ಗೋಡ್ರು ಬುಸ್ ಕೊಮಾಸಾಮಿ ಖುಸ್ ರೆಡ್ಡಿಬಾಂಬ್ ಠುಸ್

ದೊಡ್ಡ ಗೋಡ್ರು ದೇವರಾಣೆಗೊ ರಾಗಿಬಾಲ್ ನಾಟೇ ಸ್ಟ್ರಾಂಗ್. ಯಾಕಂತಿರಾ? ಮಾಜಿ ಪ್ರಧಾನಿಗಳೆಲ್ಲಾ ನಿಧಾನವಾಗಿ ಡೆತ್ ಕೌಂಟ್ ಮಾಡ್ಕೊಂಡು ಕುಂತಿರೋವಾಗ ಮಗನ ಗೊನಮೆಂಟ್ ಉಳಿಸೋಕಾಗಿ ಟೊಂಕ ಕಟ್ಟಿ ನಿಂತಿರೋ ಹರದನಹಳ್ಳಿ ಹಿರೋ ಆವಯ್ಯ. ವಿ.ಪಿ ಸಿಂಗ್ ಗೊತ್ತಲ್ಲ? ಮಾಜಿ ಕ್ಯಾನ್ಸರ್ ಪೇಸೆಂಟು, ಆತ ಈಗಾಗ್ಲೆ ಕಾಂಗ್ರೆಸ್
ಕೊಚ್ಚೆನಾಗೆ ಮುಳುಗೋಕೆ ರೆಡಿಯಾಗವ್ನೆ. ಐ.ಕೆ.ಗುಜ್ರಾಲ್ ಗುಜರಿಗೆ ಬಿದ್ದಾಗದೆ. ಒನ್ಸಪಾನೆ ಟೈಂ ಲಾಂಗ್ ಲಾಂಗ್ ಎಗೋ ಯಂಗ್ ಟರ್ಕ್ ಅಂತ್ಲೆ ಫೇಮಸ್ಸಾದ ೮೦ರ ಏಜಿನ ಚಂದ್ರಸೇಖರನೀಗ ಓಲ್ಡ್ ಟರ್ಕ್. ಇನ್ನು ಬಿಜೆಪಿಯ ಏ.ವನ್ ಲೀಡರ್ ವಾಜಪೇಯಿ ಭೂಮಿ ಒಳಗಿರಬೇಕಾದ್ದು ಮ್ಯಾಗಡೆ ಐತೆ. ಅದೇ ಸಂತೋಸದ ಮ್ಯಾಟರಾಗೇತಿ.

ಆದರೆ ಎಪ್ಪತ್ತು ದಾಟಿದ ಗೋಡ್ರು ಗುಂಡು ಕಲ್ಲಿನಂಗಿದ್ದು ಸೆಂಟ್ರಲ್ ರಾಜಕೀಯ ಮತ್ತು, ಮಗನ್ನ ಕಾಪೋಡೋ ಸಲುವಾಗಿ ಸ್ಟೇಟ್ ರಾಜಕೀಯದಾಗೆ ಮೂತಿ ತೂರಿಸ್ತಾ ಪಡಬಾರದ ಪಾಡು ಪಡ್ಲಿಕತ್ತಾದೆ. ಬ್ರಿಟಿಸನೋನ ಓಡ್ಸೋಕೆ ನಮ್ಮೋರು ‘ಮಾಡಿ ಇಲ್ಲವೆ ಮಡಿ’ ಅಂತ ಹೋರಾಟ ಮಾಡಿದ್ದರೆ ಈವಯ್ಯ ಮಗನ್ನ ಉಳಿಸೋಕೆ ‘ಡು ಆರ್ ಡೈ’ ಅಂತ ಕರ್ನಾಟಕ ರೌಂಡ್ ಹೊಡಿಯೋ ಸ್ಕೆಚ್ ಹಾಕ್ಕಂಡಾನೆ. ಈ ಏಜ್ನಾಗೆ ‘ಡು’ ಸಾಧ್ಯವಿಲ್ಲ. ತಲೆಯಾಗೆ ಉಳಿದಿರೋ ಪುಡಿಪುಕ್ಕದಂತ ಕೂದ್ಲಿಗೆ ‘ಡೈ’ ಮಾಡ್ಕೋಬೇಕಾಟೆಯಾ ಅಂತ ಗೇಲಿ ಮಾಡಿದ್ದು ಮಾಜಿ ಎಬಿಪಿಜೆಡಿ ಉಸ್ತಾದ್ ಸಿದ್ದು. ಯಾವ ಮಾಜಿ ಪ್ರಧಾನಿಗುಳೂ ತಮ್ಮ ಹೊಟ್ಟೆಯಾಗೆ ಬಂದ ಮಕ್ಕಳಿಗಾಗಿ ಈಪಾಟಿ ರಿಸ್ಕ್ ತಗಂಡಿದ್ದು ಹಿಸ್ಟರಿನಾಗೇ ಇಲ್ಲ. ಮಗ ಬಿಜೆಪಿ ಜೊತೆನಾಗೆ ಕೂಡಾವಳಿ ಮಾಡ್ಕೊಂಡಾಗ ಇದಕ್ಕೆ ನನ್ನ ಪರ್ಮಿಸನ್ನು ಇಲ್ಲ ಮೈಸನ್ನು ಅಂತ ರಾಜ್ಯಪಾಲ್ರಿಗೇ ಲೆಟರ್ ಬದು ಒಗೆಗು ಕುಂತ ಗೌಡಪ್ಪ ಆಮೇಲೆ ನನ್ನ ಹೆಣದ ಮ್ಯಾಗೆ ಸಿ‌ಎಂ ಚೇರ್ ಹಾಕ್ಕಂಡು ಕೂಸಿ’ ಎಂದು ಕಣ್ಣೀರು ಹಾಕ್ತ. ಮೈಸೂರು ಕಾರಿಡಾರ್ ಯೋಜ್ನೆನಾಗೆ ನನ್ನ ಫ್ಯಾಮೀಲಿದು ಒಂದು ಎಕರೆ ಸತ್ಕೆ ಜಮೀನಿಲ್ಲ ಅಂದ. ಸಿಗಿ ಬೀಳುತ್ಲು ೪೬ ಎಕರೆ ಇರೋದರ ಬಗ್ಗೆ ಮಾತಾಡ್ದೆ ಮೌನವ್ರತ ಹಿಡ್ಕಂಬೇಕೆ!

ಮಗ ನೂರೈವತ್ತು ಕೋಟಿ ಗಣಿ ಕಪ್ಪ ತಿಂದಾನೆ ಅಂತ ರೆಡ್ಡಿ ಸಿಡಿ ಎಕ್ಸಿಬಿಷನ್ ಇಟ್ಕಂತಾನೆ ಅಂತ ತಿಳಿಯತ್ಲು ಡೆಲ್ಲಿಗೆ ಓಡಿ ಬಿಜೆಪಿ ಮುದುಕರ ಪಾದಕ್ಕೆ ಡೈ ಹೊಡೆದದ್ದು ಓಪನ್ ಸೀಕ್ರೆಟ್. ಮಗ ಕೊಮಾರ. ಡೂಪ್ಲಿಕೇಟ್ ಮಗ ಚೆನ್ನಿಗ, ಮೆತ್ತನೆ ಕಳ್ಳ ಪ್ರಕಾಸು ಇವರಿಗೆ ಸೆಕ್ಯುರಿಟಿ ಗಾರ್ಡ್ ಈವಯ್ಯನೇ ಕಣ್ರೀ. ಸಿಬಿ‌ಐಗೆ ಪ್ರಕರಣ ಒಪ್ಪಿಸೋ ಮಾತು ಬಂತಂದ್ರೆ ಮತ್ತೆ ಮೌನವ್ರತ. ಸತ್ಯವಂತರು ಶಿಸ್ತಿನ ಸಿಪಾಯಿಗಳು ಭ್ರಷ್ಟಾಚಾರವೇನೆಂದೇ ಅರಿಯದ ಚಡ್ಡಿ ತೊಟ್ಟ ಬಡಪಾಯಿಗಳು ಈವತ್ತು ರೆಡ್ಡಿ ಬಾಂಬು ಬಂದ್ ಮಾಡೋ ಹಕೀಕತ್ ನೆಡೆಸ್ಯಾರೆ.

