹೊದೆಯುವ ವೇಶ್ಯೆ
ಮಾನ ಕಳೆದುಕೊಂಡ ಸಂಸಾರಿಗರದೆಷ್ಟೊ
ಮೌಲ್ಯಬರಿದುಗೊಳಿಸಿಕೊಂಡ ಸನ್ಯಾಸಿಗಳೋ,
ಅಂಬಪಾಲಿಯ ಆತಿಥ್ಯ ಪಡೆಯುವ
ಬಿಕ್ಖುಗಳಾದ ನಮಗೆ’ …….. ಕಳವಳ.
‘ವೇಶ್ಯಯಾಗಿ ಕಂಡಳೇ ಅವಳು ನಿಮಗೆ?
ಅದೊಂದು ಹೆಣ್ಣುಜೀವ, ಕಣ್ಣು ಕುರುಡಾಯಿತೆ
ಬಿಕ್ಖುವಾದ ನಿಮಗೂ ಮನಚಂಚಲಿಸಿತೆ?
ಅವರವರ ಭಾವಕ್ಕೆ ಕಾಣುವ ಪರಿ
ತೆಗೆತೆಗೆದುಬಿಡಿ ಚೀವರ
ಬಿಕ್ಖುಯೋಗ್ಯತೆ ನಿಮಗಿಲ್ಲ’ ಬುದ್ಧ
ನಡದೇಬಿಟ್ಟ ಅಮೃಪಾಲಿಯ ಆತಿಥ್ಯಕ್ಕೆ.
*****
ಬಿಕ್ಖು = ಭಿಕ್ಷು
ಧಮ್ಮದೇಸನ = ಧರ್ಮೋಪದೇಶ
ಚೀವರ = ಬೌದ್ಧಭಿಕ್ಷುಗಳು ಹೊದೆಯುವ ಬಟ್ಟೆ
ಅಂಬಪಾಲಿ = ಅಮೃಪಾಲಿ
*****
ಪುಸ್ತಕ: ಇರುವಿಕೆ