ಐವರು
ಯಾವ ಕಂಪನಿಯ ಮೇಕಪ್‌ಗಳಿರಬೇಕಿವು!
ಇಪ್ಪತ್ನಾಲ್ಕೂ ತಾಸು ಆಕಾಶ
ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ,
ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ
ಹೋಗುವಂತೆ ಅದೆಷ್ಟು ಬಣ್ಣಗಳದಕೆ
ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್
ಹೊಳೆಹಳ್ಳ ಕೆರೆಬೆಟ್ಟ ಗುಡ್ಡ
ಸಮುದ್ರಗಳ ಮೇಲೆಲ್ಲ ಬಿನ್‌ದಾಸಾಗಿ
ಅಡ್ಡಾಡುತ ಎಲ್ಲರನೂ ತಲುಪಿ
ಉಸಿರುಕೊಟ್ಟು ನಕ್ಕು ನಲಿಸುವವ
ಯಾರು ಬಸಿರುಮಾಡಿದ್ದಾರು!
ನವಮಾಸದ ಮೋಡಗಳಿಗೆ ಪ್ರಸವವೇದನೆ ಏನೋ
ಅಬ್ಬಬ್ಬಾ! ಎಷ್ಟೊಂದು ಅರ್ಭಟ ಕಿರುಚಾಟ
ಹನಿ ಹನಿಯಾಗಿ ಹೆರುತ್ತಲೇ ಕೆರೆಕೊಳ್ಳ ಸಮುದ್ರಗಳ
ತುಂಬಿಸಿ ಸಂತೃಪ್ತಿಯ ಚಿಗುರುಮೊಳಕೆಯೊಡೆಸುವುದು
ಅದ್ಭುತ, ಅದ್ಭುತ ! ಶಕ್ತಿಸಹನೆಯ ಮೂರ್ತಿ
ಎಷ್ಟೊಂದು ಭಾರ ಹೊತ್ತಿರುವಿಯಲ್ಲೆ !
ಹುಟ್ಟು ಸಾವು ನೋವುಗಳು ದಕ್ಕಿಸಿಕೊಳ್ಳುತ್ತಲೇ
ಮತ್ತೆ ಮತ್ತೆ ನೆಲಕ್ಕಿಳಿವ
ಬೇರುಗಳಿಗೆ ಸೀಮಂತಿಸುವ ಜೀವದಾಯಿ
ಕತ್ತಲೆಯಿಂದ ಬೆಳಕಿನೆಡೆಗೆ
ಕುರುಡನಿಗೆ ಬೆಚ್ಚನೆಯ ಊರುಗೋಲು
ಗುಮ್ಮಾಗಿ ಪ್ರೀತಿಗೆ ಕಾವು ಕೊಟ್ಟು
ಕೆನ್ನಾಲಿಗೆಯಲಿ ಕಲ್ಮಷಗಳ ಸುಟ್ಟು
ಬೇಕೆಂದಾಗ ದೀಪದ ಕುಡಿ
ಬೇಡವಾದಾಗ ಜ್ವಾಲಾಮುಖಿಯಾಗುವ
ಯಾರು ಯಾರೀಭೂಪ
ನಾವುಗಳು
ಚಂದ್ರ ಚುಕ್ಕೆಯರ ಆಕಾಶನೋಡಲು ತಾರಾಲಯ
ಗಾಳಿ ಸೇವನೆಗೆ ಪಾರ್ಲರ್
ನೀರಡಿಕೆಗೆ ಕೋಲಾ, ಪೆಪ್ಸಿ, ಕಿಂಗ್ ಫಿಶರ್,
ಅಂತರೀಕ್ಷದ ಕೃತಕ ಗಾರ್ಡನ್, ಪ್ಲಾಸ್ಟಿಕ್ ಹೂವು
ಇಲೆಕ್ಟ್ರಿಕ್ ಬೆಳಕು ಬೆಂಕಿ
ಮರುಳಾದದ್ದೇ ಮರುಳು ಬೆರಗು ಹಸಿವು
ಏನಿಷ್ಟೊಂದು ಹುಡುಕಾಟ ಯಾಕೆ ತಾಕಲಾಟ
ಇದ್ದುದೆಲ್ಲವ ಬಿಟ್ಟು ಇಲ್ಲದರೆಡೆಗೆ ಹಪಹಪಿಸಿ
ಸೋಲುವುದು ದೇಹ, ಮನಸು,
ನೂರೆಂಟು ರೋಗರಾಗ ಹೊತ್ತು
ಮತ್ತೆ ನಿಸರ್ಗಧಾಮಕೆ
ತೆರಳಿ ಪಂಚಭೂತದೊಳಗೆ ಓಂ
ಶಾಂತಿ ಭಜಿಸುವ ನಾವುಗಳು
*****
ಪುಸ್ತಕ: ಇರುವಿಕೆ