ಯಾಕಂದ್ರೆ ಮೂವತ್ತು ವರ್ಸದಿಂದ ಹಸ್ಕೊಂಡು ಇದ್ದೋರು ಈಗಿನ್ನ ಉಣ್ಣಾಕೆ ಕುಂತಿರೋ ಚಡ್ಡಿ ಬಕಾಸುರರು ಮುಂದೆ ಬರೋ ಯಲಕ್ಷನ್ನಿಗೆ ಗಂಟು ಮಾಡೋದು ಬ್ಯಾಡ್ವಾ? ರೆಡ್ಡಿ ತಾವಿರೋ ಸಿಡಿ, ಪೇಪಸ್ ಅಸಲಿನೋ ನಕಲಿನೋ ತಿಳಿಯೋ ಗೋಜಿಗೂ ಹೋಗ್ದೆ ಕುರ್ಚಿ ಆಶೆಗಾಗಿ ‘ರೆಡ್ಡಿ ಚುಪ್ರೆರೇ’ ಅಂತ ಗುರಾಯಿಸ್ತಾ ಅವರೆ. ಇನ್ನು ಗೋಡ್ರಾ ಸೊಸೇರ ಹೆಸನಾಗೆಲ್ಲಾ ಕೋಟಿಗಟ್ಲೆ ಅಸ್ತಿ ನಾಕು ತಿಂಗಳಾಗೆ ಜಮಾವಣೆ ಆಗ್ಲಿಕ್ಕೆ ಹೆಂಗ್ರಿ ಸಾಧ್ಯ? ಅದ್ರಾಗೇನ್ ಡವುಟೈತೆ. ಕೊಮಾಸಾಮಿ ಸಿ‌ಎಂ ಆಗುತ್ಲುವೆ ಬಾಲಕೃಷ್ಣೇಗೌಡನ ಹೆಂಡ್ತಿ ಕವಿತಾ ‘ಗುಣಕ್ಕಿಂತ ಮಿಗಿಲಾದ ಹಣವಂತರಾದರೆ ಎಲ್ಲಾರೂ ನಮ್ಮವರೆ’ ಅಂತ ಕವಿತೆ ಹಾಡ್ತಾ ಸಿಕ್ಕ ಕಡೆ ಭೂಮಿ ಗುಳುಂ ಮಾಡ್ಲಿಕತ್ತಾಳೆ.

ಇನ್ನು ಸೊಸೆ ಭವಾನಿ, ಅನಿತಾರ ಬಗ್ಗೆ ಹೇಳಂಗೇ ಇಲ್ಲ ಬಿಡ್ರಿ. ಇಡೀ ಕರ್ನಾಟಕದ ತಿಜೋರಿ ಕೀಲಿ ಕೈಯೇ ಇಬ್ಬರ ಹೆಂಗಸರ ಸೋಂಟ್ದಾಗವೆ ಅಳಿಯಂದಿರೂ ಶ್ಯಾನೆ ದಿಮ್ಮಗಾಗವ್ರೆ. ಹಿಂಗೆಲ್ಲಾ ಪರನಿಂದೆ ಮಾಡ್ತಿರೋದು ನಾನ್ರಿಯಪಾ. ನ್ಯೂಲಿ ಕಾಂಗ್ರೆಸ್ ಮೆಂಬರ್ ಸಿದ್ದು ಕಣ್ರಿ. ಇನ್ನು ರವಷ್ಟು ಐತೆ ಕೇಳ್ರಲಾ ತಾವು ಅಹಿಂದ ಸಮ್ಮೇಳನ ನಡೆಸಿದಾಗ ತಮ್ಮನ್ನ ಡಿಸಿ‌ಎಂ ಚೇನಿಂದ ಜಾಡಿಸಿ ಒದ್ದ ಗೋಡ, ಎಂಪಿ ಪ್ರಕಾಸ್ಗೆ ಬಯಸದ ಭಾಗ್ಯ ತಂದುಕೊಟ್ಟರು.

