Home / ಕವನ / ಕವಿತೆ / ವಿಧಿ

ವಿಧಿ

ಲೋಕದಲ್ಲಿ
ಧರ್ಮ ವಲ್ಲಿ
ಸೊರಗಿ ಹೋಗಿ,
ಕಾಣದಾಗಿ,
ಕಡೆಗಧರ್ಮ
ಲತೆಯು ಕೊನರಿ,
ನೀತಿಯಳಿದು
ರೀತಿಯಿಳಿದು,
ಸ್ವಾರ್ಥ ಪರತೆ
ಪಾಶವಿಕತೆ
ರುದ್ರ ನೃತ್ಯ
ನಲಿವಗತ್ಯ
ಬರೆ, ಮಹಾಂತ
ಸಾಧು-ಸಂತ
ರೂಪದಿಂದ
ದೇವನಿಂದ
ಒಲ್ಮೆ-ನಲ್ಮೆ
ಕೋಡಿವರಿದು
ಧರ್ಮಪಥವ
ನೀತಿ ಜಯವ-
ನೆತ್ತದಿರುವುದೇ?
ಮುಂದೆ
ಒತ್ತದಿರುವುದೇ?


ಕವಿಯ ಬಾಳ
ತಿಳಿವಿನಾಳ,
ನಲವು-ಚೆಲುವು,
ಕಾವು-ನೋವು,
ಪೂರ್ಣದಳತೆ,
ಕುಂದು-ಕೊರತೆ,
ಅವನ ಕವನ-
ದಲ್ಲಿ ಚೆಲ್ಲಿ,
ಜನತೆಗಾಗಿ
ವಿಶದವಾಗಿ
ತಿಳಿಯದಿರುವುದೇ?
ಮನವ
ಸೆಳೆಯದಿರುವುದೇ?


ಚತುರ ಶಿಲ್ಪಿ
ಶಿಲೆಯನೊಪ್ಪಿ,
ಅದರ ಮೇಲೆ
ವಿವಿಧ ಲೀಲೆ
ತೋರುವಂತೆ,
ಬೀರುವಂತೆ,
ಕೊರೆದ, ಬರೆದ,
ವಿವಿಧವಾದ
ಶಿಲ್ಪ ಮೂರ್ತಿ
ಅವಗೆ ಕೀರ್ತಿ
ತಾರದಿರುವುದೇ?
ಕಲೆಯ
ತೋರದಿರುವುದೇ?


ನೇಸರಿಳಿಕೆ
ಅಪರ ಜಲಕೆ
ಸಾಗಿ, ಬೈಗು-
ಗೆಂಪದಡಗು-
ವಾಗ, ರಜನಿ
ಅಂಜಿಯ೦ಜಿ,
ಬಳುಕಿ ಬಂದು,
ಬಳಸಿ ನಿಂದು,
ಮೋಹ ಪಾಶ-
ದಿಂದ ತಬ್ಬಿ,
ನಲಿಸದಿರುವಳೇ?
ಬಗೆಯ
ನೊಲಿಸದಿರುವಳೇ?


ಕತ್ತಲಳಿಯೆ,
ಮತ್ತೆ ಜಗದೆ
ಅರುಣ ಕಿರಣ
ಬೀರಿ, ಕಾಣ-
ಬರಲು, ಮುಂದು
ಕಮಲ ಬಂಧು
ಉದಿಸಿ ಬಂದು,
ಭುವನವನ್ನು
ಬೆಳಕು ಕಡಲಿ-
ನಲ್ಲಿ ತೇಲಿ-
ಸದೆಯೆ ಇರುವನೇ?
ಹರ್‍ಷಿ-
ಸದೆಯೆ ಬರುವನೇ?


ಮೂಡ ಬಾನಿ-
ನಂಚಿನಲ್ಲಿ
ಉಷೆಯು ನಿಶಿಯ
ತೆರೆಯ ತೆರೆದು,
ಕಣ್ಣ ಮಿಟುಕಿ
ನೋಡಲಾಗಿ,
ಮುಗಿದ ಮುಗುಳು
ಬಿರಿದ ಅಲರು
ಆಗಿ, ಕಂಪ
ಬೀರಿ, ಸೊಂಪ
ಸುರಿಸದಿರುವುದೇ?
ಜೇನ
ಹರಿಸದಿರುವುದೇ?


ಆರು ಬೇಡ-
ವೆನಲು ಕೂಡ,
ಆರು ಋತುವು
ಚಕ್ರದಂತೆ
ತಿರುಗಿ, ತಿರುಗಿ,
ತಿರೆಗೆ ಸಾಗಿ,
ವರ ವಸಂತ
ಹೇಽಮಂತ
ವರ್ಷ ಕಾಲ
ಬಿಸಿಲು ಗಾಲ-
ವಾಗದಿರುವುದೇ?
ಸಮಯ
ಸಾಗದಿರುವುದೇ?


ಜಗದ ಜೀವ-
ಯಾತ್ರೆಯಲ್ಲಿ
ವಿಧಿಯದೃಷ್ಟ.
ವಾಗಿ ನಿಂದು,
ಕಾಣದಿರುವ
ತನ್ನ ಕೈಯ
ಸೂತ್ರದಿಂದ
ನಿಯತವಾಗಿ,
ನಿತ್ಯವಾಗಿ,
ಲೋಕವನ್ನು
ನಡೆಸದಿರುವುದೇ?
ಜಯವ
ಪಡೆಯದಿರುವುದೇ?
*****
೧೯೩೫

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...