ಈಗೇನಾತು? ಪ್ರಕಾಸೀಗ ಆರ್ಡಿನರಿ ಮಂತ್ರಿ. ಗೋಡ್ರೆ ನನ್ನ ಮನೆ ದೇವ್ರು ಅಂತಿದ್ದ ಸಿಂಧ್ಯಾ ಸಾಹೇಬೀಗ ಎಲ್ಲವನೆ? ನನ್ನ ಚೇರಿಂದ ಇಳಿಸಿದ್ದರಿಂದ್ಲೆ ಮಗನ್ನ ಸಿ‌ಎಂ ಮಾಡೋಕಾತು. ನನ್ನೇ ಸಿ‌ಎಂ ಮಾಡ್ತೀನಿ ಅಂತ ಯಲಕ್ಷನ್ನಾಗೆ ತಮಟೆ ಹೊಡ್ದು ಗೆಲ್ಲಿಸಿದ ಈವಯ್ಯ ಏರಿದ ಏಣಿನಾ ಕಾಲ್ನಾಗೊದ್ದ. ಈವಯ್ಯನ ಓಳಮೀಸಲಾತಿ ಅಂದ್ರೆ ಇದೇ ಕಣ್ರಿ. ಮಕ್ಕಳ್ನ ಗದ್ದುಗೆಗೆ ತರೋದು. ರೆಡ್ಡಿ ಸಿಡಿ ರಿಲೀಸ್ ಮಾಡ್ಲಿಕ್ಕೆ ಮೂರ್ತ ಇಟ್ಟ ಕೂಡ್ಲೆ ಡೆಲ್ಲಿಗೆ ಹಾರಿದ ಗೋಡ. ಬಿಜೆಪಿ ಮುದುಕರ್ತಾವ ಕಣ್ಣೀರು ಹಾಕಿದ್ಕೆ ಬಳ್ಳಾರಿನಾಗೆ ರೆಡ್ಡಿ ಅರ್ಧಂಬರ್ಧ ಸಿಡಿ ರಿಲೀಸ್ ಮಾಡಿ ಮಂಗ್ಯಾ ಆಗವ್ನೆ ಅಂತೆಲ್ಲಾ ಅರಚಾಡೋ ಸಿದ್ರಾಮು ಮಿಕ್ಸ್ ಚರ್ ಸರಕಾರಂವಾ ಉಲ್ಡುಗೆಡವೋ ತಂಕ ಡೋಂಟ್ ಸ್ಲೀಪ್ ಡೋಂಟ್ ಈಟು ಡೋಂಟ್ ಢ್ರಿಂಕು ಅಂತ ಸಪಥ ಮಾಡ್ಕೊಂಡು ಸೆಡ್ಡು ಹೊಡಿತಾ ಅವ್ನೆ. ಬಳ್ಳಾರಿ ರೆಡ್ಡಿ ಬಾಂಬ್ ಬಿತ್ತು ಅಂದ್ರೆ ತಕಳಿ ಜೆಡಿ‌ಎಸ್ಸು ಬಿಜೆಪಿ ಎಕ್ಕುಟ್ಟೋತದೆ ಅಂತ ಖರ್ಗೆ ದಬರಿ ಧರ್ಮು ಜೊತೆ ಸಿದ್ದು ಕೋರಸ್ ಹಾಡೋವಾಗ್ಲೆ ಬಳ್ಳಾರಿನಾಗೆ ರೆಡ್ಡಿ ಬಾಂಬ್ ಹಾಕವ್ನೆ.

ಆಡಿಯೋ ನೆಟ್ಟಗೆ ಕೇಳಂಗಿಲ್ಲ. ವಿಡಿಯೋ ನೆಟ್ಟಗೆ ಕಾಂಬಗಿಲ್ಲ. ಅಲ್ಲಿಗೂ ಗೋಡ್ರ ಫ್ಯಾಮಿಲಿ ಮೆಂಬಸ್ ನಾಕು ತಿಂಗಳೀಚೆಗೆ ರಗ್ಗಡ ಆಸ್ತಿ ಮಾಡಿರೋ ದಾಖಲೆ ಫೈಲುಗಳ್ನ ಮಾಧ್ಯಮದೋರ ಮುಂದೆ ಮಡಗವ್ನೆ ರೆಡ್ಡಿ. ‘ಏನಯ್ಯ ನೂವು ಇಲಾ ಚೇಸ್ತಾವು? ಸಿಡಿಲೋ ಏಮುಂದ್ರಾ ನೀ ದುಗರು’ ಅಂಟುನ್ನಾರು ಒಳಗೇ ಡಿಪ್ರೆಸ್ ಆಗಿರೋ ಕಾಂಗ್ರೆಸ್ ಧಡಿಯರು. ‘ಇದು ಬರಿ ನ್ಯೂಸ್ ರೀಲು; ರಿಯಲ್ ರೀಲು ಮುಂದೆ ಬಿಡ್ತಿವ್ನಿ’ ಅಂತ ಈಗ್ಲೂ ರೆಡ್ಡಿ ಹಾವಾಡಿಸೋದು ಬಿಟ್ಟಿಲ್ಲ. ಕೊಮಾಸಾಮಿ ದೇವರ ಗುಡಿ ರೌಂಡ್ ಹಾಕ್ತಾ ಹಣೆ ತುಂಬಾ ಕುಂಕುಮ ಮೆತ್ಕಂಡು ನಗಲಿಕತ್ತಾನೆ. ದೇವರಾಜು ಅರಸು ತಮ್ಮ ಮ್ಯಾಗೆ ಆರೋಪ ಬರುತ್ಲು ತಾವೇ ತನಿಖಾ ಆಯೋಗ ರಚಿಸಿದ್ದರು.
ಗೋಡ್ರು ನಾದಿನಿಗೆ ಮೈಸೂನಾಗೆ ಸೈಟು ಕೊಡಾಕೆ ರೆಕ್ಮೆಂಡ್ ಮಾಡಿದ್ದೂ ತನಿಖೆ ಆತು.

ರಾಮಕೃಷ್ಣ ಹೆಗ್ಡೆ ನೂರು ಕೋಟಿ ಲಫಡ ಮಾಡವ್ರೆ ಅಂತ ಗುಲ್ಲಾದಾಗ ತನಿಖೆನ ಲೋಕಾಯುಕ್ತರಿಗೆ ಒಪ್ಪಿಸಿದ ಎಕ್ಸಾಂಪಲ್‍ಗಳಿವೆ. ಇವೆಲ್ಲಾ‘ಮಾನವಂತರ ಮಾತಾತು ಬಿಡ್ರಿ. ಈಗಿನ ಸಿ‌ಎಂ ಮಾನ ಮರ್ಯಾದಿನೆಲ್ಲಾ ಅಪ್ಪನ ಕುಂಡಿ ಅಡಿನಾಗೆ ಅಡ ಇಟ್ಟು ಬಿಟ್ಟವ್ನೆ. ರೆಡ್ಡಿ ಬಾಂಬ್ ಬೆಂಗ್ಳೂರು ಮೇಲೆ ಸಿಡೀದೆ ಬಳ್ಳಾರಿನಾಗೇ ಟುಸ್ ಅನ್ನುತ್ಲು ‘ಮೊಗ್ಯಾಂಬೋ ಖುಷ್ ಹುವಾರೆ’ ಅಂತ ಈಟಗಲ ನಗಲಿಕತ್ತಾನೆ. ಬಿಜೆಪಿನೋರಂತೂ ಸರ್ಕಾರ ೩೪ ತಿಂಗಳು ಗ್ಯಾರಂಟಿ ಸಾಯಕ್ಕಿಲ್ಲ ಅಂತ ಖುಸ್ ಆಗಿ ಬ್ರೇಕ್ ಡ್ಯಾನ್ಸ್ ಮಾಡ್ಲಿಕತ್ತಾರೆ. ಕೈಗೆ ಬಂದ ತುತ್ತು ಬಾಯಿಗೆ ಬನಿಲ್ವೆ ಕಡೀಗೂ ರೆಡ್ಡಿ ಎಡವಟ್ ಮಾಡ್ದ ಅಂತ ಅಪ್ಸೆಟ್ ಆಗಿರೋ ಕಾಂಗೈನೋರು ಸಿದ್ದು ಕೊರಳಿಗೆ ನೇತುಬಿದ್ದು ಗೋಳೋ ಅಂತ ಅಳ್ಳಿಕತ್ತಾವೆ!’ ಡೋಂಟ್ ವರಿ ಸುಮ್ಮಿರಿ….. ನಂತಾವ ಇನ್ನೂ ಭಾಳೋಟವೆ’ ಅಂತ ಹಾವಿನ ಬುಟ್ಟಿ ಪದೆಪದೆ ತೋರೋ ಹಾವಾಡಿಗನಂಗೆ ರೆಡ್ಡಿ ಈಗ್ಲೂ ಪೋಜು ಕೊಡ್ತಾ ಮೀಸೆ ಅಡಿಲೇ ನಗ್ತಾ ಅವ್ನೆ….. ಮುಂದ?
*****
( ದಿ. ೦೭-೦೯-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಋಣ
Next post ಬುದ್ಧ ಮತ್ತು ವೈಶಾಲಿ ನಗರವಧು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…